ಕನ್ನಡ ಸುದ್ದಿ  /  Sports  /  Sunil Gavaskar Compares Kohli With Kl Rahul

Sunil Gavaskar: 'ಕೊಹ್ಲಿ-ಕೆಎಲ್ ನಡುವೆ ತುಂಬಾ ಸಾಮ್ಯತೆಗಳಿವೆ; ಆದರೆ ಬಾಡಿ ಲ್ಯಾಂಗ್ವೇಜ್ ಮಾತ್ರ ಭಿನ್ನ'

ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ರಾಹುಲ್ ಅಮೋಘ ಆಟದಿಂದ ಪ್ರಭಾವಿತರಾಗಿದ್ದಾರೆ. ಇದೇ ವೇಳೆ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೆಎಲ್‌ ನಡುವಿನ ಕೆಲ ಹೋಲಿಕೆಗಳನ್ನು ವಿವರಿಸುವ ಮೂಲಕ ಕನ್ನಡಿಗನನ್ನು ಶ್ಲಾಘಿಸಿದ್ದಾರೆ.

ಕೆಎಲ್ ರಾಹುಲ್, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ
ಕೆಎಲ್ ರಾಹುಲ್, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ

ಉಪನಾಯಕನ ಪಟ್ಟ ಸಹಿತ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡು ವ್ಯಾಪಕ ಟೀಕೆಗೊಳಗಾದ ಕನ್ನಡಿಗ ಕೆಎಲ್ ರಾಹುಲ್, ಕೆಲವೇ ದಿನಗಳಲ್ಲಿ ಮತ್ತೆ ತಮ್ಮನ್ನು ತಾವು‌ ಸಬೀತುಪಡಿಸಿಕೊಂಡರು. ಶುಕ್ರವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 91 ಎಸೆತಗಳಲ್ಲಿ ಅಜೇಯ 75 ರನ್ ಗಳಿಸುವ ಮೂಲಕ ಉನ್ನತ ದರ್ಜೆಯ ಬ್ಯಾಟಿಂಗ್‌ ಪ್ರದರ್ಶಿಸಿದರು. ಆ ಮೂಲಕ ಕಾಂಗರೂಗಳನ್ನು ಸೋಲಿಸಲು ಭಾರತಕ್ಕೆ ನೆರವಾದರು.

ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ರಾಹುಲ್ ಅಮೋಘ ಆಟದಿಂದ ಪ್ರಭಾವಿತರಾಗಿದ್ದಾರೆ. ಇದೇ ವೇಳೆ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೆಎಲ್‌ ನಡುವಿನ ಕೆಲ ಹೋಲಿಕೆಗಳನ್ನು ವಿವರಿಸುವ ಮೂಲಕ ಕನ್ನಡಿಗನನ್ನು ಶ್ಲಾಘಿಸಿದ್ದಾರೆ.

ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಗವಾಸ್ಕರ್, ಕಳೆದ ತಿಂಗಳು ಟೆಸ್ಟ್ ಪಂದ್ಯಗಳಲ್ಲಿ ಸ್ಥಿರವಾಗಿ ಆಡಲು ಹೋರಾಟ ನಡೆಸಿದ ಕೊಹ್ಲಿಯಂತೆ ರಾಹುಲ್ ಆಟದಲ್ಲಿಯೂ ಯಾವುದೇ ತಾಂತ್ರಿಕ ದೋಷವಿಲ್ಲ ಎಂದು ಹೇಳಿದರು. ಆದರೆ ಅವರಿಗೆ ಅದೃಷ್ಟದ ಕೊರತೆಯಿದೆ ಎಂದು ವಿವರಿಸಿದರು. ಇದೇ ವೇಳೆ ಇವರಿಬ್ಬರ ನಡುವಿನ ಏಕೈಕ ವ್ಯತ್ಯಾಸವೆಂದರೆ ಅವರ ಆಂಗಿಕ ಭಾಷೆ(body language) ಎಂದು ಬ್ಯಾಟಿಂಗ್ ದಂತಕಥೆ ವಿವರಿಸಿದರು.

“ರಾಹುಲ್‌ ಅವರಲ್ಲಿ ಉತ್ತಮ ತಂತ್ರವಿದೆ ಮತ್ತು ಮನೋಧರ್ಮವಿದೆ ಎಂದು ನಾವು ಮೊದಲೇ ಹೇಳಿದ್ದೇವೆ. ಆದರೆ ಆಟದಲ್ಲಿ ಕೆಲವೊಮ್ಮೆ ಅದೃಷ್ಟವೂ ಬೇಕು. ವಿರಾಟ್ ಕೊಹ್ಲಿಯಂತೆಯೇ, ರಾಹುಲ್‌ ಕೂಡಾ ತಮ್ಮ ಮೊದಲ ತಪ್ಪಿನಿಂದಲೇ ಔಟಾಗುತ್ತಿದ್ದರು. ಆದರೆ ಅವರಿಬ್ಬರ ಆಂಗಿಕ ಭಾಷೆಯಲ್ಲಿ ತುಂಬಾ ವ್ಯತ್ಯಾಸಗಳಿವೆ. ಕೊಹ್ಲಿ ಔಟಾದರೂ ಅವರ ಬಾಡಿ ಲ್ಯಾಂಗ್ವೇಜ್‌ ಬೇರೆ ರೀತಿ ಇರುತ್ತದೆ. ಅವರು ಸದಾ ಆತ್ಮವಿಶ್ವಾಸದಿಂದ ಇರುತ್ತಾರೆ. ಆದರೆ, ರಾಹುಲ್‌ ಆ ರೀತಿ ಅಲ್ಲ. ಆಸೀಸ್‌ ವಿರುದ್ಧ ಅವರು ಬ್ಯಾಟ್ ಮಾಡಿದ ರೀತಿಯಿಂದ, ಟೀಮ್ ಮ್ಯಾನೇಜ್ ಮೆಂಟ್‌ ಅವರ ಮೇಲೆ ತೋರಿದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ,” ಎಂದು ಅವರು ಹೇಳಿದರು.

ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು, ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ರಾಹುಲ್ ಅವರ ಬಹುಮುಖ ಪ್ರತಿಭೆಯನ್ನು ಸಮರ್ಥಿಸುವ ಮೂಲಕ ಅವರ ಸಾಮರ್ಥ್ಯಕ್ಕೆ ಮನ್ನಣೆ ನೀಡಿದ್ದಾರೆ. ಇದೇ ವೇಳೆ 2023ರ ಏಕದಿನ ವಿಶ್ವಕಪ್‌ಗೆ ಅವರು ತಮ್ಮ ಸ್ಥಾನವನ್ನು ಖಚಿತಪಡಿಸಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

“ಯಾರು ವಿವಿಧ ಕ್ರಮಾಂಕಗಳಲ್ಲಿ ಬ್ಯಾಟ್ ಬೀಸುತ್ತಾರೋ, ಅದು ಅವರಿಗೆ ಧನಾತ್ಮಕ ಅಂಶವಾಗುತ್ತದೆ. ರಾಹುಲ್‌ ಭಿನ್ನ-ವಿಭಿನ್ನ ಸನ್ನಿವೇಶಗಳಿಗೆ ತೆರೆದುಕೊಂಡಿದ್ದಾರೆ. ಭಾರತವು ಐದನೇ ಮತ್ತು ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಆಡಬಲ್ಲ ಆಟಗಾರನನ್ನು ಹೊಂದಿದ್ದು ದೊಡ್ಡ ಪ್ರಯೋಜನವಾಗಿದೆ. ಹೊಸ ಚೆಂಡಿನ ವಿರುದ್ಧವೂ ಅವರು ಆಡಬಲ್ಲರು. ಅವರು ಶಾಟ್ ಆಡಲು ಸಾಧ್ಯವಾಗದ ಯಾವುದೇ ಪ್ರದೇಶವಿಲ್ಲ,” ಎಂದು ಅವರು ಹೇಳಿದರು.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಗೆಲುವು ಸಾಧಿಸಲು ರಾಹುಲ್‌ ಪಾತ್ರ ನಿರ್ಣಾಯಕವಾಗಿತ್ತು.‌ ಮೊದಲು ಬ್ಯಾಟಿಂಗ್​ ನಡೆಸಿದ್ದ ಆಸ್ಟ್ರೇಲಿಯಾ, ಭಾರತೀಯ ಬೌಲರ್‌​​​ಗಳ ದಾಳಿಗೆ ತತ್ತರಿಸಿತು. ಹೀಗಾಗಿ 35.4 ಓವರ್‌​​​ಗಳಲ್ಲಿ 188 ರನ್ ಗಳಿಸಿ ಆಲೌಟ್‌ ಆಯ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಮಾಡಿದ ಭಾರತ, ರಾಹುಲ್‌ ಹಾಗೂ ಜಡೇಜಾ ಅವರ ಶತಕದ ಜೊತೆಯಾಟದ ನೆರವಿನಿಂದ 39.5 ಓವರ್‌​​​ಗಳಲ್ಲಿ ಗೆಲುವಿನ ನಗು ಬೀರಿತು. ರವೀಂದ್ರ ಜಡೇಜಾ ಅಜೇಯ 45 ರನ್​​​ ಸಿಡಿಸಿದರೆ, ರಾಹುಲ್​​ ಅಜೇಯ 75 ರನ್​ ಗಳಿಸಿದರು.