Ramiz on Akhtar: 'ದ್ರಾವಿಡ್‌ರನ್ನು ಗವಾಸ್ಕರ್ ಟೀಕಿಸುವುದು ನೋಡಿದ್ದೀರಾ?': ಬಾಬರ್ ಕುರಿತು ವ್ಯಂಗ್ಯವಾಡಿದ ಅಖ್ತರ್‌ಗೆ ರಮೀಜ್ ಕ್ಲಾಸ್
ಅಖ್ತರ್ ಟೀಕೆಗಳಿಗೆ ಸಿಡಿಮಿಡಿಗೊಂಡ ರಮೀಜ್, ಬೇರೆ ಯಾವುದೇ ದೇಶದ ಯಾವುದೇ ಮಾಜಿ ಕ್ರಿಕೆಟಿಗರು ತಮ್ಮ ದೇಶದ ಆಟಗಾರರ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡುವುದಿಲ್ಲ ಎಂದು ವಿವರಿಸಿದ್ದಾರೆ. ಇದೇ ವೇಳೆ ಗವಾಸ್ಕರ್-ದ್ರಾವಿಡ್ ಹೇಳಿಕೆಯ ಮೂಲಕ ಅವರ ಕಲ್ಪನೆಯನ್ನು ಉದಾಹರಿಸಿದ್ದಾರೆ.
ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್, ಇತ್ತೀಚೆಗೆ ವಿರಾಟ್ ಕೊಹ್ಲಿಯಂತಹ ಬ್ರಾಂಡ್ ಬಾಬರ್ ಅಜಮ್ ಅಲ್ಲ ಎಂದು ವಿವರಿಸುವ ಸಂದರ್ಭದಲ್ಲಿ ಅನಗತ್ಯ ಹೇಳಿಕೆಯನ್ನು ನೀಡಿದ್ದರು. ಸ್ಥಳೀಯ ಪಾಕಿಸ್ತಾನಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಖ್ತರ್, ಪಾಕಿಸ್ತಾನದ ನಾಯಕ ಬಾಬರ್‌ಗೆ ಇಂಗ್ಲಿಷ್ ಬರಲ್ಲ ಎಂಬ ವಿಚಾರವಾಗಿ ಮಾತನಾಡಿ ಟೀಕಿಸಿದ್ದರು. ಇದು ಬಾಬರ್ ಮಾತ್ರವಲ್ಲದೆ, ಸಂಪೂರ್ಣ ಪಾಕಿಸ್ತಾನಿ ಕ್ರಿಕೆಟಿಗರ ಇಂಗ್ಲಿಷ್ ಜ್ಞಾನದ ಬಗ್ಗೆ ಟೀಕಿಸಿದಂತಿತ್ತು. ಅಖ್ತರ್ ಹೇಳಿಕೆಯು ಕ್ರಿಕೆಟ್ ಅಭಿಮಾನಿಗಳಿಗೆ ಹಿಡಿಸಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಸಿಬಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ, ಅಖ್ತರ್ ಅವರನ್ನು ಓರ್ವ "ಭ್ರಮೆಗಾರ" ಎಂದು ಜರಿದಿದ್ದಾರೆ.
ಬಾಬರ್ ಸೇರಿದಂತೆ ಪಾಕಿಸ್ತಾನದ ಕ್ರಿಕೆಟಿಗರ ಕಳಪೆ ಸಂವಹನ ಕೌಶಲ್ಯವನ್ನು ಎತ್ತಿ ತೋರಿಸಿದ್ದ ಅಖ್ತರ್ ಹೀಗೆ ಹೇಳಿದ್ದರು: “ತಂಡದಲ್ಲಿ ಯಾವುದೇ ಉತ್ತಮ ಲಕ್ಷಣವಿಲ್ಲ, ಅಲ್ಲದೆ ಯಾರಿಗೂ ಹೇಗೆ ಮಾತನಾಡಬೇಕೆಂಬುದೇ ಗೊತ್ತಿಲ್ಲ. ಅವರು ಪ್ರೆಸೆಂಟೇಶನ್‌ಗೆ ಬಂದಾಗ ಅದು ಎಷ್ಟು ಆಭಾಸವಾಗಿ ಕಾಣುತ್ತದೆ. ಇಂಗ್ಲಿಷ್ ಕಲಿಯಲು ಮತ್ತು ಮಾತನಾಡಲು ಅಷ್ಟೊಂದು ಕಷ್ಟವೇ? ಕ್ರಿಕೆಟ್ ಆಡುವುದು ಒಂದು ಕೆಲಸ. ಅದರೊಂದಿಗೆ ಮಾಧ್ಯಮವನ್ನು ನಿರ್ವಹಿಸುವುದು ಇನ್ನೊಂದು ಕೆಲಸ. ನಿಮಗೆ ಮಾತನಾಡಲು ಸಾಧ್ಯವಾಗದಿದ್ದರೆ, ನಿಮ್ಮ ಅಭಿಪ್ರಾಯವನ್ನು ಟಿವಿಯಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ನಾನು ಬಹಿರಂಗವಾಗಿ ಹೇಳುತ್ತೇನೆ. ಪಾಕಿಸ್ತಾನದಲ್ಲಿ ಬಾಬರ್ ಆಜಮ್ ಅತಿದೊಡ್ಡ ಬ್ರ್ಯಾಂಡ್ ಆಗಿ ಬೆಳೆಯಬೇಕಿತ್ತು. ಆದರೆ ಆತ ದೊಡ್ಡ ಬ್ರ್ಯಾಂಡ್ ಆಗಲಿಲ್ಲ. ಏಕೆಂದರೆ ಅವನಿಗೆ ಮಾತನಾಡಲು ಆಗುವುದಿಲ್ಲ,” ಎಂದು ಅಖ್ತರ್ ಹೇಳಿದ್ದರು.
ಅಖ್ತರ್ ಅವರ ಟೀಕೆಗಳಿಗೆ ಸಿಡಿಮಿಡಿಗೊಂಡ ರಮೀಜ್, ಬೇರೆ ಯಾವುದೇ ದೇಶದ ಯಾವುದೇ ಮಾಜಿ ಕ್ರಿಕೆಟಿಗರು ತಮ್ಮ ದೇಶದ ಆಟಗಾರರ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡುವುದಿಲ್ಲ ಎಂದು ವಿವರಿಸಿದ್ದಾರೆ. ಇದೇ ವೇಳೆ ಗವಾಸ್ಕರ್-ದ್ರಾವಿಡ್ ಹೇಳಿಕೆಯ ಮೂಲಕ ಅವರ ಕಲ್ಪನೆಯನ್ನು ಉದಾಹರಿಸಿದ್ದಾರೆ.
ಪಾಕಿಸ್ತಾನದ ಸ್ಥಳೀಯ ಚಾನೆಲ್ BOL ನೆಟ್‌ವರ್ಕ್‌ನಲ್ಲಿ ಮಾತನಾಡಿದ ರಾಜಾ, “ಶೋಯಬ್ ಅಖ್ತರ್ ಭ್ರಮೆಯ ಸೂಪರ್‌ಸ್ಟಾರ್. ಇತ್ತೀಚೆಗಷ್ಟೇ ಕಮ್ರಾನ್ ಅಕ್ಮಲ್ ಜೊತೆಗೂ ಅವರಿಗೆ ಸಮಸ್ಯೆ ಇತ್ತು. ಪ್ರತಿಯೊಬ್ಬರೂ ಬ್ರಾಂಡ್ ಆಗಬೇಕೆಂದು ಅವರು ಬಯಸುತ್ತಾರೆ. ಆದರೆ ಮೊದಲು ಮಾನವರಾಗುವುದು ತುಂಬಾ ಮುಖ್ಯ. ಮೊದಲು ಮಾನವನಾಗು ಆಮೇಲೆ ಬ್ರಾಂಡ್ ಆಗು,” ಎಂದು ರಾಜಾ ತಮ್ಮದೇ ದೇಶದ ಮಾಜಿ ಕ್ರಿಕೆಟಿಗನಿಗೆ ಟಾಂಗ್ ಕೊಟ್ಟಿದ್ದಾರೆ.
“ನಮ್ಮ ದೇಶದ ಮಾಜಿ ಆಟಗಾರರು ಭ್ರಮೆಯ ಹೇಳಿಕೆಗಳನ್ನು ನೀಡುವ ಮೂಲಕ ನಮ್ಮ ಕ್ರಿಕೆಟ್ ಬ್ರ್ಯಾಂಡ್ ಅನ್ನು ಕೆಡಿಸುತ್ತಿದ್ದಾರೆ. ನಮ್ಮ ನೆರೆಯ ದೇಶ ಭಾರತದಲ್ಲಿ ಹೀಗಾಗುವುದನ್ನು ನೀವು ನೋಡಲು ಸಾಧ್ಯವೇ ಇಲ್ಲ. ಸುನಿಲ್ ಗವಾಸ್ಕರ್ ಅವರು ರಾಹುಲ್ ದ್ರಾವಿಡ್ ಅವರನ್ನು ಟೀಕಿಸುವುದನ್ನು ನೀವು ಎಂದಿಗೂ ನೋಡಲು ಸಾಧ್ಯವಿಲ್ಲ. ಇಂತಹ ಟೀಕೆಗಳು ಪಾಕಿಸ್ತಾನದಲ್ಲಿ ಮಾತ್ರ ಸಂಭವಿಸುತ್ತದೆ. ನಮ್ಮಲ್ಲಿ ಮಾಜಿ ಆಟಗಾರರು ಇತರರನ್ನು ವೃತ್ತಿಪರವಾಗಿ ತಮ್ಮ ಕೆಲಸವನ್ನು ಮಾಡಲು ಬಿಡುವುದಿಲ್ಲ,” ಎಂದು ರಮೀಜ್ ಹೇಳಿದ್ದಾರೆ.
ಮುಂದಿನ ಪಿಸಿಬಿ ಅಧ್ಯಕ್ಷರಾಗುವ ಅಖ್ತರ್ ಅವರ ಕನಸಿನ ಬಗ್ಗೆ ಕೇಳಿದಾಗ, ರಾಜಾ ಪಾಕಿಸ್ತಾನದ ದಂತಕಥೆಯನ್ನು ಕಟುವಾಗಿ ಕೆಣಕಿದರು. ಪಿಸಿಬಿಯ ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಲು ಅವರು ಮೊದಲು ಪದವಿ ಪಡೆಯಬೇಕು ಎಂದು ಟೀಕಿಸಿದರು.
ವಿಭಾಗ