ಕನ್ನಡ ಸುದ್ದಿ  /  Sports  /  Royal Challengers Bangalore Losses To Mumbai Indians In The Last League Match Of Wpl

WPL 2023: ಸೋಲಿನೊಂದಿಗೆ ಚೊಚ್ಚಲ ಆವೃತ್ತಿಗೆ ವಿದಾಯ ಹೇಳಿದ ಆರ್‌ಸಿಬಿ; ಮುಂಬೈಗೆ ಜಯ

ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್‌ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ, ಈ ದಿನದ ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಮತ್ತು ಯುಪಿ ವಾರಿಯರ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಒಂದು ವೇಳೆ ಆ ಪಂದ್ಯದಲ್ಲಿ ಡೆಲ್ಲಿ ತಂಡವು ಗೆದ್ದರೆ, ಮೆಗ್‌ ಲ್ಯಾನಿಂಗ್‌ ಪಡೆಯು ಅಗ್ರಸ್ಥಾನ ಪಡೆದುಕೊಳ್ಳಲಿದೆ. ಅಲ್ಲದೆ ನೇರವಾಗಿ ಫೈನಲ್‌ ಪ್ರವೇಶಿಸಲಿದೆ.

ಮುಂಬೈಗೆ ಜಯ
ಮುಂಬೈಗೆ ಜಯ (AFP)

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಲೀಗ್‌ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಮುಗ್ಗರಿಸಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 4 ವಿಕೆಟ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿದೆ. ಸೋಲಿನೊಂದಿಗೆ ಚೊಚ್ಚಲ ಡಬ್ಲ್ಯೂಪಿಎಲ್‌ ಅಭಿಯಾನ ಆರಂಭಿಸಿದ ಬೆಂಗಳೂರು, ಮತ್ತೆ ಸೋಲಿನೊಂದಿಗೆ ತನ್ನ ಅಭಿಯಾನ ಕೊನೆಗೊಳಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, ಬ್ಯಾಟಿಂಗ್‌ ಲೈನಪ್ ಕುಸಿತದಿಂದಾಗಿ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲವಾಯ್ತು. ಹೀಗಾಗಿ 9 ವಿಕೆಟ್‌ ನಷ್ಟಕ್ಕೆ 125 ರನ್‌ ಗಳಿಸಲಷ್ಟೇ ಶಕ್ತವಾಯ್ತು. ತಂಡದ ಪರ ಎಲಿಸ್‌ ಪೆರ್ರಿ ಮತ್ತು ರಿಚಾ ಘೋಷ್‌ ತಲಾ 29 ರನ್‌ ಗಳಿಸಿದರು. ಗುರಿ ಬೆನ್ನತ್ತಿದ ಮುಂಬೈ, ಕೇವಲ 16.3 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 129 ರನ್‌ ಗಳಿಸಿ ಗುರಿ ತಲುಪಿತು. ಆ ಮೂಲಕ 4 ವಿಕೆಟ್‌ಗಳ ಅಂತರದಿಂದ ಜಯ ಗಳಿಸಿತು.

ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್‌ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ, ಈ ದಿನದ ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಮತ್ತು ಯುಪಿ ವಾರಿಯರ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಒಂದು ವೇಳೆ ಆ ಪಂದ್ಯದಲ್ಲಿ ಡೆಲ್ಲಿ ತಂಡವು ಗೆದ್ದರೆ, ಮೆಗ್‌ ಲ್ಯಾನಿಂಗ್‌ ಪಡೆಯು ಅಗ್ರಸ್ಥಾನ ಪಡೆದುಕೊಳ್ಳಲಿದೆ. ಅಲ್ಲದೆ ನೇರವಾಗಿ ಫೈನಲ್‌ ಪ್ರವೇಶಿಸಲಿದೆ.

ಮುಂಬೈ ಪರ ಆರಂಭಿಕರಾದ ಮ್ಯಾಥ್ಯೂಸ್‌ 24 ರನ್‌ ಗಳಿಸಿದರು. ಇದೇ ವೇಳೆ ಯಸ್ತಿಕಾ ಭಾಟಿಯಾ 30 ರನ್‌ ಗಳಿಸಿ ಉತ್ತಮ ಆರಂಭ ಒದಗಿಸಿದರು. ಈ ನಡುವೆ ನಟಾಲಿ ಸಿವರ್‌ ಬ್ರಂಟ್‌ ಹಾಗೂ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಅಲ್ಪಮೊತ್ತಕ್ಕೆ ಔಟಾದರು. ತಂಡದ ಬ್ಯಾಟಿಂಗ್‌ ಲೈನಪ್‌ ಕುಸಿತವಾಗುತ್ತಿರುವುದನ್ನು ಮನಗಂಡ ಅಮೇಲಿಯಾ ಕೆರ್, ಅಜೇಯ 31 ರನ್‌ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ, ಕಳೆದ ಪಂದ್ಯದ ಮ್ಯಾಚ್‌ ವಿನ್ನಿಂಗ್‌ ಆಟಗಾರ್ತಿ ಸೋಫಿ ಡಿವೈನ್‌ ಅವರನ್ನು ಬೇಗನೆ ಕಳೆದುಕೊಂಡಿತು. ರನ್‌ ಔಟ್‌ ಆದ ಡಿವೈನ್‌ ಶೂನ್ಯ ಮೊತ್ತಕ್ಕೆ ಪೆವಿಲಿಯನ್‌ ಸೇರಿಕೊಂಡರು. ಆರಂಭಿಕ ಕುಸಿತದಿಂದ ಚೇತರಿಸಿಕೊಳ್ಳದ ತಂಡವು,‌ ಅಂತಿಮ ಓವರ್‌ವರೆಗೂ ಕುಂಟುತ್ತಾ ಸಾಗಿತು. ಮತ್ತೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ನಾಯಕಿ ಸ್ಮೃತಿ ಮಂಧನಾ, 24 ರನ್‌ ಗಳಿಸಿ ಔಟಾದರು. ಅಂತಿಮ ಹಂತದಲ್ಲಿ ಸ್ಫೋಟಕ ಆಟಗಾರ್ತಿ ರಿಚಾ ಘೋಷ್‌ ತಂಡದ ಮೊತ್ತ ಹೆಚ್ಚಿಸುವ ಪ್ರಯತ್ನ ಮಾಡಿದರು. ಡೆತ್‌ ಓವರ್‌ಗಳಲ್ಲಿ ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡ ತಂಡವು, ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಸೋಲಿನೊಂದಿಗೆ ಆರ್‌ಸಿಬಿ ತಂಡವು ಚೊಚ್ಚಲ ಆವೃತ್ತಿಯ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಅಭಿಯಾನವನ್ನು ಅಂತ್ಯಗೊಳಿಸಿದೆ. ಆಡಿದ ಎಂಟು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಮಾತ್ರ ಗೆಲ್ಲುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಇಷ್ಟೇ ಪಂದ್ಯಗಳಲ್ಲಿ ಜಯ ಸಾಧಿಸಿರುವ ಗುಜರಾತ್‌ ಜೈಂಟ್ಸ್‌‌, ರನ್‌ ರೇಟ್‌ ಲೆಕ್ಕಾಚಾರದಲ್ಲಿ ಕೊನೆಯ ಸ್ಥಾನ ಗಳಿಸಿದೆ.

ಈ ದಿನದ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಯಾಗಲಿದೆ. ಪಂದ್ಯ ಗೆದ್ದು ಅಗ್ರಸ್ಥಾನಕ್ಕೇರಿ ನೇರವಾಗಿ ಫೈನಲ್‌ಗೆ ಲಗ್ಗೆ ಹಾಕಲು ಡೆಲ್ಲಿ ಯೋಜನೆ ರೂಪಿಸಿದೆ.

ಯುಪಿ ಸಂಭಾವ್ಯ ಆಡುವ ಬಳಗ: ದೇವಿಕಾ ವೈದ್ಯ, ಅಲಿಸ್ಸಾ ಹೀಲಿ (ನಾಯಕಿ), ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಸಿಮ್ರಾನ್ ಶೇಖ್, ಪಾರ್ಶವಿ ಚೋಪ್ರಾ, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

ಡೆಲ್ಲಿ ಸಂಭಾವ್ಯ ಆಡುವ ಬಳಗ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್, ಮರಿಜಾನ್ನೆ ಕಾಪ್, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್), ಜೆಸ್ ಜೊನಾಸ್ಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಪೂನಂ ಯಾದವ್/ತಾರಾ ನಾರ್ರಿಸ್