ಕನ್ನಡ ಸುದ್ದಿ  /  Sports  /  Ravichandran Ashwin Backs Rohit And Kohli

Ravichandran Ashwin: ಧೋನಿ ನಾಯಕನಾದ ತಕ್ಷಣ ಕಪ್ ಗೆದ್ದ ಮಾತ್ರಕ್ಕೆ ಎಲ್ಲರಿಗೂ ಅದು ಸಾಧ್ಯವಿಲ್ಲ; 'ರೋ-ಹ್ಲಿ' ಪರ ಅಶ್ವಿನ್ ಬ್ಯಾಟಿಂಗ್

ಇದೇ ವಿಚಾರವಾಗಿ ಕ್ರಿಕೆಟ್‌ ದಂತಕಥೆಯಾದ ಸಚಿನ್ ತೆಂಡೂಲ್ಕರ್ ಅವರ ಉದಾಹರಣೆಯನ್ನು ನೀಡಿದ ಅಶ್ವಿನ್‌, ವಿಶ್ವಕಪ್ ಎತ್ತುವ ತಮ್ಮ ಕನಸನ್ನು ನನಸಾಗಿಸಲು ಈ ದಿಗ್ಗಜ ಆರು ಬಾರಿ ಪ್ರಯತ್ನಿಸಬೇಕಾಯ್ತು ಎಂದು ಹೇಳಿದರು.

ಎಂಎಸ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್
ಎಂಎಸ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ (Getty Images)

ಭಾರತವು ಐಸಿಸಿ ಪಂದ್ಯಾವಳಿಯನ್ನು ಗೆಲ್ಲದೆ ಸರಿಸುಮಾರು ಒಂದು ದಶಕವೇ ಸಮೀಪಿಸಿದೆ. 2013ರಲ್ಲಿ ಇಂಗ್ಲೆಂಡ್‌ನಲ್ಲಿ ಎಂ ಎಸ್ ಧೋನಿ ನಾಯಕತ್ವದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಕೊನೆಯ ಬಾರಿ ಜಯಿಸಿತ್ತು. ಆ ಬಳಿಕ ಟ್ರೋಫಿ ಸಮೀಪ ಹಲವು ಬಾರಿ ಬಂದ ಭಾರತ, ಅಂತಿಮ ಕ್ಷಣದಲ್ಲಿ ಎಡವಿತ್ತು. 2014ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋತಿತು. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲೊಪ್ಪಿಕೊಳ್ಳಬೇಕಾಯ್ತು.

2019ರಲ್ಲಿ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತು ಎರಡನೇ ಸ್ಥಾನ ಪಡೆಯಬೇಕಾಯ್ತು. ಈ ನಡುವೆ 2015ರ ಏಕದಿನ ವಿಶ್ವಕಪ್, 2016ರ ಟಿ20 ವಿಶ್ವಕಪ್, 2019ರ ಏಕದಿನ ವಿಶ್ವಕಪ್ ಮತ್ತು 2022ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ವರೆಗೂ ಬಂದ ಭಾರತ, ಅಲ್ಲೇ ಸೋತು ಫೈನಲ್‌ಗೆ ಲಗ್ಗೆ ಹಾಕಲು ವಿಫಲವಾಯ್ತು. 2021ರಲ್ಲಿ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತದ್ದು ಅತ್ಯಂತ ಕಳಪೆ ಪ್ರದರ್ಶನ. ಅಲ್ಲಿ ಮೊದಲ ಸುತ್ತಿನಲ್ಲೇ ಭಾರತ ಹೊರಬಿತ್ತು.

ಭಾರತದ ಒಟ್ಟಾರೆ ಪ್ರದರ್ಶನವು ಉತ್ತಮವಾಗಿತ್ತು. ಆದರೆ, ಟ್ರೋಫಿಗಳ ಕೊರತೆಯು ಬಾರತದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ತೀವ್ರ ಟೀಕೆಗಳಿಗೆ ಗುರಿಯಾಗಿಸಿದೆ. ಟೀಂ ಇಂಡಿಯಾದ ಸಹ ಆಟಗಾರ ಮತ್ತು ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಈ ವಾದವನ್ನು ಒಪ್ಪಲು ಸಿದ್ಧರಿಲ್ಲ . ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್‌ ಪಡೆದ ಆಟಗಾರನಾಗಿರುವ ಅಶ್ವಿನ್, ಐಸಿಸಿ ಪಂದ್ಯಾವಳಿಯನ್ನು ಗೆಲ್ಲುವುದು ಮಾತ್ರವೇ ಆಟಗಾರನನ್ನು ನಿರ್ಣಯಿಸುವ ಏಕೈಕ ಮಾನದಂಡ ಆಗಬಾರದು ಎಂದು ಹೇಳಿದ್ದಾರೆ. ಹೀಗಾಗಿ ಆಟಗಾರರಿಗೆ ಕನಿಷ್ಠ ಸಮಯವನ್ನು ನೀಡಬೇಕು ಎಂದು ವಾದಿಸಿದ್ದಾರೆ.

ಇದೇ ವಿಚಾರವಾಗಿ ಕ್ರಿಕೆಟ್‌ ದಂತಕಥೆಯಾದ ಸಚಿನ್ ತೆಂಡೂಲ್ಕರ್ ಅವರ ಉದಾಹರಣೆಯನ್ನು ನೀಡಿದ ಅಶ್ವಿನ್‌, ವಿಶ್ವಕಪ್ ಎತ್ತುವ ತಮ್ಮ ಕನಸನ್ನು ನನಸಾಗಿಸಲು ಈ ದಿಗ್ಗಜ ಆರು ಬಾರಿ ಪ್ರಯತ್ನಿಸಬೇಕಾಯ್ತು ಎಂದು ಹೇಳಿದರು.

“ನೀವು ಕಪ್‌ ಗೆದ್ದಿಲ್ಲ ಎಂದು ಹೇಳುವುದು ಸುಲಭ. 1983ರ ವಿಶ್ವಕಪ್ ನಂತರ, ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ 1992, 1996, 1999, 2003 ಮತ್ತು 2007ರ ವಿಶ್ವಕಪ್‌ಗಳನ್ನು ಆಡಿದರು. ಅವರು ಅಂತಿಮವಾಗಿ 2011ರಲ್ಲಿ ವಿಶ್ವಕಪ್ ಗೆದ್ದರು. ಒಂದು ಕಪ್‌ ಗೆಲ್ಲಲು 6 ವಿಶ್ವಕಪ್‌ ಆವೃತ್ತಿಗಳವರೆಗೆ ಅವರು ಕಾಯಬೇಕಾಯಿತು” ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಭಾರತದ ತಂಡದ ನಾಯಕನಾಗಿ ಮೊದಲ ಪ್ರಯತ್ನದಲ್ಲೇ ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಗೆದ್ದಿದ್ದ ಎಂಎಸ್ ಧೋನಿ ಬಗ್ಗೆ ಆಲ್ ರೌಂಡರ್ ಮಾತನಾಡಿದರು. “ಮತ್ತೊಬ್ಬ ದಿಗ್ಗಜ ಎಂ ಎಸ್ ಧೋನಿ ಅವರು ನಾಯಕನಾದ ತಕ್ಷಣ ಬಂದು ವಿಶ್ವಕಪ್ ಗೆದ್ದರೆ, ಅದು ಎಲ್ಲಾ ನಾಯಕರಿಂದಲೂ ಆಗುತ್ತದೆ ಎಂದು ಅರ್ಥವಲ್ಲ, ಅಲ್ವಾ?” ಎಂದು ಅಶ್ವಿನ್‌ ಪ್ರಶ್ನಿಸಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಸಮಯ ನೀಡುವಂತೆ ಅಶ್ವಿನ್ ಅಭಿಮಾನಿಗಳನ್ನು ಒತ್ತಾಯಿಸಿದ್ದಾರೆ. “ಈ ಆಟಗಾರರು (ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ) 2007ರಲ್ಲಿ ಆಡಲಿಲ್ಲ. ರೋಹಿತ್ ಶರ್ಮಾ 2011ರ ವಿಶ್ವಕಪ್‌ನಿಂದ ವಂಚಿತರಾದರು. ಕೊಹ್ಲಿ ಮಾತ್ರ 2011, 2015, 2019ರ ವಿಶ್ವಕಪ್‌ನಲ್ಲಿ ಆಡಿದ್ದರು. ಈಗ ಅವರು 2023ರಲ್ಲಿ ತಮ್ಮ ನಾಲ್ಕನೇ ವಿಶ್ವಕಪ್ ಆಡಲಿದ್ದಾರೆ. ಅವರು ಐಸಿಸಿ ಟೂರ್ನಮೆಂಟ್ ಗೆದ್ದಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅವರು ಅದನ್ನು 2011ರಲ್ಲಿ ಗೆದ್ದಿದ್ದಾರೆ. ಅದರೊಂದಿಗೆ 2013ರ ಚಾಂಪಿಯನ್ಸ್ ಟ್ರೋಫಿಯನ್ನು ಕೂಡಾ ಗೆದ್ದಿದ್ದಾರೆ. ರೋಹಿತ್ ಶರ್ಮಾ ಕೂಡಾ 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದಾರೆ. ಆದ್ದರಿಂದ, ನಾವು ಅವರಿಗೆ ಇನ್ನೂ ಸ್ವಲ್ಪ ಸಮಯ ನೀಡಬಹುದು. ಅವರು ದ್ವಿಪಕ್ಷೀಯ ಪಂದ್ಯಗಳನ್ನು ಆಡುತ್ತಿದ್ದಾರೆ. ಐಪಿಎಲ್, ಮತ್ತು ಇತರ ಹಲವು ಪಂದ್ಯಗಳಲ್ಲಿ ನಿರಂತರವಾಗಿ ಆಡುತ್ತಿದ್ದಾರೆ. ಐಸಿಸಿ ಪಂದ್ಯಾವಳಿಗಳ ವಿಚಾರಕ್ಕೆ ಬಂದಾಗ, ಮುಂದೆ ಹೋಗಲು ನಿಮಗೆ ಆ ನಿರ್ಣಾಯಕ ಕ್ಷಣಗಳು ಬೇಕಾಗುತ್ತವೆ” ಎಂದು ಅಶ್ವಿನ್ ಹೇಳಿದ್ದಾರೆ.