ಕನ್ನಡ ಸುದ್ದಿ  /  ಕ್ರೀಡೆ  /  Sehwag On Sachin: ಮಾತು ಕೇಳಿಲ್ಲವೆಂದು ಸಚಿನ್​ ಬ್ಯಾಟ್​ನಿಂದ ಹೊಡೆದಿದ್ದರು: ತೆಂಡೂಲ್ಕರ್​​ರ ಆಸಕ್ತಿ ವಿಷಯ ಹಂಚಿಕೊಂಡ ಸೆಹ್ವಾಗ್​

Sehwag on Sachin: ಮಾತು ಕೇಳಿಲ್ಲವೆಂದು ಸಚಿನ್​ ಬ್ಯಾಟ್​ನಿಂದ ಹೊಡೆದಿದ್ದರು: ತೆಂಡೂಲ್ಕರ್​​ರ ಆಸಕ್ತಿ ವಿಷಯ ಹಂಚಿಕೊಂಡ ಸೆಹ್ವಾಗ್​

Sehwag on Sachin: ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಕುರಿತ ಕೆಲವು ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಸೆಹ್ವಾಗ್​ಗೆ ಬ್ಯಾಟ್​​ನಿಂದ ಸಚಿನ್​ ಹೊಡೆದಿರುವ ಕುರಿತೂ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್​-ವೀರೇಂದ್ರ ಸೆಹ್ವಾಗ್​
ಸಚಿನ್ ತೆಂಡೂಲ್ಕರ್​-ವೀರೇಂದ್ರ ಸೆಹ್ವಾಗ್​

ಸಚಿನ್ ತೆಂಡೂಲ್ಕರ್ - ವೀರೇಂದ್ರ ಸೆಹ್ವಾಗ್ (Sachin Tendulkar - Virender Sehwag )​, ಕ್ರಿಕೆಟ್​​ ಲೋಕದ ಅತ್ಯಂತ ಯಶಸ್ವಿ ಜೋಡಿ. ಮಾಸ್ಟರ್​ ಬ್ಲಾಸ್ಟರ್, ಬ್ಯಾಟಿಂಗ್​ ದಿಗ್ಗಜ, ಕ್ರಿಕೆಟ್ ದೇವರು.. ಈ ಹೆಸರು ಕ್ರಿಕೆಟ್ ಇತಿಹಾಸದಲ್ಲಿ ಚಿರಕಾಲ ಉಳಿಯಲಿದೆ. ಮತ್ತೊಂದೆಡೆ ಸೆಹ್ವಾಗ್​, ಸಿಡಿಲಮರಿ. ಬೆಂಕಿ ಬಿರುಗಾಳಿ ಆಟಕ್ಕೆ ಹೆಸರುವಾಸಿ. ಬೌಂಡರಿಯೊಂದಿಗೆ ಇನ್ನಿಂಗ್ಸ್​ ಆರಂಭಿಸುತ್ತಿದ್ದ ಡೇರಿಂಗ್​ ಆ್ಯಂಡ್​ ಡ್ಯಾಶಿಂಗ್​ ಬ್ಯಾಟರ್​​, ಬೌಲರ್ಸ್​ ಮೇಲೆ ದಂಡಯಾತ್ರೆ ನಡೆಸುತ್ತಿದ್ದರು.

ಟ್ರೆಂಡಿಂಗ್​ ಸುದ್ದಿ

ಸಚಿನ್ ಮತ್ತು ಸೆಹ್ವಾಗ್ ನಡುವಿನ ಸ್ನೇಹ ಮತ್ತು ಬಾಂಧವ್ಯ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಯಶಸ್ವಿ ಆರಂಭಿಕರು​ ಎಂದೆನಿಸಿರುವ ಈ ಜೋಡಿ, ಎದುರಾಳಿಗೆ ಕಂಟಕ ಆಗಿದ್ದರು. ಸದ್ಯ ಸೆಹ್ವಾಗ್, ಸಚಿನ್ ಕುರಿತ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಬ್ಯಾಟ್​​ನಿಂದ ಸಚಿನ್​ ಹೊಡೆದಿರುವ ಕುರಿತು ಹೇಳಿದ್ದಾರೆ.

ಹಾಡುಗಳನ್ನು ಹಾಡುತ್ತಾ ಸಿಕ್ಸರ್​​ಗಳನ್ನು ಬಾರಿಸುವುದು ಸೆಹ್ವಾಗ್​ಗೆ ಅಭ್ಯಾಸ ಇದೆ. ಸ್ವತಃ ವೀರೂ ಅವರೇ ಹಲವು ಬಾರಿ ಈ ಬಗ್ಗೆ ಬಹಿರಂಗಪಡಿಸಿದ್ದಾರೆ. ಇದೀಗ 2011ರ ಏಕದಿನ ವಿಶ್ವಕಪ್​​ನಲ್ಲಿ ತೆಂಡೂಲ್ಕರ್​ ಅವರೊಂದಿಗೆ ನಡೆದ ಸಣ್ಣ ಘಟನೆಯನ್ನು ಸೆಹ್ವಾಗ್​ ವಿವರಿಸಿದ್ದಾರೆ.

2011ರ ಏಕದಿನ ವಿಶ್ವಕಪ್‌ನಲ್ಲಿ ನಾವು ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ಆಡುತ್ತಿದ್ದೆವು. ಬ್ಯಾಟಿಂಗ್ ಮಾಡುವಾಗ ಏಕಾಗ್ರತೆ ಕಾಪಾಡಿಕೊಳ್ಳಲು ನಾನು ಹಾಡುತ್ತೇನೆ. ಅದು ನನಗೆ ಅಭ್ಯಾಸವಾಗಿದೆ. ಬ್ಯಾಟಿಂಗ್​ ನಡೆಸುವಾಗ ಸಚಿನ್ ಮಾತನಾಡುತ್ತಾ ಉತ್ತಮ ಸಂಪರ್ಕದಲ್ಲಿರುತ್ತಾರೆ. ಅವರಿಗೆ ಓವರ್‌ಗಳ ನಡುವೆ ಮಾತನಾಡುವ ಅಭ್ಯಾಸ ಹೆಚ್ಚು. ಇದು ಅವರಿಗೆ ಒತ್ತಡವನ್ನು ನಿವಾರಿಸುವ ವಿಧಾನ ಎಂದು ಹೇಳಿದ್ದಾರೆ.

ಸಚಿನ್ ತುಂಬಾ ಮಾತನಾಡುತ್ತಿದ್ದರು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದೆ ನಾನು ಹಾಡುಗಳನ್ನು ಹಾಡುತ್ತಿದ್ದೆ. ಇದು ಮೂರು ಓವರ್‌ಗಳವರೆಗೆ ಮುಂದುವರಿಯಿತು. 4ನೇ ಓವರ್​​​​ನಲ್ಲಿ ತೆಂಡೂಲ್ಕರ್ ಕೋಪಗೊಂಡರು. ತನ್ನ ಮಾತನ್ನು ಕೇಳದೆ ಹಾಡುಗಳನ್ನು ಹಾಡುತ್ತಿದ್ದನೆಂದು ಕೋಪಗೊಂಡು ಅವರು ತನ್ನ ಬ್ಯಾಟ್‌ನಿಂದ ಹೊಡೆದಿದ್ದರು ಎನ್ನುತ್ತಾರೆ ಸೆಹ್ವಾಗ್​​.

ಹೀಗೆ ಹಾಡುಗಳನ್ನು ಹಾಡುತ್ತಾ ಹೋದರೆ, ನಿನ್ನನ್ನು ಕಿಶೋರ್ ಕುಮಾರ್ (ಹಿನ್ನೆಲೆ ಗಾಯಕ) ಮಾಡುತ್ತೇನೆ ಎಂದಿದ್ದರು. ಆಗ ನಾನು, ನಾವು ಚೆನ್ನಾಗಿ ಆಡುತ್ತಿದ್ದೇವೆ. ಪಿಚ್ ಕೂಡ ಚೆನ್ನಾಗಿದೆ. ಇದಕ್ಕಿಂತ ಇನ್ನೇನು ಬೇಕು ಎಂದಿದ್ದೆ. ಅದಕ್ಕೆ ಉತ್ತರಿಸಿದ ಅವರು, ಈಗ ಮಾತನಾಡಿದೆಯಲ್ಲಾ ಹಾಗೆಯೇ ಮಾತನಾಡುತ್ತಾ ಇರು ಎಂದು ಸಚಿನ್​​ ಎಂದಿದ್ದರು ಅಂತ ಸೆಹ್ವಾಗ್​ ವಿವರಿಸಿದರು.

ಆ ಪಂದ್ಯದಲ್ಲಿ ನಾವು 20 ಓವರ್‌ಗಳಲ್ಲಿ ಬ್ಯಾಟ್ ಮಾಡಿ 140 ರನ್ ಗಳಿಸಿದೆವು. ಪ್ರತಿ ಓವರ್‌ನ ನಂತರ ಬೌಲರ್ ಹೇಗೆ ಬೌಲ್ ಮಾಡಿದನು? ಅವರ ತಂತ್ರವೇನು? ಶಕ್ತಿ ಹೇಗಿದೆ? ಹೀಗೆ ಎಲ್ಲವನ್ನೂ ಸಚಿನ್​ಗೆ ಹೇಳುವ ಅಭ್ಯಾಸವಿದೆ. ಕ್ರಿಕೆಟ್‌ನಲ್ಲಿ ಅನೇಕರು ಇದನ್ನು ಮಾಡುತ್ತಾರೆ. ಆದರೆ ನಾನು ಅವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಬೌಲರ್ ನಿಜವಾಗಿ ಹೇಗೆ ಬೌಲ್ ಮಾಡುತ್ತಾನೆ? ಚೆಂಡು ಪುಟಿಯುತ್ತದೆಯೇ? ಸ್ಪಿನ್ ಬರುತ್ತದೆಯೇ? ಅಂತಹ ವಿಷಯಗಳ ಬಗ್ಗೆ ನಾನು ಹೆದರುವುದಿಲ್ಲ. ಅದನ್ನೆಲ್ಲ ಯೋಚಿಸಿದರೆ ಒತ್ತಡಕ್ಕೆ ಸಿಲುಕುತ್ತೇವೆ. ನಾನು ಸ್ವಂತಂತ್ರವಾಗಿ ಆಡಲು ಇಚ್ಚಿಸುತ್ತೇನೆ. ಹಾಗಾಗಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನನ್ನ ಶೈಲಿಯಲ್ಲೇ ಬ್ಯಾಟಿಂಗ್ ಮಾಡುತ್ತೇನೆ' ಎಂದು ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ.

2011ರ ಏಕದಿನ ವಿಶ್ವಕಪ್‌ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಮೊದಲು ಬ್ಯಾಟ್ ಮಾಡಿದ ಟೀಮ್​​ ಇಂಡಿಯಾಗೆ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಮೊದಲ ವಿಕೆಟ್‌ಗೆ 142 ರನ್‌ಗಳ ಜೊತೆಯಾಟ ನೀಡಿದ್ದರು. ಸೆಹ್ವಾಗ್ 66 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 73 ರನ್ ಮತ್ತು ಸಚಿನ್ ತೆಂಡೂಲ್ಕರ್ 101 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 111 ರನ್ ಗಳಿಸಿದ್ದರು.

3ನೇ ಕ್ರಮಾಂಕದಲ್ಲಿ ಗೌತಮ್ ಗಂಭೀರ್ 69, ಯುವರಾಜ್ ಸಿಂಗ್ 12, ಧೋನಿ 12, ವಿರಾಟ್ ಕೊಹ್ಲಿ 1, ಹರ್ಭಜನ್ 3 ರನ್ ಗಳಿಸಿದರು. 48.4 ಓವರ್‌ಗಳಲ್ಲಿ 296 ರನ್‌ಗಳಿಗೆ ಆಲೌಟಾಯಿತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ, 49.4 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತ್ತು. 2011ರ ಏಕದಿನ ವಿಶ್ವಕಪ್‌ನಲ್ಲಿ ಟೀಮ್​​​ ಇಂಡಿಯಾ ಎದುರಿಸಿದ ಏಕೈಕ ಸೋಲು ಇದಾಗಿತ್ತು.