Kannada News  /  Sports  /  Suresh Raina Gives Credit Of Yashasvi Jaiswal Performance In Ipl 2023 To Sri Lanka Legend Kumar Sangakkara Jra
ಯಶಸ್ವಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್ (PTI)

Suresh Raina: ಜೈಸ್ವಾಲ್ ಯಶಸ್ಸಿನ ಶ್ರೇಯಸ್ಸನ್ನು ಲಂಕಾ ದಿಗ್ಗಜನಿಗೆ ನೀಡಿದ ರೈನಾ

20 May 2023, 18:12 ISTJayaraj
20 May 2023, 18:12 IST

IPL 2023:‌ ಭಾರತೀಯ ಕ್ರಿಕೆಟ್‌ನಲ್ಲಿ ಜೈಸ್ವಾಲ್ ಅವರ ಹೆಸರು ಮುನ್ನೆಲೆಗೆ ಬರಲು, ಪ್ರಸ್ತುತ ರಾಜಸ್ಥಾನ ತಂಡದ ಮುಖ್ಯ ಕೋಚ್ ಮತ್ತು ಶ್ರೀಲಂಕಾದ ದಂತಕಥೆಯಾಗಿರುವ ಕುಮಾರ ಸಂಗಕ್ಕಾರ ಅವರು ಪ್ರಮುಖ ಕಾರಣ ಎಂದು ರೈನಾ ಹೇಳಿದ್ದಾರೆ.

ಶುಕ್ರವಾರ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡವು ನಾಲ್ಕು ವಿಕೆಟ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿತು. ಆ ಮೂಲಕ ಐಪಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿ ತನ್ನ ಪ್ಲೇಆಫ್ ಆಸೆಯನ್ನು ಸ್ಯಾಮ್ಸನ್‌ ಪಡೆ ಜೀವಂತವಾಗಿರಿಸಿಕೊಂಡಿದೆ. ತಂಡದ ಈ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ಯಶಸ್ವಿ ಜೈಸ್ವಾಲ್.

ಪಂಜಾಬ್‌ ನೀಡಿದ 188 ರನ್‌ಗಳ ಬೃಹತ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವಲ್ಲಿ ಜೈಸ್ವಾಲ್ ನಿರ್ಣಾಯಕ ಪಾತ್ರ ವಹಿಸಿದರು. 19.4 ಓವರ್‌ಗಳಲ್ಲಿ 189 ತಲುಪಿದ ರಾಜಸ್ಥಾನ ಪರ, ಯುವ ಆಟಗಾರ ಅರ್ಧಶತಕ ದಾಖಲಿಸಿದರು. 36 ಎಸೆತಗಳಲ್ಲಿ ಎಂಟು ಬೌಂಡರಿಗಳೊಂದಿಗೆ 50 ರನ್ ಗಳಿಸಿದ ಜೈಸ್ವಾಲ್, ಪ್ರಸಕ್ತ ಆವೃತ್ತಿಯಲ್ಲಿ ತಮ್ಮ ಅಮೋಘ ಫಾರ್ಮ್‌ ಅನ್ನು ಮತ್ತೆ ಮುಂದುವರೆಸಿದರು. 21ರ ಹರೆಯದ ಆಟಗಾರ ಪ್ರಸ್ತುತ 14 ಪಂದ್ಯಗಳಲ್ಲಿ ಒಂದು ಶತಕ ಮತ್ತು ಐದು ಅರ್ಧ ಶತಕಗಳೊಂದಿಗೆ 625 ರನ್‌ ಕಲೆ ಹಾಕಿದ್ದಾರೆ. ಆ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಜೈಸ್ವಾಲ್‌ ಪ್ರದರ್ಶನದ ಕುರಿತು ಜಿಯೋ ಸಿನಿಮಾ (JioCinema)ದಲ್ಲಿ ಮಾತನಾಡಿದ ಭಾರತದ ದಿಗ್ಗಜ ಆಟಗಾರ ಸುರೇಶ್ ರೈನಾ, ಜೈಸ್ವಾಲ್‌ ಯಶಸ್ಸಿನ ಕುರಿತು ವಿವರಿಸಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಜೈಸ್ವಾಲ್ ಅವರ ಹೆಸರು ಮುನ್ನೆಲೆಗೆ ಬರಲು, ಪ್ರಸ್ತುತ ರಾಜಸ್ಥಾನ ತಂಡದ ಮುಖ್ಯ ಕೋಚ್ ಮತ್ತು ಶ್ರೀಲಂಕಾದ ದಂತಕಥೆಯಾಗಿರುವ ಕುಮಾರ ಸಂಗಕ್ಕಾರ ಅವರು ಪ್ರಮುಖ ಕಾರಣ ಎಂದು ಹೇಳಿದ್ದಾರೆ.

“ಜೈಸ್ವಾಲ್ ಬ್ಯಾಟಿಂಗ್‌ನಲ್ಲಿ ಒಂದು ನಿರ್ದಿಷ್ಟ ಶಾಂತತೆಯಿದೆ. ಅವರ ಆಂಗಿಕ ಭಾಷೆಯಲ್ಲಿ ವಿಭಿನ್ನ ಶಕ್ತಿಯಿದೆ. ತಂಡದ ಪರ ಅವರು ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ. ಜೈಸ್ವಾಲ್‌ ಅವರ ಅದ್ಭುತ ಪ್ರದರ್ಶನಕ್ಕೆ ಅವರ ಡಗೌಟ್‌ನಲ್ಲಿ ಕುಳಿತಿರುವ ಕುಮಾರ ಸಂಗಕ್ಕಾರ ಅವರಿಗೆ ನಾನು ಎಲ್ಲಾ ರೀತಿಯ ಶ್ರೇಯಸ್ಸನ್ನು ನೀಡುತ್ತೇನೆ. ಜೈಸ್ವಾಲ್ ಒಬ್ಬ ವಿಭಿನ್ನ ಶೈಲಿಯ ಆಟಗಾರ. ಅವನು ಆಟದಲ್ಲಿ ಪ್ರಾಬಲ್ಯ ಸಾಧಿಸಲು ನೋಡುತ್ತಾನೆ. ಚುಟುಕು ಸ್ವರೂಪದಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವ ಯಾವುದೇ ಆಟಗಾರನು ವಿಭಿನ್ನ ಮಟ್ಟಕ್ಕೆ ತಲುಪುತ್ತಾನೆ. ಆತ ಆ ಎಲ್ಲಾ ಗುಣಗಳನ್ನು ಹೊಂದಿದ್ದಾನೆ,” ಎಂದು ರೈನಾ ಹೇಳಿದರು.

ಪಂಜಾಬ್‌ ವಿರುದ್ಧದ ಗೆಲುವಿನ ಬಳಿಕ, ರಾಜಸ್ಥಾನ ತಂಡವು 14 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದೆ. ಸದ್ಯ ತಂಡವು +0.148 ನೆಟ್ ರನ್ ರೇಟ್‌ ಹೊಂದಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು ತಂಡವು ಬೇರೆ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಬೃಹತ್ ಅಂತರದಿಂದ ಸೋಲಬೇಕು. ಅಲ್ಲದೆ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲಬೇಕು. ಈ ಎಲ್ಲಾ ಸಂಭಾವ್ಯತೆಯ ಬಳಿಕವಷ್ಟೇ ರಾಜಸ್ಥಾನದ ಭವಿಷ್ಯ ನಿರ್ಧಾರವಾಗಲಿದೆ.

ಶುಕ್ರವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್, 5 ವಿಕೆಟ್‌ ಕಳೆದುಕೊಂಡು 187 ರನ್‌ ಗಳಿಸಿತು. ಬೃಹತ್‌ ಗುರಿ ಬೆನ್ನಟ್ಟಿದ ರಾಜಸ್ಥಾನ, 19.4 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 189 ರನ್‌ ಗಳಿಸಿ ಗೆದ್ದು ಬೀಗಿತು. ಈ ಪಂದ್ಯದಲ್ಲಿಯೂ ಜೋಸ್‌ ಬಟ್ಲರ್‌ ಡಕೌಟ್‌ ಆದರು. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಅವರು ಐದನೇ ಬಾರಿ ಡಕೌಟ್‌ ಆದ ಕಳಪೆ ದಾಖಲೆ ಬರೆದರು. ಈ ವೇಳೆ ಒಂದಾದ ಜೈಸ್ವಾಲ್‌ ಹಾಗೂ ಕನ್ನಡಿಗ ಪಡಿಕಲ್‌ ಅರ್ಧಶತಕದ ಜೊತೆಯಾಟವಾಡಿದರು.