Kannada News  /  Sports  /  Rohit Sharma Reveals His Opening Partner For India Vs Sri Lanka Odi Series
ಆರಂಭಿಕ ಆಟಗಾರ ಯಾರೆಂದು ಬಹಿರಂಗಪಡಿಸಿದ ರೋಹಿತ್ ಶರ್ಮಾ
ಆರಂಭಿಕ ಆಟಗಾರ ಯಾರೆಂದು ಬಹಿರಂಗಪಡಿಸಿದ ರೋಹಿತ್ ಶರ್ಮಾ (AP)

Rohit Sharma: ಗಿಲ್ vs ಕಿಶನ್; ಲಂಕಾ ಏಕದಿನ ಸರಣಿಗೆ ಆರಂಭಿಕ ಜತೆಗಾರ ಯಾರೆಂದು ತಿಳಿಸಿದ ನಾಯಕ ರೋಹಿತ್

10 January 2023, 8:25 ISTHT Kannada Desk
10 January 2023, 8:25 IST

ಮೊದಲನೇ ಏಕದಿನ ಪಂದ್ಯಕ್ಕೂ ಮೊದಲು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಮೂರು ಪಂದ್ಯಗಳ ಸರಣಿಗೆ ತಮ್ಮೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ಆಟಗಾರನ ಹೆಸರನ್ನು ಖಚಿತಪಡಿಸಿದ್ದಾರೆ.

ಕೆಲ ವಾರಗಳ ಅನುಪಸ್ಥಿತಿಯ ಬಳಿಕ, ಟೀಂ ಇಂಡಿಯಾ ಕಾಯಂ ನಾಯಕ ರೋಹಿತ್‌ ಶರ್ಮಾ ತಂಡಕ್ಕೆ ಮರಳಿದ್ದಾರೆ. ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭವಾಗುವ ಏಕದಿನ ಸರಣಿಯಲ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಆರಂಭಿಕ ಪಂದ್ಯದಲ್ಲಿ ಆತಿಥೇಯರ ಬ್ಯಾಟಿಂಗ್ ಜವಾಬ್ದಾರಿಯನ್ನು ಮುನ್ನಡೆಸಲು ಭಾರತೀಯ ನಾಯಕ ಸಜ್ಜಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಏಷ್ಯಾದ ಎರಡು ಬಲಿಷ್ಠ ತಂಡಗಳ ನಡುವೆ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಿಂದ ಭಾರತದ ಅನುಭವಿ ಆರಂಭಿಕ ಆಟಗಾರನಿಗೆ ವಿಶ್ರಾಂತಿ ನೀಡಲಾಗಿತ್ತು. ಟಿ20 ಸರಣಿಯಲ್ಲಿ ಆರಂಭಿಕರಾದ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಇಬ್ಬರೂ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಏಕದಿನ ಸರಣಿಗೆ ರೋಹಿತ್‌ ಶರ್ಮಾ ಮರಳಿರುವುದರಿಂದ, ಆರಂಭಿಕರಾಗಿ ಆಡುವ ಬಳಗದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲ ಮೂಡಿದೆ. ಮತ್ತೊಂದೆಡೆ ಕನ್ನಡಿಗ ಕೆ ಎಲ್‌ ರಾಹುಲ್‌ ಕೂಡಾ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.

ಮೊದಲನೇ ಏಕದಿನ ಪಂದ್ಯಕ್ಕೂ ಮೊದಲು ಸೋಮವಾರ ಸಾಂಪ್ರದಾಯಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಮೂರು ಪಂದ್ಯಗಳ ಸರಣಿಗೆ ತಮ್ಮೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ಆಟಗಾರನ ಹೆಸರನ್ನು ಖಚಿತಪಡಿಸಿದ್ದಾರೆ.

ಮೂರು ಪಂದ್ಯಗಳ ಸರಣಿಯಲ್ಲಿ ಪ್ರೀಮಿಯರ್ ಬ್ಯಾಟರ್ ಶುಬ್ಮನ್‌ ಗಿಲ್ ತಮ್ಮ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ಟೀಂ ಇಂಡಿಯಾ ನಾಯಕ ಬಹಿರಂಗಪಡಿಸಿದ್ದಾರೆ. ಗಿಲ್ ಅವರನ್ನು ಭಾರತದ ಆರಂಭಿಕ ಆಟಗಾರ ಎಂದು ರೋಹಿತ್‌ ದೃಢಪಡಿಸಿದರೂ, ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಕಿಶನ್ ಅವರ ಇತ್ತೀಚಿನ ಬ್ಯಾಟಿಂಗ್ ಕುರಿತಾಗಿಯೂ ಶ್ಲಾಘಿಸಿದರು. ಬಾಂಗ್ಲಾದೇಶ ವಿರುದ್ಧದ ಹಿಂದಿನ ಏಕದಿನ ಸರಣಿಯಲ್ಲಿ ಕಿಶನ್‌ ಸಿಡಿಸಿದ ಅದ್ಭುತ ದ್ವಿಶತಕವನ್ನು ರೋಹಿತ್‌ ನೆನಪಿಸಿಕೊಂಡರು.

“ಇಬ್ಬರೂ ಆರಂಭಿಕ ಆಟಗಾರರು (ಗಿಲ್ ಮತ್ತು ಕಿಶನ್) ನಿಜಕ್ಕೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಪಂದ್ಯಗಳಲ್ಲಿ ಗಿಲ್ ಸಾಕಷ್ಟು ರನ್ ಗಳಿಸಿದ್ದರಿಂದ ಗಿಲ್‌ಗೆ ನ್ಯಾಯಯುತವಾಗಿ ರನ್ ಗಳಿಸಲು ನಾವು ಅವಕಾಶ ನೀಡುವುದು ಸರಿಯಾದ ಕ್ರಮ ಎಂದು ನಾನು ಭಾವಿಸುತ್ತೇನೆ. ಹಾಗೆಂದು ಇಶಾನ್‌ ಉತ್ತಮ ಪ್ರದರ್ಶನ ನೀಡಿಲ್ಲ ಎಂದು ನಾನು ಹೇಳುತ್ತಿಲ್ಲ. ಅವರು ತಂಡದಲ್ಲಿ ಅದ್ಭುತವಾಗಿ ಆಡಿದ್ದಾರೆ. ಅವರು ಇತ್ತೀಚೆಗೆ ದ್ವಿಶತಕ ಕೂಡಾ ಸಿಡಿಸಿದ್ದರು. 200 ರನ್‌ ಬಾರಿಸುವುದು ಸುಲಭವಲ್ಲ ಹಾಗೂ ಇದು ದೊಡ್ಡ ಸಾಧನೆಯಾಗಿದೆ. ತಂಡದಲ್ಲಿ ಉತ್ತಮವಾಗಿ ಆಡಿದ ಹುಡುಗರಿಗೆ ನಾವು ಸಾಕಷ್ಟು ಅವಕಾಶಗಳನ್ನು ನೀಡಬೇಕಾಗಿದೆ” ಎಂದು ರೋಹಿತ್ ಸುದ್ದಿಗಾರರಿಗೆ ತಿಳಿಸಿದರು.

ರಾಜ್‌ಕೋಟ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಆರಂಭಿಕ ಆಟಗಾರ ಗಿಲ್ 36 ಎಸೆತಗಳಲ್ಲಿ 46 ರನ್ ಗಳಿಸಿ ನಿರ್ಣಾಯಕ ಪಾತ್ರ ವಹಿಸಿದ್ದರು. ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಗಿಲ್ ಒಟ್ಟಾರೆ 58 ರನ್ ಗಳಿಸಿದರೆ, ಕಿಶನ್ 40 ರನ್ ಗಳಿಸಿದ್ದರು.

ಸದ್ಯ ರೋಹಿತ್ ನೇತೃತ್ವದಲ್ಲಿ ಟೀಂ ಇಂಡಿಯಾವು ಇಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ದಸುನ್ ಶನಕಾ ನೇತೃತ್ವದ ಶ್ರೀಲಂಕಾವನ್ನು ಎದುರಿಸಲಿದೆ.

“ನಾವು ಇಶಾನ್‌ ಅವರನ್ನು ಆಡಿಸಲು ಸಾಧ್ಯವಾಗದಿರುವುದು ದುರದೃಷ್ಟಕರ. ಆದರೆ‌, ಕಳೆದ 8ರಿಂದ 9 ತಿಂಗಳುಗಳಲ್ಲಿ ನಡೆದ ಏಕದಿನ ಪಂದ್ಯಗಳನ್ನು ನೋಡಿದರೆ, ಗಿಲ್‌ಗೆ ಅವಕಾಶ ನೀಡುವುದು ನ್ಯಾಯೋಚಿತವಾಗಿದೆ. ನಾವು ಖಂಡಿತವಾಗಿಯೂ ಎಲ್ಲವನ್ನೂ ಪ್ರಯತ್ನಿಸುತ್ತೇವೆ. ಮುಂದೆ ಬಹಳಷ್ಟು ಆಟಗಳನ್ನು ಆಡುವುದರಿಂದ ತಂಡದ ಪರ ಯಾವುದು ಕೆಲಸ ಮಾಡುತ್ತದೆ ಎಂಬುದನ್ನು ನೋಡುತ್ತೇವೆ” ಎಂದು ರೋಹಿತ್ ಹೇಳಿದ್ದಾರೆ.