ಕನ್ನಡ ಸುದ್ದಿ  /  Sports  /  Sourav Ganguly Says Reason Why Team India Has Not Won The Icc Trophy From 2013

Sourav Ganguly: ಭಾರತ ICC ಟ್ರೋಫಿ ಯಾಕೆ ಗೆಲ್ಲುತ್ತಿಲ್ಲ ಎಂಬುದಕ್ಕೆ ಉತ್ತರ ಕೊಟ್ಟ ಗಂಗೂಲಿ!

ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ (Sourav Ganguly), ಟೀಮ್​ ಇಂಡಿಯಾ ಐಸಿಸಿ ಟ್ರೋಫಿ ಯಾಕೆ ಗೆಲ್ಲುತ್ತಿಲ್ಲ ಎಂಬುದಕ್ಕೆ ಉತ್ತರ ನೀಡಿದ್ದಾರೆ. ಐಸಿಸಿ ಟೂರ್ನಮೆಂಟ್​ಗಳಲ್ಲಿ ಟೀಮ್​ ಇಂಡಿಯಾ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದಿರುವ ಮಾಜಿ ನಾಯಕ, ಟ್ರೋಫಿಯನ್ನು ಭಾರತ ಹೇಗೆ ಗೆಲ್ಲಲಿದೆ ಎಂಬುದನ್ನೂ ಹೇಳಿದ್ದಾರೆ.

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ (Twitter)

ಟೀಮ್​ ಇಂಡಿಯಾ (Team India) ಕೊನೆಯದಾಗಿ 2013ರಲ್ಲಿ ಎಂ.ಎಸ್​ ಧೋನಿ (MS Dhoni) ನಾಯಕತ್ವದ ಅಡಿಯಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆದ್ದಿತ್ತು. ಆ ಬಳಿಕ ಅಂದರೆ 10 ವರ್ಷಗಳಿಂದ ಭಾರತ ಐಸಿಸಿ ಟ್ರೋಫಿ ಜಯಿಸಿಲ್ಲ. ದ್ವಿಪಕ್ಷೀಯ ಸರಣಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ರೋಹಿತ್​ ಪಡೆ, ಐಸಿಸಿ ಟೂರ್ನಿಗಳಲ್ಲಿ ಪದೇ ಪದೇ ಎಡವುತ್ತಲೇ ಬಂದಿದೆ. ಫೈನಲ್​​​, ಸೆಮಿಫೈನಲ್ ಪಂದ್ಯ​​​ಗಳಲ್ಲೇ ಹೆಚ್ಚು ಮುಗ್ಗರಿಸಿದೆ. ಇದೀಗ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ (Sourav Ganguly), ಟೀಮ್​ ಇಂಡಿಯಾ ಐಸಿಸಿ ಟ್ರೋಫಿ ಯಾಕೆ ಗೆಲ್ಲುತ್ತಿಲ್ಲ ಎಂಬುದಕ್ಕೆ ಉತ್ತರ ನೀಡಿದ್ದಾರೆ.

ಆಕ್ರಮಣಕಾರಿ ಆಟವಾಡಬೇಕು

ಐಸಿಸಿ ಟೂರ್ನಮೆಂಟ್​ಗಳಲ್ಲಿ ಟೀಮ್​ ಇಂಡಿಯಾ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದಿರುವ ಮಾಜಿ ನಾಯಕ, ಟ್ರೋಫಿಯನ್ನು ಭಾರತ ಹೇಗೆ ಗೆಲ್ಲಬಹುದು ಎಂಬುದನ್ನೂ ಹೇಳಿದ್ದಾರೆ. ಗಂಗೂಲಿ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದು, ಭಾರತ ತಂಡದಲ್ಲಿ ಪ್ರತಿಭೆಗಳ ಕೊರತೆ ಇಲ್ಲ. ಆದರೆ, ರೋಹಿತ್​​​​ ಪಡೆ ಹೇಗೆ ತಯಾರಿ ನಡೆಸುತ್ತದೆ ಎಂಬುದೇ ಸಮಸ್ಯೆ. ಭಾರತ ಆಕ್ರಮಣಕಾರಿ ಆಟವಾಡಬೇಕು. ಅದೇ ತಂಡದ ಗೆಲುವಿಗೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಯಾರಿಯೇ ಮುಖ್ಯವಾದದ್ದು

ಭಾರತದ ಬ್ಯಾಟಿಂಗ್​ ಡೆಪ್ತ್​ ತುಂಬಾ ಅದ್ಭುತವಾಗಿದೆ. ವೈಟ್​​ಬಾಲ್​ ಕ್ರಿಕೆಟ್​​ನಲ್ಲಿ 9ನೇ ಕ್ರಮಾಂಕದವರೆಗೂ ಬ್ಯಾಟ್​ ಬೀಸುವ ಆಟಗಾರರು ಇದ್ದಾರೆ. ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ ಕ್ರಮವಾಗಿ 6, 7ನೇ ಕ್ರಮಾಂಕದಲ್ಲಿ ಧೂಳೆಬ್ಬಿಸುತ್ತಾರೆ. ಆದರೆ ಒತ್ತಡಕ್ಕೆ ಸರಿ ಹೊಂದುವ ರೀತಿ ಅಭ್ಯಾಸ ನಡೆಸಬೇಕು. ಆಟದ ಬಗ್ಗೆ ಅರಿತು, ಅದಕ್ಕೆ ಬ್ಯಾಟಿಂಗ್​ ನಡೆಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ತಂಡದಲ್ಲೇನೋ ಪ್ರತಿಭಾವಂತರ ದಂಡೇ ಇದೆ. ಆದರೆ ಐಸಿಸಿ ಟೂರ್ನಿಗೆ ಹೇಗೆ ತಯಾರಿಯ ಯೋಜನೆಗಳಲ್ಲಿ ಸಮಸ್ಯೆ ಕಾಣುತ್ತಿದೆ. ಹಾಗಾಗಿ ಹೇಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬುದೇ ಮುಖ್ಯ. ಮುಂದಿನ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲೂ ಭಾರತ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೂರು ಮಾದರಿಯ ಕ್ರಿಕೆಟ್​​ನಲ್ಲೂ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕೆಲವೊಮ್ಮೆ ಒಂದು ಫಾರ್ಮೆಟ್​​ನಿಂದ ಮತ್ತೊಂದು ಫಾರ್ಮೆಟ್​ಗೆ ಪರಿವರ್ತನೆಯಾದಾಗ, ಪ್ರದರ್ಶನ ಕಷ್ಟವಾಗಬಹುದು. ಆಟಗಾರ ಲಯದಲ್ಲಿದ್ದರೆ, ಯಾವುದೇ ಸಮಸ್ಯೆಗೆ ಸಿಲುಕದಂತೆ ನೋಡಿಕೊಳ್ಳಬೇಕು. ಆಟದಲ್ಲಿ ಲಯ ಬಹಳ ಮುಖ್ಯ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಗಂಗೂಲಿ ಅವರು ಐಪಿಎಲ್​ನ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದು, ಟೂರ್ನಿಗಾಗಿ ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದಾರೆ.

WTC ಫೈನಲ್​​ನಲ್ಲಿ ಟ್ರೋಫಿ ಬರ ನೀಗುತ್ತಾ?

ಸದ್ಯ ಈ ವರ್ಷ ಎರಡು ಐಸಿಸಿ ಟೂರ್ನಿಗಳು ನಡೆಯಲಿವೆ. ಐಪಿಎಲ್​ ಮುಗಿದ ಬೆನ್ನಲ್ಲೇ ಜೂನ್​ 7 ರಿಂದ ಇಂಗ್ಲೆಂಡ್​ನ ಓವಲ್​​ ಮೈದಾನದಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ (ICC Test Championship Final)​ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಈ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ. ಆದರೆ ಈ ಬಾರಿಯಾದರೂ ಫೈನಲ್​​ ಪಂದ್ಯದಲ್ಲಿ ಗೆದ್ದು 10 ವರ್ಷಗಳ ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್​ ಹಾಕುತ್ತಾ ಎಂಬುದು ಕುತೂಹಲ ಮೂಡಿಸಿದೆ.

ಅಕ್ಟೋಬರ್​​ನಲ್ಲಿ ಏಕದಿನ ವಿಶ್ವಕಪ್​

ಇದೇ ವರ್ಷ ಅಕ್ಟೋಬರ್​​ - ನವೆಂಬರ್​​ನಲ್ಲಿ ಏಕದಿನ ವಿಶ್ವಕಪ್ (ODI World Cup)​​​​​​ ಜರುಗಲಿದೆ. ಈ ಮೆಗಾ ಟೂರ್ನಿಗೆ ಭಾರತ ಆತಿಥ್ಯ ವಹಿಸಿರುವುದು ವಿಶೇಷ. ಹಾಗಾಗಿ ಭಾರತದ ಕ್ರಿಕೆಟ್​​ ಪ್ರಿಯರಲ್ಲಿ ಏಕದಿನ ವಿಶ್ವಕಪ್​ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಹೆಚ್ಚಾಗಿದೆ. ಎರಡೂ ಐಸಿಸಿ ಟೂರ್ನಿಗಳ ಪೈಕಿ ಒಂದರಲ್ಲಾದರೂ, ಟ್ರೊಫಿ ಗೆಲ್ಲುವ ಆತ್ಮ ವಿಶ್ವಾಸದಲ್ಲಿ ಟೀಮ್​ ಇಂಡಿಯಾ ಕೂಡ ಇದೆ. 2013ರಿಂದ ಈವರೆಗೂ ಟೀಮ್​ ಇಂಡಿಯಾ ಸೆಮಿಫೈನಲ್​​, ಫೈನಲ್​ನಲ್ಲಿಯೇ ಹೆಚ್ಚು ಸೋಲು ಕಂಡಿದೆ.