ಪಟ್ನಾಗೆ ಗುಮ್ಮಿದ ಗೂಳಿಗಳು; ಸೋಲುವ ಹಂತದಲ್ಲಿದ್ದ ಪಂದ್ಯಕ್ಕೆ ರೋಚಕ ತಿರುವು, ಬೆಂಗಳೂರು ಬುಲ್ಸ್‌ಗೆ ಗೆಲುವು
Pro Kabaddi League 2023: ಒಂದು ಹಂತದಲ್ಲಿ 12 ಅಂಕಗಳೊಂದಿಗೆ ಭಾರಿ ಹಿನ್ನಡೆ ಅನುಭವಿಸಿದ್ದ ಬೆಂಗಳೂರು ಬುಲ್ಸ್, ಆ ಬಳಿಕ ಪುಟಿದೆದ್ದಿತು. ಪಾಟ್ನಾ ಪೈರೇಟ್ಸ್ ವಿರುದ್ಧ ಗೆಲುವಿನ ನಗಾರಿ ಬಾರಿಸಿತು.
ಪ್ರೊ ಕಬಡ್ಡಿ ಸೀಸನ್ 10ರಲ್ಲಿ (Pro Kabaddi League 2023) ಸೋಲು-ಗೆಲುವುಗಳ ಹಾವು ಏಣಿಯಾಟವಾಡುತ್ತಿರುವ ಬೆಂಗಳೂರು ಬುಲ್ಸ್ (Bengaluru Bulls), ಪಿಕೆಎಲ್ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಜಯ ಸಾಧಿಸಿದೆ. ಭಾರಿ ಅಂತರದಿಂದ ಸೋಲುವ ಹಂತದಲ್ಲಿದ್ದ ಪಂದ್ಯದಲ್ಲಿ ಮಹತ್ವದ ತಿರುವ ಪಡೆದು ರಣರೋಚಕ ಫಲಿತಾಂಶಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಬಲಿಷ್ಠ ಪಟ್ನಾ ಪೈರೇಟ್ಸ್ ವಿರುದ್ಧ 35-33 ಅಂತರದ ರೋಚಕ ಜಯ ಸಾಧಿಸಿ, ಪ್ರಸಕ್ತ ಆವೃತ್ತಿಯಲ್ಲಿ ಐದನೇ ಗೆಲುವನ್ನು ತನ್ನದಾಗಿಸಿಕೊಂಡಿದೆ.
ಕೊನೆಯ ಪಂದ್ಯದಲ್ಲಿ ಸೋತಿದ್ದ ಗೂಳಿಗಳು ಮತ್ತೆ ಮೈಕೊಡವಿ ಆಡಿ ಗೆದ್ದು ಬೀಗಿದೆ. ಒಂದು ಹಂತದಲ್ಲಿ 12 ಅಂಕಗಳೊಂದಿಗೆ ಹಿನ್ನಡೆ ಅನುಭವಿಸಿದ್ದ ಬುಲ್ಸ್, ಆ ಬಳಿಕ ಪುಟಿದೆದ್ದಿತು. ತಂಡದ ಗೆಲುವಿನ ಶ್ರೇಯವು ಮುಖ್ಯವಾಗಿ ಇಬ್ಬರಿಗೆ ಸಲ್ಲುತ್ತದೆ. ರೈಡಿಂಗ್‌ನಲ್ಲಿ ಸಚಿನ್ ನರ್ವಾಲ್ ಮತ್ತು ಡಿಫೆನ್ಸ್‌ನಲ್ಲಿ ಸುರ್ಜೀತ್ ಅಮೋಘ ಆಟವಾಡಿದರು.
ಭಾರಿ ತಿರುವು ಕಂಡ ಪಂದ್ಯ
ಒಂದು ಹಂತದಲ್ಲಿ ಪಾಟ್ನಾ ತಂಡವು 22-32 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಬೆಂಗಳೂರು ಬುಲ್ಸ್ ಅಭಿಮಾನಿಗಳು ಮತ್ತೊಂದು ಸೋಲಿಗೆ ಸಜ್ಜಾಗಿದ್ದರು. ಆದರೆ ಆ ಬಳಿಕ ನಡೆದಿದ್ದೇ ಗೂಳಿಗಳ ಆರ್ಭಟ. ರಣ್ ಸಿಂಗ್ ಮತ್ತು ಸುರ್ಜೀತ್ ಮಂಜೀತ್ ಅವರನ್ನು ಸೂಪರ್ ಟ್ಯಾಕಲ್ ಮಾಡುವುದರೊಂದಿಗೆ ಅಬ್ಬರಕ್ಕೆ ಮುನ್ನುಡಿಯಿಟ್ಟರು. ಅಲ್ಲಿಂದ ಪೈರೇಟ್ಸ್ ಕನಿಷ್ಠ ಒಂದು ಅಂಕ ಕೂಡಾ ಕಲೆ ಹಾಕಲು ಸಾಧ್ಯವಾಗಲಿಲ್ಲ. 33 ಅಂಕ ಗಳಿಸಿದ್ದ ತಂಡ ಅಷ್ಟರಲ್ಲೇ ಮುಂದುವರೆಯಿತು. ಇತ್ತ ಒಂದು ಹಂತದಲ್ಲಿ 23 ಅಂಕ ಕಲೆ ಹಾಕಿದ್ದ ಬುಲ್ಸ್ ಸತತ 10 ಅಂಕ ಗಳಿಸಿ ಗೆದ್ದು ಬೀಗಿತು.
ಬುಲ್ಸ್ ಪರ ಸಚಿನ್ ನರ್ವಾಲ್ 9 ಅಂಕ ಗಳಿಸಿದರೆ, ಅಮೋಘ ಟ್ಯಾಕಲ್ ಕಲೆ ಪ್ರದರ್ಶಿಸಿದ ಸುರ್ಜೀತ್ 8 ಪಾಯಿಂಟ್ ಪಡೆದರು. ಅತ್ತ ಪಟ್ನಾ ಪರ ಮಂಜೀತ್ ಮತ್ತು ಸಚಿನ್ ಕ್ರಮವಾಗಿ 7 ಮತ್ತು 6 ಅಂಕ ಕಲೆ ಹಾಕಿದರು.
ಈ ಗೆಲುವಿನಿಂದ ಬುಲ್ಸ್ ಮತ್ತೆ 5 ಅಂಕಗಳನ್ನು ಸಂಪಾದಿಸಿದೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಏರಿದೆ.
ಇದನ್ನೂ ಓದಿ | ವಾರಿಯರ್ಸ್‌ಗೆ ಸೋಲಿನ ರುಚಿ ತೋರಿಸಿದ ಹರಿಯಾಣ; ತಲೈವಾಸ್ ಮಣಿಸಿ ಅಗ್ರಪಟ್ಟ ಉಳಿಸಿಕೊಂಡ ಪಲ್ಟನ್
ಪ್ರೊ ಕಬಡ್ಡಿ ಲೀಗ್‌ನ ಭಾನುವಾರದ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು ತಮಿಳ್ ತಲೈವಾಸ್ ವಿರುದ್ಧ 29-26 ಅಂಕಗಳಿಂದ ರೋಚಕ ಗೆಲುವು ಸಾಧಿಸಿತು. ಜನವರಿ 7ರಂದು ನಡೆದ ಎರಡನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 35-41 ಅಂಕಗಳಿಂದ ಜಯ ಸಾಧಿಸಿತು.