ಕಾಡಿದ ಗಾಯ; ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪಂದ್ಯದಿಂದ ಹಿಂದೆ ಸರಿದ ನೊವಾಕ್ ಜೊಕೊವಿಕ್, ಫೈನಲ್‌ಗೆ ಝ್ವೆರೆವ್
ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪಂದ್ಯದ ಮಧ್ಯದಲ್ಲೇ ಗಾಯದಿಂದಾಗಿ ನಿವೃತ್ತಿ ಹೇಳಿದ್ದಾರೆ. ಫೈನಲ್‌ಗೇರುವ ಫೇವರೆಟ್ ಆಟಗಾರನಾಗಿದ್ದ ಸರ್ಬಿಯಾದ ದಿಗ್ಗಜ, ಮೈದಾನದಲ್ಲಿ ಸುಲಲಿತ ಚಲನೆ ಸಾಧ್ಯವಾಗದೆ ಹೊರನಡೆದಿದ್ದಾರೆ.

ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಫೇವರೆಟ್ ಆಗಿದ್ದ ನೊವಾಕ್ ಜೊಕೊವಿಕ್ (Novak Djokovic), ಪ್ರತಿಷ್ಠಿತ ಟೂರ್ನಿಯ ಸೆಮಿಫೈನಲ್ ಪಂದ್ಯದಿಂದ ಹಿಂದೆಸರಿದಿದ್ದಾರೆ. ಮೆಲ್ಬೋರ್ನ್‌ನ ರಾಡ್ ಲೇವರ್ ಅರೆನಾದಲ್ಲಿ ಶುಕ್ರವಾರ (ಜ.24) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧದ ಪಂದ್ಯದ ಮಧ್ಯದಲ್ಲೇ ಜೊಕೊವಿಕ್ ಹೊರನಡೆದಿದ್ದಾರೆ. ಇದರೊಂದಿಗೆ ಮತ್ತೊಂದು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ತಪ್ಪಿದೆ. ಸರ್ಬಿಯಾದ ಟೆನಿಸ್ ದಿಗ್ಗಜ ದುರದೃಷ್ಟವಶಾತ್ ಮೊದಲ ಸೆಟ್ ನಂತರ ನಿವೃತ್ತಿ ಹೊಂದಬೇಕಾಯಿತು. ಗಾಯದಿಂದಾಗಿ ಅವರು 6(5) -7(7) ಅಂತರದಿಂದ ಮೊದಲ ಸೆಟ್ ಕಳೆದುಕೊಂಡರು.
ಕಾರ್ಲೊಸ್ ಅಲ್ಕರಾಜ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದಿದ್ದ ಜೊಕೊವಿಕ್, ಸೆಮೀಸ್ ಗೆದ್ದು ಸುಲಭವಾಗಿ ಫೈನಲ್‌ಗೇರುವ ನಿರೀಕ್ಷೆ ಇತ್ತು. ಕ್ವಾರ್ಟರ್ ಫೈನಲ್ ಸಮಯದಲ್ಲೇ ಜೊಕೊವಿಕ್ ನೋವಿನಿಂದ ಬಳಲುತ್ತಿದ್ದರು. ಆದರೂ ದಿಟ್ಟ ಹೋರಾಟದೊಂದಿಗೆ ಮೇಲುಗೈ ಸಾಧಿಸಿದರು. ಸೆಮಿಫೈನಲ್‌ಗೂ ಮುನ್ನ ತಮ್ಮ ತರಬೇತಿ ಅವಧಿಯನ್ನು ರದ್ದುಗೊಳಿಸಿದ ಜೊಕೊವಿಕ್, ಸ್ನಾಯುಸೆಳೆತದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿತ್ತು.
ಶುಕ್ರವಾರ ನಡೆಯಲಿರುವ ಪಂದ್ಯಕ್ಕೆ 90 ನಿಮಿಷಗಳಿಗಿಂತ ಮುಂಚೆ, ಸರ್ಬಿಯಾದ ಆಟಗಾರ ಆಂಡಿ ಮರ್ರೆ ಅವರೊಂದಿಗೆ ಕೊನೆಯ ಕ್ಷಣದಲ್ಲಿ ಅಭ್ಯಾಸ ನಡೆಸಿದ್ದರು ಎಂದು ವರದಿಯಾಗಿದೆ. ಆದರೆ, ಸೆಮೀಸ್ ಆರಂಭವಾಗುತ್ತಿದ್ದಂತೆಯೇ ನೊವಾಕ್ ಜೊಕೊವಿಕ್ ಅವರ ಗಾಯದ ಮಟ್ಟ ಮೇಲ್ನೋಟಕ್ಕೆ ಕಾಣುತ್ತಿತ್ತು.
ಗಾಯದಿಂದ ವೇಗದ ಆಟ ಸಾಧ್ಯವಾಗಲಿಲ್ಲ
ಝ್ವೆರೆವ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಜೊಕೊವಿಕ್ ಹಾಜರಾಗುತ್ತಿದ್ದಂತೆ, ಅಭಿಮಾನಿಗಳ ಖುಷಿ ಇಮ್ಮಡಿಯಾಯ್ತು. ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಾಗಿ ಬೇಟೆಯನ್ನು ಮುಂದುವರೆಸಿದ್ದಾರೆ ಎಂದೇ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಮೊದಲ ಸೆಟ್ ವೇಳೆ ಅವರ ಚಲನೆಗೆ ತೀವ್ರ ಅಡಚಣೆ ಕಂಡುಬಂತು. ವೇಗವಾಗಿ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲ ಸೆಟ್ ನಂತರ ಆಟದಿಂದ ಹೊರನಡೆಯುವ ನಿರ್ಧಾರಕ್ಕೆ ಬಂದರು. ಇದು ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸಿತು.
ಮೈದಾನ ತೊರೆದು ಲಾಕರ್ ರೂಮ್ ಕಡೆಗೆ ನೊವಾಕ್ ಜೊಕೊವಿಕ್ ಹೆಜ್ಜೆ ಹಾಕುತ್ತಿದ್ದಂತೆ ಅಭಿಮಾನಿಗಳು ಅವರನ್ನು ದೂಷಿಸಲು ಪ್ರಾರಂಭಿಸಿದರು. ಅವರ ವಿರುದ್ಧ ಘೋಷಣೆಗಳು ಕೇಳಿಬಂದವು. ಯಾವುದಕ್ಕೂ ಕಟುವಾಗಿ ಪ್ರತಿಕ್ರಿಯೆ ನೀಡದ ದಿಗ್ಗಜ, ಥಂಬ್ ಸನ್ನೆ ಮಾಡುತ್ತಾ ಹೊರನಡೆದರು.
ದಿಗ್ಗಜನನ್ನು ದೂಷಿಸಬೇಡಿ ಎಂದ ಝ್ವೆರೆವ್
ಪಂದ್ಯ ನಿಂತ ನಂತರ ಝ್ವೆರೆವ್ ಕೋರ್ಟ್ ಸೈಡ್ ಸಂದರ್ಶನದಲ್ಲಿ ಭಾಗಿಯಾದರು. ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಜೊಕೊವಿಕ್ ಅವರಂಥ ದಿಗ್ಗಜರನ್ನು ದೂಷಿಸಬೇಡಿ ಎಂದು ಅಭಿಮಾನಿಗಳನ್ನು ಒತ್ತಾಯಿಸಿದರು.
ಎರಡು ಬಾರಿಯ ಗ್ರ್ಯಾಂಡ್ ಸ್ಲಾಮ್ ರನ್ನರ್ ಅಪ್ ಆಗಿರುವ ಜರ್ಮನಿಯ ಸ್ಟಾರ್ ಆಟಗಾರ ಝ್ವೆರೆವ್, ಫೈನಲ್‌ನಲ್ಲಿ ಜಾನಿಕ್ ಸಿನ್ನರ್ ಅಥವಾ ಬೆನ್ ಶೆಲ್ಟನ್ ವಿರುದ್ಧ ಸೆಣಸಲಿದ್ದಾರೆ. ಪುರುಷರ ಫೈನಲ್ ಭಾನುವಾರ (ಜ.26) ನಡೆಯಲಿದೆ. ಮಹಿಳೆಯರ ಫೈನಲ್ ಶನಿವಾರ (ಜ.25) ನಡೆಯಲಿದೆ.
