ಕನ್ನಡ ಸುದ್ದಿ  /  Sports  /  Shubman Gill Named Icc Player Of January

ICC Player of January: ದ್ವಿಶತಕವೀರ ಶುಬ್ಮನ್ ಗಿಲ್ ಜನವರಿ ತಿಂಗಳ ಐಸಿಸಿ ಪುರುಷರ ಆಟಗಾರ

ಜನವರಿ ತಿಂಗಳ ಆಟಗಾರನನ್ನು ಹೆಸರಿಸಲು ಒಟ್ಟು ಮೂವರು ಆಟಗಾರರನ್ನು ಐಸಿಸಿ ನಾಮನಿರ್ದೇಶನ ಮಾಡಿತ್ತು. ಜಾಗತಿಕ ಮತಗಳಲ್ಲಿ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಮತ್ತು ಭಾರತದ ಅಗ್ರ ಶ್ರೇಯಾಂಕದ ಬೌಲರ್‌ ಮೊಹಮ್ಮದ್ ಸಿರಾಜ್ ಅವರನ್ನು ಸೋಲಿಸಿ ಗಿಲ್ ತನ್ನ ಮೊದಲ ಐಸಿಸಿ ಪುರುಷರ ತಿಂಗಳ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಶುಬ್ಮನ್ ಗಿಲ್ ತಮ್ಮ ಶತಕವನ್ನು ಸಂಭ್ರಮಿಸಿದರು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಶುಬ್ಮನ್ ಗಿಲ್ ತಮ್ಮ ಶತಕವನ್ನು ಸಂಭ್ರಮಿಸಿದರು. (PTI)

ಭಾರತದ ಯುವ ಬ್ಯಾಟರ್ ಶುಬ್ಮನ್ ಗಿಲ್, ಏಕದಿನ ಮಾದರಿಯಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಜನವರಿ ತಿಂಗಳ ಐಸಿಸಿ ಪುರುಷರ ತಿಂಗಳ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇದೇ ವೇಳೆ ಇಂಗ್ಲೆಂಡ್ ಅಂಡರ್‌ 19 ತಂಡದ ನಾಯಕಿ ಗ್ರೇಸ್ ಸ್ಕ್ರಿವೆನ್ಸ್ ವನಿತೆಯರ ವಿಭಾಗದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಗಿಲ್ ಜನವರಿ ತಿಂಗಳಲ್ಲಿ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಏಕದಿನ ಮಾದರಿಯಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ದೊಡ್ಡ ಮೊತ್ತ ಗಳಿಸಿದ್ದರು. ಜನವರಿ ತಿಂಗಳಲ್ಲಿ ಮೂರು ಶತಕ ಸೇರಿದಂತೆ ಬರೋಬ್ಬರಿ 567 ರನ್‌ ಗಳಿಸುವ ಮೂಲಕ, 23 ವರ್ಷದ ಗಿಲ್ ಆಕರ್ಷಕ ಮತ್ತು ಆಕ್ರಮಣಕಾರಿ ಆಟವಾಡಿದ್ದರು. ಆ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದರು.

ಹೈದರಾಬಾದ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಅಮೋಘ ದ್ವಿಶತಕ ಸಿಡಿಸಿದ್ದ ಗಿಲ್‌, ಭಾರತದ ಗೆಲುವಿನ ರೂವಾರಿಯಾಗಿದ್ದರು. 149 ಎಸೆತಗಳಲ್ಲಿ 28 ಬೌಂಡರಿಗಳೊಂದಿಗೆ ಅಜೇಯ 208 ರನ್‌ ಗಳಿಸಿದರು. ಇದು ಅವರನ್ನು ಏಕದಿನ ಸ್ವರೂಪದಲ್ಲಿ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿಸಿತು.

ಈ ನಡುವೆ ಎರಡು ಶತಕಗಳು ಸಿಡಿದವು. ಶ್ರೀಲಂಕಾ ವಿರುದ್ಧದ ವಿಜಯದಲ್ಲಿ 116, ಮತ್ತು ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ 112 ರನ್ ಸಿಡಿಸಿದರು.

ಜನವರಿ ತಿಂಗಳ ಆಟಗಾರ ಪ್ರಶಸ್ತಿಗೆ ಒಟ್ಟು ಮೂವರು ಆಟಗಾರರನ್ನು ಐಸಿಸಿ ನಾಮನಿರ್ದೇಶನ ಮಾಡಿತ್ತು. ಜಾಗತಿಕ ಮತಗಳಲ್ಲಿ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಮತ್ತು ಭಾರತದ ಅಗ್ರ ಶ್ರೇಯಾಂಕದ ಬೌಲರ್‌ ಮೊಹಮ್ಮದ್ ಸಿರಾಜ್ ಅವರನ್ನು ಸೋಲಿಸಿ ಗಿಲ್ ತನ್ನ ಮೊದಲ ಐಸಿಸಿ ಪುರುಷರ ತಿಂಗಳ ಆಟಗಾರನಾಗಿ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ, 2022ರ ಅಕ್ಟೋಬರ್‌ ತಿಂಗಳಲ್ಲಿ ವಿರಾಟ್ ಕೊಹ್ಲಿ ಬಳಿಕ, ಗಿಲ್‌ ಈ ಪ್ರಶಸ್ತಿ ಗೆದ್ದಿದ್ದಾರೆ.

“ಜನವರಿಯು ನನಗೆ ವಿಶೇಷವಾದ ತಿಂಗಳು. ಅಲ್ಲದೆ ಈ ಪ್ರಶಸ್ತಿಯನ್ನು ಗೆದ್ದಿರುವುದು ಇದನ್ನು ಹೆಚ್ಚು ಸ್ಮರಣೀಯವಾಗಿಸುತ್ತದೆ. ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಗುರುತಿಸಿಕೊಳ್ಳುವುದು ಯಾವಾಗಲೂ ಖುಷಿ ಕೊಡುತ್ತದೆ. ಇದರಿಂದ ನನಗೆ ಇನ್ನೂ ಹೆಚ್ಚು ವಿಶ್ವಾಸ ಬಂದಿದೆ. ತವರು ನೆಲದಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ಗೆ ಸಿದ್ಧವಾಗುತ್ತಿರುವುದರಿಂದ ಇದು ಹೆಚ್ಚು ಆತ್ಮವಿಶ್ವಾಸ ತುಂಬಿದೆ” ಎಂದು ಗಿಲ್ ಐಸಿಸಿಗೆ ತಿಳಿಸಿದ್ದಾರೆ.

ಮತ್ತೊಂದೆಡೆ ಚೊಚ್ಚಲ ಐಸಿಸಿ ಅಂಡರ್‌ 19 ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ತನ್ನ ಆಲ್‌ರೌಂಡ್ ಪ್ರದರ್ಶನ ನೀಡಿದ ವನಿತೆಯರ ವಿಭಾಗದಲ್ಲಿ ಇಂಗ್ಲೆಂಡ್‌ನ ಸ್ಕ್ರಿವೆನ್ಸ್ ಈ ಪ್ರಶಸ್ತಿಯನ್ನು ಪಡೆದರು. ಇಂಗ್ಲೆಂಡ್ ನಾಯಕಿ ತಮ್ಮ ನಾಯಕತ್ವದಲ್ಲಿ ತಮ್ಮ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಆದರೆ, ಅಂತಿಮವಾಗಿ ಭಾರತದ ವಿರುದ್ಧ ಇಂಗ್ಲೆಂಡ್ ಸೋತಿತು.