ವೆಂಕಟ ದತ್ತ ಸಾಯಿ ಜೊತೆಗೆ ಸ್ಟಾರ್ ಷಟ್ಲರ್ ಪಿವಿ ಸಿಂಧು ಎಂಗೇಜ್ಮೆಂಟ್, ಡಿಸೆಂಬರ್ 22ರಂದು ಮದುವೆ; ಮೊದಲ ಫೋಟೋ ಔಟ್
PV Sindhu: ವೆಂಕಟ ದತ್ತ ಸಾಯಿ ಅವರೊಂದಿಗೆ ಭಾರತದ ಸ್ಟಾರ್ ಷಟ್ಲರ್ ಪಿವಿ ಸಿಂಧು ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಡಿಸೆಂಬರ್ 22ರಂದು ಈ ಜೋಡಿಯ ಮದುವೆ ನಡೆಯಲಿದೆ.
ಭಾರತದ ಸ್ಟಾರ್ ಷಟ್ಲರ್ ಮತ್ತು 2 ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು (PV Sindhu) ಅವರು ಪೊಸಿಡೆಕ್ಸ್ (Posidex) ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ದತ್ತ ಸಾಯಿ (Venkata Datta Sai) ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೋವನ್ನು ಸಿಂಧು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 22 ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಅವರ ಮದುವೆಗಾಗಿ ಕ್ರೀಡಾಪಟುಗಳನ್ನು ಆಹ್ವಾನಿಸಿದ್ದಾರೆ. ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳುವ ಸಲುವಾಗಿ ನಿಶ್ಚಿತಾರ್ಥವನ್ನು ಸರಳವಾಗಿ ಮಾಡಿಕೊಂಡಿದ್ದಾರೆ.
ಕಳೆದ ತಿಂಗಳಷ್ಟೇ ಅವರ ಸಂಬಂಧ ದೃಢಪಟ್ಟಿದೆ ಎಂದು ಆಕೆಯ ತಂದೆ ಪಿವಿ ರಮಣ ಪಿಟಿಐಗೆ ಬಹಿರಂಗಪಡಿಸಿದ್ದರು. ನಮ್ಮಿಬ್ಬರ ಮನೆಯವರಿಗೂ ಬಹಳ ದಿನಗಳಿಂದ ಪರಿಚಿತರು. ಆದರೆ ಈ ಸಂಬಂಧ ಒಂದು ತಿಂಗಳ ಹಿಂದೆಯೇ ದೃಢಪಟ್ಟಿತ್ತು. ಜನವರಿಯಲ್ಲಿ ಸಿಂಧು ಅವರ ಶೆಡ್ಯೂಲ್ ಬ್ಯುಸಿಯಾಗಿದ್ದರಿಂದ ಡಿಸೆಂಬರ್‌ನಲ್ಲಿ ಮದುವೆ ಮಾಡಲು ಬಯಸಿದ್ದೆವು. ಡಿಸೆಂಬರ್ 22 ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹ ನಡೆಯಲಿದೆ. ಡಿಸೆಂಬರ್ 24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಏರ್ಪಡಿಸಲಾಗಿದೆ. ಮದುವೆ ಮತ್ತು ಆರತಕ್ಷತೆ ಮುಗಿದ ಬಳಿಕ ಸಿಂಧು ಮುಂದಿನ ಟೂರ್ನಿಗಳತ್ತ ಗಮನ ಹರಿಸಲಿದ್ದಾರೆ ಎಂದು ಸಿಂಧು ತಂದೆ ಹೇಳಿದ್ದಾರೆ.
ವೆಂಕಟ ದತ್ತ ಸಾಯಿ ಯಾರು?
ಹೈದರಾಬಾದ್ ಮೂಲದ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ದತ್ತ ಸಾಯಿ ಅವರು ಟೆಕ್ ಉದ್ಯಮದಲ್ಲಿ ಪ್ರಭಾವಶಾಲಿ ಶೈಕ್ಷಣಿಕ ಮತ್ತು ವೃತ್ತಿಪರ ಹಿನ್ನೆಲೆ ಹೊಂದಿದ್ದಾರೆ. Posidex ಟೆಕ್ನಾಲಜೀಸ್ ಲಿಂಕ್ಡ್‌ಇನ್ ಪುಟದ ಪ್ರಕಾರ, ದತ್ತ ಅವರು ಅರ್ಥಶಾಸ್ತ್ರದ ಪದವಿ ಪಡೆದಿದ್ದಾರೆ. ಅವರಿಗೆ ಫುಟ್ಬಾಲ್ ಮತ್ತು ಬ್ಯಾಡ್ಮಿಂಟನ್ ಕ್ರೀಡೆಗಳೆಂದರೆ ತುಂಬಾ ಇಷ್ಟ. ಫೌಂಡೇಶನ್ ಆಫ್ ಲಿಬರಲ್ ಅಂಡ್ ಮ್ಯಾನೇಜ್‌ಮೆಂಟ್ ಎಜುಕೇಶನ್‌ನಿಂದ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್‌ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ.
ಮಾಜಿ ಐಆರ್‌ಎಸ್‌ನ ಪೊಸಿಡೆಕ್ಸ್‌ನ ಎಂಡಿ ಜಿಟಿ ವೆಂಕಟೇಶ್ವರ್ ರಾವ್ ಅವರ ಮಗ ವೆಂಕಟ ದತ್ತ ಸಾಯಿ ಅವರು 2018ರಲ್ಲಿ ಫ್ಲೇಮ್ ವಿಶ್ವವಿದ್ಯಾನಿಲಯದಿಂದ ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ತಮ್ಮ ಬಿಬಿಎ ಪೂರ್ಣಗೊಳಿಸಿದ್ದಾರೆ. ನಂತರ ಬೆಂಗಳೂರಿನ ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಿಂದ ಡೇಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಪೊಸಿಡೆಕ್ಸ್ಗೆ ಸೇರುವ ಮೊದಲು ಸಾಯಿ ಜೆಎಸ್ಡಬ್ಲ್ಯು ಜೊತೆಗೆ ಆಪಲ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಅವರು 2019 ರಿಂದ ಪೊಸಿಡೆಕ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ.