2034ರ ಫಿಫಾ ವಿಶ್ವಕಪ್‌ಗೆ ಭಾರತ ಸಹ ಆತಿಥ್ಯ ವಹಿಸುತ್ತಾ? ಸೌದಿ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷರ ಸ್ಪಷ್ಟನೆ ಹೀಗಿದೆ
2034ರ ಫುಟ್ವಾಲ್ ವಿಶ್ವಕಪ್‌ಗೆ ಭಾರತವು ಸಹ ಆತಿಥ್ಯ ವಹಿಸಲಿದೆ ಎಂಬ ಚರ್ಚೆಯ ಕುರಿತು ಸೌದಿ ಅರೇಬಿಯಾದ ಫುಟ್‌ಬಾಲ್ ಫೆಡರೇಶನ್ ಅಧ್ಯಕ್ಷ ಯಾಸರ್ ಅಲ್ ಮಿಸೆಹಲ್ ಸ್ಪಷ್ಟನೆ ನೀಡಿದ್ದಾರೆ.
ಫುಟ್ಬಾಲ್‌ನ ಜಾಗತಿಕ ಹಬ್ಬ ಫಿಫಾ ವಿಶ್ವಕಪ್‌ನಲ್ಲಿ ಆಡುವ ಅರ್ಹತೆಯನ್ನು ಭಾರತ ಫುಟ್ಬಾಲ್ ತಂಡ ಇನ್ನೂ ಪಡೆದಿಲ್ಲ. ಆದರೆ, 2034ರ ಫಿಫಾ ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ನಡೆಯುತ್ತಾ ಎಂಬ ಚರ್ಚೆ ನಡೆಯುತ್ತಿವೆ. ಸದ್ಯ ಇಂತಹ ಸುದ್ದಿಗೆ ಸೌದಿ ಅರೇಬಿಯಾ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಯಾಸರ್ ಅಲ್ ಮಿಸೆಹಲ್ ಅಂತ್ಯ ಹಾಕಿದ್ದಾರೆ.
2034ರ ಫಿಫಾ ವಿಶ್ವಕಪ್‌ಗೆ ಸಹ ಆತಿಥ್ಯ ವಹಿಸಲು ಭಾರತ ಯೋಜಿಸುತ್ತಿದೆ ಎಂಬ ಊಹಾಪೋಹಗಳಿಗೆ ಸದ್ಯ ಸೌದಿ ಅರೇಬಿಯಾದ ಫುಟ್‌ಬಾಲ್ ಫೆಡರೇಶನ್ ಅಧ್ಯಕ್ಷ ಯಾಸರ್ ಅಲ್ ಮಿಸೆಹಲ್ ಸ್ಪಷ್ಟನೆ ನೀಡಿದ್ದಾರೆ. ಚತುರ್ವಾರ್ಷಿಕ ಟೂರ್ನಿಗೆ ಸೌದಿ ಅರೇಬಿಯಾ ಏಕಮಾತ್ರ ರಾಷ್ಟ್ರವಾಗಿ ಆತಿಥ್ಯ ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಆ ಮೂಲಕ ಭಾರತಕ್ಕೆ ಸಹ ಆತಿಥ್ಯದ ಅವಕಾಶ ನೀಡುವುದಿಲ್ಲ ಎಂಬುದಾಗಿ ಖಚಿತಪಡಿಸಿದ್ದಾರೆ.
“ಸೌದಿ ಮಾತ್ರ ಪಂದ್ಯಾವಳಿಯನ್ನು ಆಯೋಜಿಸಲಿದೆ” ಎಂದು ಅಲ್ ಮಿಸೆಹಲ್ ಅವರು ಸುದ್ದಿಸಂಸ್ಥೆಅಸೋಸಿಯೇಟೆಡ್ ಪ್ರೆಸ್‌ಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. “ನಮ್ಮಲ್ಲಿ ಬಹಳಷ್ಟು ನಗರಗಳು ಮತ್ತು ಹಲವು ಕ್ರೀಡಾಂಗಣಗಳಿವೆ. ನಮ್ಮ ಯೋಜನೆ ಈಗ ಏಕೈಕ ಆತಿಥೇಯ ರಾಷ್ಟ್ರ ಆಗುವುದು,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | Explained: ಇಎಸ್‌ಎಲ್ ಕುರಿತ ಕೋರ್ಟ್ ತೀರ್ಪಿನಿಂದ ಫುಟ್‌ಬಾಲ್ ಮೇಲಾಗುವ ಪರಿಣಾಮಗಳೇನು?
ಚರ್ಚೆ ಮುನ್ನೆಲೆಗೆ ಬಂದಿದ್ದು ಹೇಗೆ?
ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) 2034ರ ಫಿಫಾ ವಿಶ್ವಕಪ್‌ನ ಕೆಲವು ಪಂದ್ಯಗಳಿಗೆ ಆತಿಥ್ಯ ವಹಿಸಲು ಯೋಜಿಸುತ್ತಿದೆ ಎಂಬ ವರದಿಗಳು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಈ ಸ್ಪಷ್ಟನೆ ಸಿಕ್ಕಿದೆ. ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ಕಾರ್ಯಕಾರಿ ಸಮಿತಿಯ ಸದಸ್ಯರಿಗೆ 2034ರ ವಿಶ್ವಕಪ್‌ನ ಕೆಲವು ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಭಾರತ ಕಾರ್ಯಪ್ರವೃತ್ತವಾಗಬೇಕು ಎಂದು ಹೇಳಿರುವುದಾಗಿ ವರದಿಯಾಗಿದೆ.
ಸದ್ಯ ಸೌದಿಯು ಒಂದೇ ದೇಶವಾಗಿ ಹೋಸ್ಟಿಂಗ್ ಮಾಡುವ ಕುರಿತು ಸ್ಪಷ್ಟನೆ ಸಿಕ್ಕಿದ್ದು, ಭಾರತದ ಯೋಜನೆಗಳು ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇಲ್ಲ.
ಒಟ್ಟು 48 ತಂಡಗಳು ಭಾಗಿಯಾಗುವ 2034ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು 104 ಪಂದ್ಯಗಳು ಇರುತ್ತವೆ. ಅವುಗಳಲ್ಲಿ ಸುಮಾರು 10 ಪಂದ್ಯಗಳು ಭಾರತದಲ್ಲಿ ನಡೆಯಬಹುದೆಂಬ ಲೆಕ್ಕಾಚಾರ ಹಾಕಲಾಗಿತ್ತು. ನವೆಂಬರ್ 9ರಂದು ನಡೆದ ಎಐಎಫ್‌ಎಫ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, “2034ರ ವಿಶ್ವಕಪ್‌ಗೆ ಸಹ ಆತಿಥ್ಯ ವಹಿಸಲು ಭಾರತ ಯೋಚಿಸಬೇಕು ಎಂದು ಅಧ್ಯಕ್ಷರು ಸದನಕ್ಕೆ ತಿಳಿಸಿದ್ದರು.” ಆದರೆ, ಸದ್ಯ ಈ ಯಾವುದೇ ಯೋಜನೆ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇಲ್ಲ.
ಇದನ್ನೂ ಓದಿ | ಅಸ್ತಿತ್ವದಲ್ಲಿದ್ದ ನಿಯಮ ನಿರ್ಲಕ್ಷ್ಯ, ಭಾರತೀಯ ಕುಸ್ತಿ ಫೆಡರೇಷನ್ ಅಮಾನತು; ಕ್ರೀಡಾ ಸಚಿವಾಲಯ ಆದೇಶ
ಭಾರತ 2027ರಲ್ಲಿ ನಡೆಯಲಿರುವ AFC ಏಷ್ಯನ್ ಕಪ್ ಆತಿಥ್ಯದಿಂದ ಹಿಂದೆ ಸರಿದ ಬಳಿಕ ಸೌದಿ ಅರೇಬಿಯಾ ಟೂರ್ನಿಯ ಆಯೋಜನೆಗೆ ಸಜ್ಜಾಗಿದೆ.