Ramiz Raja on BCCI: 'ಭಾರತವಿಲ್ಲದೆ ನಾವು ಹಲವು ವರ್ಷ ಬದುಕಿದ್ದೇವೆ': ರಮೀಜ್ ರಾಜಾ ಹೀಗೆ ಹೇಳಿದ್ದು ಯಾಕೆ?
“ನಾವು ನಿಜವಾಗಿಯೂ ಭಾರತಕ್ಕೆ ಹೋಗಲು ಬಯಸುವುದಿಲ್ಲ. ಆದರೆ ಅಭಿಮಾನಿಗಳು ನಾವು ಪ್ರತಿಕ್ರಿಯಿಸಬೇಕೆಂದು ಬಯಸುತ್ತಾರೆ” ಎಂದು ರಾಜಾ ಶನಿವಾರ ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್‌ಗೆ ತಿಳಿಸಿದರು. “ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಗ್ಗೆ ಭಾರತದ ಹೇಳಿಕೆಯಿಂದಾಗಿ ಅಭಿಮಾನಿಗಳು ನಿಜಕ್ಕೂ ಬೇಸರಗೊಂಡಿದ್ದಾರೆ,” ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಝ್ ರಾಜಾ ಬಿಸಿಸಿಐ ವಿರುದ್ಧ ಮತ್ತೆ ಗುಡುಗಿದ್ದಾರೆ. 2023ರಲ್ಲಿ ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜಿಸುವ ಅವಕಾಶವನ್ನು ಭಾರತ ನಿರಾಕರಿಸಿದರೆ, ಭಾರತದಲ್ಲಿ ನಡೆಯಲಿರುವ ಮುಂದಿನ ವರ್ಷದ ಏಕದಿನ ವಿಶ್ವಕಪ್ ಅನ್ನು ಪಾಕಿಸ್ತಾನ ಬಹಿಷ್ಕರಿಸಬಹುದು ಎಂದು ಪುನರುಚ್ಚರಿಸಿದ್ದಾರೆ. ಉಭಯ ದೇಶಗಳು ಮತ್ತೊಮ್ಮೆ ಪರಸ್ಪರ ಆತಿಥ್ಯ ವಹಿಸಬೇಕೆಂದು ತಾನು ಬಯಸುವುದಾಗಿ ರಮೀಜ್ ತಿಳಿಸಿದ್ದಾರೆ.
ಟೀಂ ಇಂಡಿಯಾವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಹಿರಂಗಪಡಿಸಿದ ಬೆನ್ನಲ್ಲೇ, ಕಳೆದ ಅಕ್ಟೋಬರ್‌ನಲ್ಲಿ ಎರಡು ಕ್ರಿಕೆಟ್ ಮಂಡಳಿಗಳ ನಡುವೆ ವಾದ ವಿವಾದಗಳು ಪ್ರಾರಂಭವಾಗಿದೆ. ಅರಬ್ ರಾಷ್ಟ್ರವನ್ನು ಗಮನದಲ್ಲಿಟ್ಟುಕೊಂಡು ತಟಸ್ಥ ಸ್ಥಳದಲ್ಲಿ ಪಂದ್ಯ ಆಯೋಜಿಸುವಂತೆ ಬಿಸಿಸಿಐ ಕರೆ ನೀಡಿದೆ. ಇದಕ್ಕೆ ಪ್ರತ್ಯುತ್ತರವಾಗಿ, ಮುಂದಿನ ವರ್ಷ ಏಷ್ಯಾಕಪ್ ನಡೆದ ಒಂದು ತಿಂಗಳೊಳಗೆ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಪಿಸಿಬಿ ಬೆದರಿಕೆ ಹಾಕಿದೆ.
“ನಾವು ನಿಜವಾಗಿಯೂ ಭಾರತಕ್ಕೆ ಹೋಗಲು ಬಯಸುವುದಿಲ್ಲ. ಆದರೆ ಅಭಿಮಾನಿಗಳು ನಾವು ಪ್ರತಿಕ್ರಿಯಿಸಬೇಕೆಂದು ಬಯಸುತ್ತಾರೆ” ಎಂದು ರಾಜಾ ಶನಿವಾರ ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್‌ಗೆ ತಿಳಿಸಿದರು. “ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಗ್ಗೆ ಭಾರತದ ಹೇಳಿಕೆಯಿಂದಾಗಿ ಅಭಿಮಾನಿಗಳು ನಿಜಕ್ಕೂ ಬೇಸರಗೊಂಡಿದ್ದಾರೆ,” ಎಂದು ಅವರು ಹೇಳಿದ್ದಾರೆ.
ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ಅಥರ್ಟನ್ ಅವರೊಂದಿಗಿನ ಸಂಭಾಷಣೆಯಲ್ಲಿ, ರಾಜಾ ಬಿಸಿಸಿಐನ ನಿಲುವು “ಅನ್ಯಾಯ” ಎಂದು ಟೀಕಿಸಿದರು. ಅಲ್ಲದೆ ಏಷ್ಯಾಕಪ್ ಆಯೋಜನೆಯ ಸ್ಥಳ ಬದಲಾವಣೆಯನ್ನು ಪಿಸಿಬಿ ಕಟುವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
“ಇದರಲ್ಲಿ ಸರ್ಕಾರದ ನೀತಿ ಇದೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಅವರು ನಮ್ಮ ದೇಶಕ್ಕೆ ಬರುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಏಷ್ಯಾ ಕಪ್ ಎಂದರೆ ಅಭಿಮಾನಿಗಳಿಗೆ ಒಂದು ದೊಡ್ಡ ವಿಷಯ. ಇದು ಬಹುರಾಷ್ಟ್ರಗಳ ನಡುವೆ ನಡೆಯುವ ಪಂದ್ಯಾವಳಿಯಾಗಿದೆ,” ಎಂದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಮತ್ತು ದ್ವಿಪಕ್ಷೀಯ ಸರಣಿಗಳಿಗೆ ಪರಸ್ಪರ ಆತಿಥ್ಯ ವಹಿಸಬೇಕೆಂದು ಬಯಸುವುದಾಗಿ ಮಾಜಿ ಕ್ರಿಕೆಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನಾನು ಅಭಿಮಾನಿಗಳನ್ನು ಸಂಪೂರ್ಣವಾಗಿ ಪ್ರೀತಿಸುತ್ತೇನೆ. ಏಕೆಂದರೆ ಅವರು ಕೂಡಾ ನಮ್ಮನ್ನು ಇಷ್ಟಪಡುತ್ತಾರೆ. ಪಾಕಿಸ್ತಾನವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬ್ರಾಂಡ್ ಆಗಿ ಮಾರ್ಪಟ್ಟಿದೆ. ನಮ್ಮ ಆಟಗಾರರಿಗೆ ಭಾರತದಲ್ಲಿ ಅಭಿಮಾನಿಗಳಿದ್ದಾರೆ. ಭಾರತದ ನಂತರ ಭಾರತದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಎರಡನೇ ತಂಡ ಪಾಕಿಸ್ತಾನ ಎಂದು ನನಗೆ ತಿಳಿದಿದೆ,” ಎಂದರು
“ನಾವು ಅಲ್ಲಿ ಹೋಗಿ ಆಡಲು ಬಯಸುತ್ತೇವೆ. ಆದರೆ ವಾಸ್ತವವೆಂದರೆ ಅದು ಸಮಾನವಾಗಿ ಇರಬೇಕು. ಅವರು ಕೂಡಾ ಇದಕ್ಕೆ ಒಪ್ಪಬೇಕು. ನೀವು ನಿರ್ದಿಷ್ಟ ಕ್ರಿಕೆಟ್ ಮಂಡಳಿಗೆ ಅಧೀನರಾಗಲು ಸಾಧ್ಯವಿಲ್ಲ,” ಎಂದರು.
“ನಮ್ಮ ಕ್ರಿಕೆಟ್ ತಂಡವು ಹಲವು ವರ್ಷಗಳಿಂದ ಭಾರತವಿಲ್ಲದೆ ಬದುಕುಳಿದಿದೆ. ಪಾಕಿಸ್ತಾನವು ಆಂತರಿಕವಾಗಿ ಆರ್ಥಿಕ ಏರುಪೇರುಗಳನ್ನು ನೋಡಿದೆ. ಆದರೂ ಉತ್ತಮವಾಗಿ ಉಳಿದುಕೊಂಡಿದೆ,” ಎಂದು ಹೇಳಿದರು.
2008ರಲ್ಲಿ ಏಷ್ಯಾಕಪ್‌ಗಾಗಿ ಭಾರತ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ತೆರಳಿತ್ತು. ಮತ್ತೊಂದೆಡೆ, ಪಾಕಿಸ್ತಾನವು 2016ರಲ್ಲಿ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಬಂದಿತ್ತು. ಉಭಯ ತಂಡಗಳು 2012ರಿಂದ ಯಾವುದೇ ದ್ವಿಪಕ್ಷೀಯ ಸರಣಿಗಳಲ್ಲಿ ಆಡಿಲ್ಲ. ಆದರೆ ಐಸಿಸಿ ಈವೆಂಟ್‌ಗಳು ಮತ್ತು ಏಷ್ಯಾಕಪ್‌ಗಳಲ್ಲಿ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ.