ಕನ್ನಡ ಸುದ್ದಿ  /  Sports  /  Ravi Shastri On How Umran Malik Can Make Place In World Cup Squad

Ravi Shastri on Umran: ವಿಶ್ವಕಪ್‌ ತಂಡದಲ್ಲಿ ಉಮ್ರಾನ್‌ ಸ್ಥಾನ ಪಡೆಯುತ್ತಾರಾ? ರವಿ ಶಾಸ್ತ್ರಿ ಕೊಟ್ರು ನೋಡಿ ಸಮರ್ಥನೆ

ಭಾರತದ ಅಂತಿಮ 15 ಸದಸ್ಯರ ವಿಶ್ವಕಪ್ ತಂಡದಲ್ಲಿ ಉಮ್ರಾನ್ ಮಲಿಕ್ ಸ್ಥಾನ ಪಡೆಯುವ ಸಾಧ್ಯತೆಗಳ ಬಗ್ಗೆ ಮಾಜಿ ಕೋಚ್ ರವಿಶಾಸ್ತ್ರಿ ಮಾತನಾಡಿದ್ದಾರೆ.

ರವಿಶಾಸ್ತ್ರಿ; ಉಮ್ರಾನ್ ಮಲಿಕ್
ರವಿಶಾಸ್ತ್ರಿ; ಉಮ್ರಾನ್ ಮಲಿಕ್ (ANI/AP)

ಭಾರತದ ವೇಗದ ಬೌಲಿಂಗ್‌ ಸೆನ್ಸೇಷನ್ ಉಮ್ರಾನ್ ಮಲಿಕ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದಲೂ ಕ್ರೀಡಾ ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಕಾರಣರಾಗಿದ್ದಾರೆ. ಸಹಜವಾಗಿ, ಉಮ್ರಾನ್ ಅವರ ವೇಗವೇ ಅವರ ಬಗೆಗಿನ ಚರ್ಚೆಗೆ ಹೆಚ್ಚು ಪುಷ್ಠಿ ನೀಡಿದೆ. ಅವರ ವೇಗವನ್ನು ಮೀರಿ ನೋಡಿದರೆ, ಅವರ ಬೌಲಿಂಗ್‌ನಲ್ಲಿ ಇತರ ಕೆಲ ಅಂಶಗಳೂ ಇವೆ. ಅದು ಎದುರಾಳಿಗಳಿಗೆ ಸ್ಪಷ್ಟ ಬೆದರಿಕೆಯಾಗಿದೆ.

ಉಮ್ರಾನ್ ಕೆಲ ಪಂದ್ಯಗಳಲ್ಲಿ‌ ಹೆಚ್ಚು ರನ್‌ ಬಿಟ್ಟುಕೊಟ್ಟಿರಬಹುದು. ಹೀಗೆ ಪ್ರತಿಯೊಬ್ಬ ವೇಗಿಯೂ ಅಪಾಯವನ್ನು ಎದುರಿಸುತ್ತಾರೆ. ಅದರೆ ಹೊರತಾಗಿ ನೋಡಿದರೆ, ಉಮ್ರಾನ್‌ ಪಡೆದ ಹೆಚ್ಚಿನ ವಿಕೆಟ್‌ಗಳು ಬೌಲ್ಡ್ ಔಟ್‌ಗಳ ಮೂಲಕ ಆಗಿವೆ. 25 ವರ್ಷದ ಯುವ ಕ್ರಿಕೆಟಿಗ ಕಳೆದ 8 ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 2 ಬಾರಿ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಕೇವಲ ಒಂದು ಪಂದ್ಯದಲ್ಲಿ ಮಾತ್ರ ವಿಕೆಟ್‌ ಪಡೆಯಲು ವಿಫಲರಾಗಿದ್ದಾರೆ.

ಭಾರತ ತಂಡದಲ್ಲಿನ ಪ್ರತಿಯೊಂದು ಸ್ಥಾನಗಳಿಗೂ ಪ್ರಬಲ ಪೈಪೋಟಿ ಇದೆ. ವಿಶ್ವಕಪ್ ಸಮೀಪಿಸುತ್ತಿದ್ದಂತೆಯೇ, ಈ ಪೈಪೋಟಿ ಹೆಚ್ಚುತ್ತಲೇ ಇದೆ. ವಿಶ್ವಕಪ್‌ ವೇಳೆಗೆ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಹಿಂತಿರುಗಲಿದ್ದಾರೆ. ಹೊಸ ಚೆಂಡಿನೊಂದಿಗೆ ಅವರೊಂದಿಗೆ ದೀರ್ಘಕಾಲದ ಪಾಲುದಾರ ಮೊಹಮ್ಮದ್ ಶಮಿ ಇರುತ್ತಾರೆ. ಇವರ ಜತೆಗೆ ಅಗ್ರ ಶ್ರೇಯಾಂಕಿತ ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್, ತಮ್ಮ ಪ್ರಭಾವಶಾಲಿ ಪ್ರದರ್ಶನಗಳೊಂದಿಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು‌ ಎದುರು ನೋಡುತ್ತಿದ್ದಾರೆ. ಅತ್ತ, ಹಾರ್ದಿಕ್ ಪಾಂಡ್ಯ ಕೂಡಾ ಬ್ಯಾಟಿಂಗ್‌ ಜತೆಗೆ ಬೌಲಿಂಗ್ ಮಾಡುತ್ತಿರುವುದು ತಂಡಕ್ಕೆ ಮತ್ತೊಂದು ಆಯ್ಕೆಯನ್ನು ನೀಡುತ್ತದೆ.

ಅಂತಹ ಪರಿಸ್ಥಿತಿಯಲ್ಲಿ, ಉಮ್ರಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಕಡೆಗೆ ತಂಡದ ಮ್ಯಾನೇಜ್‌ಮೆಂಟ್‌ ಒಲವು ತೋರುತ್ತದೆಯೇ ಎಂಬ ಬಗ್ಗೆ ಕುತೂಹಲ ಹೆಚ್ಚುತ್ತಿದೆ. ಆದರೆ, ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಅವರು, ಭಾರತದ ವೇಗಿ ಅಂತಿಮ 15 ಆಟಗಾರರ ಪಟ್ಟಿಯಲ್ಲಿ ಉಮ್ರಾನ್‌ ಖಂಡಿತಾ ಸ್ಥಾನ ಪಡೆಯುತ್ತಾರೆ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬಹುದಾದ ದಿನಗಳ ಬಗ್ಗೆ ಮಾತನಾಡಿದ ಶಾಸ್ತ್ರಿ, ಉಮ್ರಾನ್ ಟಿ20ಗಿಂತ ಏಕದಿನ ಪಂದ್ಯಗಳಿಗೆ ಹೆಚ್ಚು ಸೂಕ್ತ ಆಟಗಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಅವರು ಟಿ20 ಗಿಂತ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಹೆಚ್ಚು ಅವಕಾಶ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ, ಆಟಗಾರರು ಯಾವುದೇ ಸಮಯದಲ್ಲಿಯೂ ಗಾಯಕ್ಕೆ ತುತ್ತಾಗಬಹುದು. ವಿಶ್ವಕಪ್‌ಗೆ ತಂಡವನ್ನು ಘೋಷಿಸಲು ಇನ್ನೂ ದಿನಗಳಿವೆ. ಆಟಗಾರರ ಫಿಟ್‌ನೆಸ್ ಪ್ರಮುಖವಾಗಿರುತ್ತದೆ. ಅದಕ್ಕಾಗಿಯೇ ಅವರು (ಬೌಲರ್‌ಗಳು)ತಮ್ಮ ಹೊರೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಲು ಈ ಐಪಿಎಲ್ ನಿರ್ಣಾಯಕವಾಗಿದೆ,” ಎಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಶಾಸ್ತ್ರಿ ಹೇಳಿದರು.

ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ನೆಟ್ ಬೌಲರ್ ಆಗಿ ಭಾರತೀಯ ತಂಡದ ಭಾಗವಾಗಿದ್ದ ಉಮ್ರಾನ್, ನಾಲ್ಕು ಟೆಸ್ಟ್‌ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ಬಳಿಕ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮತ್ತೆ ಸನ್‌ರೈಸರ್ಸ್ ಹೈದರಾಬಾದ್‌ ಪರ ಕಣಕ್ಕಿಳಿಯಲಿದ್ದಾರೆ.