ಕನ್ನಡ ಸುದ್ದಿ  /  Sports  /  Shreyas Iyer Reports At Nca After Postponing Surgery

Shreyas Iyer: ಶಸ್ತ್ರಚಿಕಿತ್ಸೆ ಮುಂದೂಡಿ, ಬೆಂಗಳೂರಿನ ಎನ್​ಸಿಎಗೆ ಬಂದ​ ಅಯ್ಯರ್

Shreyas Iyer: ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಫಿಟ್ ಆಗಲು ಬಯಸಿರುವ ಶ್ರೇಯಸ್ ಅಯ್ಯರ್​, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್​ಸಿಎ) ಬಂದಿದ್ದಾರೆ. ರಿಹ್ಯಾಬ್​ಗೆ ಒಳಗಾಗಿದ್ದು, ಶೀಘ್ರವೇ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಶ್ರೇಯಸ್​ ಅಯ್ಯರ್​​​
ಶ್ರೇಯಸ್​ ಅಯ್ಯರ್​​​

ವಿಶ್ವದ ಮೆಗಾ ಟೂರ್ನಿ ಐಪಿಎಲ್​ (IPL) ಆರಂಭಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ವಿಶ್ವದ ಎಲ್ಲರ ಕಣ್ಣು ಚೆನ್ನೈ ಸೂಪರ್​ ಕಿಂಗ್ಸ್​ (Chennai Super Kings) ಮತ್ತು ಗುಜರಾತ್​ ಟೈಟಾನ್ಸ್ (Gujarat Titans)​ ತಂಡಗಳ ಮೇಲೆ ನೆಟ್ಟಿದೆ. ಉದ್ಘಾಟನಾ ಪಂದ್ಯದಲ್ಲಿ ಮದಗಜಗಳ ಕಾದಾಟದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಇದರ ನಡುವೆ ಟೀಮ್​ ಇಂಡಿಯಾ (Team India) ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಸಿಕ್ಕಿದೆ.

ಪ್ರಮುಖ ಆಟಗಾರರು ಗಾಯದ ಸಮಸ್ಯೆಗಳಿಂದ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇನ್ನೂ ಕೆಲವರು ಆಡುವುದು ಅನುಮಾನ ಎಂಬ ಮಾಹಿತಿ ಲಭ್ಯವಾಗಿದೆ. ಈ ಪಟ್ಟಿಯಲ್ಲಿ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಕೂಡ ಸೇರಿದ್ದಾರೆ. ಸದ್ಯ ಗಾಯದ ಸಮಸ್ಯೆಗೆ ಸಿಲುಕಿದ್ದ ಶ್ರೇಯಸ್​ ಅಯ್ಯರ್​, ಈಗ ಚೇತರಿಕೆಯ ಹಾದಿಯತ್ತ ಸಾಗಿದ್ದಾರೆ. ಅಯ್ಯರ್ ಅನುಪಸ್ಥಿತಿಯಲ್ಲಿ ತಂಡದ ಯುವ ಆಟಗಾರ ನಿತೀಶ್ ರಾಣಾ (Nitish Ran) ಅವರು ತಂಡದ ಜವಾಬ್ದಾರಿ ಹೊತ್ತಿದ್ದಾರೆ.

ಟೂರ್ನಿಯಿಂದ ದೂರ ಉಳಿದಿರುವ ಶ್ರೇಯಸ್ ಈಗ ನೇರವಾಗಿ ಬೆಂಗಳೂರು ತಲುಪಿದ್ದಾರೆ. ಬೆನ್ನು ನೋವಿನಿಂದಾಗಿ ಭಾರತ-ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಮುಂಬೈಕರ್​, ಚಿಕಿತ್ಸೆಗಾಗಿ ಸಿಲಿಕಾನ್ ಸಿಟಿಗೆ ಬಂದಿಳಿದಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಶ್ರೇಯಸ್ ಫಿಟ್ ಆಗಲು ಬಯಸಿದ್ದು, ಶಸ್ತ್ರಚಿಕಿತ್ಸೆಯನ್ನೇ ಮುಂದೂಡಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್​ಸಿಎ) ಬಂದಿದ್ದಾರೆ.

ಕೊಲ್ಕತ್ತಾ ತಂಡದ ಆಟಗಾರ NCAನಲ್ಲಿ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ತಮ್ಮ ಗುರಿಯ ಕಡೆ ಗಮನ ಹರಿಸಲಿದ್ದಾರೆ. ಕ್ರಿಕ್‌ಬಜ್‌ ವರದಿಯ ಪ್ರಕಾರ, ಮಾರ್ಚ್ 29 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ NCA ತಲುಪಿರುವ ಬಲಗೈ ಆಟಗಾರ,​ ಇಂದು (ಮಾರ್ಚ್ 30) ಬೆನ್ನುನೋವಿಗೆ ಇಂಜೆಕ್ಷನ್ ಪಡೆಯಲಿದ್ದಾರೆ. ಆದರೆ ಎನ್​ಸಿಎನಲ್ಲಿ ಎಷ್ಟು ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಾರೆ ಎಂಬುದು ಆತನ ಚೇತರಿಕೆಯ ಮೇಲೆ ನಿರ್ಧಾರವಾಗುತ್ತದೆ ಎನ್ನಲಾಗಿದೆ.

ಮತ್ತೊಂದೆಡೆ, ಬೆನ್ನು ನೋವಿನಿಂದ ಚೇತರಿಸಿಕೊಳ್ಳಲು ಶ್ರೇಯಸ್ ಅಯ್ಯರ್, ಎನ್‌ಸಿಎ ಅಧಿಕಾರಿಗಳು ಮತ್ತು ತಜ್ಞ ವೈದ್ಯರನ್ನು ಈಗಾಗಲೇ ಭೇಟಿ ಮಾಡಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ಶಸ್ತ್ರಚಿಕಿತ್ಸೆಗೆ ಬೇಡ ಎಂದಿರುವ ಶ್ರೇಯಸ್, ಎನ್‌ಸಿಎಯಲ್ಲಿಯೇ ಉಳಿದು ಪುನರ್ವಸತಿ ಮೂಲಕ ಫಿಟ್‌ನೆಸ್ ಪಡೆಯಲು ಯತ್ನಿಸಲಿದ್ದಾರೆ. ಈ ನಿಟ್ಟಿನಲ್ಲಿ ಎನ್​ಸಿಎ ಅಧಿಕಾರಿಗಳು ಕೂಡ ಅವರಿಗೆ ಸೂಕ್ತ ಬೆಂಬಲ ನೀಡುತ್ತಿದ್ದಾರೆ.

ಒಂದು ವೇಳೆ ಶಸ್ತ್ರಚಿಕಿತ್ಸೆಗೆ ಒಳಪಟ್ಟರೆ ಶ್ರೇಯಸ್​, ಹಲವಾರು ತಿಂಗಳ ಕಾಲ ಕ್ರಿಕೆಟ್‌ಗೆ ದೂರ ಉಳಿಯಬೇಕಾಗುತ್ತದೆ. ಇದು ಕ್ರಿಕೆಟ್​​​ ಭವಿಷ್ಯಕ್ಕೂ ಕುತ್ತು ತರಲಿದೆ. WTC ಫೈನಲ್ ಮತ್ತು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಡುವುದೂ ಅವರಿಗೆ ಕಷ್ಟಕರವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ NCA ಪುನರ್​​ವಸತಿ ಕೇಂದ್ರದಲ್ಲೇ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಆ ಮೂಲಕ ಶೀಘ್ರವೇ ಚೇತರಿಕೆ ಕಾಣಲು ಸಜ್ಜಾಗಿದ್ದಾರೆ. ಶೀಘ್ರ ಚೇತರಿಕೆ ಕಂಡರೆ ಐಪಿಎಲ್​​​​​ಗೂ ಮರಳುವ ಸಾಧ್ಯತೆ ಎಂದು ವರದಿಯಾಗಿದೆ.

ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡವು, ಏಪ್ರಿಲ್​ 1ರಂದು ಪಂಜಾಬ್​​ ಕಿಂಗ್ಸ್​ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಅಯ್ಯರ್​ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ನಿತೀಶ್​ ರಾಣಾಗೆ ದೊಡ್ಡ ಸವಾಲು ಎದುರಾಗಿದ್ದು, ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದು ಕುತೂಹಲ ಸೃಷ್ಟಿಸಿದೆ.