ಕನ್ನಡ ಸುದ್ದಿ  /  Sports  /  Simon Doull And Aamer Sohail Argue On Live Tv Over Strike Rate Of Babar Azam

Watch: ಲೈವ್ ಕಾಮೆಂಟರಿ ವೇಳೆ ಡೌಲ್-ಸೊಹೈಲ್ ನಡುವೆ ವಾದ; ಬಾಬರ್‌ ಸ್ಟ್ರೈಕ್ ರೇಟ್, ಕ್ರಮಾಂಕ ಕುರಿತು ಭಿನ್ನಾಭಿಪ್ರಾಯ

ಬಾಬರ್‌ ಅಜಾಮ್‌ ಪಾಕಿಸ್ತಾನದ ಪರ ಇನ್ನಿಂಗ್ಸ್‌ ಆರಂಭಿಸಬೇಕೇ ಅಥವಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಬೇಕೇ ಎಂಬ ಚರ್ಚೆ ಆರಂಭದಿಂದಲೂ ಇದೆ. ಈ ಬಗ್ಗೆ ಲೈವ್ ಪಂದ್ಯದ‌ ವೇಳೆ ಮತ್ತೊಮ್ಮೆ ಚರ್ಚೆ ನಡೆದಿದೆ.

‌ವೀಕ್ಷಕ ವಿವರಣೆಕಾರರು, ಬಾಬರ್ ಅಜಾಮ್
‌ವೀಕ್ಷಕ ವಿವರಣೆಕಾರರು, ಬಾಬರ್ ಅಜಾಮ್

ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್ ಅಜಮ್ ಅವರನ್ನು ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತಿದೆ. ಆದರೆ ಪಾಕಿಸ್ತಾನದ ಟಿ20 ತಂಡದಲ್ಲಿ ಅವರ ಸ್ಥಾನದ ಕುರಿತ ಚರ್ಚೆಯ ಕೆಲ ಸಮಯದಿಂದ ಮುನ್ನೆಲೆಗೆ ಬಂದಿದೆ. ತಂಡದಲ್ಲಿ ಬಾಬರ್ ಅವರ ಸ್ಥಾನವನ್ನು ವಿರಳವಾಗಿ ಪ್ರಶ್ನಿಸಲಾಗಿದ್ದರೂ, ಅವರು ಪಾಕಿಸ್ತಾನದ ಪರ ಇನ್ನಿಂಗ್ಸ್‌ ಆರಂಭಿಸಬೇಕೇ ಅಥವಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಬೇಕೇ ಎಂಬ ಚರ್ಚೆ ಆರಂಭದಿಂದಲೂ ಇದೆ.

ಶಾರ್ಜಾದಲ್ಲಿ ನಡೆದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನೆ 2ನೇ ಟಿ20 ಪಂದ್ಯದ ಸಮಯದಲ್ಲಿ ಈ ಚರ್ಚೆ ಮತ್ತೆ ಹುಟ್ಟಿಕೊಂಡಿತು. ಅಫ್ಘಾನ್ ವಿರುದ್ಧದ ಸರಣಿಯಲ್ಲಿ ಬಾಬರ್ ಮತ್ತು ಅವರ ನಿಯಮಿತ ಆರಂಭಿಕ ಪಾಲುದಾರ ಮೊಹಮ್ಮದ್ ರಿಜ್ವಾನ್ ಆಡುತ್ತಿಲ್ಲ. ಆ ಸ್ಥಾನವನ್ನು ಸೈಮ್ ಅಯೂಬ್ ಮತ್ತು ಮೊಹಮ್ಮದ್ ಹ್ಯಾರಿಸ್ ತುಂಬುತ್ತಿದ್ದಾರೆ. ಪಂದ್ಯದಲ್ಲಿ ವೀಕ್ಷಕ ವಿವರಣೆ ಮಾಡುತ್ತಿದ್ದ ನ್ಯೂಜಿಲೆಂಡ್‌ನ ಮಾಜಿ ವೇಗಿ ಸೈಮನ್ ಡೌಲ್ ಅವರು, ಪಾಕಿಸ್ತಾನವು ಇಬ್ಬರು ಆಟಗಾರರನ್ನು ತಮ್ಮ ಆರಂಭಿಕ ಜೋಡಿಯಾಗಿ ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇದೇ ವೇಳೆ ಅವರೊಂದಿಗಿದ್ದ ಮತ್ತೋರ್ವ ಕಾಮೆಂಟೇಟರ್‌ ಅಮೀರ್ ಸೊಹೈಲ್ ಅವರು ಆರಂಭಿಕ ಆಟಗಾರನಾಗಿ ಬಾಬರ್ ಮುಂದುವರೆಯಬೇಕು ಎಂಬ ಅಭಿಪ್ರಾಯ ತಿಳಿಸಿದರು. ಅವರ ನಡುವೆ ಸಂಭಾಷಣೆ ಹೇಗೆ ನಡೆಯಿತು ಎಂಬುದು ಇಲ್ಲಿದೆ…

ಡೌಲ್: ಬಾಬರ್ ಅಜಮ್ ವಿಶ್ವದ ಅತ್ಯುತ್ತಮ ನಂ. 3 ಬ್ಯಾಟ್ಸ್‌ಮನ್. ಅವರು ಪಾಕಿಸ್ತಾನದ ಪರ ಇನ್ನಿಂಗ್ಸ್ ಆರಂಭಿಸಬಾರದು. ಟಿ20 ಪಂದ್ಯಗಳಲ್ಲಿ ರಿಜ್ವಾನ್ ಅವರೊಂದಿಗೆ ಸೈಮ್ ಮತ್ತು ಹ್ಯಾರಿಸ್ ಆರಂಭಿಕರಾಗಿ ಕಣಕ್ಕಿಳಿಯಬೇಕು.

ಸೊಹೈಲ್: ಟಿ20 ತಂಡಗಳನ್ನು ಅವರ ಸರಾಸರಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಸ್ಟ್ರೈಕ್ ರೇಟ್‌ಗಳ ಆಧಾರದಲ್ಲಿ ಅಲ್ಲ. ಸ್ಟ್ರೈಕ್ ರೇಟ್‌ಗಿಂತ ಸರಾಸರಿ ತುಂಬಾ ಮುಖ್ಯ. ನಾನು ಸ್ಟ್ರೈಕ್ ರೇಟ್ ಬಗ್ಗೆ ಗಮನ ಕೊಡುವುದಿಲ್ಲ. ನಾನು ಆಟಗಾರನ ಸರಾಸರಿಯನ್ನು ನೋಡುತ್ತೇನೆ. ನೀವು ಟಿ20ಯಲ್ಲಿ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ಅತ್ಯುತ್ತಮ ಆಟಗಾರರ ಬಗ್ಗೆ ನೋಡಿದರೆ, ಅವರ ಸ್ಟ್ರೈಕ್-ರೇಟ್ ಎಷ್ಟು? 135ರಿಂದ 137 ಅಲ್ವೇ?.

ಡೌಲ್: 158

ಸೊಹೈಲ್: ಯಾರದ್ದು?

ಡೌಲ್: ಕ್ರಿಸ್ ಗೇಲ್. ಎಬಿ ಡಿವಿಲಿಯರ್ಸ್ ಸ್ಟ್ರೈಕ್ ರೇಟ್ 145.

ಸೊಹೈಲ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 137.

ಡೌಲ್: ಬಾಬರ್ ಸ್ಟ್ರೈಕ್‌ ರೇಟ್‌ ಎಷ್ಟು?

ಆ ಪ್ರಶ್ನೆಗೆ ಸೊಹೈಲ್ ಸ್ಪಷ್ಟವಾಗಿ ಪ್ರತಿಕ್ರಿಯಿಸಲಿಲ್ಲ. ಎಬಿಡಿ 78 ಟಿ20 ಪಂದ್ಯಗಳಲ್ಲಿ 135.16 ಸ್ಟ್ರೈಕ್ ರೇಟ್ ಹೊಂದಿದ್ದರು. ಆದಾಗ್ಯೂ, ಅವರು 340 ಪಂದ್ಯಗಳ ಟಿ20 ವೃತ್ತಿಜೀವನದಲ್ಲಿ 150.13 ಸ್ಟ್ರೈಕ್ ರೇಟ್ ಹೊಂದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮತ್ತೊಂದೆಡೆ, ಗೇಲ್ ಅಂತಾರಾಷ್ಟ್ರೀಯ ಟಿ20ಯ 79 ಪಂದ್ಯಗಳಲ್ಲಿ 137.50 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಟಿ20 ವೃತ್ತಿಜೀವನದಲ್ಲಿ ಅವರ ಒಟ್ಟಾರೆ ಸ್ಟ್ರೈಕ್ ರೇಟ್ 144.75. ಇದು 455 ಇನ್ನಿಂಗ್ಸ್‌ಗಳಿಂದ ಬಂದಿದೆ.

ಇದೇ ವೇಳೆ ಬಾಬರ್ 94 ಟಿ20 ಇನ್ನಿಂಗ್ಸ್‌ಗಳಲ್ಲಿ 127.80 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಒಟ್ಟಾರೆಯಾಗಿ, ಅವರು 246 ಟಿ20 ಇನ್ನಿಂಗ್ಸ್‌ಗಳಲ್ಲಿ 128.46 ಸ್ಟ್ರೈಕ್ ರೇಟ್ ಹೊಂದಿದ್ದಾರೆ.