ಕನ್ನಡ ಸುದ್ದಿ  /  Sports  /  Sunil Chhetri Says Indian Football Team Is Stronger And More Prepared For 2026 Fifa World Cup Qualifiers Vs Kuwait Jra

ಹಿಂದಿಗಿಂತ ಬಲಿಷ್ಠರಾಗಿದ್ದೇವೆ; ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಸಿದ್ಧರಾಗಿದ್ದೇವೆ: ಸುನಿಲ್‌ ಛೆಟ್ರಿ

2026ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ನಾವು ಬಲಿಷ್ಠರಾಗಿದ್ದೇವೆ. ಅಲ್ಲದೆ ಹೆಚ್ಚು ಸಿದ್ಧತೆ ನಡೆಸಿದ್ದೇವೆ ಎಂದು ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್ ಛೆಟ್ರಿ‌ ಹೇಳಿದ್ದಾರೆ.

ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಛೆಟ್ರಿ
ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಛೆಟ್ರಿ

ಫಿಫಾ ವಿಶ್ವಕಪ್ 2026ರ (2026 World Cup qualifiers) ಅರ್ಹತಾ ಸುತ್ತಿನ ಮುಂದಿನ ಸುತ್ತಿಗೆ ಪ್ರವೇಶಿಸಲು ಭಾರತ ಫುಟ್ಬಾಲ್‌ ತಂಡ ಸಜ್ಜಾಗಿದೆ. ಆಟಗಾರರು ಸಾಕಷ್ಟು ಸಮಯ ಹೊಂದಿರುವುದರಿಂದ, ತಂಡವು ಈ ಹಿಂದಿನ ಆವೃತ್ತಿಗಿಂತ ಹೆಚ್ಚು ಬಲಿಷ್ಠವಾಗಿದೆ. ಅಲ್ಲದೆ ಹೆಚ್ಚು ಸಿದ್ಧತೆ ನಡೆಸಿದೆ ಎಂದು ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್ ಛೆಟ್ರಿ (Sunil Chhetri) ಭರವಸೆ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಫಿಫಾ ವಿಶ್ವಕಪ್ 2026 ಮತ್ತು ಎಎಫ್‌ಸಿ ಏಷ್ಯನ್ ಕಪ್ ಸೌದಿ ಅರೇಬಿಯಾ 2027 ಜಂಟಿ ಅರ್ಹತಾ ಅಭಿಯಾನದ 2ನೇ ಸುತ್ತಿನಲ್ಲಿ ಗುರುವಾರ ನಡೆಯಲಿರುವ ಮೊದಲನೆ ವಿದೇಶಿ ಮುಖಾಮಖಿಯಲ್ಲಿ ಕುವೈತ್ ವಿರುದ್ಧದ ಪಂದ್ಯ ನಡೆಯುತ್ತಿದೆ. ಅನುಭವಿ ಆಟಗಾರ ಸುನಿಲ್ ಛೆಟ್ರಿ ಭಾರತ ತಂಡವನ್ನು‌ ಮುನ್ನಡೆಸಲಿದ್ದಾರೆ.

ತವರಿನಲ್ಲಿ ನಡೆದ ಪಂದ್ಯಗಳಲ್ಲಿ ಅಂತರಾಷ್ಟ್ರೀಯ ತಂಡಗಳ ವಿರುದ್ಧದ ಉತ್ತಮ ಪ್ರದರ್ಶನ ನೀಡಿರುವ ಭಾರತ ತಂಡವು ಈಗ ಹೆಚ್ಚು ಸ್ಥಿರವಾಗಿದೆ ಎಂದು 39ರ ಹರೆಯದ ಅನುಭವಿ ಆಟಗಾರ ಹೇಳಿದ್ದಾರೆ.

“ಕಳೆದ 6-8 ತಿಂಗಳುಗಳಲ್ಲಿ ತಂಡವು ಸ್ಥಿರವಾಗಿ ಆಡುತ್ತಿದೆ ಎಂದು ನಾನು ಭಾವಿಸುತ್ತೇನೆ. ಬಹಳಷ್ಟು ಹುಡುಗರು ತಂಡದಲ್ಲಿ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಂಡಿದ್ದಾರೆ. ಹೀಗಾಗಿಯೇ ಬಹುಶಃ ನಾವು ಎಲ್ಲಾ ಪಂದ್ಯಗಳಿಗೂ ಸಿದ್ಧರಾಗಿದ್ದೇವೆ ಅನಿಸುತ್ತಿದೆ” ಎಂದು ಛೆಟ್ರಿ AIFFಗೆ ಸೋಮವಾರ ತಿಳಿಸಿದ್ದಾರೆ.

ಕತಾರ್‌, ಅಫ್ಘಾನಿಸ್ತಾನ ವಿರುದ್ಧ ಆಡಿದ ಅನುಭವವಿದೆ

ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಭಾರತವು ಕುವೈತ್, ಕತಾರ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಪಂದ್ಯಗಳನ್ನು ಆಡಲಿದೆ. ಈ ಕುರಿತು ಮಾತನಾಡಿದ ಛೆಟ್ರಿ, “ನಾವು ಕೆಲವು ತಿಂಗಳುಗಳ ಹಿಂದೆ ಎರಡು ಬಾರಿ ಕುವೈತ್‌ ವಿರುದ್ಧ ಆಡಿದ್ದೇವೆ. ಹೀಗಾಗಿ ಆ ತಂಡದ ಕುರಿತು ಚೆನ್ನಾಗಿ ತಿಳಿದುಕೊಂಡಿದ್ದೇವೆ. ನಾವು ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಮೂರು ಬಾರಿ ಕತಾರ್‌ನಲ್ಲಿ ಆಡಿದ್ದೇವೆ. ಆ ಅನುಭವ ಕೂಡಾ ನಮಗೆ ನೆರವಾಗಲಿದೆ. ಅಫ್ಘಾನಿಸ್ತಾನ ತಂಡ ಹೇಗಿದೆಯೆಂದೂ ನಮಗೆ ತಿಳಿದಿದೆ. ಅವರ ವಿರುದ್ಧ ನಾವು ಸಾಕಷ್ಟು ಬಾರಿ ಆಡಿದ್ದೇವೆ” ಎಂದಿದ್ದಾರೆ.

ಟೀಮ್‌ ವರ್ಕ್‌ ಮುಖ್ಯ

ಭಾರತವು ತನ್ನ ಪ್ರತಿಸ್ಪರ್ಧಿಗಳಿಗೆ ಕಠಿಣ ಪೈಪೋಟಿ ನೀಡಲು ವೈಯಕ್ತಿಕ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಟೀಮ್‌ವರ್ಕ್ ಅನ್ನು ನೆಚ್ಚಿಕೊಂಡಿದೆ ಎಂದು ಛೆಟ್ರಿ ಹೇಳಿದರು. “ನಾವು ಸರಿಯಾದ ಹಂತದಲ್ಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಮ್ಮ ತಂಡವು ಬಲಿಷ್ಠವಾಗಿದೆ. ಕೆಲವು ಸಮಯದಿಂದ ನಾವೆಲ್ಲರೂ ಜೊತೆಗೆ ಆಡಿದ್ದೇವೆ. ಬಹಳಷ್ಟು ಯುವಕರು ತಂಡದಲ್ಲಿದ್ದಾರೆ. ತಂಡವು ಕಠಿಣ ಪರಿಶ್ರಮ, ತಂಡದ ಮನೋಭಾವ ಮತ್ತು ಒಗ್ಗಟ್ಟಿನ ಆಟವನ್ನು ಅವಲಂಬಿಸಿದೆ. ಬಹಳಷ್ಟು ಇತರ ತಂಡಗಳು ವೈಯಕ್ತಿಕ ಸಾಮರ್ಥ್ಯ ಸೇರಿದಂತೆ ಇತರ ವಿಷಯಗಳನ್ನು ನೆಚ್ಚಿಕೊಂಡಿವೆ. ಆದರೆ ನಾವು ಹಾಗಲ್ಲ,” ಎಂದು ಅವರು ಹೇಳಿದರು.

ತವರಿನಲ್ಲಿ ಈ ವರ್ಷ ವಿದೇಶಿ ತಂಡಗಳ ವಿರುದ್ಧ ಆಡಿದ ಎಲ್ಲಾ 11 ಪಂದ್ಯಗಳಲ್ಲಿಯೂ ಭಾರತ ಅಜೇಯವಾಗಿ ಮುನ್ನಡೆಯುತ್ತಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಬಲಿಷ್ಠ ಪ್ರದರ್ಶನ ನೀಡುವ ಉತ್ಸಾಹದಲ್ಲಿ ತಂಡವಿದೆ.