ಒಲಿಂಪಿಕ್ಸ್ನಲ್ಲಿ 2 ಪದಕ ಗೆದ್ದ ಶಾರ್ಪ್ ಶೂಟರ್ ಮನು ಭಾಕರ್ ತರಬೇತಿಗೆ ಖರ್ಚಾಗಿದ್ದೆಷ್ಟು? ಮಾಹಿತಿ ಬಹಿರಂಗ
Manu Bhaker: ಪ್ಯಾರಿಸ್ ಒಲಿಂಪಿಕ್ಸ್-2024 ರಲ್ಲಿ ಎರಡು ಕಂಚಿನ ಪದಕ ಗೆದ್ದಿರುವ ಶಾರ್ಪ್ ಶೂಟರ್ ಮನು ಭಾಕರ್ ಅವರ ತರಬೇತಿಗೆ ಖರ್ಚು ಮಾಡಿರುವ ಮೊತ್ತವೆಷ್ಟು? ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಬಹಿರಂಗಪಡಿಸಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದಿರುವ ಶಾರ್ಪ್ ಶೂಟರ್ ಮನು ಭಾಕರ್ ಅವರು ದೇಶದ ಹಿರಿಮೆ ಹೆಚ್ಚಿಸಿದ್ದಾರೆ. ತಾನು ಸ್ಪರ್ಧಿಸಿದ್ದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದಲ್ಲಿ ಎರಡು ಕಂಚು ಗೆದ್ದಿದ್ದಾರೆ. ಹಾಲಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಚೊಚ್ಚಲ ಪದಕ ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾದಗಿರುವ ಮನು, ಒಟ್ಟಾರೆ ಒಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಪದಕ ಜಯಿಸಿದ ದೇಶದ ಮೂರನೇ ಕ್ರೀಡಾಪಟು ಎಂಬ ಸಾಧನೆಯನ್ನೂ ಮಾಡಿದ್ದಾರೆ.
ಭಗವದ್ಗೀತೆಯಿಂದ ಪ್ರೇರಣೆ ಪಡೆದಿರುವ ಮನು ಸಾಧನೆಯನ್ನು ಕ್ರೀಡಾ ಪ್ರೇಮಿಗಳು ಕೊಂಡಾಡುತ್ತಿದ್ದಾರೆ. 2024ರ ಒಲಿಂಪಿಕ್ಸ್ನಲ್ಲಿ ಭಾರತದ ಖಾತೆಯಲ್ಲಿರುವ ಎರಡೂ ಪದಕಗಳು ಇವರದ್ದೇ ಎಂಬುದು ವಿಶೇಷ. ಅವರು ಇದೇ ಒಲಿಂಪಿಕ್ಸ್ನಲ್ಲಿ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಭಾಗವಹಿಸಲಿದ್ದು, ಪದಕದ ಭರವಸೆ ಹೆಚ್ಚಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ, ಮನು ಅವರನ್ನು ಶ್ಲಾಘಿಸಿದ್ದು, ಆಕೆಗೆ ತರಬೇತಿ ನೀಡಲು ಸರ್ಕಾರ ಖರ್ಚು ಮಾಡಿದ್ದೆಷ್ಟೆಂದು ಬಹಿರಂಗಪಡಿಸಿದ್ದಾರೆ.
ಮನು ತರಬೇತಿಗೆ 2 ಕೋಟಿ ಖರ್ಚು
'ಶಾರ್ಪ್ ಶೂಟರ್ ಮನು ಭಾಕರ್ ಅವರಿಗೆ ತರಬೇತಿ ನೀಡಲು ಸುಮಾರು 2 ಕೋಟಿ ರೂ. ಖರ್ಚು ಮಾಡಲಾಗಿದೆ. ತರಬೇತಿಗಾಗಿ ಆಕೆಯನ್ನು ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ಗೆ ಕಳುಹಿಸಿಕೊಡಲಾಗಿತ್ತು. ಆಕೆಗೆ ಬೇಕಾದ ಕೋಚ್ ನೇಮಿಸಿಕೊಳ್ಳಲು ಅಗತ್ಯವಾದ ಆರ್ಥಿಕ ಸಹಾಯ ಒದಗಿಸಲಾಯಿತು' ಎಂದು ಕ್ರೀಡಾ ಸಚಿವರು ಎಎನ್ಐಗೆ ತಿಳಿಸಿದ್ದಾರೆ. ಇದು ಫಲ ಕೊಟ್ಟಿದೆ. ನಿಜಕ್ಕೂ ಅವರ ಸಾಧನೆ ಶ್ಲಾಘನೀಯ. ಮುಂದಿನ ಹಂತದಲ್ಲೂ ಮತ್ತಷ್ಟು ಯಶಸ್ಸು ಅವರಿದಾಗಲಿ ಎಂದು ಕೇಂದ್ರ ಸಚಿವರು ಹಾರೈಸಿದ್ದಾರೆ.
ಮನು ಭಾಕರ್ ಅವರು ವಿಶ್ವ ಚಾಂಪಿಯನ್ಶಿಪ್ ಮತ್ತು ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಚಿನ್ನ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಮೆಡಲ್ಗಳನ್ನು ಗೆದ್ದುಕೊಂಡಿದ್ದಾರೆ. 2004ರಲ್ಲಿ ಸುಮಾ ಶಿರೂರ್ ಬಳಿಕ ಒಲಿಂಪಿಕ್ಸ್ನ ವೈಯಕ್ತಿಕ ವಿಭಾಗದಲ್ಲಿ ಶೂಟಿಂಗ್ ಫೈನಲ್ ತಲುಪಿದ 20 ವರ್ಷಗಳಲ್ಲಿ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಲ್ಲದೆ, ಸುಶೀಲ್ ಕುಮಾರ್, ಪಿವಿ ಸಿಂಧು ಅವರ ನಂತರ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ಮೂರನೇ ಕ್ರೀಡಾಪಟು ಆಗಿದ್ದಾರೆ.
12 ವರ್ಷಗಳ ಪದಕ ಬರಕ್ಕೆ ಕೊನೆ
ಜುಲೈ 28ರ ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಅವರು 221.7 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು. ಇದರೊಂದಿಗೆ ಶೂಟಿಂಗ್ನಲ್ಲಿ 12 ವರ್ಷಗಳ ಪದಕ ಬರ ಕೊನೆಗೊಳಿಸಿದರು. ನಂತರ ಜುಲೈ 30ರಂದು ನಡೆದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರ ಜೊತೆಯಾಗಿ ಕಂಚಿನ ಪಕದ ಗೆದ್ದರು. ಟೊಕಿಯೊ ಒಲಿಂಪಿಕ್ಸ್ನಲ್ಲಿ ಪಿಸ್ತೂಲ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದ ಕಾರಣ ಫೈನಲ್ಗೇರಲು ವಿಫಲರಾಗಿದ್ದರು.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಯೆ ಜಿನ್ 243.2 ಅಂಕಗಳೊಂದಿಗೆ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಅವರ ಸಹವರ್ತಿ ಕಿಮ್ ಯೆಜಿ 241.3 ಅಂಕಗಳೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟರು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಶನಿವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಭಾಕರ್ ಮೂರನೇ ಸ್ಥಾನ ಪಡೆದು ಫೈನಲ್ಗೆ ಅರ್ಹತೆ ಪಡೆದಿದ್ದರು.
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಫೈನಲ್ ತಲುಪಿದ ನಂತರ 22 ವರ್ಷದ ಮನು, 2ನೇ ಒಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಭಾರತದ ಜೋಡಿಯು ಕೊರಿಯಾದ ಓಹ್ ಯೆ ಜಿನ್ ಮತ್ತು ಲೀ ವೊನ್ಹೋ ಅವರನ್ನು 16-10 ಅಂತರದಿಂದ ಸೋಲಿಸಿತು. ಇದರೊಂದಿಗೆ ಭಾರತಕ್ಕೆ ಎರಡನೇ ಪದಕವನ್ನು ಖಚಿತಪಡಿಸಿದರು.