ಕನ್ನಡ ಸುದ್ದಿ  /  Sports  /  South Africa Innings In 1st T20i Against India

India vs South Africa T20I: ಹರಿಣಗಳ ವಿರುದ್ಧ ಬೌಲರ್‌ಗಳ ಪರಾಕ್ರಮ, ಆಘಾತದ ನಡುವೆಯೂ ಭಾರತಕ್ಕೆ ಸ್ಪರ್ಧಾತ್ಮಕ ಗುರಿ

ಆರಂಭದಲ್ಲಿ ಭಾರಿ ಆಘಾತ ಎದುರಿಸಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡ ಅಂತಿಮವಾಗಿ ಶತಕ ಗಳಿಸಿದೆ. 8 ವಿಕೆಟ್‌ ಕಳೆದುಕೊಂಡು 106 ರನ್‌ ಕಲೆ ಹಾಕಿರುವ ದಕ್ಷಿಣ ಆಫ್ರಿಕಾ ಭಾರತಕ್ಕೆ 107ರನ್‌ಗಳ ಗುರಿ ನೀಡಿದೆ.

ಟೀಂ ಇಂಡಿಯಾ ಬೌಲರ್‌ಗಳ ಪರಾಕ್ರಮ
ಟೀಂ ಇಂಡಿಯಾ ಬೌಲರ್‌ಗಳ ಪರಾಕ್ರಮ (BCCI)

ತಿರುವನಂತಪುರಂ: ಹರಿಣಗಳ ವಿರುದ್ಧದ ಮೊದಲ ಟಿ20 ಪಂದ್ಯದ ಮೊದಲಾರ್ಧ ಅಂತ್ಯಗೊಂಡಿದೆ. ಬೌಲಿಂಗ್‌ನಲ್ಲಿ ಮೋಡಿ ಮಾಡಿದ ಭಾರತೀಯ ಬೌಲರ್‌ಗಳು, ಹರಿಣಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದಾರೆ.

ಆರಂಭದಲ್ಲಿ ಭಾರಿ ಆಘಾತ ಎದುರಿಸಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡ ಅಂತಿಮವಾಗಿ ಶತಕ ಗಳಿಸಿದೆ. 8 ವಿಕೆಟ್‌ ಕಳೆದುಕೊಂಡು 106 ರನ್‌ ಕಲೆ ಹಾಕಿರುವ ದಕ್ಷಿಣ ಆಫ್ರಿಕಾ ಭಾರತಕ್ಕೆ 107ರನ್‌ಗಳ ಗುರಿ ನೀಡಿದೆ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿದ ರೋಹಿತ್‌ ಶರ್ಮಾ, ದಕ್ಷಿಣ ಆಫ್ರಿಕಾ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭದಿಂದಲೇ ಹರಿಣಗಳ ಪಾಳಯದ ವಿಕೆಟ್‌ಗಳು ಒಂದರ ಮೇಲೊಂದರಂತೆ ಉರುಳುತ್ತಾ ಸಾಗಿತು. ಎರಡು ಓವರ್‌ಗಳಲ್ಲಿ ತಂಡದ ಮೊತ್ತ 9 ಆಗುವಾಗಲೇ ಪ್ರಮುಖ 5 ವಿಕೆಟ್‌ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು.

ಆರಂಭಿಕ ಆಟಗಾರ ಹಾಗೂ ನಾಯಕ ಬವುಮಾ ಶೂನ್ಯಕ್ಕೆ ನಿರ್ಗಮಿಸಿದರೆ, ಕ್ವಿಂಟನ್‌ ಡಿಕಾಕ್‌ ಖಾತೆ ತೆರೆದು ನಿರ್ಗಮಿಸಿದರು. ಆ ಬಳಿಕ ರಿಲೀ ರೋಸೊವ್, ಡೇವಿಡ್‌ ಮಿಲ್ಲರ್‌ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಒಬ್ಬರ ಬೆನ್ನಲ್ಲೇ ಮತ್ತೊಬ್ಬರಂತೆ ಗೋಡನ್‌ ಡಕ್‌ಗೆ ಬಲಿಯಾದರು. ಈ ವೇಳೆ ಏಡನ್‌ ಮರ್ಕ್ರಾಮ್‌ ತುಸು ಪ್ರತಿರೋಧ ಒಡ್ಡಿ 25 ರನ್‌ ಕಲೆ ಹಾಕಿದರು. ಸಂಕಷ್ಟದಲ್ಲಿದ್ದ ತಂಡಕ್ಕೆ ತುಸು ಚೇತರಿಕೆ ತಂದರು

ಪರ್ನೆಲ್‌ ಕೂಡಾ ತಂಡಕ್ಕೆ ಅಮೂಲ್ಯ 24 ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು. ಡೆತ್‌ ಓವರ್‌ಗಳಲ್ಲಿ ಅಬ್ಬರಿಸಿದ ಕೇಶವ್ ಮಹಾರಾಜ್‌ ತಂಡದ ಪರ‌ 41 ರನ್‌ ಗಳಿಸಿದರು.

ಭಾರತದ ಪರ ದೀಪಕ್‌ ಚಹಾರ್‌ 2 ವಿಕೆಟ್‌ ಕಬಳಿಸಿದರೆ, ಹರಿಣಗಳನ್ನು ಬಿಡದೆ ಕಾಡಿದ ಅರ್ಷದೀಪ್‌ ಸಿಂಗ್‌ 3 ವಿಕೆಟ್‌ ಕಿತ್ತರು. ಹರ್ಷಲ್‌ ಪಟೇಲ್‌ 2 ಹಾಗೂ ಅಕ್ಸರ್‌ ಪಟೇಲ್ ಒಂದು ವಿಕೆಟ್‌ ಕಬಳಿಸಿದರು.‌

ಭಾರತ ಆಡುವ ಬಳಗ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ ಕೀಪರ್), ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್

ದಕ್ಷಿಣ ಆಫ್ರಿಕಾ ತಂಡ

ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್), ಟೆಂಬಾ ಬವುಮಾ (ನಾಯಕ), ರಿಲೀ ರೋಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ