Watch: ಐಪಿಎಲ್ ತಂಡ ಸೇರಿಕೊಳ್ಳುವುದನ್ನು ಖಚಿತಪಡಿಸಿದ ಸ್ಮಿತ್; ಇಮ್ಮಡಿಯಾಯ್ತು ಅಭಿಮಾನಿಗಳ ಕುತೂಹಲ
ಕನ್ನಡ ಸುದ್ದಿ  /  ಕ್ರೀಡೆ  /  Watch: ಐಪಿಎಲ್ ತಂಡ ಸೇರಿಕೊಳ್ಳುವುದನ್ನು ಖಚಿತಪಡಿಸಿದ ಸ್ಮಿತ್; ಇಮ್ಮಡಿಯಾಯ್ತು ಅಭಿಮಾನಿಗಳ ಕುತೂಹಲ

Watch: ಐಪಿಎಲ್ ತಂಡ ಸೇರಿಕೊಳ್ಳುವುದನ್ನು ಖಚಿತಪಡಿಸಿದ ಸ್ಮಿತ್; ಇಮ್ಮಡಿಯಾಯ್ತು ಅಭಿಮಾನಿಗಳ ಕುತೂಹಲ

ಸ್ಮಿತ್ ವಿಡಿಯೋವನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ, ಭಾರತೀಯ ಅಭಿಮಾನಿಗಳಿಂದ ಪ್ರತಿಕ್ರಿಯೆಗಳ ಸುರಿಮಳೆಯೇ ಹರಿದು ಬಂದಿದೆ.

ಸ್ಟೀವ್ ಸ್ಮಿತ್, ಕೆಕೆಆರ್ ಅಭಿಮಾನಿಗಳು
ಸ್ಟೀವ್ ಸ್ಮಿತ್, ಕೆಕೆಆರ್ ಅಭಿಮಾನಿಗಳು

ಆಸ್ಟ್ರೇಲಿಯಾದ ಬ್ಯಾಟಿಂಗ್ ಸ್ಟಾರ್ ಸ್ಟೀವ್ ಸ್ಮಿತ್, ಎರಡು ವರ್ಷಗಳ ವಿರಾಮದ ನಂತರ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ಮರಳಲು ಸಿದ್ಧರಾಗಿದ್ದಾರೆ. 2022ರ ಐಪಿಎಲ್‌ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಸ್ಮಿತ್‌, ಐಪಿಎಲ್‌ನ 16ನೇ ಸೀಸನ್‌ ಮಿನಿ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರಲಿಲ್ಲ. ಆದರೆ, ಇದೀಗ ಸ್ಮಿತ್ ಅವರು ಭಾರತದ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಮೂಲಕ ಐಪಿಎಲ್‌ನಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಸ್ಮಿತ್ ದೃಢಪಡಿಸಿದ್ದಾರೆ. ತಾವು ಯಾವುದೇ ತಂಡದ ಹೆಸರನ್ನು ಹೇಳದಿದ್ದರೂ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಅಭಿಮಾನಿಗಳು ಮಾತ್ರ ಸುಮ್ಮನೆ ಕೂರದೆ, ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆರಂಭಿಸಿದ್ದಾರೆ.‌ ಇದೇ ವೇಳೆ ವಿವಿಧ ತಂಡಗಳ ಅಭಿಮಾನಿಗಳು ಈ ಬಗ್ಗೆ ಸ್ಮಿತ್‌ ಅವರನ್ನು ಪ್ರಶ್ನಿಸಿದ್ದಾರೆ.

ಸ್ಮಿತ್ ಕೊನೆಯ ಬಾರಿಗೆ 2021ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ಆಡಿದ್ದರು. ಒಟ್ಟಾರೆಯಾಗಿ, ಅವರು ಐಪಿಎಲ್‌ನಲ್ಲಿ ನಾಲ್ಕು ವಿಭಿನ್ನ ಫ್ರಾಂಚೈಸಿಗಳ ಪರ ಕಣಕ್ಕಿಳಿದಿದ್ದಾರೆ. ಪುಣೆ ವಾರಿಯರ್ಸ್‌ ಪರ 2012ರಲ್ಲಿ ಮೊದಲ ಬಾರಿಗೆ ಐಪಿಎಲ್‌ಗೆ ಪ್ರವೇಶ ಮಾಡಿದ ಸ್ಮಿತ್, ಎರಡು ಋತುಗಳ ನಂತರ ರಾಜಸ್ಥಾನ ರಾಯಲ್ಸ್‌ ಪರ 2014 ಮತ್ತು 2015ರ ಆವೃತ್ತಿಯಲ್ಲಿ ಆಡಿದ್ದರು. ಆ ಬಳಿಕ ಎರಡು ಆವೃತ್ತಿಗೆ ಫ್ರಾಂಚೈಸಿಯನ್ನು ಅಮಾನತುಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಅವರು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ ಪರ ಆಡಿದರು. ತಮ್ಮ ತಂಡವನ್ನು 2017ರಲ್ಲಿ ಫೈನಲ್‌ವರೆಗೂ ಮುನ್ನಡೆಸಿದ್ದರು. 2019ರಲ್ಲಿ ಮತ್ತೆ ರಾಜಸ್ಥಾನಕ್ಕೆ ಮರಳಿದ ಅವರು, 2020ರಲ್ಲಿ ತಂಡದ ನಾಯಕನಾಗಿ ಆಯ್ಕೆಯಾದರು.

ಒಟ್ಟಾರೆಯಾಗಿ, ಅವರು ದುಬಾರಿ ಲೀಗ್‌ನಲ್ಲಿ 103 ಪಂದ್ಯಗಳನ್ನು ಆಡಿದ್ದಾರೆ. ಒಂದು ಶತಕ ಸೇರಿದಂತೆ ಒಟ್ಟು 2485 ರನ್ ಗಳಿಸಿದ್ದಾರೆ.

ಸೋಮವಾರ ಸಾಮಾಜಿಕ ಜಾಲತಾಣಗಳ ಮೂಲಕ ಮಾತನಾಡಿದ ಸ್ಮಿತ್, ಎಲ್ಲಾ ವದಂತಿಗಳ ನಡುವೆ 2023ರ ಐಪಿಎಲ್‌ಗೆ ಮರಳುವುದನ್ನು ಖಚಿತಪಡಿಸಿದರು. “ನಮಸ್ತೆ ಭಾರತ. ನಾನು ನಿಮಗಾಗಿ ರೋಚಕ ಸುದ್ದಿಯನ್ನು ಹೊತ್ತು ತಂದಿದ್ದೇನೆ. ನಾನು 2023ರ ಐಪಿಎಲ್‌ಗೆ ಸೇರುತ್ತಿದ್ದೇನೆ. ನಾನು ಭಾರತದಲ್ಲಿ ಅಸಾಧಾರಣ ಮತ್ತು ವಿಶೇಷ ತಂಡವನ್ನು ಸೇರುತ್ತಿದ್ದೇನೆ” ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.

ಸ್ಮಿತ್ ವಿಡಿಯೋವನ್ನು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ, ಭಾರತೀಯ ಅಭಿಮಾನಿಗಳಿಂದ ಪ್ರತಿಕ್ರಿಯೆಗಳ ಸುರಿಮಳೆಯೇ ಹರಿದಿದೆ. ಅದರಲ್ಲೂ ಹೆಚ್ಚು ಕೆಕೆಆರ್‌ ಅಭಿಮಾನಿಗಳಿಂದ ಪ್ರಶ್ನೆಗಳು ಹೆಚ್ಚಾಗಿವೆ.

ಕೆಕೆಆರ್‌ ಅಭಿಮಾನಿಗಳು, ಸ್ಮಿತ್ ಅವರನ್ನು ತಮ್ಮ ತಂಡಕ್ಕೆ ಸೇರಿಕೊಳ್ಳಲು ಬಯಸುತ್ತಿದ್ದಾರೆ. ಇದಕ್ಕೆ ಪ್ರಾಥಮಿಕ ಕಾರಣವೆಂದರೆ, ಎರಡು ಬಾರಿಯ ಚಾಂಪಿಯನ್‌ಗಳು ತಮ್ಮ ನಿಯಮಿತ ನಾಯಕರಾದ ಶ್ರೇಯಸ್ ಅಯ್ಯರ್ ಅವರನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ತಂಡವು ಅನುಭವಿ ನಾಯಕನ ಹುಡುಕಾಟದಲ್ಲಿದೆ. ಆದರೆ, ಸ್ಮಿತ್‌ ಕಾಮೆಂಟರಿ ತಂಡವನ್ನು ಸೇರಲು ಐಪಿಎಲ್‌ಗೆ ಮರಳುತ್ತಾರೆ ಎಂಬ ವದಂತಿಗಳಿವೆ. ಮತ್ತೊಂದೆಡೆ ತಾನು ತಂಡ ಸೇರಿಕೊಳ್ಳುತ್ತೇನೆ ಎಂದು ಸ್ಮಿತ್‌ ಹೇಳಿರುವುದರಿಂದ ಈ ಬಗ್ಗೆ ಕುತೂಹಲ ಹೆಚ್ಚಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.