ಪ್ಯಾರಿಸ್ ಒಲಿಂಪಿಕ್ಸ್‌ ಉದ್ಘಾಟನೆಗೂ ಮುನ್ನ ಹೆಚ್ಚಿದ ಆತಂಕ; ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ, ಅಗ್ನಿ ದಾಳಿಯಿಂದ ರೈಲು ಸೇವೆ ರದ್ದು!
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್‌ ಉದ್ಘಾಟನೆಗೂ ಮುನ್ನ ಹೆಚ್ಚಿದ ಆತಂಕ; ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ, ಅಗ್ನಿ ದಾಳಿಯಿಂದ ರೈಲು ಸೇವೆ ರದ್ದು!

ಪ್ಯಾರಿಸ್ ಒಲಿಂಪಿಕ್ಸ್‌ ಉದ್ಘಾಟನೆಗೂ ಮುನ್ನ ಹೆಚ್ಚಿದ ಆತಂಕ; ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ, ಅಗ್ನಿ ದಾಳಿಯಿಂದ ರೈಲು ಸೇವೆ ರದ್ದು!

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟದ ಉದ್ಘಾಟನೆಗೂ ಮುನ್ನ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಾಂಬ್‌ ಬೆದರಿಕೆ ಕರೆ ಮತ್ತು ಅಗ್ನಿ ದಾಳಿಯಿದಾಗಿ ಲಕ್ಷಾಂತರ ಜನರಿಗೆ ತೊಂದರೆಯಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್‌ ಉದ್ಘಾಟನೆಗೂ ಮುನ್ನ ಹೆಚ್ಚಿದ ಆತಂಕ; ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ
ಪ್ಯಾರಿಸ್ ಒಲಿಂಪಿಕ್ಸ್‌ ಉದ್ಘಾಟನೆಗೂ ಮುನ್ನ ಹೆಚ್ಚಿದ ಆತಂಕ; ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ

ಪ್ಯಾರಿಸ್ ಒಲಿಂಪಿಕ್ಸ್ 2024ರ ಉದ್ಘಾಟನಾ ಸಮಾರಂಭ ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ, ಫ್ರಾನ್ಸ್‌ನಲ್ಲಿ ಅಹಿತಕರ ಘಟನೆಗಳು ನಡೆದಿವೆ. ಒಂದೆಡೆ ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ ಬಂದಿದ್ದರೆ, ಮತ್ತೊಂದೆಡೆ ಫ್ರಾನ್ಸ್‌ನ ಹೈಸ್ಪೀಡ್ ರೈಲ್ವೆ ಜಾಲವನ್ನು ಗುರಿಯಾಗಿಸಿಕೊಂಡು ಬೆಂಕಿ ದಾಳಿ ನಡೆದಿದೆ. ಈ ಅಗ್ನಿ ದಾಳಿಯು 'ಪೂರ್ವಯೋಜಿತ ವಿಧ್ವಂಸಕ ಕೃತ್ಯ' ಎಂದು ಅಧಿಕಾರಿಗಳು ಕರೆದಿದ್ದಾರೆ.

ಬೇಸಿಗೆ ರಜೆ ಇರುವ ಕಾರಣದಿಂದ ಫ್ರಾನ್ಸ್‌ ದೇಶದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತದೆ. ಅಲ್ಲದೆ ಒಲಿಂಪಿಕ್ಸ್‌ ಕ್ರೀಡಾಕೂಟ ಕೂಡಾ ಆರಂಭವಾಗುತ್ತಿರುವುದರಿಂದ ಹೆಚ್ಚಿನ ಪ್ರವಾಸಿಗರು ಬಂದಿದ್ದಾರೆ. ಈ ನಡುವೆ ಈ ದಾಳಿ ನಡೆದಿದೆ. ಅಟ್ಲಾಂಟಿಕ್, ಉತ್ತರ ಮತ್ತು ಪೂರ್ವ ರೈಲ್ವೆ ಮಾರ್ಗಗಳನ್ನು ಆವರಿಸಿದ ಬೆಂಕಿಯಿಂದಾಗಿ ಹಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಇನ್ನೂ ಹಲವು ರೈಲು ಸೇವೆಗಳ ಓಡಾಟ ವಿಳಂಬವಾಗಿವೆ. ಇದರಿಂದಾಗಿ ಸರಿಸುಮಾರು 80,000ಕ್ಕೂ ಅಧಿಕ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.

ಅತ್ತ ಅಗ್ನಿ ದಾಳಿ ಬೆನ್ನಲ್ಲೇ, ಫ್ರಾನ್ಸ್‌ ಹಾಗೂ ಸ್ವಿಟ್ಜರ್ಲೆಂಡ್‌ ಗಡಿಯಲ್ಲಿರುವ ವಿಮಾನ ನಿಲ್ದಾಣವಾದ ಯೂರೋಏರ್ಪೋರ್ಟ್‌ಗೆ ಬಾಂಬ್ ದಾಳಿ ಬೆದರಿಕೆ ಬಂದಿದೆ. ಹೀಗಾಗಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅತ್ತ ಬಾಸೆಲ್-ಮುಲ್ಹೌಸ್ನಲ್ಲಿರುವ ಮತ್ತೊಂದು ವಿಮಾನ ನಿಲ್ದಾಣವನ್ನು ಸಹ ಮುಚ್ಚಲಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಎರಡೂ ಏರ್‌ಪೋರ್ಟ್‌ನಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ.

ಫ್ರಾನ್ಸ್‌ನ ರಾಷ್ಟ್ರೀಯ ರೈಲು ಆಪರೇಟರ್ ಮುಖ್ಯ ಕಾರ್ಯನಿರ್ವಾಹಕ ಜೀನ್-ಪಿಯರೆ ಫರಾಂಡೌ ಅವರು ಸುದ್ದಿಸಂಸ್ಥೆ ಎಎಫ್‌ಪಿ ಜೊತೆಗೆ ಮಾತನಾಡಿದ್ದಾರೆ. “ಚಾಲಕರಿಗೆ ಸುರಕ್ಷತಾ ಮಾಹಿತಿಯನ್ನು ನೀಡುವ ಅನೇಕ ಫೈಬರ್ ಆಪ್ಟಿಕ್ ಕೇಬಲ್‌ಗಳನ್ನು ಸಾಗಿಸುವ ಮಾರ್ಗಗಳಲ್ಲಿ ದಾಳಿಕೋರರು ಬೆಂಕಿ ಹಚ್ಚಿದ್ದಾರೆ. ಬೃಹತ್‌ ಪ್ರಮಾಣದ ಬಂಡಲ್ ಕೇಬಲ್‌ಗಳಿವೆ. ನಾವು ಅವುಗಳನ್ನು ಒಂದೊಂದಾಗಿ ದುರಸ್ತಿ ಮಾಡಬೇಕಾಗಿದೆ. ಇದು ಮಾನವ ಸಂಪನ್ಮೂಲ ಬಳಸಿ ಮಾಡಬೇಕಾದ ಕಾರ್ಯಾಚರಣೆಯಾಗಿದೆ. ಇದಕ್ಕೆ ನೂರಾರು ಕಾರ್ಮಿಕರ ಅಗತ್ಯವಿದೆ” ಎಂದು ಅವರು ಹೇಳಿದರು

ಫ್ರಾನ್ಸ್‌ನ ಆಗ್ನೇಯಕ್ಕೆ ಹೋಗುವ ಒಂದು ಪ್ರಮುಖ ರೈಲ್ವೆ ಸಂಚಾರ ಉಳಿಸಲಾಗಿದೆ. ಉಳಿದಂತೆ ರಾಜಧಾನಿ ಪ್ಯಾರಿಸ್ ಮತ್ತು ಇಂಗ್ಲೆಂಡ್‌ ರಾಜಧಾನಿ ಲಂಡನ್ ನಡುವಿನ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ.

ಒಲಿಂಪಿಕ್ಸ್‌ ಉದ್ಘಾಟನೆಗೆ ಕ್ಷಣಗಣನೆ

ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ಉದ್ಘಾಟನೆಗೆ ಸಿದ್ಧತೆ ನಡುವೆ ಈ ಕೃತ್ಯಗಳು ನಡೆದಿವೆ. ವ್ಯಾಪಕ ಭದ್ರತಾ ವ್ಯವಸ್ಥೆ ನಡುವೆ ನಡೆದ ಘಟನೆಯಿಂದ ಆತಂಕ ಹೆಚ್ಚಾಗಿದೆ. ಒಲಿಂಪಿಕ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಐಪಿಗಳು ಸೇರಿದಂತೆ ಸುಮಾರು ಮೂರು ಲಕ್ಷ ಪ್ರೇಕ್ಷಕರು ಭಾಗವಹಿಸುವ ನಿರೀಕ್ಷೆಯಿದೆ. ಒಲಿಂಪಿಕ್ ಮೆರವಣಿಗೆಯಲ್ಲಿ ಸುಮಾರು‌ ವಿವಿಧ ದೇಶಗಳ 7,500 ಕ್ರೀಡಾಪಟುಗಳು ಸುಮಾರು ದೋಣಿಗಳ ಮೂಲಕ ಸೀನ್ ನದಿಯುದ್ದಕ್ಕೂ ಆರು ಕಿ.ಮೀ. ಪ್ರಯಾಣಿಸಲಿದ್ದಾರೆ.

ಮೇಲಿಂದ ಮೇಲೆ ದಾಳಿ

ವಿಧ್ವಂಸಕ ಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ತನಿಖಾ ಏಜೆನ್ಸಿಗಳು ಹೆಣಗಾಡುತ್ತಿವೆ ಎಂದು ಮೂಲಗಳು ಎಎಫ್‌ಪಿಗೆ ತಿಳಿಸಿವೆ. ಆದರೆ, ಈ ದಾಳಿ ಹಾಗೂ ಒಲಿಂಪಿಕ್ ಕ್ರೀಡಾಕೂಟದ ನಡುವಣ ಸಂಬಂಧವನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಕ್ರೀಡಾಕೂಟದ ಆಯೋಜನೆಯನ್ನು ಕೆಡಿಸಲು ಅನೇಕ ಪ್ರಯತ್ನಗಳು ನಡೆದಿರುವ ಬಗ್ಗೆ ಈಗಾಗಲೇ ವರದಿಯಾಗಿವೆ. ಈ ಹಿಂದೆ, ಕ್ರೀಡಾಕೂಟವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ ಅನುಮಾನದ ಮೇಲೆ ರಷ್ಯಾದ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ಅಪಾಯಕ್ಕೆ ಆಹ್ವಾನ, ಆತಂಕ ಹೆಚ್ಚಳ

ಇದೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭವು ಕ್ರೀಡಾಂಗಣದ ಹೊರಗೆ ನಡೆಯುತ್ತಿದೆ. ದೇಶವು ಈಗಾಗಲೇ ಭಯೋತ್ಪಾದಕ ದಾಳಿ ಶಂಕೆ ಮೇಲೆ ಹೆಚ್ಚಿನ ಎಚ್ಚರಿಕೆ ವಹಿಸಿದ್ದು, ಅದರ ನಡುವೆ ತೆರೆದ ಪ್ರದೇಶದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಸುತ್ತಿರುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತಾಗಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.