Virat Kohli: ಎಲ್ಲರೂ ಟೀಕಿಸಿದರೂ ಅಂದು ದೇವರು ಮಾತ್ರ ಕೊಹ್ಲಿ ಜೊತೆಗಿದ್ದರು; ಇಂಡೋ-ಪಾಕ್‌‌ ವಿಶ್ವಕಪ್ ಪಂದ್ಯ ಸ್ಮರಿಸಿದ ಶೋಯೆಬ್ ಅಖ್ತರ್
ಕನ್ನಡ ಸುದ್ದಿ  /  ಕ್ರಿಕೆಟ್  /  Virat Kohli: ಎಲ್ಲರೂ ಟೀಕಿಸಿದರೂ ಅಂದು ದೇವರು ಮಾತ್ರ ಕೊಹ್ಲಿ ಜೊತೆಗಿದ್ದರು; ಇಂಡೋ-ಪಾಕ್‌‌ ವಿಶ್ವಕಪ್ ಪಂದ್ಯ ಸ್ಮರಿಸಿದ ಶೋಯೆಬ್ ಅಖ್ತರ್

Virat Kohli: ಎಲ್ಲರೂ ಟೀಕಿಸಿದರೂ ಅಂದು ದೇವರು ಮಾತ್ರ ಕೊಹ್ಲಿ ಜೊತೆಗಿದ್ದರು; ಇಂಡೋ-ಪಾಕ್‌‌ ವಿಶ್ವಕಪ್ ಪಂದ್ಯ ಸ್ಮರಿಸಿದ ಶೋಯೆಬ್ ಅಖ್ತರ್

Shoaib Akhtar on Virat Kohli: ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕುರಿತಾಗಿ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಮಾತನಾಡಿದ್ದಾರೆ.

ಶೋಯೆಬ್ ಅಖ್ತರ್ ಮತ್ತು ವಿರಾಟ್‌ ಕೊಹ್ಲಿ
ಶೋಯೆಬ್ ಅಖ್ತರ್ ಮತ್ತು ವಿರಾಟ್‌ ಕೊಹ್ಲಿ

2008ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ (Virat Kohli) ಕಾಲಿಟ್ಟರು. ಶ್ರೀಲಂಕಾ ವಿರುದ್ಧ ಡಂಬುಲ್ಲಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಕಿಂಗ್‌ ಕೊಹ್ಲಿ, ಸಚಿನ್ ತೆಂಡೂಲ್ಕರ್ ಬದಲಿಗೆ ಇನ್ನಿಂಗ್ಸ್ ಪ್ರಾರಂಭಿಸಿದರು. ಆಗ ವಿರಾಟ್‌ಗೆ ಕೇವಲ 18 ವರ್ಷ ವಯಸ್ಸು. ಅದಕ್ಕೂ ಮುನ್ನ ಅದೇ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಕೊಹ್ಲಿ, ಅದೇ ಜೋಶ್‌ನಲ್ಲಿ ಭಾರತ ತಂಡಕ್ಕೆ ಎಂಟ್ರಿ ಕೊಟ್ಟರು. ಆದರೆ ಟೀಮ್‌ ಇಂಡಿಯಾದಲ್ಲಿ ಕೊಹ್ಲಿ ನಿರೀಕ್ಷಿತ ಆರಂಭ ಪಡೆಯಲಿಲ್ಲ.

ಲಂಕಾ ತಂಡದ ಪ್ರಮುಖ ಬೌಲಿಂಗ್‌ ಅಸ್ತ್ರಗಳಾಗಿದ್ದ ಚಮಿಂದಾ ವಾಸ್ ಮತ್ತು ಮುತ್ತಯ್ಯ ಮುರಳೀಧರನ್ ನೇತೃತ್ವದ ಬೌಲಿಂಗ್ ದಾಳಿಯ ವಿರುದ್ಧ ಬ್ಯಾಟ್‌ ಬೀಸಿದ ವಿರಾಟ್‌; ತಮ್ಮ ಮೊದಲ ಐದು ಇನ್ನಿಂಗ್ಸ್‌ಗಳಲ್ಲಿ 12, 37, 25, 54 ಮತ್ತು 31 ರನ್‌ಗಳನ್ನು ಗಳಿಸಿದರು. ವಿರಾಟ್‌ ಆರಂಭ ಅಷ್ಟೊಂದು ಉತ್ತಮವಾಗಿರದಿದ್ದರೂ, ಅದಾಗಿ 15 ವರ್ಷಗಳ ನಂತರ ಇದೀಗ ಕಿಂಗ್ ಕೊಹ್ಲಿಯ 15 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿ ಬದುಕನ್ನು ಇಡೀ ವಿಶ್ವವೇ ಸಂಭ್ರಮಿಸುತ್ತಿದೆ. ಇಂದು ಕ್ರಿಕೆಟ್‌ ಎಂದರೆ ವಿರಾಟ್‌ ಕೊಹ್ಲಿ ಎಂಬಂತಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವಾರು ಐತಿಹಾಸಿಕ ಸಾಧನೆ ಮಾಡಿರುವ ವಿರಾಟ್‌ ಕೊಹ್ಲಿಗೆ ಹಲವಾರು ದಿಗ್ಗಜ ಕ್ರಿಕೆಟಿಗರ ಶುಭಾಶಯಗಳು ಹರಿದು ಬರುತ್ತಿವೆ. ವಿಶೇಷ ದಿನದ ಕುರಿತಾಗಿ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಶೋಯೆಬ್ ಅಖ್ತರ್ ಕೂಡಾ ವಿರಾಟ್‌ ಕುರಿತಾಗಿ ಹೇಳಿಕೆ ನೀಡಿದ್ದಾರೆ.

ಅದು ವಿರಾಟ್‌ ಕೊಹ್ಲಿಗಾಗಿ ದೇವರು ಮೀಸಲಿಟ್ಟ ದಿನ

ಕೊಹ್ಲಿಗೆ ಬೆಂಬಲ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ವೇಗಿ, ಅವರ ಪರ ಧ್ವನಿಯೆತ್ತಿದ್ದಾರೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ ಸಿಡಿಸಿದ ಅಜೇಯ 82 ರನ್‌ಗಳ ಇನ್ನಿಂಗ್ಸ್‌ ಅನ್ನು ಅಖ್ತರ್ ನೆನಪಿಸಿಕೊಂಡಿದ್ದಾರೆ.

ಕೊಹ್ಲಿ ಆಡುವ ಉದ್ದೇಶವೇ ಯಶಸ್ಸು ಗಳಿಸುವುದಕ್ಕೆ ಎಂದು ಬಲವಾಗಿ ನಂಬಿದ್ದರು. ವಿಶ್ವಕಪ್‌ಗೂ ಕೆಲವೇ ತಿಂಗಳುಗಳ ಹಿಂದೆ ಕೊಹ್ಲಿ ಫಾರ್ಮ್‌ ಕಳೆದುಕೊಂಡಿದ್ದರು. ಆ ಬಳಿಕ ನಡೆದ ಏಷ್ಯಾಕಪ್‌ನಲ್ಲಿ ಅರ್ಧಶತಕ ಮತ್ತು ಶತಕ ಸಿಡಿಸಿ ಮತ್ತೆ ರಾಜಗಾಂಭೀರ್ಯದೊಂದಿಗೆ ಫಾರ್ಮ್‌ಗೆ ಮರಳಿದರು. ವಿಶ್ವಕಪ್‌ನಲ್ಲಿ ಅಗ್ನಿಪರೀಕ್ಷೆ ಎದುರಿಸಿದ ಕೊಹ್ಲಿ, ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ಪಾಕಿಸ್ತಾನದ ವಿರುದ್ಧ ಚೇಸಿಂಗ್‌ ವೇಳೆ ಒಂದು ಹಂತದಲ್ಲಿ 33 ರನ್‌ ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಕೊಹ್ಲಿ ಬಲ ತುಂಬಿದರು. ತಂಡಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಭಾರತದ ಅಭಿಮಾನಿಗಳು ಜೀವನಪರ್ಯಂತ ನೆನಪಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಎಲ್ಲರೂ ಟೀಕಿಸಿದರೂ ದೇವರು ಕೊಹ್ಲಿ ಜೊತೆಗಿದ್ದರು

“ಆ ಪಂದ್ಯವು ಸಂಪೂರ್ಣವಾಗಿ ವಿರಾಟ್ ಕೊಹ್ಲಿಗೆ ಸೀಮಿತವಾಗಿತ್ತು. ಕ್ರಿಕೆಟ್ ದೇವರುಗಳು ಕೂಡಾ ಕೊಹ್ಲಿಗಾಗಿ ವಿಶೇಷವಾದ್ದನ್ನು ಮಾಡಲು ಬಯಸಿದ್ದರು. ಆಗ ಉತ್ತಮ ಫಾರ್ಮ್‌ನಲ್ಲಿಲ್ಲದ ಕೊಹ್ಲಿ ವಿರುದ್ಧ ಭಾರತೀಯರಿಂದ ಸಾಕಷ್ಟು ಟೀಕೆಗಳು ಕೇಳಿಬರುತ್ತಿದ್ದವು. ಮಾಧ್ಯಮಗಳು ಕೂಡಾ ಕೊಹ್ಲಿ ಫಾರ್ಮ್ ಅನ್ನು ಟೀಕಿಸುತ್ತಿದ್ದವು. ಆದರೆ, ದೇವರು ಮಾತ್ರ ಕೊಹ್ಲಿ ಜೊತೆಗಿದ್ದರು. ಇದು ನಿನ್ನ ಸಮಯ, ಬಾ, ಅಬ್ಬರಿಸು, ಮತ್ತೆ ರಾಜನಾಗಿ ಮೆರೆ ಎಂದು ದೇವರು ಹೇಳುತ್ತಿದ್ದರು. ಬರೋಬ್ಬರಿ 1 ಲಕ್ಷ ಜನರು ನೇರವಾಗಿ ಪಂದ್ಯ ವೀಕ್ಷಿಸುತ್ತಿದ್ದರು. 1.3 ಶತಕೋಟಿ ಭಾರತೀಯರು ಹಾಗೂ 30 ಕೋಟಿ ಪಾಕಿಸ್ತಾನಿಗಳು ಪಂದ್ಯವನ್ನು ವೀಕ್ಷಿಸುತ್ತಿದ್ದರು. ಇಡೀ ಜಗತ್ತೇ ನೋಡುತ್ತಿದ್ದ ಪಂದ್ಯದಲ್ಲಿ ಕೊಹ್ಲಿ ಆಟಕ್ಕೆ ವೇದಿಕೆ ಸಜ್ಜಾಗಿತ್ತು. ಅವರ ಪಾಲಿಗೆ ಅದು ಎಲ್ಲಕ್ಕಿಂತ ಶ್ರೇಷ್ಠ ವೇದಿಕೆ. ಹ್ಯಾರಿಸ್ ರೌಫ್ ಎಸೆತಕ್ಕೆ ಕೊಹ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸಿದಾಗ, ಆ ಪಂದ್ಯವು ಅವರಿಗೆ ಅವರ ಸಾಮ್ರಾಜ್ಯವನ್ನೇ ಮರಳಿ ನೀಡಿತು. ಆ ದಿನವನ್ನು ಎಂಸಿಜಿಯಲ್ಲಿ ಕೊಹ್ಲಿಗಾಗಿ ಮೀಡಲಿಡಲಾಗಿತ್ತು ಎಂದು ನಾನು ಅಂದುಕೊಂಡಿದ್ದೇನೆ,” ಎಂದು ಅಖ್ತರ್ RevSportzನಲ್ಲಿ ನಡೆದ ಬ್ಯಾಕ್‌ಸ್ಟೇಜ್ ವಿತ್ ಬೋರಿಯಾ' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Whats_app_banner