ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್ಸ್ಟೋರಿ
Sunil Chhetri Profile: ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳಿರುವ ಭಾರತದ ಫುಟ್ಬಾಲ್ ಸ್ಟಾರ್ ಸುನಿಲ್ ಛೆಟ್ರಿ ಅವರು ವೃತ್ತಿಜೀವನ, ಮದುವೆ, ಕುಟುಂಬ, ಆದಾಯದ ಕುರಿತು ವಿವರ ಇಲ್ಲಿದೆ.
ಭಾರತದ ಫುಟ್ಬಾಲ್ ತಂಡದ ದಿಗ್ಗಜ ಆಟಗಾರ ಸುನಿಲ್ ಛೆಟ್ರಿ (Sunil Chhetri Retire) ಅವರು ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಪ್ರಕಟಿಸಿದ್ದಾರೆ. ತಮ್ಮ ಕೊನೆಯ ಪಂದ್ಯವನ್ನು ಜೂನ್ 26 ರಂದು ಕುವೈತ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 2005ರಲ್ಲಿ ಭಾರತದ ಪರ ಡೆಬ್ಯೂ ಮಾಡಿದ್ದ ಛೆಟ್ರಿ ಅವರು 19 ವರ್ಷಗಳ ಸುದೀರ್ಘ ವೃತ್ತಿಜೀವನ ಕೊನೆಗೊಳಿಸಲು ಸಿದ್ಧರಾಗಿದ್ದಾರೆ. ಭಾರತದ ಶ್ರೇಷ್ಠ ಫುಟ್ಬಾಲ್ ಆಟಗಾರ ಛೆಟ್ರಿ, ಗಮನಾರ್ಹ ಸಾಧನೆಗಳು, ಕ್ರೀಡೆಗೆ ನೀಡಿದ ಕೊಡುಗೆಗಳು ಅನನ್ಯ. ಭಾರತದಲ್ಲಿ ಫುಟ್ಬಾಲ್ ಕ್ರೇಜ್ ಹುಟ್ಟಿದ್ದೇ ಇವರಿಂದ ಎಂದರೆ ತಪ್ಪಾಗಲ್ಲ.
ಸುನಿಲ್ ಛೆಟ್ರಿ ಅವರ ಬಾಲ್ಯ ಜೀವನ, ಶಿಕ್ಷಣ
ವಿಶ್ವಶ್ರೇಷ್ಠ ಕಾಲ್ಚೆಂಡಿನ ಚತುರ ಎನಿಸಿರುವ ಛೆಟ್ರಿ ಅವರು ಜನಿಸಿದ್ದು 1984ರ ಆಗಸ್ಟ್ 3ರಂದು. 39ನೇ ವರ್ಷದ ಜನ್ಮಸ್ಥಳ ಅಂದಿನ ಆಂಧ್ರಪ್ರದೇಶದ ಸಿಕಂದರಾಬಾದ್ (ಈಗಿನ ತೆಲಂಗಾಣ). ತಂದೆ ಕೆಬಿ ಛೆಟ್ರಿ, ತಾಯಿ ಸುಶೀಲಾ ಛೆಟ್ರಿ. ಸುನಿಲ್ ಛೆಟ್ರಿ ಅವರು ಕ್ರೀಡಾ ಹಿನ್ನೆಲೆಯುಳ್ಳ ಕುಟುಂಬಕ್ಕೆ ಸೇರಿದವರು. ಅವರ ತಂದೆ ಭಾರತೀಯ ಸೇನೆಯಲ್ಲಿ ಇಎಂಇ ಕಾರ್ಪ್ಸ್ ಅಧಿಕಾರಿಯಾಗಿದ್ದರು. ಸೇನೆಯ ಪರ ಫುಟ್ಬಾಲ್ ಕೂಡ ಆಡುತ್ತಿದ್ದರು. ತಾಯಿ ನೇಪಾಳ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿಯಾಗಿದ್ದರು.
ಪೋಷಕರು ಫುಟ್ಬಾಲ್ ಹಿನ್ನೆಲೆಯವರಾದ ಕಾರಣ ಸುನಿಲ್ ಛೆಟ್ರಿ, ಚಿಕ್ಕ ವಯಸ್ಸಿನಲ್ಲೇ ಫುಟ್ಬಾಲ್ ಕಡೆ ಗಮನ ಹರಿಸುತ್ತಾರೆ. ಕೋಲ್ಕತ್ತಾ, ನವ ದೆಹಲಿಯಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದ್ದಾರೆ. ಕೋಲ್ಕತ್ತಾದ ಅಸುತೋಷ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ನಡೆಸಿದ್ದರು. ಆದರೆ, ಅವರು ಪದವಿ ಪೂರ್ಣಗೊಳಿಸಿದ್ದಾರೋ ಇಲ್ಲವೋ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಸುನಿಲ್ ಛೆಟ್ರಿ ಫುಟ್ಬಾಲ್ ವೃತ್ತಿಜೀವನ
ದೇಶೀಯ ಫುಟ್ಬಾಲ್ನಲ್ಲಿ ಡೆಲ್ಲಿ ಸೇರಿ ಅನೇಕ ಕ್ಲಬ್ಗಳ ಪರ ಕಣಕ್ಕಿಳಿದಿರುವ ಛೆಟ್ರಿ, ಅತ್ಯಂತ ಯಶಸ್ವಿ ವೃತ್ತಿಪರ ವೃತ್ತಿಜೀವನ ಹೊಂದಿದ್ದಾರೆ. 2001ರಲ್ಲಿ ಡೆಲ್ಲಿ ಸಿಟಿ ಫುಟ್‌ಬಾಲ್ ಕ್ಲಬ್‌ನಲ್ಲಿ ಡೆಬ್ಯೂ ಮಾಡಿದ ಛೆಟ್ರಿ, 2002ರಲ್ಲಿ ಮೋಹನ್ ಬಗಾನ್‌ನಿಂದ ಆಯ್ಕೆಯಾದರು. ಪ್ರಸ್ತುತ, ಸುನಿಲ್ ಛೆಟ್ರಿ ಇಂಡಿಯಾ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಜೊತೆ ಕಣಕ್ಕಿಳಿಯುತ್ತಿದ್ದಾರೆ.
2004ರಲ್ಲಿ ಭಾರತೀಯ ಅಂಡರ್-20 ತಂಡದ ಪರ ಚೊಚ್ಚಲ ಪಂದ್ಯ ಆಡಿದ್ದ ಸುನಿಲ್, 2005ರಲ್ಲಿ ಭಾರತೀಯ ಫುಟ್ಬಾಲ್ ತಂಡದ ಖಾಯಂ ಸದಸ್ಯರಾದರು. ಅಂದಿನಿಂದ ಇದುವರೆಗೂ ಮಿಂಚಿನ ಪ್ರದರ್ಶನ ತೋರುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೋಲು ಗಳಿಸಿದ ಸಕ್ರಿಯ ಆಟಗಾರರ ಪೈಕಿ 3ನೇ ಹಾಗೂ ಒಟ್ಟಾರೆ 4ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಅಲಿ ದೇಯಿ, ಲಿಯೋನೆಲ್ ಮೆಸ್ಸಿ ನಂತರ ಸ್ಥಾನ ಪಡೆದಿದ್ದಾರೆ. ಛೆಟ್ರಿ ಒಟ್ಟು 150 ಪಂದ್ಯಗಳಲ್ಲಿ 94 ಗೋಲು ಗಳಿಸಿದ್ದಾರೆ.
ಕೋಚ್ ಮಗಳನ್ನೇ ಪಟಾಯಿಸಿದ್ದ ಛೆಟ್ರಿ
ಸುನಿಲ್ ಛೆಟ್ರಿ ಅವರು 2017ರಲ್ಲಿ ಸೋನಮ್ ಭಟ್ಟಾಚಾರ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಪರಸ್ಪರ ವಿವಾಹವಾಗಲು ನಿರ್ಧರಿಸುವ ಮೊದಲು 13 ವರ್ಷಗಳ ಪರಸ್ಪರ ಡೇಟಿಂಗ್ ಮಾಡಿದ್ದರು. ತನ್ನ ಕೋಚ್ ಆಗಿದ್ದ ಮೋಹನ್ ಬಗಾನ್ ಮಗಳನ್ನೇ ಸುನಿಲ್ ಛೆಟ್ರಿ ಪ್ರೀತಿಸಿ ಮದುವೆಯಾದರು. ಗಾಢವಾಗಿ ಪ್ರೀತಿಸುತ್ತಿದ್ದ ಇಬ್ಬರು, ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಕೊನೆಗೆ ಕೋಚ್ಗೆ ತಮ್ಮ ಮಗಳನ್ನು ಪ್ರೀತಿಸುತ್ತಿರುವುದಾಗಿ ಛೆಟ್ರಿ ಹೇಳಿದ್ದರು. ಕೊನೆಗೆ ಒಪ್ಪಿಗೆ ಸೂಚಿಸಿದ್ದರು.
ಸುನಿಲ್ ಛೆಟ್ರಿ ಆದಾಯ ಎಷ್ಟಿದೆ?
ಸುನಿಲ್ ಛೆಟ್ರಿ 1 ಮಿಲಿಯನ್ ಡಾಲರ್ (8 ಕೋಟಿಗೂ ಹೆಚ್ಚು) ನಿವ್ವಳ ಮೌಲ್ಯ ಹೊಂದಿದ್ದಾರೆ. ಇದು ಕ್ರಿಕೆಟಿಗರು ಮತ್ತು ಇತರ ಕ್ರೀಡಾಪಟುಗಳ ನಿವ್ವಳ ಮೌಲ್ಯಕ್ಕೆ ಹೋಲಿಸಿದರೆ ತೀರಾ ಅಂದರೆ ತೀರಾ ಕಡಿಮೆ. ಛೆಟ್ರಿ ಮಾಸಿಕ ಆದಾಯ 7 ಲಕ್ಷ, ವಾರ್ಷಿಕ ಆದಾಯ 80 ಲಕ್ಷ ಇದೆ ಎಂದು ವರದಿಯಾಗಿವೆ. ಸುನಿಲ್ ಬಳಿ ಕಾರುಗಳ ಸಂಗ್ರಹ ಹೆಚ್ಚಿಲ್ಲ. ಆಡಿ ಎ6 ಕಾರು ಸೇರಿ ಬೆರಳೆಣಿಕೆಯ ಕಾರುಗಳಿವೆ. ಬೆಂಗಳೂರಿನಲ್ಲಿ ಅದ್ಭುತ ಮನೆ ಹೊಂದಿರುವ ಛೆಟ್ರಿ ಅವರನ್ನು ಭಾರತೀಯ ರಾಷ್ಟ್ರೀಯ ಫುಟ್ಬಾಲ್ ಅಪಾಯಕಾರಿ ಸ್ಟ್ರೈಕರ್ ಎಂದು ಕರೆಯಲಾಗುತ್ತದೆ.
ಸುನಿಲ್ ಛೆಟ್ರಿಗೆ ದಕ್ಕಿದ ಪ್ರಶಸ್ತಿಗಳು
ಸುನಿಲ್ ಛೆಟ್ರಿಗೆ ವಿವಿಧ ಪ್ರಶಸ್ತಿಗಳು, ಪುರಸ್ಕಾರಗಳು ಲಭಿಸಿವೆ. ಭಾರತದ ಅಮೂಲ್ಯ ಕ್ರೀಡಾ ಪ್ರಶಸ್ತಿ ಅರ್ಜುನ ಪ್ರಶಸ್ತಿ ಪಡೆದಿದ್ದಾರೆ. 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ಸ್ವೀಕರಿಸಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)