ಕನ್ನಡ ಸುದ್ದಿ  /  Sports  /  Royal Challengers Bangalore Women Gets First Victory In Wpl Against Up Warriorz

Women's Premier League: ಸತತ ಐದು ಸೋಲಿನ ಬಳಿಕ ಆರ್‌ಸಿಬಿಗೆ ಮೊದಲ ಜಯ; ಇನ್ನೂ ಇದೆ ಪ್ಲೇ ಆಫ್‌ಗೆ ಲಗ್ಗೆ ಇಡುವ ಅವಕಾಶ

ಈ ಗೆಲುವಿನೊಂದಿಗೆ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಇನ್ನೂ ಜೀವಂತವಾಗಿ ಉಳಿದಿದೆ. ಅಲ್ಲದೆ ಪ್ಲೇ ಆಫ್‌ ಹಂತಗಳಿಗೆ ಲಗ್ಗೆ ಹಾಕುವ ಅವಕಾಶ ಹೊಂದಿದೆ. ಆದರೆ, ಆ ಲೆಕ್ಕಾಚಾರ ಉಳಿದ ತಂಡಗಳ ಮೇಲೆ ನಿಂತಿದೆ.

ಆರ್‌ಸಿಬಿಗೆ ಮೊದಲ ಜಯ
ಆರ್‌ಸಿಬಿಗೆ ಮೊದಲ ಜಯ (WPL twitter)

ಅಂತೂ ಇಂತೂ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮೊದಲ ಜಯ ಗಳಿಸಿದೆ. ಸತತ ಐದು ಸೋಲಿನಿಂದ ಕಂಗೆಟ್ಟು, ಟೂರ್ನಿಯಿಂದ ಬಹುತೇಕ ಹೊರಬೀಳುವ ಹಂತಕ್ಕೆ ಬಂದಿದ್ದ ಆರ್‌ಸಿಬಿ, ಕಡೆಗೂ ಯುಪಿ ವಾರಿಯರ್ಸ್‌ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಗೆಲ್ಲುವ ಮೂಲಕ ಡಬ್ಲ್ಯೂಪಿಎಲ್‌ನಲ್ಲಿ ಮೊದಲ ಜಯ ಗಳಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ, 19.3 ಓವರ್‌ಗಳಲ್ಲಿ 135 ರನ್‌ ಗಳಿಸಿ ಆಲೌಟ್‌ ಆಯ್ತು. ಟೂರ್ನಿಯ ಮೊದಲ ಗೆಲುವಿಗೆ 136 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ 18 ಓವರ್‌ಗಳಲ್ಲಿ ಇನ್ನೂ 12 ಎಸೆತಗಳು ಉಳಿಸಿ 136 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಗು ಬೆನ್ನತ್ತಿದ ಆರ್‌ಸಿಬಿ ಪರ ಆರಂಭಿಕರಾದ ಸೋಫಿ ಡಿವೈನ್‌ ಮೊದಲ ಓವರ್‌ನಲ್ಲೇ ಒಂದು ಸಿಕ್ಸರ್‌ ಹಾಗೂ ಎರಡು ಬೌಂಡರಿ ಸಿಡಿಸಿದರು. ಆದರೆ, ಅದೇ ಓವರ್‌ನ ಐದನೇ ಎಸೆತದಲ್ಲಿ ಗ್ರೇಸ್‌ ಹ್ಯಾರಿಸ್‌ಗೆ ವಿಕೆಟ್‌ ಒಪ್ಪಿಸಿದರು. ಮತ್ತೆ ವೈಫಲ್ಯ ಅನುಭವಿಸಿದ ನಾಯಕಿ ಮಂಧನಾ, ಡಕೌಡ್‌ ಆಗಿ ನಿರಾಸೆ ಮೂಡಿಸಿದರು. ಭರವಸೆಯ ಆಟಗಾರ್ತಿ ಎಲಿಸ್‌ ಪೆರ್ರಿ 10 ರನ್‌ ಗಳಿಸಿ ಔಟಾದರೆ, ಕೆಲ ಹೊತ್ತು ಯುಪಿ ದಾಳಿಗೆ ಪ್ರತಿರೋಧ ಒಡ್ಡಿದ ಹೆದರ್‌ ನೈಟ್‌ 24 ರನ್‌ ಗಳಿಸಿ ಔಟಾದರು.

ತಂಡದ ಪರ ಕ್ರೀಸ್‌ಕಚ್ಚಿ ಆಕರ್ಷಕವಾಗಿ ಬ್ಯಾಟ್‌ ಬೀಸಿದ ಕನಿಕಾ ಅಹುಜ(30 ಎಸೆತಗಳಲ್ಲಿ 46 ರನ್‌ ಗಳಿಸಿ ಆರ್‌ಸಿಬಿ ಗೆಲುವಿಗೆ ಕಾರಣರಾದರು. ಇವರಿಗೆ ಸಾಥ್‌ ನೀಡಿದ ಸ್ಫೋಟಕ ಆಟಗಾರ್ತಿ ರಿಚಾ ಘೋಶ್‌ ಅಜೇಯ 31 ರನ್‌ ಗಳಿಸಿ ಮಿಂಚಿದರು. ಇವರಿಬ್ಬರೂ ‌60 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ಬೆಂಗಳೂರಿನ ಯುವ ಆಟಗಾರ್ತಿ ಶ್ರೇಯಾಂಕಾ ಪಾಟೀಲ್‌ಗೆ ವಿನ್ನಿಂಗ್‌ ರನ್‌ ಬಾರಿಸಲು ರಿಚಾ ಅವಕಾಶ ನೀಡಿದರು.

ಮೊದಲು ಬ್ಯಾಟಿಂಗ್ ಮಾಡಿದ ಯುಪಿ, ಆರಂಭದಲ್ಲೇ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್‌ನಲ್ಲೇ ಆರಂಭಿಕರಾದ ದೇವಿಕಾ ವೈದ್ಯ ಹಾಗೂ ನಾಯಕಿ ಅಲಿಸಾ ಹೀಲಿಯನ್ನು ಕಳೆದುಕೊಂಡು ತಂಡವು ಸಂಕಷ್ಟಕ್ಕೆ ಸಿಲುಕಿತು. ಇವರಿಬ್ಬರಿಗೂ ಸೋಫಿ ಡಿವೈನ್‌ ಪೆವಿಲಿಯನ್‌ ಹಾದಿ ತೋರಿಸಿದರು. ದೇವಿಕಾ ಗೋಲ್ಡನ್‌ ಡಕ್‌ಗೆ ಬಲಿಯಾದರೆ, ಹೀಲಿ ಒಂದು ರನ್‌ ಗಳಿಸಿ ಔಟಾದರು. ಅದಾದ ಬಳಿಕ ನಿಧಾನಗತಿಯ ಆಟವಾಡಿದ ಯುಪಿ, ವಿಕೆಟ್‌ ಉಳಿಸಿಕೊಳ್ಳಲು ಪ್ರಯತ್ನಿಸಿತು.

ಕಿರಣ್‌ ನಾವಿಗೆರೆ ತುಸು ಪ್ರತಿರೋಧ ಒಡ್ಡಿ 22 ರನ್‌ ಗಳಿಸಿದರು. ಈ ನಡುವೆ ಮೆಕ್‌ಗ್ರಾತ್ 2 ರನ್‌ ಗಳಿಸಿ ಔಟಾದರು. ಜವಾಬ್ದಾರಿಯುತ ಆಟವಾಡಿದ ಗ್ರೇಸ್‌ ಹ್ಯಾರಿಸ್‌ 46 ರನ್‌ ಗಳಿಸಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ 22 ರನ್‌ ಗಳಿಸಿದರೆ, ಕೊನೆಯ ಹಂತದಲ್ಲಿ ಎಕ್ಲೆಸ್ಟನ್‌ 12 ರನ್‌ ಗಳಿಸಿದರು. ಉಳಿದಂತೆ ಯಾರೂ ಎರಡಂಕಿ ಮೊತ್ತ ದಾಟಲಿಲ್ಲ. ಎಕ್ಲೆಸ್ಟನ್‌ ರನೌಟ್‌ ಆಗುವುದರೊಂದಿಗೆ ಯುಪಿ ಬಳಗದ ಬ್ಯಾಟರ್‌ಗಳು ಆಲೌಟ್‌ ಆದರು. 19.3 ಓವರ್‌ಗಳಲ್ಲಿ ತಂಡ ಆಲೌಟ್‌ ಆಯ್ತು.

ಆರ್‌ಸಿಬಿ ಪರ ಎಲಿಸ್‌ ಪೆರ್ರಿ ಮೂರು ವಿಕೆಟ್‌ ಪಡೆದರೆ, ಸೋಫಿ ಡಿವೈನ್‌ ಮತ್ತು ಆಶಾ ಶೋಬನಾ ತಲಾ ಎರಡು ವಿಕೆಟ್‌ ಪಡೆದರು. ಮೇಗನಾ ಶುಟ್‌ ಮತ್ತೆ ಶ್ರೇಯಾಂಕಾ ಪಾಟೀಲ್‌ ತಲಾ ಒಂದು ವಿಕೆಟ್‌ ಪಡೆದರು.

ಈ ಗೆಲುವಿನೊಂದಿಗೆ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಇನ್ನೂ ಜೀವಂತವಾಗಿ ಉಳಿದಿದೆ. ಅಲ್ಲದೆ ಪ್ಲೇ ಆಫ್‌ ಹಂತಗಳಿಗೆ ಲಗ್ಗೆ ಹಾಕುವ ಅವಕಾಶ ಹೊಂದಿದೆ. ಆದರೆ, ಆ ಲೆಕ್ಕಾಚಾರ ಉಳಿದ ತಂಡಗಳ ಮೇಲೆ ನಿಂತಿದೆ. ಆರ್‌ಸಿಬಿ ತಂಡವು ಇನ್ನುಳಿದಿರುವ ಎರಡು ಪಂದ್ಯಗಳನ್ನು ಉತ್ತಮ ರನ್‌ ರೇಟ್‌ನೊಂದಿಗೆ ಗೆಲ್ಲಬೇಕಿದೆ. ಇದೇ ವೇಳೆ ಯುಪಿ ಹಾಗೂ ಗುಜರಾತ್‌ ತಂಡಗಳು ತಮ್ಮ ಮುಂದಿನ ಎಲ್ಲಾ ಪಂದ್ಯಗಳನ್ನು ಸೋಲಬೇಕಿದೆ. ಇದು ಸಾಧ್ಯವಾದರೆ, ರನ್‌ ರೇಟ್‌ ಲೆಕ್ಕಾಚಾರದಲ್ಲಿ ಆರ್‌ಸಿಬಿ ಮುಂದಿನ ಹಂತಕ್ಕೆ ಮೂರನೇ ತಂಡವಾಗಿ ಅರ್ಹತೆ ಪಡೆಯುವ ಅವಕಾಶ ಹೊಂದಿದೆ. ಆದರೆ ತಂಡಕ್ಕೆ ಅದೃಷ್ಟ ಕೈ ಹಿಡಿಯಬೇಕಿದೆ.