Kannada News  /  Sports  /  Rishabh Pant Likely To Miss Most Of 2023
ರಿಷಭ್ ಪಂತ್
ರಿಷಭ್ ಪಂತ್ (ANI)

Rishabh Pant: ವಿಶ್ವಕಪ್‌ ಸೇರಿದಂತೆ 2023ರ ಬಹುಪಾಲು ಕ್ರಿಕೆಟ್‌ನಿಂದ ಪಂತ್ ಹೊರಕ್ಕೆ

15 January 2023, 8:23 ISTHT Kannada Desk
15 January 2023, 8:23 IST

ಪಂತ್ ಆರು ತಿಂಗಳಿಗಿಂತ ಹೆಚ್ಚು ಕಾಲ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಅಂದರೆ, ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ತುಂಬಾ ಕಡಿಮೆ.

ಭಾರತದ ಸ್ಟಾರ್ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ರಿಷಭ್ ಪಂತ್, 2023ರಲ್ಲಿ ನಡೆಯಲಿರುವ ವರ್ಷದ ಎಲ್ಲಾ ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇದರಲ್ಲಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕೂಡಾ ಸೇರಿದೆ.

ಟ್ರೆಂಡಿಂಗ್​ ಸುದ್ದಿ

ಪಂತ್ ಅವರು ಕಳೆದ ವರ್ಷದ ಡಿಸೆಂಬರ್ 30ರಂದು ದೆಹಲಿಯಿಂದ ರೂರ್ಕಿಗೆ ಮನೆಗೆ ಹೋಗುತ್ತಿದ್ದಾಗ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಅವರಿಗೆ ಮುಂಬೈನಲ್ಲಿ ಚಿಕಿತ್ಸೆ ಮುಂದುವರೆದಿದೆ. ಭಾರತದ ಅಗ್ರ ಗುತ್ತಿಗೆ ಆಟಗಾರರಲ್ಲಿ ಒಬ್ಬರಾದ ಪಂತ್ ಅವರನ್ನು, ಕಳೆದ ವಾರ ಡೆಹ್ರಾಡೂನ್‌ನಿಂದ ಮುಂಬೈಗೆ ಬಿಸಿಸಿಐ ಸೂಚನೆಯ ಮೇರೆಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ಈಗ ಮುಂಬೈನ ಕೋಕಿಲಾಬೆನ್‌ ಧೀರುಭಾಯ್‌ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮಂಡಳಿಯಿಂದ ನೇಮಕಗೊಂಡ ವಿಶೇಷ ಶಸ್ತ್ರಚಿಕಿತ್ಸಕ ಡಾ. ದಿನ್ಶಾ ಪರ್ದಿವಾಲಾ ಅವರ ಮುತುವರ್ಜಿಯಲ್ಲಿ ಪಂತ್‌ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ESPNCricinfo ವರದಿಯ ಪ್ರಕಾರ, ಪಂತ್ ಆರು ತಿಂಗಳಿಗಿಂತ ಹೆಚ್ಚು ಕಾಲ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಅಂದರೆ, ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ತುಂಬಾ ಕಡಿಮೆ. ಕಳೆದ ವಾರವಷ್ಟೇ ಪಂತ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶೀಘ್ರದಲ್ಲೇ ಅವರು ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಪಂತ್ ಚೇತರಿಸಿಕೊಳ್ಳುವ ಅವಧಿ ಕುರಿತು ಬಿಸಿಸಿಐ ಇನ್ನೂ ಯಾವುದೇ ಅಪ್ಡೇಟ್ ನೀಡಿಲ್ಲ. ಆದರೆ‌, ಅವರು ಕನಿಷ್ಠ ಆರು ತಿಂಗಳ ಕಾಲ ಹೊರಗುಳಿಯುತ್ತಾರೆ ಎಂದು ಆಯ್ಕೆಗಾರರು ಮತ್ತು ಮಂಡಳಿಯ ಸದಸ್ಯರು ಒಪ್ಪುತ್ತಾರೆ ಎಂದು ಈ ವರದಿ ಹೇಳಿದೆ. ಅಂದರೆ, ಆ ಬಳಿಕ ಫಿಟ್‌ನೆಸ್‌ ಕಾರಣದಿಂದಾಗಿ ಮತ್ತೊಂದಷ್ಟು ತಿಂಗಳು ಅವರು ಮೈದಾನಕ್ಕೆ ಇಳಿಯುವುದಕ್ಕೆ ಬಿಸಿಸಿಐ ತಡೆ ನೀಡಬಹುದು.

ಪಂತ್ ಕಳೆದ ವರ್ಷ ಡಿಸೆಂಬರ್ ಆರಂಭದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಭಾರತದ ಪರ ಕೊನೆಯ ಬಾರಿಗೆ ಆಡಿದ್ದರು. ಫೆಬ್ರವರಿ 9ರಿಂದ ನಾಗ್ಪುರದಲ್ಲಿ ಪ್ರಾರಂಭವಾಗುವ ಮುಂಬರುವ ಬಾರ್ಡರ್-ಗವಾಸ್ಕರ್ ಸರಣಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪಂತ್ ಹೊರಗುಳಿಯಲಿದ್ದಾರೆ. ಆಯ್ಕೆಗಾರರು ಕೆ ಎಸ್ ಭರತ್ ಮತ್ತು ಇಶಾನ್ ಕಿಶನ್ ಅವರನ್ನು ಆಸ್ಟ್ರೇಲಿಯಾ ಸರಣಿಗೆ ವಿಕೆಟ್ ಕೀಪರ್‌ಗಳಾಗಿ ಆಯ್ಕೆ ಮಾಡಿದ್ದಾರೆ. ಪಂತ್‌ ಮೊದಲ ಆಯ್ಕೆಯ ಕೀಪರ್‌ ಆಗುತ್ತಿದ್ದರು.

ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗಿರುವ ಪಂತ್, ಏಪ್ರಿಲ್ 1ರಿಂದ ಪ್ರಾರಂಭವಾಗುವ 2023ರ ಐಪಿಎಲ್‌ನಿಂದಲೂ ಹೊರಗುಳಿಯಲಿದ್ದಾರೆ. ರಿಷಬ್ ಪಂತ್ ಐಪಿಎಲ್‌ಗೆ ಲಭ್ಯರಿರುವುದಿಲ್ಲ ಎಂದು ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮಾಜಿ ಮುಖ್ಯಸ್ಥ ಸೌರವ್ ಗಂಗೂಲಿ ಮಂಗಳವಾರ ಖಚಿತಪಡಿಸಿದ್ದರು. "ಉತ್ತಮ ಐಪಿಎಲ್ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ ಮೇಲೆ ರಿಷಬ್ ಪಂತ್ ಅವರ ಗಾಯವು ಪರಿಣಾಮ ಬೀರುತ್ತದೆ," ಎಂದು ಅವರು ಹೇಳಿದ್ದಾರೆ.

ಗಮನಿಸಬಹುದಾದ ಇತರೆ ಸುದ್ದಿಗಳು

ಐಪಿಎಲ್ ಮಾಜಿ ಚೇರ್ಮನ್ ಆರೋಗ್ಯ ಸ್ಥಿತಿ ಗಂಭೀರ; ಆಕ್ಸಿಜನ್ ಸಪೋರ್ಟ್ ನಲ್ಲಿ ಲಲಿತ್ ಮೋದಿ

ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕೋವಿಡ್ ಜೊತೆಗೆ ನ್ಯುಮೋನಿಯಾ ಕೂಡ ತಗುಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಆಕ್ಸಿಜನ್ ಸಪೋರ್ಟ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯವನ್ನು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ. ವಾರದಲ್ಲಿ ಎರಡು ಬಾರಿ ಕೋವಿಡ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. ನ್ಯುಮೋನಿಯಾ ಕೂಡ ತೀವ್ರವಾಗಿದ್ದು, ಈ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.