ಕನ್ನಡ ಸುದ್ದಿ  /  ಕ್ರೀಡೆ  /  Sanjay Manjrekar On Virat: 'ತೆಂಡೂಲ್ಕರ್ ನಿಜವಾದ ಹಿರಿಮೆ ಟೆಸ್ಟ್ ಶತಕ; ಕೊಹ್ಲಿಗೆ ಅದು ದೂರದ ಬೆಟ್ಟ'

Sanjay Manjrekar on Virat: 'ತೆಂಡೂಲ್ಕರ್ ನಿಜವಾದ ಹಿರಿಮೆ ಟೆಸ್ಟ್ ಶತಕ; ಕೊಹ್ಲಿಗೆ ಅದು ದೂರದ ಬೆಟ್ಟ'

ಕೊಹ್ಲಿಯ ನಿಜವಾದ ಸವಾಲು ಮುಂದಿನ ಐದು ಏಕದಿನ ಶತಕಗಳಲ್ಲ. ಬದಲಾಗಿ ತೆಂಡೂಲ್ಕರ್ ಅವರ ಟೆಸ್ಟ್ ಶತಕಗಳ ಸಂಖ್ಯೆಯನ್ನು ಸರಿಗಟ್ಟುವುದು ಎಂದು ಭಾರತದ ಮಾಜಿ ಸಹ ಆಟಗಾರ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ - ಸಚಿನ್ ತೆಂಡೂಲ್ಕರ್
ವಿರಾಟ್ ಕೊಹ್ಲಿ - ಸಚಿನ್ ತೆಂಡೂಲ್ಕರ್ (Getty Images)

ಪ್ರತಿ ಅಂತಾರಾಷ್ಟ್ರೀಯ ಶತಕದೊಂದಿಗೆ, ವಿರಾಟ್ ಕೊಹ್ಲಿ ಕ್ರಿಕೆಟ್‌ ದಂತಕಥೆಯಾಗಿ ಮತ್ತಷ್ಟು ಬೆಳೆಯುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಬಳಿಕ, ಭಾರತದ ಯಾವುದೇ ಬ್ಯಾಟರ್ ಮಾಸ್ಟರ್ ಬ್ಲಾಸ್ಟರ್‌ನಂತೆ ವಿಶ್ವದ ಅಭಿಮಾನಿಗಳ ಗಮನ ಸೆಳೆದಿದ್ದರೆ ಅದು ಕೊಹ್ಲಿ ಮಾತ್ರ. 1990 ಮತ್ತು 2000ರ ದಶಕದಲ್ಲಿ, ಸಚಿನ್ ಅವರು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದರು. ವಿಶ್ವದಲ್ಲೇ ನಂಬರ್ 1 ಆಗಿ ಮೆರೆದರು. ಅದಾದ ದಶಕಗಳ ಬಳಿಕ, ಇದೀಗ ಜಾಗತಿಕ ಕ್ರಿಕೆಟ್‌ ಲೋಕವನ್ನು ವಿರಾಟ್‌ ಆಳುತ್ತಿದ್ದಾರೆ. ಈ ನಡುವೆ ಫಾರ್ಮ್‌ ಕಳೆದುಕೊಂಡಿದ್ದ ವಿರಾಟ್‌, ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಕಳೆದ ವರ್ಷ ನಡೆದ ಏಷ್ಯಾಕಪ್‌ನಲ್ಲಿ ಘರ್ಜಿಸಿದ ಬಳಿಕ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದಾರೆ. ಅಲ್ಲದೆ 2023ರ ತಮ್ಮ ಮೊದಲ ಪಂದ್ಯದಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕೊಹ್ಲಿ ತಮ್ಮ 45ನೇ ಏಕದಿನ ಶತಕ ಸಿಡಿಸಿದ್ದಾರೆ. ಆ ಮೂಲಕ ಇನ್ನೂ ಐದು ಶತಕ ಸಿಡಿಸಿದರೆ, ಏಕದಿನ ಮಾದರಿಯಲ್ಲಿ ಸಚಿನ್‌ ತೆಂಡೂಲ್ಕರ್‌ ಅವರನ್ನು ಮೀರಿಸಲಿದ್ದಾರೆ. ಕೊಹ್ಲಿಯ ವೃತ್ತಿಜೀವನದಲ್ಲಿ ಇನ್ನೂ ಕನಿಷ್ಠ ಎರಡು ವರ್ಷಗಳು ಉಳಿದಿವೆ. ಆದರೂ, ಈ ಸಾಧನೆಯನ್ನು ಕೊಹ್ಲಿ ಈ ವರ್ಷವೇ ಮಾಡುವ ಸಾಧ್ಯತೆ ಜಾಸ್ತಿ. ವಿಶೇಷವಾಗಿ 2023ರಲ್ಲಿ ಏಕದಿನ ವಿಶ್ವಕಪ್ ನಡೆಯುತ್ತಿದ್ದು, ಭಾರತವು ಸಾಕಷ್ಟು ಏಕದಿನ ಪಂದ್ಯಗಳನ್ನು ಆಡುತ್ತದೆ. ಕೊಹ್ಲಿಯು ತೆಂಡೂಲ್ಕರ್ ಅವರ ಯೋಗ್ಯ ಉತ್ತರಾಧಿಕಾರಿಯಾಗಿದ್ದಾರೆ. ಇದು ಈಗಾಗಲೇ ಸಾಬೀತಾಗಿದೆ. ಅವರು ಭಾರತದ ಉಳಿದ ಬ್ಯಾಟ್ಸ್‌ಮನ್‌ಗಳಿಗಿಂತ ಮೈಲುಗಳಷ್ಟು ಮುಂದಿದ್ದಾರೆ. ಹೀಗಾಗಿ ಕ್ರಿಕೆಟ್‌ ದೇವರನ್ನು ಮೀರಿಸುವ ಸಾಮರ್ಥ್ಯ ಅವರಲ್ಲಿದೆ.

ಕೊಹ್ಲಿಯ ನಿಜವಾದ ಸವಾಲು ಮುಂದಿನ ಐದು ಏಕದಿನ ಶತಕಗಳಲ್ಲ. ಬದಲಾಗಿ ತೆಂಡೂಲ್ಕರ್ ಅವರ ಟೆಸ್ಟ್ ಶತಕಗಳ ಸಂಖ್ಯೆಯನ್ನು ಸರಿಗಟ್ಟುವುದು ಎಂದು ಸಚಿನ್ ಅವರ ಸಮಕಾಲೀನ ಭಾರತದ ಮಾಜಿ ಸಹ ಆಟಗಾರ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಸಚಿನ್ 51 ಟೆಸ್ಟ್‌ ಶತಕಗಳೊಂದಿಗೆ ಕೊಹ್ಲಿಗಿಂತ ಮೈಲುಗಳಷ್ಟು ಮುಂದಿದ್ದಾರೆ. ಇದೇ ವೇಳೆ ಕೊಹ್ಲಿ ಆ ಸಂಖ್ಯೆಯನ್ನು ತಲುಪಲು 22 ಶತಕಗಳಿಂದ ಹಿಂದಿದ್ದಾರೆ. ತಮ್ಮ 34ನೇ ವಯಸ್ಸಿನಲ್ಲಿ, 29 ಟೆಸ್ಟ್ ಶತಕಗಳೊಂದಿಗೆ ಕೊಹ್ಲಿ ಮುಂದೆ ಸಾಧಿಸಲು ತುಂಬಾ ಇದೆ. ಆದರೆ, ಅದನ್ನು ಸಾಧಿಸಲು ಶ್ರಮಿಸಬಹುದು ಎಂದು ಮಂಜ್ರೇಕರ್ ಆಶಿಸಿದ್ದಾರೆ.

“ಸಚಿನ್ ಅವರ ಟೆಸ್ಟ್ ಶತಕಗಳು ಕೊಹ್ಲಿಗೆ ದೊಡ್ಡ ಪರ್ವತವಾಗಲಿದೆ. ಕೊಹ್ಲಿ ಏಕದಿನ ಸ್ವರೂಪದಲ್ಲಿ ಸಾರ್ವಕಾಲಿಕ ಶ್ರೇಷ್ಠರಾಗಿದ್ದಾರೆ. ಹಾಗಂತಾ ಅವರು ಟೆಸ್ಟ್ ಪಂದ್ಯದಲ್ಲಿ ಶ್ರೇಷ್ಠರಲ್ಲ ಎಂದು ಹೇಳುತ್ತಿಲ್ಲ. ಸಚಿನ್ ಅವರ ನಿಜವಾದ ಶ್ರೇಷ್ಠತೆ 51 ಟೆಸ್ಟ್ ಶತಕಗಳು. ಕೊಹ್ಲಿ ಆ ಆಶಯವನ್ನು ಹೊತ್ತುಕೊಂಡು ಅಲ್ಲಿಗೆ ತಲುಪುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಭಾರತ ತಂಡದ ಮಾಜಿ ಆಟಗಾರ ಮಂಜ್ರೇಕರ್ ಬೈಜುಸ್ ಕ್ರಿಕೆಟ್ ಲೈವ್ ಶೋನಲ್ಲಿ ಹೇಳಿದ್ದಾರೆ.

2008ರಿಂದ 2013ರವರೆಗೆ ಕೊಹ್ಲಿ ಮತ್ತು ತೆಂಡೂಲ್ಕರ್ ಜತೆಯಾಗಿ ಕ್ರಿಕೆಟ್ ಆಡಿದರು. 2011ರ ವಿಶ್ವಕಪ್‌ನಲ್ಲೂ ಇವರಿಬ್ಬರೂ ಆಡಿದ್ದರು. ಸಚಿನ್ ಅವರ ನಿವೃತ್ತಿಯ ನಂತರವೇ ಕೊಹ್ಲಿ ನಿಜವಾಗಿಯೂ ವಿಶ್ವದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದರು. ಈಗಾಗಲೇ ತೆಂಡೂಲ್ಕರ್‌ ನಿರ್ಮಿಸಿದ ಹಲವು ದಾಖಲೆಗಳನ್ನು ಕೊಹ್ಲಿ ಬ್ರೇಕ್‌ ಮಾಡಿದ್ದಾರೆ. ಇನ್ನೂ ಕೆಲ ದಾಖಲೆಗಳನ್ನು ಮುರಿಯುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಅದರಲ್ಲಿ ಟೆಸ್ಟ್‌ ಶತಕಗಳ ದಾಖಲೆ ಬ್ರೇಕ್‌ ಮಾಡುವುದು ಕೊಹ್ಲಿ ಪಾಲಿಗೆ ಕಷ್ಟ ಎಂದು ಹೇಳಲಾಗುತ್ತಿದೆ.