ಸೋಲಿನೊಂದಿಗೆ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಅಭಿಯಾನ ಮುಗಿಸಿದ ಕಿಡಂಬಿ ಶ್ರೀಕಾಂತ್
ವಿಶ್ವದ ಮಾಜಿ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್, ಮಲೇಷ್ಯಾ ಮಾಸ್ಟರ್ಸ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ. 36 ನಿಮಿಷಗಳಲ್ಲಿ ಮುಗಿದ ಪಂದ್ಯದಲ್ಲಿ 11-21, 9-21 ಅಂಕಗಳಿಂದ ಚೀನಾದ ಆಟಗಾರ ಲಿ ಶಿ ಫೆಂಗ್ ವಿರುದ್ಧ ಸೋತರು.

ಅನುಭವಿ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ (Kidambi Srikanth) ಅವರ ದೀರ್ಘ ಪ್ರಶಸ್ತಿ ಬರ ಮತ್ತೆ ಮುಂದುವರೆದಿದೆ. ಮಲೇಷ್ಯಾ ಮಾಸ್ಟರ್ಸ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ನನಸಾಗಲಿಲ್ಲ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಆಟಗಾರ, ರನ್ನರ್ ಅಪ್ ಸ್ಥಾನದೊಂದಿಗೆ ತಮ್ಮ ಅಭಿಯಾನವನ್ನು ಮುಗಿಸಿದರು. ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ವಿಶ್ವದ 4ನೇ ಶ್ರೇಯಾಂಕಿತ ಆಟಗಾರ ಲಿ ಶಿ ಫೆಂಗ್ ವಿರುದ್ಧ ಭಾರತೀಯ ತಾರೆ ನೇರ ಸೆಟ್‌ಗಳಿಂದ ಸೋತರು.
ಗಾಯಗಳಿಂದಾಗಿ ಹೆಚ್ಚು ಆಡಲು ಸಾಧ್ಯವಾಗದೆ ಹಾಗೂ ಅವಕಾಶಗಳನ್ನು ಕಳೆದುಕೊಂಡಿದ್ದ 32 ವರ್ಷದ ಆಟಗಾರ, ಕಳೆದ ಆರು ವರ್ಷಗಳಲ್ಲಿ ಇದೇ ಮೊದಲ ಬಿಡಬ್ಲ್ಯೂಎಫ್ ವಿಶ್ವ ಟೂರ್ ಫೈನಲ್ ತಲುಪಿದ್ದರು. ಅರ್ಹತಾ ಪಂದ್ಯಗಳಿಂದ ಆರಂಭಿಸಿ ಬಿಡಬ್ಲ್ಯೂಎಫ್ 500 ಪಂದ್ಯಾವಳಿಯ ಪ್ರಶಸ್ತಿ ಹೋರಾಟದವರೆಗೆ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಪ್ರಶಸ್ತಿ ಗೆಲುವಿನ ನಿರೀಕ್ಷೆ ಇತ್ತು. ಆದರೆ, ವಿಶ್ವದ ಮಾಜಿ ನಂ.1 ಆಟಗಾರನು ಲಿ ಶಿ ಫೆಂಗ್ ಅವರ ಉತ್ತಮ ಡಿಫೆನ್ಸ್ ವಿರುದ್ಧ ಮಂಡಿಯೂರಿದರು. ಅಂತಿಮವಾಗಿ 36 ನಿಮಿಷಗಳಲ್ಲಿ ಅಂತ್ಯವಾದ ಪಂದ್ಯದಲ್ಲಿ 11-21, 9-21 ಅಂತರದಿಂದ ಸೋತರು.
"ಈ ವಾರ ನನಗೆ ತುಂಬಾ ಉತ್ತಮವಾಗಿತ್ತು. ಇದು ನನ್ನ ಮೂರನೇ ಪಂದ್ಯಾವಳಿ. ಮೊದಲ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದೆ. ಆದರೆ ಆ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಇಲ್ಲಿಯವರೆಗೆ ಆಡಿದ್ದರ ಬಗ್ಗೆ ತುಂಬಾ ಸಂತೋಷವಾಗಿದೆ. ನಾನು ಬಯಸಿದ ರೀತಿಯಲ್ಲಿ ಆಡಿಲ್ಲ. ಆದರೆ ಎದುರಾಳಿ ಆಟಗಾರ ಉತ್ತಮವಾಗಿ ಆಡಿದರು ಎಂದು ನಾನು ಭಾವಿಸುತ್ತೇನೆ ಎಂದು ಶ್ರೀಕಾಂತ್ ಹೇಳಿದ್ದಾರೆ.
ಸೆಮಿಫೈನಲ್‌ನಲ್ಲಿ ಗೆಲುವು
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ಜಪಾನ್‌ನ ಯೂಶಿ ಟನಾಕಾ ಅವರನ್ನು ನೇರ ಗೇಮ್‌ಗಳಿಂದ ಸೋಲಿಸುವ ಮೂಲಕ, ಅವರು ಆರು ವರ್ಷಗಳ ನಂತರ ಬಿಡಬ್ಲ್ಯೂಎಫ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಫೈನಲ್‌ಗೆ ಪ್ರವೇಶಿಸಿದರು. ಶ್ರೀಕಾಂತ್ ಕಾಮನ್ವೆಲ್ತ್ ಕ್ರೀಡಾಕೂಟದ ತಂಡ ಈವೆಂಟ್‌ನಲ್ಲಿ ಭಾರತವನ್ನು ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕಕ್ಕೆ ಮುನ್ನಡೆಸುವ ಮೂಲಕ ಗಮನ ಸೆಳೆದಿದ್ದರು.
2019ರ ಇಂಡಿಯಾ ಓಪನ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ಶ್ರೀಕಾಂತ್, ಬಿಡಬ್ಲ್ಯೂಎಫ್ ವಿಶ್ವ ಟೂರ್ನಮೆಂಟ್‌ನಲ್ಲಿ ಆಡಿದ ಮೊದಲ ಫೈನಲ್ ಪಂದ್ಯ ಇದಾಗಿದೆ. ಅವರು ಕೊನೆಯ ಬಾರಿಗೆ 2017ರಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದರು. ವಿಶ್ವದ ಮಾಜಿ ನಂ.1 ಆಟಗಾರ ಶ್ರೀಕಾಂತ್, ಕಳೆದ ಕೆಲವು ಋತುಗಳಲ್ಲಿ ಫಾರ್ಮ್ ಮತ್ತು ಫಿಟ್ನೆಸ್ ಕಾರಣದಿಂದಾಗಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ.