ಕನ್ನಡ ಸುದ್ದಿ  /  Sports  /  Rcbw Vs Upw: Rcb Look To End Victory-less Run As Up Warriorz Make Brabourne Debut

RCBW vs UPW: ಹ್ಯಾಟ್ರಿಕ್ ಸೋಲಿನ ಬಳಿಕವಾದರೂ ಮೈಕೊಡವಿ ನಿಲ್ಲುತ್ತಾ RCB? ಇಂದು ಬೆಂಗಳೂರು ಪಾಲಿಗೆ ಮಹತ್ವದ ಪಂದ್ಯ

WPL 2023: ಹ್ಯಾಟ್ರಿಕ್​​ ಸೋಲಿನ ಬಳಿಕ ಸ್ಮೃತಿ ಮಂದಾನ ನಾಯಕತ್ವದ RCB ತನ್ನ ನಾಲ್ಕನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೆಣೆಸಾಟ ನಡೆಸಲಿದೆ.

ರಾಯಲ್​ ಚಾಲೆಂಜರ್ಸ್ ಬೆಂಗಳೂರು
ರಾಯಲ್​ ಚಾಲೆಂಜರ್ಸ್ ಬೆಂಗಳೂರು (Twitter)

ಮಹಿಳಾ ಪ್ರೀಮಿಯರ್​ ಲೀಗ್ (Women's Premier League)​​​ ಆರಂಭಕ್ಕೂ ಮುನ್ನ ಬಲಿಷ್ಠ ತಂಡ ಎನಿಸಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ಚೊಚ್ಚಲ ಆವೃತ್ತಿಯಲ್ಲೇ ಹ್ಯಾಟ್ರಿಕ್​​​ ಸೋಲು ಕಂಡಿದೆ. ಆ ಮೂಲಕ ಉಳಿದ ಐದು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೂ ಸಿಲುಕಿದೆ. ಇಂದು ಬ್ರಬೋರ್ನ್​​ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಯುಪಿ ವಾರಿಯರ್ಸ್ (UP Warriorz)​ ತಂಡದ ಸವಾಲು ಎದುರಿಸಲಿದೆ.

ಆಡಿರುವ 3 ಪಂದ್ಯಗಳಲ್ಲಿ ಎದುರಾಳಿಗಳಿಗೆ 2 ಬಾರಿ 200 ರನ್​ ಬಿಟ್ಟುಕೊಟ್ಟಿರುವ ಆರ್​​ಸಿಬಿ, ಇಂದಿನ ಪಂದ್ಯದಲ್ಲಾದರೂ ಮಾರಕ ಬೌಲಿಂಗ್​​​ ದಾಳಿ ನಡೆಸುವತ್ತಾ ಹೆಜ್ಜೆ ಇಡಬೇಕಿದೆ. ಸತತ ಸೋಲುಗಳ ನಡುವೆ ಕಂಗೆಟ್ಟಿರುವ ಮಂದಾನ ಪಡೆ, ನಾಲ್ಕನೇ ಕದನದಲ್ಲಿ ಈ ಮಹತ್ವದ ಪಂದ್ಯದಲ್ಲಿ ಜಯಬೇರಿ ಬಾರಿಸುವ ಅಗತ್ಯ ಇದೆ. ಹಿಂದಿನ ಪಂದ್ಯಗಳ ಸೋಲಿನ ವೈಫಲ್ಯಗಳನ್ನು ಬದಿಗಿಟ್ಟು ಆಡಬೇಕಿದೆ.

ಬ್ಯಾಟಿಂಗ್​​​​​​ನಲ್ಲಿ ಅಲ್ಪಮಟ್ಟಿಗೆ ಯಶಸ್ಸು.!

ರಾಯಲ್​ ಚಾಲೆಂಜರ್ಸ್​​ ಬ್ಯಾಟಿಂಗ್​​​ನಲ್ಲಿ ಅಲ್ಪಮಟ್ಟಿಗೆ ಯಶಸ್ಸು ಸಾಧಿಸಿದೆ. ಅದರಲ್ಲೂ ಸೋಫಿ ಡಿವೈನ್​​, ಹೀದರ್​​ ನೈಟ್​​ ಅದ್ಭುತ ಫಾರ್ಮ್​​ನಲ್ಲಿದ್ದಾರೆ. ಆದರೆ ನಾಯಕಿ ಸ್ಮೃತಿ ಮಂದಾನ, ಎಲಿಸ್​ ಪೆರ್ರಿ, ದಿಸಾ ಕಸತ್​, ರಿಚಾ ಘೋಷ್​​ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಹೇಳಿಕೊಳ್ಳೋಕೆ ದೊಡ್ಡ ಸ್ಟಾರ್​​ಗಳೇ ಆಗಿದ್ದರೂ ಒಂದು ಇನ್ನಿಂಗ್ಸ್​​​​ನಲ್ಲೂ ದೊಡ್ಡ ಇನ್ನಿಂಗ್ಸ್​ ಕಟ್ಟಲೇ ಇಲ್ಲ.! ಇಂದಿನ ಪಂದ್ಯದಲ್ಲಾದರೂ ವೈಫಲ್ಯದ ಸುಳಿಯಲ್ಲಿರುವ ಆಟಗಾರ್ತಿಯರು ಸಿಡಿದೇಳಬೇಕಿದೆ.

ಬೌಲಿಂಗ್​​​ನಲ್ಲಿ ಸಂಪೂರ್ಣ ವೈಫಲ್ಯ

ಆರ್​ಸಿಬಿ ಬ್ಯಾಟಿಂಗ್​ನಲ್ಲಿ ಅಲ್ಪ ಮಟ್ಟಿಗೆ ಯಶಸ್ಸು ಸಾಧಿಸುತ್ತಿದ್ದರೂ ಬೌಲಿಂಗ್​ನಲ್ಲಿ ಮಾತ್ರ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಅಂತಾರಾಷ್ಟ್ರೀಯ ವಿಕೆಟ್​ ಬೇಟೆಯಾಡಿರುವ ಬೌಲರ್​​ಗಳೇ ತಂಡದಲ್ಲಿ ಇದ್ದರೂ ಬೌಲರ್​​​ಗಳು ಮಾರಕವಾಗಿ ಗೋಚರಿಸುತ್ತಿಲ್ಲ. ರೇಣುಕಾ ಸಿಂಗ್​, ಎಲಿಸ್​ ಪೆರ್ರಿ, ಸೋಫಿ ಡಿವೈನ್​, ಮೇಗನ್​ ಶುಟ್​​ ವಿಕೆಟ್​​​ ಪಡೆಯಲು ಪರದಾಡುತ್ತಿದ್ದಾರೆ. ಆಡಿದ 3 ಪಂದ್ಯಗಳಲ್ಲಿ 2 ಬಾರಿ ರನ್​ ಬಿಟ್ಟುಕೊಟ್ಟಿರುವುದು ಮತ್ತು 155 ರನ್​ಗಳನ್ನು 14 ಓವರ್​​ಗಳಲ್ಲೇ ಚೇಸ್​​ ಮಾಡುವಂತೆ ಬೌಲಿಂಗ್​​​​​​​​​​ ಮಾಡಿರುವುದು ಕಳಪೆ ಬೌಲಿಂಗ್​ ಮಾಡಿರುವುದಕ್ಕೆ ಸಾಕ್ಷಿ.!

ಹ್ಯಾಟ್ರಿಕ್​ ಸೋಲು, ಅಂಕಪಟ್ಟಿಯಲ್ಲಿ ಕೊನೇ ಸ್ಥಾನ.!

ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 60 ರನ್​ಗಳಿಂದ ಮುಖಭಂಗಕ್ಕೆ ಒಳಗಾದ ಆರ್​​ಸಿಬಿ, ತನ್ನ 2ನೇ ಪಂದ್ಯದಲ್ಲಿ ಮುಂಬೈ ವಿರುದ್ಧ 9 ವಿಕೆಟ್​ಗಳ ಹೀನಾಯ ಸೋಲು ಕಂಡಿತು. ಇನ್ನು ಗುಜರಾತ್​ ಜೈಂಟ್ಸ್​​ ವಿರುದ್ಧ ಅದ್ಭುತ ಬ್ಯಾಟಿಂಗ್​ ನಡುವೆಯೂ 11 ರನ್​ಗಳಿಂದ ಸೋಲನುಭವಿಸಿತು. ಸದ್ಯ ಹ್ಯಾಟ್ರಿಕ್​ ಸೋಲಿನ ಆಘಾತಕ್ಕೆ ಒಳಗಾದ ಆರ್​​ಸಿಬಿ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಆರ್​ಸಿಬಿ ಮೇಲಕ್ಕೇರಲು ಅವಕಾಶ ಇದೆ!

ಬೆಂಗಳೂರು ತಂಡಕ್ಕೆ ತನ್ನ ಸ್ಥಾನವನ್ನು ಸುಧಾರಿಸಿಕೊಳ್ಳಲು ಅವಕಾಶವಿದ್ದು, ಇಂದು ಬೆಂಗಳೂರು ತನ್ನ 4ನೇ ಪಂದ್ಯದಲ್ಲಿ ಯುಪಿ ವಿರುದ್ಧ ಸೆಣಸಲಿದೆ. ಬೆಂಗಳೂರು ಇದುವರೆಗೆ ಆಡಿದ ಮೂರೂ ಪಂದ್ಯಗಳಲ್ಲಿ ಸೋತಿದ್ದರೆ, ಯುಪಿ ಎರಡರಲ್ಲಿ ಒಂದರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಈ ಪಂದ್ಯದಲ್ಲಿ ಬೆಂಗಳೂರು ಗೆದ್ದರೆ 2 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪುತ್ತದೆ. ಏಕೆಂದರೆ ಆರ್​ಸಿಬಿಯ ನೆಟ್​ ರನ್​ರೇಟ್ ಗುಜರಾತ್‌ಗಿಂತ ಉತ್ತಮವಾಗಿದೆ. ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರಷ್ಟೇ ಪ್ರಶಸ್ತಿ ಗೆಲುವಿನ ಕನಸು ನನಸಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂದಾನ (ನಾಯಕಿ), ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಡಾನ್ ವ್ಯಾನ್ ನೀಕರ್ಕ್, ಕೋಮಲ್ ಜಂಜಾದ್, ಆಶಾ ಶೋಭನಾ, ಎರಿನ್ ಬರ್ನ್ಸ್, ಪ್ರೀತಿ ಬೋಸ್, ರೇಣುಕಾ ಸಿಂಗ್, ಸೋಫಿ ಡಿವೈನ್, ಹೀದರ್ ನೈಟ್, ಮೇಗನ್ ಶುಟ್, ಕನಿಕಾ ಅಹುಜಾ, ದೀಕ್ಷಾ ಕಾಸತ್, ಇಂದ್ರಾಣಿ ರಾಯ್, ಪೂನಂ ಖೇಮ್ನಾರ್, ಸಹನಾ ಪವಾರ್, ಶ್ರೇಯಾಂಕಾ ಪಾಟೀಲ್.

ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್, ಲಾರ್ ಬೆಲ್‌ರಿಸ್, ಗ್ರೇಸ್ ಬೆಲ್ಲರಿಸ್, ಪಾರ್ಶವಿ ಚೋಪ್ರಾ, ಸೊಪ್ಪದಂಡಿ ಯಶಸ್ರಿ.