Malaysia Open 2025: ಮಲೇಷ್ಯಾ ಓಪನ್ ಸೆಮಿಫೈನಲ್ ತಲುಪಿದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ
Satwiksairaj Rankireddy-Chirag Shetty: ಕೌಲಾಲಂಪುರಾನ್ನಲ್ಲಿ ನಡೆದ ಮಲೇಷ್ಯಾ ಓಪನ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾದ ಯೂ ಸಿಂಗ್ ಒಂಗ್ ಮತ್ತು ಈ ಯಿ ಟಿಯೊ ವಿರುದ್ಧ 26-24, 21-15 ರಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಜಯದ ನಾಗಾಲೋಟ ಮುಂದುವರೆಸಿರುವ ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು (Satwiksairaj Rankireddy and Chirag Shetty) ‘ಮಲೇಷ್ಯಾ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿ’ಯಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ. 7ನೇ ಶ್ರೇಯಾಂಕದ ಭಾರತದ ಜೋಡಿ ಜನವರಿ 10ರ ರಾತ್ರಿ ಕೌಲಾಲಂಪುರಾನ್ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಜೋಡಿಯಾದ ಯೂ ಸಿನ್ ಒಂಗ್ - ಈ ಯಿ ಟಿಯೊ (Yew Sin Ong - Ee Yi Teo) ವಿರುದ್ಧ 26-24, 21-15ರಿಂದ ಭರ್ಜರಿ ಗೆಲುವು ದಾಖಲಿಸಿತು. 49 ನಿಮಿಷಗಳ ಕಾಲ ನಡೆದ ಈ ರೋಚಕ ಹೋರಾಟದಲ್ಲಿ ಗೆದ್ದ ಸಾತ್ವಿಕ್ ಮತ್ತು ಚಿರಾಗ್ ಸತತ ಮೂರನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ವಾನ್ ಹೊ ಕಿಮ್ ಮತ್ತು ಸೆಯುಂಗ್ ಜೇ ಸಿಯೊ ಅವರನ್ನು ಎದುರಿಸಲಿದೆ. ಉಭಯ ತಂಡಗಳ ಆಟಗಾರರಿಂದ ಆರಂಭಿಕ ಗೇಮ್ನಲ್ಲಿ ಸಮಬಲ ಹೋರಾಟ ಕಂಡು ಬಂತು. ಆದರೆ ಮೊದಲಾರ್ಧ ಮುಕ್ತಾಯದ ಹೊತ್ತಿಗೆ 11-9 ರಿಂದ ಚಿರಾಗ್-ಸಾತ್ವಿಕ್ ಮುನ್ನಡೆ ಪಡೆದಿದ್ದರು. ಆದರೆ ಛಲಬಿಡದೆ ಹೋರಾಡಿದ ಮಲೇಷಿಯನ್ನರು ಗೇಮ್ನ ಕೊನೆಯ ಹಂತದಲ್ಲಿ 19-19 ರಲ್ಲಿ ಸಮಬಲ ಸಾಧಿಸಿದರು. ಈ ವೇಳೆ ಮತ್ತೆ ಮೇಲುಗೈ ಸಾಧಿಸಿದ ಭಾರತದ ಆಟಗಾರರು ಮತ್ತೆ ಮುನ್ನಡೆ ಪಡೆದರು. ಅಂತಿಮವಾಗಿ 26-24ರಲ್ಲಿ ಮೊದಲ ಗೇಮ್ ಗೆದ್ದುಕೊಂಡರು.
17 ಅಂಕಗಳಲ್ಲಿ ಭಾರತೀಯರೇ ಪಡೆದರು 13 ಅಂಕ
2ನೇ ಗೇಮ್ನಲ್ಲಿ ಆತಿಥೇಯರು ತಿರುಗೇಟು ನೀಡುವ ಲೆಕ್ಕಾಚಾರ ಹಾಕಿದ್ದರು. ಅದರಂತೆ, ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ಕೊಟ್ಟರು. ಹೀಗಾಗಿ 11-8ರಿಂದ ಮುನ್ನಡೆಯನ್ನೂ ಪಡೆದರು. ಇದನ್ನರಿತ ಭಾರತದ ಜೋಡಿ ಪುಟಿದೆದ್ದಿತು. ಹಿನ್ನಡೆ ಅನುಭವಿಸಿದ್ದ ಹಂತದಲ್ಲಿ ಚೇತರಿಸಿಕೊಂಡ ಚಿರಾಗ್-ಸಾತ್ವಿಕ್ ಅದ್ಭುತ ಪುನರಾಗಮನ ಮಾಡಿದರು. ಮುಂದಿನ 17 ಅಂಕಗಳಲ್ಲಿ 13 ಅನ್ನು ತಾವೇ ಗೆದ್ದು ಪಂದ್ಯ ಮುಕ್ತಾಯಗೊಳಿಸಿದರು. ಇದರೊಂದಿಗೆ ನೇರ ಗೇಮ್ಗಳಿಂದಲೇ ಮಲೇಷ್ಯಾ ಜೋಡಿಯನ್ನು ಮಣಿಸಿದ ಭಾರತದ ಜೋಡಿ ಮುಂದಿನ ಹಂತಕ್ಕೆ ಲಗ್ಗೆ ಹಾಕಿದರು. ಚಿರಾಗ್-ಸಾತ್ವಿಕ್ ಹೊರತುಪಡಿಸಿ ಉಳಿದ ಆಟಗಾರರು ಮೊದಲ ಎರಡು ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಗೆಲುವಿನ ನಂತರ ಚಿರಾಗ್-ಸಾತ್ವಿಕ್ ಹೇಳಿದ್ದಿಷ್ಟು
ಗೆಲುವಿನ ನಂತರ ಮಾತನಾಡಿದ ಚಿರಾಗ್-ಸಾತ್ವಿಕ್, ‘2025ರಲ್ಲಿ ಖಂಡಿತವಾಗಿಯೂ ಉತ್ತಮ ಆರಂಭ ಪಡೆದಿದ್ದೇವೆ. ಮುಂದಿನ ಪಂದ್ಯಗಳಲ್ಲೂ ಇಂತಹದ್ದನ್ನೇ ಗೆಲುವನ್ನು ಬಯಸುತ್ತೇವೆ. ಸೆಮಿಫೈನಲ್ನಲ್ಲೂ ಗೆಲ್ಲುವ ವಿಶ್ವಾಸ ಇದೆ. ಎದುರಾಳಿ ತಂಡದವರು ಸಹ ಅತ್ಯುತ್ತಮ ಪ್ರದರ್ಶನ ನೀಡಿದರು’ ಎಂದು ಹೇಳಿದ್ದಾರೆ. ‘ಕ್ರೀಡಾಪಟುಗಳಾಗಿ ನಮಗಿದು ನೆಚ್ಚಿನ ಕ್ರೀಡಾಂಗಣ. ಯಾವಾಗಲೂ ತುಂಬಿದ ಮೈದಾನಗಳಲ್ಲಿ ಆಡಲು ಬಯಸುತ್ತೇವೆ. ಆದರೆ ಇಲ್ಲಿ ನಮ್ಮ ಪ್ರೇಕ್ಷಕರ ಸಂಖ್ಯೆ ಕಡಿಮೆ ಇತ್ತು. ಮಲೇಷ್ಯಾ ಜೋಡಿಗೆ ಸ್ಥಳೀಯರ ಬೆಂಬಲ ಹೆಚ್ಚಾಗಿತ್ತು. ಅದೇನೆ ಇರಲಿ ವೃತ್ತಿಪರರಾಗಿ, ಇದು ಅತ್ಯುತ್ತಮ ಕ್ರೀಡಾಂಗಣಗಳಲ್ಲಿ ಒಂದಾಗಿದೆ’ ಎಂದು ಹೇಳಿದ್ದಾರೆ.