ಕನ್ನಡ ಸುದ್ದಿ  /  Sports  /  Shubman Gill And Mohammed Siraj Nominated For Icc Player Of The Month

ICC Player of the Month: ಐಸಿಸಿ ಪ್ರಶಸ್ತಿಗೆ ಶುಬ್ಮನ್ ಸೇರಿ ಭಾರತದ ಇಬ್ಬರು ಆಟಗಾರರು ನಾಮನಿರ್ದೇಶನ; ನೀವೂ ವೋಟ್ ಮಾಡಬಹುದು

ವಿಶೇಷವೆಂದರೆ, ಜನವರಿ-ಫೆಬ್ರವರಿ ತಿಂಗಳಿನಲ್ಲಿ, ಗಿಲ್ ಏಕದಿನ ದ್ವಿಶತಕ ಸಿಡಿಸಿದರು ಮತ್ತು ಟಿ20 ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದರು.

ಶುಬ್ಮನ್ ಗಿಲ್
ಶುಬ್ಮನ್ ಗಿಲ್ (AFP)

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು, 2023ರ ಮೊದಲ ತಿಂಗಳು ಜನವರಿಯ ಪ್ಲೇಯರ್‌ ಆಫ್‌ ದಿ ಮಂತ್‌(Player of the Month) ಪ್ರಶಸ್ತಿಗೆ ನಾಮನಿರ್ದೇಶಿತ ಆಟಗಾರರ ಹೆಸರನ್ನು ಮಂಗಳವಾರ ಪ್ರಕಟಿಸಿದೆ. ಅಂತಿಮ ಮೂವರು ಆಟಗಾರರ ಪಟ್ಟಿಯಲ್ಲಿ ಭಾರತೀಯರು ಮೇಲುಗೈ ಸಾಧಿಸಿದ್ದು, ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ.

ಕಳೆದ ಕೆಲವು ಪಂದ್ಯಗಳಲ್ಲಿ ಶತಕಗಳು ಹಾಗೂ ದ್ವಿಶತಕದೊಂದಿಗೆ ಸ್ಫೋಟಕ ಇನ್ನಿಂಗ್ಸ್‌ ಆಡುತ್ತಿರುವ ಯುವ ಬ್ಯಾಟರ್‌ ಶುಬ್ಮನ್ ಗಿಲ್, ನಿರೀಕ್ಷೆಯಂತೆಯೇ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್‌ ವನ್‌ ಸ್ಥಾನಕ್ಕೇರಿರುವ ಮೊಹಮ್ಮದ್ ಸಿರಾಜ್ ಕೂಡಾ ಎರಡನೇ ಭಾರತೀಯನಾಗಿ ಸ್ಥಾನ ಪಡೆದಿದ್ದಾರೆ. ಮೂರನೆಯ ಆಟಗಾರ ನ್ಯೂಜಿಲೆಂಡ್‌ನ ಡಿವೊನ್ ಕಾನ್ವೇ. ಐಸಿಸಿಯು ತನ್ನ ವೆಬ್‌ಸೈಟ್‌ನಲ್ಲಿ ಈ ಮೂವರು ಕ್ರಿಕೆಟಿಗರಿಗೆ ಮತ ಹಾಕಲು ಲಿಂಕ್ ಅನ್ನು ಹಂಚಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ಆಡಿದ ಎಲ್ಲಾ ಫಾರ್ಮ್ಯಾಟ್‌ಗಳಲ್ಲೂ, ಗಿಲ್‌ ರನ್‌ ಮಳೆಯನ್ನೇ ಹರಿಸಿದ್ದಾರೆ. ತಮ್ಮ ಚಾಣಾಕ್ಷ ಬ್ಯಾಟಿಂಗ್‌ ಶೈಲಿಯಿಂದ ಹಲವು ದಿಗ್ಗಜರ ಮನಗೆದ್ದಿದ್ದಾರೆ. 2023ರ ಜನವರಿ ತಿಂಗಳಲ್ಲಿ, ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭರ್ಜರಿ 69.00 ಸರಾಸರಿಯಲ್ಲಿ 207 ರನ್ ಗಳಿಸುವ ಮೂಲಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದರು. ಅದರೆ ಬೆನ್ನಲ್ಲೇ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮತ್ತದೇ ಅಮೋಘ ಫಾರ್ಮ್‌ ಮುಂದುವರೆಸಿದ್ದರು. ಅದರಲ್ಲಿ ಏಕದಿನ ಸರಾಸರಿಯಂತೂ ಅತ್ಯದ್ಭುತ. ಮೂರು ಪಂದ್ಯಗಳಲ್ಲಿ 180.00ರ ಸರಾಸರಿಯಲ್ಲಿ ಭರ್ಜರಿ 360 ರನ್‌ಗಳನ್ನು ಸಿಡಿಸಿದ್ದರು. ಅದಕ್ಕೆ ತಕ್ಕನಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.

ಟಿ20ಯಲ್ಲೂ ತಮ್ಮ ಶ್ರೇಷ್ಠ ಫಾರ್ಮ್ ಅನ್ನು ಮುಂದುವರೆಸಿದ ಗಿಲ್, ಮೂರು ಪಂದ್ಯಗಳಲ್ಲಿ 72.00 ಸರಾಸರಿಯಲ್ಲಿ 144 ರನ್ ಗಳಿಸುವ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ವಿಶೇಷವೆಂದರೆ ಜನವರಿ-ಫೆಬ್ರವರಿ ತಿಂಗಳಿನಲ್ಲಿ, ಗಿಲ್ ಏಕದಿನ ದ್ವಿಶತಕವನ್ನು ಸಿಡಿಸಿದರು ಮತ್ತು ಟಿ20 ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದರು.

ಅತ್ತ ಪ್ರಸ್ತುತ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದ ನಂಬರ್‌ 1 ಬೌಲರ್ ಆಗಿ ಹೊರಹೊಮ್ಮಿರುವ ಸಿರಾಜ್, ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಮೂರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದು ಮಿಂಚಿದ್ದರು. ನಂತರ ನ್ಯೂಜಿಲೆಂಡ್ ವಿರುದ್ಧದ ಎರಡು ಏಕದಿನ ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಅವರು ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ಮುಂದುವರೆಸಿದರು. ಹೀಗಾಗಿ ಈ ಪಟ್ಟಿಯಲ್ಲಿ ಸಿರಾಜ್‌ ಸ್ಥಾನ ಪಡೆದಿದ್ದಾರೆ.

ಮತ್ತೊಂದೆಡೆ ನ್ಯೂಜಿಲೆಂಡ್ ಬ್ಯಾಟರ್ ಕಾನ್ವೇ, ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್‌ ಪರ ಉತ್ತಮವಾಗಿ ಆಟವಾಡಿದ್ದರು. ಮೂರು ಪಂದ್ಯಗಳಲ್ಲಿ 51.67 ಸರಾಸರಿಯಲ್ಲಿ 155 ರನ್ ಗಳಿಸಿದ್ದರು. ಅವರು ಜನವರಿಯಲ್ಲಿ ಮೂರು ಶತಕ ಮತ್ತು ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಮತ್ತೊಂದೆಡೆ ವನಿತೆಯರ ವಿಭಾಗದಲ್ಲೂ ಪ್ಲೇಯರ್ ಆಫ್‌ ದಿ ಮಂತ್‌ ಪ್ರಶಸ್ತಿಗೆ ನಾಮನಿರ್ದೇಶಿತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದರಲ್ಲಿ ಆಸ್ಟ್ರೇಲಿಯನ್ನರ ಪ್ರಾಬಲ್ಯ ಮೆರೆದಿದ್ದು, ಭಾರತದ ಯಾವೊಬ್ಬ ಆಟಗಾರ್ತಿಯರೂ ಸ್ಥಾನ ಪಡೆದಿಲ್ಲ. ಆಸೀಸ್‌ನ ಫೋಬೆ ಲಿಚ್ಫೀಲ್ಡ್ ಮತ್ತು ಬೆತ್ ಮೂನಿ ಸ್ಥಾನ ಪಡೆದರೆ, ಇಂಗ್ಲೆಂಡ್‌ನ ಗ್ರೇಸ್ ಸ್ಕ್ರಿವೆನ್ಸ್ ಕೂಡಾ ಪ್ರಶಸ್ತಿಗೆ ಸ್ಪರ್ಧೆಯಲ್ಲಿದ್ದಾರೆ.