ರಜನಿಕಾಂತ್, ಶಿವಕಾರ್ತಿಕೇಯನ್ ಭೇಟಿಯಾದ ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್; ಸ್ಟಾರ್ ನಟರಿಂದ ಸಿಕ್ತು ವಿಶೇಷ ಉಡುಗೊರೆಗಳು
Gukesh Dommaraju: 2024ರ ಡಿಸೆಂಬರ್ 12ರಂದು ಸಿಂಗಾಪುರದಲ್ಲಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಚಾಂಪಿಯನ್ ಆಗಿರುವ ಗುಕೇಶ್ ದೊಮ್ಮರಾಜು ಅವರನ್ನು ನಟರಾದ ರಜನಿಕಾಂತ್ ಮತ್ತು ಶಿವಕಾರ್ತಿಕೇಯನ್ ಅವರು ಸನ್ಮಾನಿಸಿದ್ದಾರೆ.
ಇತ್ತೀಚೆಗೆ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿ ಸಂಚಲನ ಸೃಷ್ಟಿಸಿದ ಗುಕೇಶ್ ದೊಮ್ಮರಾಜು ಅವರನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ಶಿವಕಾರ್ತಿಕೇಯನ್ ಅವರು ಭೇಟಿಯಾಗಿ ವಿಶೇಷ ಗೌರವ ಸಲ್ಲಿಸಿದ್ದಾರೆ. 11 ವರ್ಷಗಳ ನಂತರ ಭಾರತಕ್ಕೆ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿ ಮರಳಿ ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿರುವ ಗುಕೇಶ್ರನ್ನು ಸನ್ಮಾನಿಸಿದ ನಂತರ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಸ್ಟಾರ್ ನಟರನ್ನು ಭೇಟಿಯಾದ ಕುರಿತು ಗುಕೇಶ್, ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಗುಕೇಶ್ ತಮ್ಮ ಪೋಷಕರೊಂದಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಚೆನ್ನೈನ ಪೋಯಸ್ ಗಾರ್ಡನ್ ನಿವಾಸದಲ್ಲಿ ಭೇಟಿಯಾಗಿದ್ದಾರೆ. ರಜನಿಕಾಂತ್, ಗುಕೇಶ್ಗೆ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ರಜನಿ ಸನ್ಮಾನಿಸಿದ ನಂತರ ಪರಮಹಂಸ ಯೋಗಾನಂದ ಅವರ 'ಆಟೋ ಬಯೋಗ್ರಫಿ ಆಫ್ ಯೋಗಿ' ಎಂಬ ಪುಸ್ತಕ ಉಡುಗೊರೆ ನೀಡಿದ್ದಾರೆ. ಗುಕೇಶ್ ಅವರ ತಂದೆ-ತಾಯಿ ಕೂಡ ಜೊತೆಗಿದ್ದರು. ಸೂಪರ್ ಸ್ಟಾರ್ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ರಜನಿಕಾಂತ್ ಸರ್ಗೆ ಧನ್ಯವಾದ ಎಂದ ಗುಕೇಶ್
ಈ ಕುರಿತು ಪೋಸ್ಟ್ ಹಾಕಿರುವ ಗುಕೇಶ್, ರಜನಿಕಾಂತ್ಗೆ ಧನ್ಯವಾದ ಅರ್ಪಿಸಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಸರ್ ನಿಮ್ಮ ಆತ್ಮೀಯ ಹಾರೈಕೆ, ಆಹ್ವಾನ, ಸಮಯ ಕಳೆದಿದ್ದಕ್ಕೆ, ನಿಮ್ಮ ಜ್ಞಾನವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ರಜನಿಕಾಂತ್ ಬಳಿಕ ಅಮರನ್ ನಟ ಶಿವಕಾರ್ತಿಕೇಯನ್ ಅವರ ಕಚೇರಿಗೂ ಭೇಟಿಯಾಗಿದ್ದ ಗುಕೇಶ್, ನಟನೊಂದಿಗೆ ಅಮೂಲ್ಯವಾದ ಕ್ಷಣಗಳನ್ನು ಕಳೆದರು. ಶಿವಕಾರ್ತಿಕೇಯನ್ ಗುಕೇಶ್ ಅವರ ನೆಚ್ಚಿನ ನಟ ಎಂಬುದು ಮತ್ತೊಂದು ವಿಶೇಷ.
ದುಬಾರಿ ವಾಚ್ ಉಡುಗೊರೆ ನೀಡಿದ ಶಿವಕಾರ್ತಿಕೇಯನ್
ತನ್ನ ಪೋಷಕರೊಂದಿಗೆ ಭೇಟಿಯಾದ ಗುಕೇಶ್ಗೆ ಶಿವಕಾರ್ತಿಕೇಯನ್ ಅವರು ದುಬಾರಿಯಾದ ವಾಚ್ವೊಂದನ್ನು ಗಿಫ್ಟ್ ನೀಡಿದ್ದಾರೆ. ಈ ಬಗ್ಗೆ ಸಹ ಗುಕೇಶ್ ಎಕ್ಸ್ ಪೋಸ್ಟ್ ಹಾಕಿದ್ದು, 'ಶಿವಕಾರ್ತಿಕೇಯನ್ ಸರ್ ಅವರೊಂದಿಗೆ ಉತ್ತಮ ಸಮಯವನ್ನು ಕಳೆದೆ. ಅವರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ನನ್ನೊಂದಿಗೆ ಮತ್ತು ನನ್ನ ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆದಿದ್ದು ತುಂಬಾ ಖುಷಿ ನೀಡಿತು ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
2024ರ ಡಿಸೆಂಬರ್ 12ರಂದು ಸಿಂಗಾಪುರದಲ್ಲಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಗುಕೇಶ್ ಸೋಲಿಸಿ ಚಾಂಪಿಯನ್ ಆದರು. ಈ ಸಾಧನೆಗೈದ ಕಿರಿಯ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕಿರಿಯ ವಿಶ್ವ ಚೆಸ್ ಚಾಂಪಿಯನ್ನರ್ ಪಟ್ಟಿ
ಡಿ ಗುಕೇಶ್ - 18 ವರ್ಷ 8 ತಿಂಗಳು 14 ದಿನ - ಡಿಸೆಂಬರ್ 12, 2024
ಗ್ಯಾರಿ ಕಾಸ್ಪರೋವ್ - 22 ವರ್ಷ 6 ತಿಂಗಳು 27 ದಿನಗಳು - ನವೆಂಬರ್ 9, 1985
ಮ್ಯಾಗ್ನಸ್ ಕಾರ್ಲ್ಸೆನ್ - 22 ವರ್ಷಗಳು 11 ತಿಂಗಳುಗಳು 24 ದಿನಗಳು - ನವೆಂಬರ್ 23, 2013
ಮಿಖಾಯಿಲ್ ತಾಲ್ - 23 ವರ್ಷ 5 ತಿಂಗಳು 28 ದಿನಗಳು - ಮೇ 7, 1960
ಅನಾಟೊಲಿ ಕಾರ್ಪೋವ್ - 23 ವರ್ಷ 10 ತಿಂಗಳು 11 ದಿನಗಳು - ಏಪ್ರಿಲ್ 3, 1975
ವ್ಲಾಡಿಮಿರ್ ಕ್ರಾಮ್ನಿಕ್ - 25 ವರ್ಷ 4 ತಿಂಗಳು 10 ದಿನಗಳು - ನವೆಂಬರ್ 4, 2000
ಇಮ್ಯಾನುಯೆಲ್ ಲಾಸ್ಕರ್ - 25 ವರ್ಷ 5 ತಿಂಗಳು 2 ದಿನಗಳು - ಮೇ 26, 1894