Sreesanth on Slapgate row: 'ಆ ಹಾಡಿನಂತಿದೆ ನಮ್ಮ ಗೆಳೆತನ'; ಕಪಾಳಮೋಕ್ಷ ಮಾಡಿದ ಹರ್ಭಜನ್ ಬಗ್ಗೆ ಶ್ರೀಶಾಂತ್ ಪ್ರತಿಕ್ರಿಯೆ
ಈ ಘಟನೆ ಬಗ್ಗೆ ಮಾತನಾಡಿರುವ ಶ್ರೀಶಾಂತ್, ಹರ್ಭಜನ್ ಯಾವಾಗಲೂ ತಮ್ಮ ಸ್ನೇಹಿತರಾಗಿದ್ದರು. ದೇಶೀಯ ಆಟಗಾರನಾಗಿ ಆರಂಭದ ದಿನಗಳಲ್ಲಿ ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಮಾಜಿ ಸ್ಪಿನ್ನರ್‌ಗೆ ಕೃತಜ್ಞರಾಗಿರುವುದಾಗಿ ಅವರು ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಉದ್ಘಾಟನಾ ಆವೃತ್ತಿ(2008)ಯು, ಜಾಗತಿಕ ಕ್ರಿಕೆಟ್‌ನಲ್ಲಿ ಒಂದು ಹೊಸ ಪ್ರಯೋಗವಾಯ್ತು. ಇದೇ ವೇಳೆ ನಡೆದ ಒಂದು ವಿಲಕ್ಷಣ ಘಟನೆ, ಇಂದಿಗೂ ಭಾರತೀಯ ಕ್ರಿಕೆಟ್ ನೆನಪಿಸಿಕೊಳ್ಳುತ್ತದೆ. ಭಾರತ ತಂಡದ ಸಹ ಆಟಗಾರರಾದ ಎಸ್ ಶ್ರೀಶಾಂತ್ ಮತ್ತು ಹರ್ಭಜನ್ ಸಿಂಗ್ ನಡುವೆ ಭುಗಿಲೆದ್ದ ವಿವಾದ ದೇಶದ ಕ್ರಿಕೆಟ್‌ಗೆ ಮುಜುಗರ ತಂದಿಕ್ಕಿತು. ಕೇವಲ ಒಂದು ವರ್ಷದ ಹಿಂದಷ್ಟೇ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ ತಂಡದ ಭಾಗವಾಗಿದ್ದ ಈ ಜೋಡಿಯು ವಿವಿಧ ಫ್ರಾಂಚೈಸಿಗಳ ಪರ ಆಡುತ್ತಿದ್ದಾಗ ಆ ಘಟನೆ ನಡೆದಿತ್ತು.
ಟ್ರೆಂಡಿಂಗ್ ಸುದ್ದಿ
ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ನಂತರ, ಪಂಜಾಬ್ ಪರ ಆಡುತ್ತಿದ್ದ ಶ್ರೀಶಾಂತ್ ಮೈದಾನದಲ್ಲಿ ಅಳುತ್ತಿದ್ದರು. ಅದರಿಂದಾಗಿ ನಡೆದ ಘಟನೆ ಬಹಿರಂಗವಾಗಿತ್ತು. ಮುಂಬೈ ಇಂಡಿಯನ್ಸ್ ನಾಯಕನಾಗಿದ್ದ ಹರ್ಭಜನ್ ಸಿಂಗ್ ಹಾಗೂ ಶ್ರೀಶಾಂತ್ ನಡುವೆ ಜಗಳವಾಗಿತ್ತು. ಇದೇ ವೇಳೆ ಹರ್ಭಜನ್ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದರು ಎನ್ನಲಾಗಿದೆ. ಈ ಜಗಳದಿಂದಾಗಿ ಹರ್ಭಜನ್ ಅವರನ್ನು ಆವೃತ್ತಿಯ ಉಳಿದ ಪಂದ್ಯಗಳಿಂದ ನಿಷೇಧಿಸಲಾಯಿತು. ನಾಯಕ ಸ್ಥಾನದಿಂದ ಕೆಳಗಿಳಿಸಿ, ಆ ಬಳಿಕ ಶಾನ್ ಪೊಲಾಕ್ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡರು.
ಘಟನೆ ಬಳಿಕ ಹರ್ಭಜನ್ ಅವರಿಗೆ ತಾವು ಮಾಡಿದ್ದು ತಪ್ಪು ಎಂದು ಅರ್ಥವಾಗಿದೆ. ಅಲ್ಲದೆ ಅವರಿಂದಾಗಿ ತಂಡದ ಸಹ ಆಟಗಾರರಿಗೂ ಮುಜುಗರವಾಗಿದೆ ಎಂದು ಅರ್ಥವಾಗಿತ್ತು. ಘಟನೆ ನಡೆದು ಹಲವು ವರ್ಷಗಳೇ ಕಳೆದಿವೆ. ಇದೀಗ ಈ ಘಟನೆ ಬಗ್ಗೆ ಮಾತನಾಡಿರುವ ಶ್ರೀಶಾಂತ್, ಹರ್ಭಜನ್ ಯಾವಾಗಲೂ ತಮ್ಮ ಸ್ನೇಹಿತರಾಗಿದ್ದರು. ದೇಶೀಯ ಆಟಗಾರನಾಗಿ ಆರಂಭದ ದಿನಗಳಲ್ಲಿ ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಮಾಜಿ ಸ್ಪಿನ್ನರ್‌ಗೆ ಕೃತಜ್ಞರಾಗಿರುವುದಾಗಿ ಅವರು ಹೇಳಿದ್ದಾರೆ.
“ನಾವು ಯಾವಾಗಲೂ ಸ್ನೇಹಿತರೇ. ನಮ್ಮ ನಡುವೆ ನಡೆದ ಘಟನೆ ಬಗ್ಗೆ ತಪ್ಪು ತಿಳುವಳಿಕೆ ಇದೆ. ಮಾಧ್ಯಮಗಳು ಸಣ್ಣ ವಿಚಾರವನ್ನೇ ತುಂಬಾ ದೊಡ್ಡದು ಮಾಡಿದವು. ಇತ್ತೀಚಿಗೆ ಕಾಮೆಂಟರಿ ಟಿಪ್ಸ್ ಸೇರಿದಂತೆ ಎಲ್ಲಾ ರೀತಿಯಲ್ಲೂ ಭಜ್ಜಿ ಅವರು ನನಗೆ ಮೊದಲಿನಿಂದಲೂ ಬೆಂಬಲ ನೀಡಿದ್ದಾರೆ ಎಂದು ನಾನು ಹೇಳುತ್ತೇನೆ. ಅವರು ನನ್ನನ್ನು ಬೆಂಬಲಿಸಿದ್ದಾರೆ ಮತ್ತು ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಾಗಿ ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ಒಂದು ಹಾಡು ಇದೆ, 'ತೇರೆ ಜೈಸಾ ಯಾರ್ ಕಹಾ'. ಅವರೊಂದಿಗಿನ ನನ್ನ ಸಂಬಂಧ ಕೂಡಾ ಅದೇ ರೀತಿ ಇದೆ” ಎಂದು ಶ್ರೀಶಾಂತ್ ಸ್ಪೋರ್ಟ್ಸ್ ಯಾರಿ(Sports Yaari)ಯಲ್ಲಿ ಹೇಳಿದ್ದಾರೆ.
ಕಳೆದ ವರ್ಷ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡದ್ದ ಹರ್ಭಜನ್, ತಮ್ಮ ಆ ಕೃತ್ಯಕ್ಕೆ ವಿಷಾದಿಸುವುದಾಗಿ ಹೇಳಿದ್ದರು. “ನಡೆದದ್ದು ತಪ್ಪಾಗಿದೆ. ನಾನು ತಪ್ಪು ಮಾಡಿದ್ದೇನೆ ಎಂದು ನನಗೆ ಅರ್ಥವಾಗಿದೆ. ನನ್ನಿಂದಾಗಿ ನನ್ನ ಸಹ ಆಟಗಾರ ಮುಜುಗರ ಎದುರಿಸಬೇಕಾಯಿತು. ನನಗೂ ಮುಜುಗರವಾಯಿತು. ನಾನು ಮೈದಾನದಲ್ಲಿ ಶ್ರೀಶಾಂತ್ ಅವರನ್ನು ಹೇಗೆ ನಡೆಸಿಕೊಂಡೆ. ಹೀಗಾಗಬಾರದಿತ್ತು. ನಾನು ಅದರ ಬಗ್ಗೆ ಯೋಚಿಸಿದಾಗ, ಅದರ ಅಗತ್ಯವಿರಲಿಲ್ಲ ಎಂದು ನಾನು ಭಾವಿಸುತ್ತೇನೆ,” ಎಂದು ಹರ್ಭಜನ್ ಹೇಳಿದ್ದರು.
ಹರ್ಭಜನ್ 417 ಟೆಸ್ಟ್ ಮತ್ತು 269 ಏಕದಿನ ವಿಕೆಟ್‌ಗಳನ್ನು ಪಡೆದಿದ್ದಾರೆ. 2021ರ ಡಿಸೆಂಬರ್‌ನಲ್ಲಿ ಅವರು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಮತ್ತೊಂದೆಡೆ, ಶ್ರೀಶಾಂತ್ 2022ರ ಮಾರ್ಚ್‌ನಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದರು. ವೇಗದ ಬೌಲರ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 27 ಟೆಸ್ಟ್, 53 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದು, ಎಲ್ಲಾ ಮೂರು ಸ್ವರೂಪಗಳಲ್ಲಿ ಒಟ್ಟು 169 ವಿಕೆಟ್‌ಗಳನ್ನು ಪಡೆದಿದ್ದಾರೆ.