Sachin Tendulkar: ಮೋದಿ ಕ್ರೀಡಾಂಗಣದಲ್ಲಿ ಅಂಡರ್ 19 ವಿಶ್ವಕಪ್ ಗೆದ್ದ ವನಿತೆಯರಿಗೆ ಸಚಿನ್ ಅಭಿನಂದನೆ; 5 ಕೋಟಿಯ ಚೆಕ್ ಹಸ್ತಾಂತರ
“ಮೊದಲು ನಾನು ವಿಶ್ವಕಪ್ ಗೆದ್ದ ಮಹಿಳಾ ಅಂಡರ್-19 ಕ್ರಿಕೆಟ್ ತಂಡವನ್ನು ಅಭಿನಂದಿಸಲು ಬಯಸುತ್ತೇನೆ. ಇದು ಅಸಾಧಾರಣ ಸಾಧನೆ. ಇಡೀ ರಾಷ್ಟ್ರ ಮತ್ತು ಭಾರತೀಯ ಕ್ರಿಕೆಟ್‌ನ ಅಭಿಮಾನಿಗಳು ಹಾಗೂ ಹಿತೈಷಿಗಳು ಈ ವಿಜಯವನ್ನು ವರ್ಷಗಳ ಕಾಲ ಸಂಭ್ರಮಿಸುತ್ತಾರೆ,” ಎಂದು ಸಚಿನ್ ಹೇಳಿದರು.
ಅಹಮದಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಟಿ20 ಪಂದ್ಯಕ್ಕೂ ಮೊದಲು, ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಮುಖ ಕಾರ್ಯಕ್ರಮವೊಂದು ನಡೆಯಿತು. ಇತ್ತೀಚೆಗೆಷ್ಟೇ ಭಾರತ ವನಿತೆಯರ ತಂಡವು ಅಂಡರ್ 19 ವಿಶ್ವಕಪ್ ಗೆದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. ಭಾರತ ಮಹಿಳಾ ಕ್ರಿಕೆಟ್‌ಗೆ ಮೊದಲ ವಿಶ್ವಕಪ್ ಗೆದ್ದ ಕಿರಿಯ ನಾರಿಯರಿಗೆ ದೇಶದ ಕ್ರಿಕೆಟ್ ದಿಗ್ಗಜರು ಅಭಿನಂದನೆ ಸಲ್ಲಿಸಿದರು.
ಟ್ರೆಂಡಿಂಗ್ ಸುದ್ದಿ
ವಿಶೇಷ ಕಾರ್ಯಕ್ರಮಕ್ಕಾಗಿ ಅಹಮದಾಬಾದ್ ಮೈದಾನಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಂದಿದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಕ್ರಿಕೆಟ್ ದೇವರ ದರ್ಶನವಾಯ್ತು. ದಕ್ಷಿಣ ಆಫ್ರಿಕಾದಲ್ಲಿ ಭಾನುವಾರ ನಡೆದ ಅಂಡರ್ 19 ಮಹಿಳೆಯರ ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯನ್ನು ಗೆದ್ದ ಶಫಾಲಿ ವರ್ಮಾ ನೇತೃತ್ವದ ಭಾರತ ವನಿತೆಯರನ್ನು ಬ್ಯಾಟಿಂಗ್ ದಿಗ್ಗಜ ಅಭಿನಂದಿಸಿದರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಇತರರೊಂದಿಗೆ ತೆಂಡೂಲ್ಕರ್ ತಂಡಕ್ಕೆ 5 ಕೋಟಿ ರೂಪಾಯಿಯ ಚೆಕ್ ಹಸ್ತಾಂತರಿಸಿದರು.
ಈ ವೇಳೆ ತೆಂಡೂಲ್ಕರ್ ಮಾತನಾಡಲು ಆರಂಭಿಸುತ್ತಿದ್ದಂತೆಯೇ, ಇಡೀ ಕ್ರೀಡಾಂಗಣವು "ಸಚಿನ್... ಸಚಿನ್..." ಎಂಬ ಘೋಷಣೆಗಳಲ್ಲಿ ಮುಳುಗಿತು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಇದೇ ವಿಡಿಯೋಗಳು ಹರಿದಾಡಿದವು. ಇದೇ ವೇಳೆ ಮಾತನಾಡಿದ ಸಚಿನ್, ಮಹಿಳಾ ಪ್ರೀಮಿಯರ್ ಲೀಗ್ ಆಯೋಜಿಸುತ್ತಿರುವುದಕ್ಕೆ ಬಿಸಿಸಿಐ ಅನ್ನು ಶ್ಲಾಘಿಸಿದರು. "ಇದು ವಿಶ್ವ ಕ್ರಿಕೆಟ್‌ನಲ್ಲಿ ಅತಿದೊಡ್ಡ ಪಂದ್ಯಾವಳಿಗಳಲ್ಲಿ ಒಂದಾಗಿದೆ" ಎಂದು ಹೇಳಿದರು.
ಸ್ಥಳೀಯ ಅಭಿಮಾನಿಗಳನ್ನು ಖುಷಿಪಡಿಸಿದ ಸಚಿನ್, ಗುಜರಾತಿ ಭಾಷೆಯಲ್ಲಿ ಕೆಲ ಪದಗಳನ್ನು ಉಚ್ಛರಿಸಿದರು. "ಕೆಮ್ಚೋ ಅಹಮದಾಬಾದ್? ಮಜಾ-ಮಾ?," ಎಂದು ಸಚಿನ್ ಕೇಳಿದರು. ಅಂದರೆ 'ಹೇಗಿದ್ದೀರಿ ಅಹಮದಾಬಾದ್ ಚೆನ್ನಾಗಿದ್ದೀರಾ?' ಎಂದು ಸಚಿನ್ ಕೇಳಿದ್ದಾರೆ.
“ಮೊದಲು ನಾನು ವಿಶ್ವಕಪ್ ಗೆದ್ದ ಮಹಿಳಾ ಅಂಡರ್-19 ಕ್ರಿಕೆಟ್ ತಂಡವನ್ನು ಅಭಿನಂದಿಸಲು ಬಯಸುತ್ತೇನೆ. ಇದು ನಿಜಕ್ಕೂ ಅಸಾಧಾರಣ ಸಾಧನೆ. ಇಡೀ ರಾಷ್ಟ್ರ ಮತ್ತು ಭಾರತೀಯ ಕ್ರಿಕೆಟ್‌ನ ಅಭಿಮಾನಿಗಳು ಹಾಗೂ ಹಿತೈಷಿಗಳು ಈ ವಿಜಯವನ್ನು ವರ್ಷಗಳ ಕಾಲ ಸಂಭ್ರಮಿಸುತ್ತಾರೆ,” ಎಂದು ಅವರು ಹೇಳಿದರು.
ತಮ್ಮ ಮಾತಿನ ವೇಳೆ, ಕ್ರಿಕೆಟ್‌ನಲ್ಲಿ ಮಿಂಚಲು ಪ್ರಬಲ ಅಡಿಪಾಯ ಹಾಕಿದ ಭಾರತದ ಹಿರಿಯ ಮಹಿಳಾ ಕ್ರಿಕೆಟರ್‌ಗಳನ್ನು ಸಚಿನ್ ಶ್ಲಾಘಿಸಿದರು. “ನನ್ನ ಕನಸು 1983ರಲ್ಲಿ ನಾನು ಕೇವಲ 10 ವರ್ಷದವನಿದ್ದಾಗ ಪ್ರಾರಂಭವಾಯಿತು. ನಮ್ಮ ದೇಶದ ಹುಡುಗಿಯರು ದೊಡ್ಡ ಕನಸು ಕಾಣಲು ಸಾಧ್ಯವಾಗಿಸಿದ ದೇಶದ ಹಿರಿಯ ಕ್ರಿಕೆಟಿಗರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಡಯಾನಾ ಎಡುಲ್ಜಿ, ಅಂಜುಮ್ ಚೋಪ್ರಾ, ಮಿಥಾಲಿ ರಾಜ್, ಜೂಲನ್ ಮತ್ತು ಅನೇಕರು ಈ ಪಟ್ಟಿಯಲ್ಲಿದ್ದಾರೆ,” ಎಂದು ಅವರು ಹೇಳಿದರು.
ಯುವ ಕ್ರಿಕೆಟಿಗರನ್ನು ಅಭಿನಂದಿಸಿದ ಸಚಿನ್, “ಈ ವಿಶ್ವಕಪ್ ಗೆಲ್ಲುವ ಮೂಲಕ, ನೀವು ಭಾರತದ ಯುವತಿಯರಿಗೆ ದೇಶವನ್ನು ಪ್ರತಿನಿಧಿಸುವ ಕನಸನ್ನು ತುಂಬಿದ್ದೀರಿ. ವನಿತೆಯರ ಐಪಿಎಲ್ ಆರಂಭವು ದೊಡ್ಡ ವಿಷಯವಾಗಲಿದೆ. ನಾನು ಪುರುಷ ಮತ್ತು ಮಹಿಳೆಯರ ಸಮಾನತೆಯನ್ನು ಪ್ರಶಂಸಿಸುತ್ತೇನೆ. ಇದು ಕ್ರೀಡೆಯಲ್ಲಿ ಮಾತ್ರವಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅವಕಾಶ ಇರಬೇಕು,” ಎಂದು ಅವರು ಹೇಳಿದರು.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಭಾರತದ ವನಿತೆಯರು ಐತಿಹಾಸಿಕ ಪ್ರಶಸ್ತಿ ಜಯಿಸಿದ್ದಾರೆ. ಭಾರತಕ್ಕೆ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಚೊಚ್ಚಲ ವಿಶ್ವಕಪ್ ಗೆದ್ದ ಕಿರಿಯ ವನಿತೆಯರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಭಾರತ ಮಹಿಳಾ ಅಂಡರ್-19 ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಭಿನಂದಿಸಿದ್ದು, ಭರ್ಜರಿ ಬಹುಮಾನ ಘೋಷಿಸಿತ್ತು. ತಂಡದ ಕ್ರಿಕೆಟಿಗರು ಮತ್ತು ಸಹಾಯಕ ಸಿಬ್ಬಂದಿಗೆ ಬರೋಬ್ಬರಿ 5 ಕೋಟಿ ರೂಪಾಯಿ ನಗದು ಬಹುಮಾನವನ್ನು ಬಿಸಿಸಿಐ ಘೋಷಿಸಿತ್ತು. ಅದನ್ನು ಇಂದು ಹಸ್ತಾಂತರಿಸಲಾಗಿದೆ.