IPL 2023: ಈ ವರ್ಷವಾದ್ರೂ ಸಚಿನ್ ಪುತ್ರನಿಗೆ ಸಿಗುತ್ತಾ ಅವಕಾಶ? ರೋಹಿತ್ ಹೇಳಿದ್ದೇನು?
ಐಪಿಎಲ್ ಟೂರ್ನಿಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (Rohit Sharma), ಅರ್ಜುನ್ ತೆಂಡೂಲ್ಕರ್ ಈ ಆವೃತ್ತಿಯಲ್ಲಿ ಪದಾರ್ಪಣೆ ಮಾಡುವ ಕುರಿತು ಸುಳಿವು ನೀಡಿದ್ದಾರೆ.
16ನೇ ಆವೃತ್ತಿಯ ಐಪಿಎಲ್ (IPL) ಆರಂಭಕ್ಕೆ ಇನ್ನೊಂದು ರಾತ್ರಿ ಮುಗಿದರೆ ಸಾಕು, ಸುದೀರ್ಘ 58 ದಿನಗಳ ಕ್ರಿಕೆಟ್ ಜಾತ್ರೆಗೆ ಚಾಲನೆ ಸಿಗಲಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ (Mumbai Indians) ಬೆಂಚ್ ಕಾದಿದ್ದ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರಿಗೆ ಈ ಬಾರಿಯಾದರೂ ಅವಕಾಶ ಸಿಗುತ್ತಾ ಎಂಬ ಚರ್ಚೆ ಮತ್ತೆ ಜೋರಾಗಿದೆ. ಕೇವಲ ನೆಟ್ ಬೌಲಿಂಗ್ಗೆ ಸೀಮಿತವಾಗಿರುವ ಅರ್ಜುನ್, ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುವುದು ಯಾವಾಗ ಎಂದು ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ಗೆ ಪ್ರಶ್ನೆಗಳು ಕೇಳಿ ಬರುತ್ತಿವೆ.
ಟ್ರೆಂಡಿಂಗ್ ಸುದ್ದಿ
ಐಪಿಎಲ್ ಟೂರ್ನಿಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (Rohit Sharma), ಅರ್ಜುನ್ ತೆಂಡೂಲ್ಕರ್ ಈ ಐಪಿಎಲ್ನಲ್ಲಿ ಪದಾರ್ಪಣೆ ಮಾಡುವ ಕುರಿತು ಸುಳಿವು ನೀಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬೂಮ್ರಾ (Jasprit Bumrah) ಮತ್ತು ಆಸೀಸ್ ವೇಗದ ಬೌಲರ್ ಜೇ ರಿಚರ್ಡ್ಸನ್ (Jhye Richardson) ಅವರ ಅಲಭ್ಯತೆ ಕಾಡುತ್ತಿದೆ. ಈ ಹಂತದಲ್ಲಿ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಅರ್ಜುನ್, ತಂಡವನ್ನು ಸೇರುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿದ ರೋಹಿತ್, ಅರ್ಜುನ್ ಪದಾರ್ಪಣೆ ಮಾಡುವ ಬಗ್ಗೆ ಆಸಕ್ತಿದಾಯಕ ಉತ್ತರ ನೀಡಿದ್ದಾರೆ.
ಅರ್ಜುನ್ ತಮ್ಮ ಬೌಲಿಂಗ್‌ನಿಂದ ಅನೇಕರನ್ನು ಮೆಚ್ಚಿಸಿದ್ದಾರೆ. ಆತನ ಸ್ವಿಂಗ್, ಯಾರ್ಕರ್ ಬೌಲಿಂಗ್ ಅದ್ಭುತವಾಗಿದೆ. ಆಡಲು ಸಿದ್ಧರಿದ್ದರೆ, ಖಂಡಿತವಾಗಿಯೂ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದು. ಅರ್ಜುನ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಪಂದ್ಯಕ್ಕೂ ಮುನ್ನ ಅಭ್ಯಾಸಕ್ಕೆ ಬರಲಿದ್ದಾರೆ. ನೆಟ್ಸ್ನಲ್ಲಿ ಬೌಲಿಂಗ್ ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಳೆದ 6 ತಿಂಗಳಲ್ಲಿ ಅರ್ಜುನ್ ಉತ್ತಮ ಕ್ರಿಕೆಟ್ ಆಡಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂಬ ಉತ್ತರ ನೀಡಿದ್ದಾರೆ.
ಅರ್ಜುನ್ ತಂಡದಲ್ಲಿ ಆಡುವ ಸಾಮರ್ಥ್ಯವನ್ನು ತೋರಿಸಿದರೆ, ನಾವು ಅವರನ್ನು ಆಯ್ಕೆಗೆ ಲಭ್ಯಗೊಳಿಸಬಹುದು. ಇದು ನಮಗೆ ಒಳ್ಳೆಯದು ಎಂದು ಮುಖ್ಯ ಕೋಚ್ ಮಾರ್ಕ್ ಬೌಚರ್ (Head Coach Mark Boucher) ಹೇಳಿದ್ದಾರೆ. ಮತ್ತೊಂದೆಡೆ ಈ ವರ್ಷ ಏಕದಿನ ವಿಶ್ವಕಪ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೌಚರ್ ಕೂಡ ಐಪಿಎಲ್ ಟೂರ್ನಿಯ ವೇಳೆ ರೋಹಿತ್‌ಗೆ ವಿಶ್ರಾಂತಿ ನೀಡುವ ಬಗ್ಗೆ ಮಾತನಾಡಿದ್ದಾರೆ. ಇನ್ನು ರೋಹಿತ್ ಅವರೇ ತಂಡದ ನಾಯಕ. ಅವರು ವಿಶ್ರಾಂತಿ ಪಡೆಯಲು ಬಯಸುವುದಿಲ್ಲ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಅದ್ಭುತ ಯಾರ್ಕರ್ಗಳ ಮೂಲಕ ಗಮನ ಸೆಳೆದಿರುವ ಅರ್ಜುನ್, ಈವರೆಗೂ ಒಂದು ಅವಕಾಶ ಪಡೆಯಲಿಲ್ಲ. ಅಲ್ಲದೆ ಪದೆಪದೇ ಬೆಂಚ್ ಕಾಯುತ್ತಿರುವ ಅರ್ಜುನ್, ನೆಟ್ ಬೌಲರ್ ಆಗಿಯೇ ಖರೀದಿ ಮಾಡಲಾಗಿದೆಯೇ ಎಂಬ ಪ್ರಶ್ನೆ ಕೂಡ ಹುಟ್ಟಿದೆ. ಇದು ಆಕ್ರೋಶಕ್ಕೂ ಕಾರಣವಾಗಿತ್ತು. ಮುಂಬೈ ತಂಡಕ್ಕೆ ಕಾಲಿಟ್ಟ ಯುವ ಆಟಗಾರರೆಲ್ಲರೂ ಮುಂಬೈ ಪರ ಪದಾರ್ಪಣೆ ಮಾಡುತ್ತಿದ್ದಾರೆ. ಪರಿಚಯ ಇಲ್ಲದ ಆಟಗಾರರೇ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅರ್ಜುನ್ಗೆ ಮಾತ್ರ ಅವಕಾಶ ಎಂಬುದು ಮರೀಚಿಕೆಯಾಗಿದೆ. ಹಾಗಾಗಿ ಈ ಬಾರಿಯಾದರೂ ಅವಕಾಶ ಸಿಗುತ್ತಾ ಇಲ್ಲವೇ ಎಂಬುದನ್ನು ಕಾದುನೋಡಬೇಕು.