ಕನ್ನಡ ಸುದ್ದಿ  /  Sports  /  Rohit Sharma Remark On Team India Playing Xi In First Test

Rohit Sharma on playing XI: ಪಂತ್ ಅನುಪಸ್ಥಿತಿಯಿಂದ ಎಲ್ಲವೂ ಕಗ್ಗಂಟು; ಸ್ಕೈ ಆಟಕ್ಕೆ ಒತ್ತು, ಗಿಲ್ ಸ್ಥಾನಕ್ಕೆ ಕುತ್ತು!

“ನಾವು ರಿಷಬ್ ಪಂತ್ ಅವರನ್ನು ಖಂಡಿತವಾಗಿಯೂ ಕಳೆದುಕೊಳ್ಳುತ್ತೇವೆ. ಆದರೆ ಅವರ ಪಾತ್ರವನ್ನು ತುಂಬಲು ನಮ್ಮಲ್ಲಿ ಸಾಕಷ್ಟು ಹುಡುಗರಿದ್ದಾರೆ. ನಾವು ಬ್ಯಾಟರ್‌ಗಳೊಂದಿಗೆ ಅವರ ಯೋಜನೆಗಳ ಬಗ್ಗೆ ಉತ್ತಮ ಮಾತುಕತೆ ನಡೆಸಿದ್ದೇವೆ. ನಾಳೆಯಿಂದ ನಾವು ಅದನ್ನು ಕಾರ್ಯಗತಗೊಳಿಸುತ್ತೇವೆ” ಎಂದು ಭಾರತ ತಂಡದ ನಾಯಕ ಹೇಳಿದ್ದಾರೆ.

ನಾಯಕ ರೋಹಿತ್ ಶರ್ಮಾ (ಮಧ್ಯ) ಮತ್ತು ತಂಡದ ಕೋಚ್ ರಾಹುಲ್ ದ್ರಾವಿಡ್ (ಬಲ) ಅಭ್ಯಾಸದ ಅವಧಿಯಲ್ಲಿ ಸೂರ್ಯಕುಮಾರ್ ಯಾದವ್ ಮಾತನ್ನು ಆಲಿಸುತ್ತಿದ್ದಾರೆ.
ನಾಯಕ ರೋಹಿತ್ ಶರ್ಮಾ (ಮಧ್ಯ) ಮತ್ತು ತಂಡದ ಕೋಚ್ ರಾಹುಲ್ ದ್ರಾವಿಡ್ (ಬಲ) ಅಭ್ಯಾಸದ ಅವಧಿಯಲ್ಲಿ ಸೂರ್ಯಕುಮಾರ್ ಯಾದವ್ ಮಾತನ್ನು ಆಲಿಸುತ್ತಿದ್ದಾರೆ. (AFP)

ಗುರುವಾರದಿಂದ ನಾಗ್ಪುರದಲ್ಲಿ ಆರಂಭವಾಗುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯಕ್ಕೂ ಮುನ್ನ, ಟೀಮ್‌ ಇಂಡಿಯಾ ಕೆಲವೊಂದು ಸವಾಲುಗಳನ್ನು ಎದುರಿಸುತ್ತಿದೆ. ರಿಷಬ್ ಪಂತ್ ಅಪಘಾತ ಮತ್ತು ಶ್ರೇಯಸ್ ಅಯ್ಯರ್ ಅವರ ಗಾಯವು, ಭಾರತದ ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಅಂತರವನ್ನು ಸೃಷ್ಟಿಸಿದೆ. ಫೆಬ್ರವರಿ 17ರಿಂದ ನವದೆಹಲಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಅಯ್ಯರ್ ತಂಡವನ್ನು ಸೇರುವ ಸಾಧ್ಯತೆಯಿದೆ. ಆದರೆ, ಅತ್ತ ಪಂತ್ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ನಾಗ್ಪುರದಲ್ಲಿ ಕೀಪಿಂಗ್‌ ಮಾಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಅದು ಇಶಾನ್ ಕಿಶನ್ ಅಥವಾ ಕೆ ಎಸ್ ಭರತ್? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಮತ್ತೊಂದೆಡೆ, ಭಾರತವು ಶುಬ್ಮನ್ ಗಿಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸುತ್ತದೆಯೇ ಅಥವಾ ಸೂರ್ಯಕುಮಾರ್ ಯಾದವ್‌ ಅವರ ಟೆಸ್ಟ್‌ ಪದಾರ್ಪಣೆಗೆ ವೇದಿಕೆ ಸಿದ್ಧಪಡಿಸುತ್ತದೆಯೇ? ಎಂಬ ಬಗ್ಗೆಯೂ ಗೊಂದಲಗಳಿವೆ. ಬೌಲಿಂಗ್ ವಿಭಾಗದಲ್ಲೂ ಒಂದು ಸ್ಥಾನಕ್ಕಾಗಿ ಚರ್ಚೆ ನಡೆಯುತ್ತಿದೆ. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಸ್ಥಾನಗಳು ಬಹುತೇಕ ಭದ್ರ. ಆದರೆ, ಮೂರನೇ ಸ್ಪಿನ್ನರ್ ಸ್ಥಾನಕ್ಕಾಗಿ ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ನಡುವೆ ಸ್ಪರ್ಧೆಯಿದೆ.

ಪಂದ್ಯಕ್ಕೂ ಮುನ್ನ ಕೆಲವೊಂದು ಅಂಶಗಳ ಬಗ್ಗೆ ನಾಯಕ ರೋಹಿತ್‌ ಶರ್ಮಾ ಮಾತನಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತು ಶುಬ್ಮನ್ ಗಿಲ್‌, ಇವರಿಬ್ಬರಲ್ಲಿ ತಂಡಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಭಾರತ ತಂಡದ ನಾಯಕ ಹೇಳಿದ್ದಾರೆ. “ಶುಬ್ಮನ್ ಅತ್ಯುನ್ನತ ಫಾರ್ಮ್‌ನಲ್ಲಿದ್ದಾರೆ. ಅವರು ಏಕದಿನದಲ್ಲಿ ಶತಕಗಳನ್ನು ಗಳಿಸಿದ್ದಾರೆ. ಮತ್ತೊಂದೆಡೆ, ಸೂರ್ಯಕುಮಾರ್ ಯಾದವ್ ಆಟವನ್ನು ಯಾವ ಹಂತಕ್ಕೆ ಕೊಂಡೊಯ್ಯುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಹೀಗಾಗಿ ತಂಡಕ್ಕೆ ಯಾರು ಬೇಕು ಎಂಬುದನ್ನು ನಾವಿನ್ನೂ ನಿರ್ಧರಿಸಿಲ್ಲ,” ಎಂದು ರೋಹಿತ್ ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಉಪನಾಯಕ ಕೆಎಲ್ ರಾಹುಲ್ ಉತ್ತಮ ಫಾರ್ಮ್‌ನಲ್ಲಿ ಇಲ್ಲದಿದ್ದರೂ, ರೋಹಿತ್ ಶರ್ಮಾ ಅವರೊಂದಿಗೆ ಬ್ಯಾಟಿಂಗ್ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ರೋಹಿತ್ ಗಾಯಗೊಂಡಿದ್ದಾಗ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಗಿಲ್ ಉತ್ತಮವಾಗಿ ಆಡಿದ್ದರು. ಏಕದಿನ ಪಂದ್ಯಗಳಲ್ಲೂ ಸ್ಫೋಟಕವಾಗಿ ಆಡಿದ ಅವರು, ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ದಾಖಲಿಸಿದ್ದರು. ಆದರೆ, ರಾಹುಲ್‌ ಹಾಗೂ ಸೂರ್ಯನಿಗೆ ಅವಕಾಶ ಕೊಡುವ ಪ್ರಯತ್ನದಲ್ಲಿ ಗಿಲ್‌ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ.

ಸುದೀರ್ಘ ಸ್ವರೂಪದಲ್ಲಿ ಪಂತ್ ಭಾರತದ ಪರ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ಭಾರತಕ್ಕೆ ತಂಡ ರಚನೆಯೇ ಸವಾಲಾಗಿದೆ. ಇತ್ತ ಕಳೆದೆರಡು ವರ್ಷಗಳಲ್ಲಿ ಟಿ20ಗಳಲ್ಲಿ ಅದ್ಭುತ ರನ್ ಗಳಿಸಿರುವ ಸೂರ್ಯಕುಮಾರ್ ಯಾದವ್, ಈ ಸಮಯದಲ್ಲಿ ಪಂತ್‌ ಸ್ಥಾನವನ್ನು ತುಂಬಲು ಉತ್ತಮ ಆಯ್ಕೆ ಎಂದು ಹೇಳಲಾಗುತ್ತಿದೆ. ಸ್ಕೈ ಕಳೆದ ಕೆಲವು ವರ್ಷಗಳಿಂದ ನಿಯಮಿತವಾಗಿ ಕೆಂಪು-ಬಾಲ್ ಕ್ರಿಕೆಟ್ ಆಡುತ್ತಿಲ್ಲ. ಆದರೆ, ಅವರು ಬುಧವಾರ ಪಿಚ್ ಅನ್ನು ಪರಿಶೀಲಿಸುತ್ತಿದ್ದ ರೀತಿಯಿಂದಾಗಿ, ಅವರು ಗುರುವಾರ ಟೆಸ್ಟ್ ಕ್ಯಾಪ್ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

“ನಾವು ರಿಷಬ್ ಪಂತ್ ಅವರನ್ನು ಖಂಡಿತವಾಗಿಯೂ ಕಳೆದುಕೊಳ್ಳುತ್ತೇವೆ. ಆದರೆ ಅವರ ಪಾತ್ರವನ್ನು ತುಂಬಲು ನಮ್ಮಲ್ಲಿ ಸಾಕಷ್ಟು ಹುಡುಗರಿದ್ದಾರೆ. ನಾವು ಬ್ಯಾಟರ್‌ಗಳೊಂದಿಗೆ ಅವರ ಯೋಜನೆಗಳ ಬಗ್ಗೆ ಉತ್ತಮ ಮಾತುಕತೆ ನಡೆಸಿದ್ದೇವೆ. ನಾಳೆಯಿಂದ ನಾವು ಅದನ್ನು ಕಾರ್ಯಗತಗೊಳಿಸುತ್ತೇವೆ” ಎಂದು ಭಾರತ ತಂಡದ ನಾಯಕ ಹೇಳಿದ್ದಾರೆ.

ಮೊದಲ ಟೆಸ್ಟ್‌ಗೆ ಸ್ಪಿನ್ನರ್‌ಗಳ ಆಯ್ಕೆಯ ಬಗ್ಗೆ ಕೇಳಿದಾಗ, ರೋಹಿತ್ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ. “ಎಲ್ಲಾ ನಾಲ್ವರು ಸ್ಪಿನ್ನರ್‌ಗಳು ಗುಣಮಟ್ಟದವರು. ಜಡೇಜಾ ಮತ್ತು ಅಶ್ವಿನ್ ಒಟ್ಟಿಗೆ ಸಾಕಷ್ಟು ಆಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಅಕ್ಷರ್ ಮತ್ತು ಕುಲದೀಪ್ ಕೂಡಾ ಉತ್ತಮ ಪ್ರದರ್ಶನ ನೀಡಿದ್ದಾರೆ” ಎಂದಷ್ಟೇ ಅವರು ಹೇಳಿದ್ದಾರೆ.