ಕನ್ನಡ ಸುದ್ದಿ  /  Sports  /  Shoaib Akhtar On India Speedster Umran Malik

Akhtar on Umran: 'ನನ್ನ ದಾಖಲೆ ಮುರಿದರೆ ನಿನ್ನ ತಬ್ಬಿಕೊಳ್ಳುವ ಮೊದಲ ವ್ಯಕ್ತಿ ನಾನೇ', ಉಮ್ರಾನ್‌ಗೆ ಅಖ್ತರ್ ಅಮೂಲ್ಯ ಸಲಹೆ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ, ಭಾರತದ ಯುವ ವೇಗಿಯು ಪಾಕ್‌ ವೇಗಿ ಅಖ್ತರ್‌ ಅವರಿಂದ ಕೆಲವು ಮೌಲ್ಯಯುತ ಸಲಹೆಗಳನ್ನು ಪಡೆದರು. ತನ್ನ ಬೌಲಿಂಗ್ ಅನ್ನು ಹೇಗೆ ಸುಧಾರಿಸಬೇಕು ಎಂಬುದರ ಕುರಿತು ಉಮ್ರಾನ್‌ಗೆ ಅಖ್ತರ್ ಸಲಹೆ ನೀಡಿದ್ದಾರೆ. ಅಲ್ಲದೆ ಅವರ ವೇಗದ ಎಸೆತದ ದಾಖಲೆಯನ್ನು ಹೇಗೆ ಮುರಿಯುವುದು ಎಂಬುದರ ಕುರಿತಾಗಿಯೂ ಹೇಳಿದ್ದಾರೆ.

ಉಮ್ರಾನ್‌ ಮಲಿಕ್
ಉಮ್ರಾನ್‌ ಮಲಿಕ್ (PTI)

ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್‌ ಎಂದು ಪರಿಗಣಿಸಲ್ಪಟ್ಟಿರುವ ಪಾಕಿಸ್ತಾನದ ದಿಗ್ಗಜ ಶೋಯೆಬ್ ಅಖ್ತರ್, ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದೇ ಕರೆಯಲ್ಪಡುವ ಅವರು, ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಖ್ತರ್ 46 ಟೆಸ್ಟ್‌ಗಳಲ್ಲಿ 178 ವಿಕೆಟ್‌ಗಳು, 163 ಏಕದಿನ ಪಂದ್ಯಗಳಲ್ಲಿ 247 ಮತ್ತು 15 ಟಿ20 ಪಂದ್ಯಗಳಲ್ಲಿ 19 ವಿಕೆಟ್‌ ಪಡೆದಿದ್ದಾರೆ. 2003ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 161 kmph ವೇಗದಲ್ಲಿ ಬೌಲಿಂಗ್‌ ಮಾಡಿರುವ ಅಖ್ತರ್, ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಎಸೆತದ ದಾಖಲೆಯನ್ನು ಹೊಂದಿದ್ದಾರೆ.

ಆಧುನಿಕ ಕ್ರಿಕೆಟ್‌ನಲ್ಲಿ, ಅನೇಕ ವೇಗದ ಬೌಲರ್‌ಗಳು ಅಖ್ತರ್ ಅವರ ದಾಖಲೆಯನ್ನು ಮುರಿಯಬಲ್ಲರು ಎಂದು ಹೇಳಲಾಗುತ್ತಿದೆ. ಆದರೆ, ಇದು ಈವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಅಂತೆಯೇ, ಐಪಿಎಲ್‌ನಲ್ಲಿ ಈಗಾಗಲೇ ಗಂಟೆಗೆ 157 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿರುವ ಭಾರತದ ವೇಗಿ ಉಮ್ರಾನ್ ಮಲಿಕ್, ಭಾರತ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಬೌಲ್ ಮಾಡಿದ ಅತ್ಯಂತ ವೇಗದ ಎಸೆತದ ದಾಖಲೆ ಮಾಡಿದ್ದಾರೆ. ಈ ವರ್ಷದ ಜನವರಿಯಲ್ಲಿ ಅವರು ಶ್ರೀಲಂಕಾ ನಾಯಕ ದಸುನ್ ಶನಕ ವಿಕೆಟ್ ಪಡೆಯಲು 155 ಕಿಮೀ ವೇಗದ ಎಸೆತ ಎಸೆದಿದ್ದರು.

ಶುಕ್ರವಾರದಿಂದ ಆರಂಭಗೊಂಡಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ 23ರ ಹರೆಯದ ವೇಗಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಮೊದಲ ಪಂದ್ಯಕ್ಕೆ ಅವರು ಆಯ್ಕೆಯಾಗಿಲ್ಲ. ಒಂದು ವೇಳೆ ಮುಂದಿನ ಪಂದ್ಯಗಳಿಗೆ ಆಯ್ಕೆಯಾದರೆ, ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ, ಭಾರತದ ಯುವ ವೇಗಿಯು ಪಾಕ್‌ ವೇಗಿ ಅಖ್ತರ್‌ ಅವರಿಂದ ಕೆಲವು ಮೌಲ್ಯಯುತ ಸಲಹೆಗಳನ್ನು ಪಡೆದರು. ತನ್ನ ಬೌಲಿಂಗ್ ಅನ್ನು ಹೇಗೆ ಸುಧಾರಿಸಬೇಕು ಎಂಬುದರ ಕುರಿತು ಉಮ್ರಾನ್‌ಗೆ ಅಖ್ತರ್ ಸಲಹೆ ನೀಡಿದ್ದಾರೆ. ಅಲ್ಲದೆ ಅವರ ವೇಗದ ಎಸೆತದ ದಾಖಲೆಯನ್ನು ಹೇಗೆ ಮುರಿಯುವುದು ಎಂಬುದರ ಕುರಿತಾಗಿಯೂ ಹೇಳಿದ್ದಾರೆ.

ಈ ಬಗ್ಗೆ ನ್ಯೂಸ್ 24ನಲ್ಲಿ ಮಾತನಾಡಿದ ಶೋಯೆಬ್, “ಆತ ತುಂಬಾ ಒಳ್ಳೆಯ ಬೌಲರ್‌. ಅಲ್ಲದೆ ತುಂಬಾ ಬಲಶಾಲಿ ಮತ್ತು ಶಕ್ತಿಯುತ ವೇಗ ಹೊಂದಿದ್ದಾನೆ. ಉತ್ತಮ ತೋಳಿನ ವೇಗ ಕೂಡಾ ಇದೆ. ಶನಕಗೆ ಬೌಲಿಂಗ್ ಮಾಡಿದ್ದನ್ನು ನೀವು ನೋಡಿದ್ದೀರಿ. ಆದ್ದರಿಂದ ಉಮ್ರಾನ್, ಧೈರ್ಯದಿಂದ ಬೌಲಿಂಗ್ ಮಾಡಿ ಮತ್ತು ಕಲಿಯಿರಿ. ತ್ವರಿತವಾಗಿ ಬೌಲಿಂಗ್ ಮಾಡುವ ಕಲೆ, ತಾಂತ್ರಿಕ ಅಂಶವನ್ನು ಕಲಿಯಿರಿ. ನಿಮ್ಮ ಆಕ್ರಮಣಕಾರಿ ಬೌಲಿಂಗ್‌ ಅನ್ನು ಎಂದಿಗೂ ಕಡಿಮೆ ಮಾಡಬೇಡಿ. ನಿಮ್ಮ ಬೌಲಿಂಗ್‌ನಲ್ಲಿ ರನ್‌ ಸೋರಿಕೆಯಾದರೂ, ಆಕ್ರಮಣವನ್ನು ಮಾತ್ರ ಕಡಿಮೆ ಮಾಡಬೇಡಿ. ಯಾವಾಗಲೂ ವೇಗವಾಗಿ ಬೌಲ್ ಮಾಡಿ ಮತ್ತು ಅದನ್ನು ಎಂದಿಗೂ ಬಿಡಬೇಡಿ. ನೀವು ಬೌಲಿಂಗ್‌ ಮಾಡಲು ಇಳಿದಾಗ, ಸಂಪೂರ್ಣ ಮೈದಾನದ ಮಾಲೀಕತ್ವವು ನಿಮ್ಮದಾಗಿರಬೇಕು. ಹೀಗಾಗಿ ಹೆಚ್ಚು ತರಬೇತಿ ಪಡೆಯಿರಿ ಮತ್ತು ಚೆನ್ನಾಗಿ ಆಡಿ,” ಎಂದು ಅಖ್ತರ್‌ ಸಲಹೆ ನೀಡಿದ್ದಾರೆ.

“ನೀವು ದೇಶಕ್ಕಾಗಿ ಆಡುತ್ತಿದ್ದೀರಿ. ಜನರು‌ ನಿಮ್ಮ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಮತ್ತು ಗೌರವಿಸುತ್ತಾರೆ. ಆದ್ದರಿಂದ ಅವರ ಭಾವನೆಗಳನ್ನು ಎಂದಿಗೂ ನಿರಾಸೆಗೊಳಿಸಬೇಡಿ.”

ಇದೇ ವೇಳೆ ಮಾತನಾಡಿದ ಅವರು, ಅಗತ್ಯವಿದ್ದಾಗ ಉಮ್ರಾನ್‌ಗೆ ಸಹಾಯ ಮಾಡಲು ತಾನು ಸಿದ್ಧನಿದ್ದೇನೆ ಎಂದು ಎಂದು ವಿವರಿಸಿದ್ದಾರೆ. ಭಾರತದ ಬೌಲರ್ ತನ್ನ ವೇಗವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನೂ ಅಖ್ತರ್ ವಿವರಿಸಿದರು. “ನಾನು ಬೌಲ್ ಮಾಡಲು 26 ಗಜಗಳನ್ನು ತೆಗೆದುಕೊಳ್ಳುತ್ತೇನೆ. ಆದರೆ ಉಮ್ರಾನ್ 20 ಗಜಗಳನ್ನು ತೆಗೆದುಕೊಳ್ಳುತ್ತಾನೆ. ಅವನು 26 ಗಜಗಳಿಗೆ ಹೋದಾಗ, ಅವನು ವಿಭಿನ್ನ ಸಾಮರ್ಥ್ಯ ಹೊಂದುತ್ತಾನೆ. ಮುಂಬರುವ ಸಮಯದಲ್ಲಿ ಆತ ಅದನ್ನು ಕಲಿಯುತ್ತಾನೆ ಎಂದು ನನಗೆ ಖಾತ್ರಿಯಿದೆ. ಅವನಿಗೆ ಏನಾದರೂ ಸಹಾಯ ಬೇಕಾದರೆ ನಾನು ಯಾವಾಗಲೂ ಇರುತ್ತೇನೆ. ನೀವು ನನ್ನ ದಾಖಲೆಯನ್ನು ಮುರಿಯಲು ಬಯಸಿದರೆ ದಯವಿಟ್ಟು ಮಾಡಿ. 20 ವರ್ಷಗಳು ಕಳೆದರೂ ಅದನ್ನು ಮುರಿಯಲಾಗಿಲ್ಲ. ದಯವಿಟ್ಟು ಅದನ್ನು ಮುರಿಯಿರಿ. ಒಂದು ವೇಳೆ ಅದು ಸಾಧ್ಯವಾದರೆ, ನಿನ್ನನ್ನು ತಬ್ಬಿಕೊಂಡು ಚುಂಬಿಸುವ ಮೊದಲ ವ್ಯಕ್ತಿಯೇ ನಾನಾಗುತ್ತೇನೆ,” ಎಂದು ವೇಗಿ ಹೇಳಿದ್ದಾರೆ.

2022ರ ಜೂನ್ ತಿಂಗಳಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಉಮ್ರಾನ್, ಎಂಟು ಏಕದಿನ ಪಂದ್ಯಗಳಲ್ಲಿ 13 ವಿಕೆಟ್‌ ಪಡೆದಿದ್ದಾರೆ. ಎಂಟು ಟಿ20 ಪಂದ್ಯಗಳಲ್ಲಿ 11 ವಿಕೆಟ್‌ ಕಬಳಿಸಿದ್ದಾರೆ.