ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಸುನಿಲ್ ಛೆಟ್ರಿ ಕಣ್ಣೀರಿನ ವಿದಾಯ; ಭಾರತೀಯ ಫುಟ್ಬಾಲ್ಗೆ ಮೆರುಗು ತಂದಿದ್ದವನ ವೃತ್ತಿಜೀವನ ಅಂತ್ಯ
Sunil Chhetri: ಜೂನ್ 6ರಂದು ನಡೆದ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕುವೈತ್ ವಿರುದ್ಧ ಕಣಕ್ಕಿಳಿಯುವ ಮೂಲಕ ಸುನಿಲ್ ಛೆಟ್ರಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯವನ್ನಾಡಿ ಕಣ್ಣೀರಿನ ವಿದಾಯ ಹೇಳಿದ್ದಾರೆ.

ಭಾರತೀಯ ಫುಟ್ಬಾಲ್ಗೆ ಹೊಸ ಮೆರುಗು ತಂದುಕೊಟ್ಟ ದಿಗ್ಗಜ ಮತ್ತು ವಿಶ್ವ ಮಟ್ಟದಲ್ಲಿ ತನ್ನದೆಯಾದ ಛಾಪು ಮೂಡಿಸಿದ್ದ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ (Sunil Chhetri) ಅವರು ಜೂನ್ 6ರಂದು ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ (International Football) ತಮ್ಮ ಕೊನೆಯ ಪಂದ್ಯವನ್ನಾಡಿದರು. ಛೆಟ್ರಿ ಅವರ ವಿದಾಯದ ಪಂದ್ಯಕ್ಕೆ ಕೋಲ್ಕತ್ತಾದ ಸಾಲ್ಟ್ ಲೇಕ್ ಫುಟ್ಬಾಲ್ ಮೈದಾನ ಸಾಕ್ಷಿಯಾಯಿತು. 1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಮೈದಾನವು 40 ವರ್ಷಗಳಲ್ಲೇ ಅತಿ ದೊಡ್ಡ ಫುಟ್ಬಾಲ್ ಪಂದ್ಯಕ್ಕೆ ಸಾಕ್ಷಿಯಾಯಿತು.
ಫಿಫಾ ಫುಟ್ಬಾಲ್ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕುವೈತ್ ತಂಡದ ವಿರುದ್ಧ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದ 39 ವರ್ಷದ ಛೆಟ್ರಿ ಅವರು ಪಂದ್ಯದ ನಂತರ ಕಣ್ಣೀರಿಟ್ಟರು. ತಮ್ಮ 19 ವರ್ಷಗಳ ವೃತ್ತಿಜೀವನವನ್ನು ಅಂತ್ಯಗೊಳಿಸಿ ಸುನಿಲ್ ಛೆಟ್ರಿ ಭಾವುಕರಾದರು. ನೆರೆದಿದ್ದ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ಆಟಗಾರ ಇನ್ಮುಂದೆ ಆಡಲ್ಲ ಎಂದು ಕಣ್ಣೀರು ಹಾಕಿದರು. ತನ್ನ ಕೊನೆ ಪಂದ್ಯದಲ್ಲಿ ಗೋಲು ಗಳಿಸದಿರುವುದು ನಿರಾಸೆ ತಂದಿತು.
ಜೂನ್ 6ರಂದು ಕುವೈತ್ ವಿರುದ್ಧ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡುವುದಾಗಿ ದಿಗ್ಗಜ ಆಟಗಾರ ಸುನಿಲ್ ಛೆಟ್ರಿ, ಮೇ 16 ರಂದೇ ಪ್ರಕಟಿಸಿದ್ದರು. ಅದರಂತೆ ಕುವೈತ್ ವಿರುದ್ಧದ ತಮ್ಮ ಅಂತಿಮ ಪಂದ್ಯ ಆಡಿ ಕೊನೆಯ ಬಾರಿಗೆ ಅಭಿಮಾನಿಗಳನ್ನು ರಂಜಿಸಿದರು. ವಿಶ್ವದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಛೆಟ್ರಿ, ತನ್ನ ಅಂತಿಮ ಪಂದ್ಯದಲ್ಲಿ ಗೋಲು ಗಳಿಸಿ ತಂಡಕ್ಕೆ ಗೆಲುವು ತಂದುಕೊಡಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಡ್ರಾನಲ್ಲಿ ಅಂತ್ಯಗೊಂಡ ಪಂದ್ಯ
ಭಾರತೀಯ ಫುಟ್ಬಾಲ್ ತಂಡದ ನಾಯಕನ ಅಂತಿಮ ಕ್ಷಣಗಳ ನೆನಪುಗಳನ್ನು ತಮ್ಮ ಮನದಾಳದಲ್ಲಿ ಬಚ್ಚಿಡಲು, ಅಭಿಮಾನಿಗಳ ದಂಡೇ ಮೈದಾನಕ್ಕೆ ಹರಿದು ಬಂದಿತ್ತು. ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂ ಸಂಪೂರ್ಣ ಭರ್ತಿಯಾಗಿತ್ತು. ಛೆಟ್ರಿ ಅವರ ಕ್ಷಣ, ಪ್ರತಿ ಟಚ್, ಮತ್ತು ಪ್ರತಿ ಶಾಟ್ ಕೂಡ ಅಭಿಮಾನಿಗಳನ್ನು ಖುಷಿಪಡಿಸಿತು. ಪ್ರತಿ ಹಂತದಲ್ಲೂ ಛೆಟ್ರಿಗೆ ಅಭಿಮಾನಿಗಳು ಪ್ರೋತ್ಸಾಹ ನೀಡಿದರು. ಆದರೆ 100 ನಿಮಿಷಗಳ ಪಂದ್ಯದಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಫುಟ್ಬಾಲ್ ಇತಿಹಾಸದಲ್ಲಿ ಅನೇಕ ಬಾರಿ ಭಾರತ ತಂಡವನ್ನು ರಕ್ಷಿಸಿದ್ದ ಛೆಟ್ರಿ, ತನ್ನ ಕೊನೆಯ ಪಂದ್ಯದಲ್ಲಿ ಗೋಲು ಗಳಿಸಲು ಸಾಧ್ಯವಾಗಿಲ್ಲ. ಕುವೈತ್ ವಿರುದ್ಧದ ಮಹತ್ವದ ಪಂದ್ಯವು 0-0 ಅಂತರಲ್ಲಿ ಡ್ರಾನಲ್ಲಿ ಅಂತ್ಯ ಕಂಡಿತು. ಪಂದ್ಯ ಮುಗಿದ ಬೆನ್ನಲ್ಲೇ ಮ್ಯಾಚ್ ರೆಫ್ರಿ ಕೊನೆಯ ವಿಸಿಲ್ ಹಾಕಿದ ತಕ್ಷಣವೇ ಸುನಿಲ್ ಛೆಟ್ರಿ, ಅಭಿಮಾನಿಗಳು, ಭಾರತೀಯ ಆಟಗಾರರ ಮುಖದಲ್ಲಿ ನಿರಾಸೆಯ ಭಾವ ತುಂಬಿತ್ತು.
ಅಭಿನಂದನಾ ಗೌರವ ಸಲ್ಲಿಸಿದ ಆಟಗಾರರು
ಪಂದ್ಯ ಡ್ರಾನಲ್ಲಿ ಅಂತ್ಯ ಕಾಣುತ್ತಿದ್ದಂತೆ ಎಲ್ಲರು ಭಾವುಕರಾದರು. ಆ ಕ್ಷಣ ಕಣ್ಣಲ್ಲಿ ಹನಿಗಳು ಜಿನುಗುವಂತೆ ಮಾಡಿತು. ಛೆಟ್ರಿ ಕಂಗಳಲ್ಲಿದ್ದ ಹನಿಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪರಸ್ಪರ ಆಟಗಾರರಿಗೆ ಅಪ್ಪುಗೆ ನೀಡಿ ಹ್ಯಾಂಡ್ ಶೇಕ್ ಮಾಡಿ ಅಭಿನಂದನೆ ಸಲ್ಲಿಸಿದರು. ಬಳಿಕ ಮೈದಾನದ ಸುತ್ತಲೂ ಸುತ್ತು ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಫ್ಯಾನ್ಸ್ ಕೂಡ ಭಾವುಕರಾಗಿದ್ದು ಈ ವೇಳೆ ಕಂಡು ಬಂತು.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಮತ್ತು ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಗಾನ್‌ನಂತಹ ಪ್ರಸಿದ್ಧ ಫುಟ್‌ಬಾಲ್ ಕ್ಲಬ್‌ಗಳು ಸಹ 39 ವರ್ಷದ ಸುನಿಲ್ ಛೆಟ್ರಿ ಅವರನ್ನು ಗೌರವಿಸಿದವು. ಕೋಲ್ಕತ್ತಾದ ಈ ಎರಡೂ ಖ್ಯಾತ ಕ್ಲಬ್‌ಗಳೊಂದಿಗೆ ಛೆಟ್ರಿ ತಮ್ಮ ಸುದೀರ್ಘ ವೃತ್ತಿಜೀವನ ಹೊಂದಿದ್ದರು. ಅವರು ದೇಶದ ಪರ 151 ಪಂದ್ಯಗಳಲ್ಲಿ ಕಣಕ್ಕಿಳಿದು ದಾಖಲೆಯ 94 ಗೋಲುಗಳನ್ನು ಗಳಿಸಿದ್ದಾರೆ. ವಿದಾಯ ಹೇಳಿದ ಸುನಿಲ್ ಛೆಟ್ರಿ ಅವರ ಎರಡನೇ ಇನ್ನಿಂಗ್ಸ್ ಮತ್ತಷ್ಟು ಅದ್ಭುತವಾಗಿರಲಿ ಎಂದು ನಾವೆಲ್ಲರೂ ಆಶಿಸೋಣ.
ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
