CSK in IPL 2023: 'ತಲಾ' ಬಳಗಕ್ಕೆ ಸ್ಟೋಕ್ಸ್ ಬಲ; ಸಿಎಸ್‌ಕೆ ಬಲಿಷ್ಠ ಆಡುವ ಬಳಗ ಹೀಗಿದೆ
ಕನ್ನಡ ಸುದ್ದಿ  /  ಕ್ರೀಡೆ  /  Csk In Ipl 2023: 'ತಲಾ' ಬಳಗಕ್ಕೆ ಸ್ಟೋಕ್ಸ್ ಬಲ; ಸಿಎಸ್‌ಕೆ ಬಲಿಷ್ಠ ಆಡುವ ಬಳಗ ಹೀಗಿದೆ

CSK in IPL 2023: 'ತಲಾ' ಬಳಗಕ್ಕೆ ಸ್ಟೋಕ್ಸ್ ಬಲ; ಸಿಎಸ್‌ಕೆ ಬಲಿಷ್ಠ ಆಡುವ ಬಳಗ ಹೀಗಿದೆ

ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 2023ರ ಆರಂಭಿಕ ಪಂದ್ಯದಲ್ಲಿ ಧೋನಿ ಪಡೆಯು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ.

ಸಿಎಸ್‌ಕೆ ತಂಡ
ಸಿಎಸ್‌ಕೆ ತಂಡ (BCCI)

ಎಂಎಸ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023ರ ಆವೃತ್ತಿಗೆ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯುತ್ತಿದೆ. ಈವರೆಗೆ ನಾಲ್ಕು ಬಾರಿ ಟ್ರೋಫಿ ಗೆದ್ದಿರುವ 'ತಲಾ' ನೇತೃತ್ವದ ತಂಡವು, ಮುಂಬರುವ ಋತುವಿನಲ್ಲಿ ಐದನೇ ಪ್ರಶಸ್ತಿ ಗೆಲ್ಲಲು ಸಜ್ಜಾಗಿದೆ. ವಿಸಿಲ್‌ ಪೋಡು ಬಳಗವು ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿ, ಅಂಕಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದಿತ್ತು. ಹೀಗಾಗಿ ಈ ಬಾರಿ ಬಲಿಷ್ಠವಾಗಿ ಕಣಕ್ಕಿಳಿಯಲು ತಂಡ ಯೋಜಿಸಿದೆ. ಅಲ್ಲದೆ ತಂಡದ ಈ ಬಾರಿಯ ಪ್ರದರ್ಶನದ ಮೇಲೆ ‘ತಲಾ’ ಅಭಿಮಾನಿಗಳಿಗೆ ನಿರೀಕ್ಷೆಗಳು ಕೂಡಾ ಹೆಚ್ಚಿವೆ.

ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ ಮತ್ತು ಕ್ರಿಸ್ ಜೋರ್ಡಾನ್ ಅವರಂತಹ ದಿಗ್ಗಜರನ್ನು ಕೈಬಿಟ್ಟ ತಂಡವು; ಹರಾಜಿನಲ್ಲಿ ಮತ್ತಷ್ಟು ಬಲಿಷ್ಠ ಆಟಗಾರರಿಗೆ ಮಣೆ ಹಾಕಿತು. ಹೊಸ ಋತುವಿಗಾಗಿ ಏಳು ಆಟಗಾರರನ್ನು ಬಿಡ್‌ ಮಾಡಿತು. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಹಾಗೂ ಸ್ಫೋಟಕ ಆಲ್‌ರೌಂಡರ್‌ ಬೆನ್ ಸ್ಟೋಕ್ಸ್ ಅವರನ್ನು ತಂಡವು 16.25 ಕೋಟಿ ರೂಪಾಯಿಗೆ ಖರೀದಿಸಿದೆ. ಇದೇ ವೇಳೆ ನ್ಯೂಜಿಲೆಂಡ್ ಆಲ್‌ರೌಂಡರ್ ಕೈಲ್ ಜೇಮಿಸನ್ ಮತ್ತು ಭಾರತದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ಕೂಡಾ ಬಳಗ ಸೇರಿಸಿಕೊಂಡಿದೆ.

ಹರಾಜಿನಲ್ಲಿ ಜೇಮಿಸನ್‌ ಅವರನ್ನು ಖರೀದಿಸುವಲ್ಲಿ ಫ್ರಾಂಚೈಸಿಯು ಯಶಸ್ವಿಯಾಗಿದ್ದರೂ, ಹೊಸ ಋತುವಿನ ಆರಂಭಕ್ಕೂ ಮುನ್ನ ಹಳದಿ ಬ್ರಿಗೇಡ್ ಭಾರಿ ಹೊಡೆತ ಏದುರಿಸಿತು. ನ್ಯೂಜಿಲೆಂಡ್ ಆಟಗಾರನು ಪದೇ ಪದೇ ಬೆನ್ನುನೋವಿಗೆ ಒಳಗಾದ ಹಿನ್ನೆಲೆಯಲ್ಲಿ ಅವರನ್ನು ಐಪಿಎಲ್ 2023ರ ಆವೃತ್ತಿಯಿಂದ ಹೊರಗಿಡಲಾಯಿತು. ಹೀಗಾಗಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಸಿಸಂದಾ ಮಗಾಲಾ ಅವರು ಈ ಆವೃತ್ತಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ಶಿಬಿರ ಸೇರಿಕೊಳ್ಳಲಿದ್ದಾರೆ. ಹರಿಣಗಳ ನಾಡಿನ ಆಟಗಾರ ಮೂಲ ಬೆಲೆ 50 ಲಕ್ಷ ರೂಪಾಯಿಗೆ ತಂಡ ಸೇರಿಕೊಂಡಿದ್ದಾರೆ. ಮಗಾಲಾ ಈ ಹಿಂದೆ ಐಪಿಎಲ್ 2023ರ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ.

ಕೆಲ ವರದಿಗಳ ಪ್ರಕಾರ, ಸಿಎಸ್‌ಕೆ ವೇಗಿ ಮುಖೇಶ್ ಚೌಧರಿ ಮುಂಬರುವ ಋತುವಿನಲ್ಲಿ ಆಡುವುದು ಅನುಮಾನ ಎಂದು ಹೇಳಲಾಗಿದೆ. ಐಪಿಎಲ್ 2022ರ ಆವೃತ್ತಿಯಲ್ಲಿ ಚೆನ್ನೈ ಪರ ಜಂಟಿ ಅತಿ ಹೆಚ್ಚು ವಿಕೆಟ್ ಪಡೆದ ಚೌಧರಿ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ, 26 ವರ್ಷದ ವೇಗದ ಬೌಲರ್ ಹೊಸ ಋತುವಿಗಾಗಿ ಸಿಎಸ್‌ಕೆ ಶಿಬಿರಕ್ಕೆ ಆಗಮಿಸಿದ್ದಾರೆ. ತಂಡದ ಇತರ ಆಟಗಾರರಾದ ದೀಪಕ್ ಚಹಾರ್, ರುತುರಾಜ್ ಗಾಯಕ್ವಾಡ್ ಮತ್ತು ಶಿವಂ ದುಬೆ ಅವರುಗಳು ಐಪಿಎಲ್ 2023ರ ಆರಂಭಕ್ಕೂ ಮೊದಲೇ ಗಾಯದಿಂದ ಗುಣಮುಖರಾಗಿದ್ದಾರೆ.

ನ್ಯೂಜಿಲೆಂಡ್ ಬ್ಯಾಟರ್ ಡೆವೊನ್ ಕಾನ್ವೇ ಅವರು ಸಿಎಸ್‌ಕೆ ಪರ ಗಾಯಕ್ವಾಡ್ ಅವರೊಂದಿಗೆ ಇನ್ನಿಂಗ್ಸ್‌ ತೆರೆಯುವ ಸಾಧ್ಯತೆ ಇದೆ. ತಂಡದ ಸ್ಟಾರ್‌ ಆಟಗಾರ ಸ್ಟೋಕ್ಸ್ ಅವರನ್ನು ಯಾವ ಕ್ರಮಾಂಕದಲ್ಲಿ ಫ್ರಾಂಚೈಸಿ ಕಣಕ್ಕಿಳಿಸುತ್ತದೆ ಎಂಬುದು ಆಸಕ್ತಿದಾಯಕವಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಆಟಗಾರ 2020ರ ಆವೃತ್ತಿಯಲ್ಲಿ ಆರಂಭಿಕ ಆಟಗಾರನಾಗಿ ಶತಕ ಸಿಡಿಸಿದ್ದರು.

ಕಿವೀಸ್‌ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಸಿಎಸ್‌ಕೆ ಆಡುವ ಬಳಗದಲ್ಲಿ ತಮ್ಮ ಸ್ಥಾನಕ್ಕಾಗಿ ಶ್ರೀಲಂಕಾದ ಮಹೇಶ್ ತೀಕ್ಷಣ ಅವರೊಂದಿಗೆ ಸ್ಪರ್ಧಿಸಲಿದ್ದಾರೆ. ಸೂಪರ್‌ಸ್ಟಾರ್ ಜಡೇಜಾ ಸ್ಪಿನ್ ವಿಭಾಗವನ್ನು ನೋಡಿಕೊಳ್ಳುವುದು ಖಚಿತ. ಹೀಗಾಗಿ ವೇಗದ ಬಳಗವನ್ನು ಚಹಾರ್ ಮುನ್ನಡೆಸಲಿದ್ದಾರೆ.

ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 2023ರ ಆರಂಭಿಕ ಪಂದ್ಯದಲ್ಲಿ ಧೋನಿ ಪಡೆಯು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ.

ಚೆನ್ನೈ ಸೂಪರ್ ಕಿಂಗ್ಸ್‌ನ ಸಂಭಾವ್ಯ ಹಾಗೂ ಬಲಿಷ್ಠ ಆಡುವ ಬಳಗ

ಡೆವೊನ್ ಕಾನ್ವೇ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಮೊಯೀನ್ ಅಲಿ, ಬೆನ್ ಸ್ಟೋಕ್ಸ್, ಶಿವಂ ದುಬೆ, ಎಂಎಸ್‌ ಧೋನಿ (ನಾಯಕ ಹಾಗೂ ವಿಕೆಟ್‌ ಕೀಪರ್), ರವೀಂದ್ರ ಜಡೇಜಾ, ದೀಪಕ್ ಚಹಾರ್, ಮುಖೇಶ್ ಚೌಧರಿ, ಮಹೇಶ್ ತೀಕ್ಷಣ/ ಮಿಚೆಲ್ ಸ್ಯಾಂಟ್ನರ್.

ಸಿಎಸ್‌ಕೆ ತಂಡ

ಎಂಎಸ್ ಧೋನಿ (ನಾಯಕ), ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಕ್ ರಶೀದ್, ನಿಶಾಂತ್ ಸಿಂಧು, ಸಿಸಂದಾ ಮಗಾಲಾ, ಅಜಯ್ ಮಂಡಲ್, ಭಗತ್ ವರ್ಮಾ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.