ಕನ್ನಡ ಸುದ್ದಿ  /  Sports  /  Suryakumar And Virat Help Steer India To Series Clinching Win Against Australia

India vs Australia 3rd T20I: ವಿರಾಟ್-ಸೂರ್ಯ ಆಟಕ್ಕೆ ದಕ್ಕಿದ ಜಯ, ಕಾಂಗರೂಗಳ ವಿರುದ್ಧ ಸರಣಿ ಗೆಲುವು

ಇದು ಮೂರು ವರ್ಷಗಳ ಬಳಿಕ ಹೈದರಾಬಾದ್‌ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಟಾಸ್‌ಗೆ ಮುಂಚಿತವಾಗಿಯೇ ಅಭಿಮಾನಿಗಳು ಸ್ಟ್ಯಾಂಡ್‌ಗಳನ್ನು ಭರ್ತಿ ಮಾಡಿದ್ದರು. ರೋಹಿತ್ ಶರ್ಮಾ ಟಾಸ್‌ ಗೆದ್ದಂತೆ ಭಾರಿ ಕೇಕೆ ಹಾಕಿದರು.

ಸೂರ್ಯಕುಮಾರ್‌-ವಿರಾಟ್‌ ಶತಕದ ಜತೆಯಾಟ
ಸೂರ್ಯಕುಮಾರ್‌-ವಿರಾಟ್‌ ಶತಕದ ಜತೆಯಾಟ

ಹೈದರಾಬಾದ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯವನ್ನು ಭಾರತ ಗೆದ್ದು ಬೀಗಿದೆ. ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ, ಭಾನುವಾರ ಅಪರೂಪದ ಹಾಗೂ ಗುಣಮಟ್ಟದ ಇನ್ನಿಂಗ್ಸ್‌ಗಳು ಕಂಡುಬಂದವು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ರೋಚಕ ಜಯ ಒಲಿಸಿಕೊಂಡಿತು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಭಾರತ 2-1ರಿಂದ ಗೆದ್ದಿದೆ.

ಟಾಸ್‌ ಗೆದ್ದ ರೋಹಿತ್‌ ಶರ್ಮಾ ಅಚ್ಚರಿ ಎಂಬಂತೆ ಬೌಲಿಂಗ್‌ ಆಯ್ಕೆ ಮಾಡಿದರು. ಹೈದರಾಬಾದ್‌ ಪಿಚ್‌ನಲ್ಲಿ ಆರಂಭದಲ್ಲಿ ಬ್ಯಾಟಿಂಗ್‌ ಆಯ್ಕೆ ಮಾಡುವುದೇ ಹೆಚ್ಚು.‌ ಆದರೆ ರೋಹಿತ್‌, ಆಸೀಸ್‌ ದೈತ್ಯರನ್ನು ಬ್ಯಾಟಿಂಗ್‌ಗೆ ಇಳಿಸಿದರು. ಆಸೀಸ್‌ ಓಪನರ್‌ ಕ್ಯಾಮರೂನ್ ಗ್ರೀನ್ ಅವರು 21ಎಸೆತಗಳಲ್ಲಿ 52 ರನ್‌ ಸಿಡಿಸಿ ಪವರ್‌ಪ್ಲೇಯಲ್ಲಿ ಭಾರತಕ್ಕೆ ಭಾರಿ ಹೊಡೆತ ನೀಡಿದರು. ಮಧ್ಯಮ ಓವರ್‌ಗಳಲಿ ತುಸು ಕುಸಿದ ಕಾಂಗರೂಗಳಿಗೆ ಮತ್ತೆ ಬೂಸ್ಟ್‌ ಕೊಟ್ಟಿದ್ದು ಡೇವಿಡ್. ಸ್ಲಾಗ್ ಓವರ್‌ಗಳಲ್ಲಿ ಟಿಮ್ ಡೇವಿಡ್ ಅವರು 27 ಎಸೆತಗಳಲ್ಲಿ ಗಳಿಸಿದ 54 ರನ್‌ ಆಸ್ಟ್ರೇಲಿಯ ರನ್‌ ಹೆಚ್ಚಿಸಲು ಸಹಾಯಕವಾಯ್ತು.

ನಿರ್ಣಾಯಕವಾಗಿದ್ದ ಮೂರನೇ ಟಿ20 ಪಂದ್ಯದಲ್ಲಿ 30 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ 187 ರನ್ ಗುರಿ ದೊಡ್ಡದಾಗಿತ್ತು. ಈ ವೇಳೆ ಬ್ಯಾಟಿಂಗ್‌ಗೆ ಬಂದ ಸೂರ್ಯ, 36 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 69 ರನ್ ಗಳಿಸಿದರು. ಈನ್ನೊಂದೆಡೆ ವಿರಾಟ್ ಕೊಹ್ಲಿ 48 ಎಸೆತಗಳ 63 ರನ್‌ ಸಿಡಿಸಿದರು. ಭಾರತ ಗೆಲುವಿನಲ್ಲಿ ಈ ರನ್‌ ಪ್ರಮುಖ ಪಾತ್ರ ವಹಿಸಿತು. ಇವರಿಬ್ಬರು ಮೂರನೇ ವಿಕೆಟ್‌ಗೆ ಶತಕದ ಜತೆಯಾಟ ನೀಡಿದರು. ಅಂತಿಮವಾಗಿ ಆರು ವಿಕೆಟ್‌ಗಳ ಜಯದ ಮೂಲಕ ಭಾರತ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು.

ಇದು ಮೂರು ವರ್ಷಗಳ ಬಳಿಕ ಹೈದರಾಬಾದ್‌ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಟಾಸ್‌ಗೆ ಮುಂಚಿತವಾಗಿಯೇ ಅಭಿಮಾನಿಗಳು ಸ್ಟ್ಯಾಂಡ್‌ಗಳನ್ನು ಭರ್ತಿ ಮಾಡಿದ್ದರು. ರೋಹಿತ್ ಶರ್ಮಾ ಟಾಸ್‌ ಗೆದ್ದಂತೆ ಭಾರಿ ಕೇಕೆ ಹಾಕಿದರು.

ಆಸ್ಟ್ರೇಲಿಯಾ ನೀಡಿದ ಬೃಹತ್‌ ಗುರಿ ಬೆನ್ನತ್ತಲು ಭಾರತದ ಆಟಗಾರರು ಮೈದಾನಕ್ಕಿಳಿದಾಗ, ಎಲ್ಲರ ಕಣ್ಣು ಆರಂಭಿಕರ ಮೇಲಿದ್ದವು. ಆದರೆ ಕೆ ಎಲ್‌ ರಾಹುಲ್ ಒಂದು ರನ್‌ ಗಳಿಸಿ ಔಟಾದರು. ಮತ್ತೊಂದೆಡೆ ನಾಯಕ ಶರ್ಮಾ ಅಬ್ಬರಿಸುವ ಸೂಚನೆ ನೀಡಿ ನಿರ್ಗಮಿಸಿದರು. ಮೂರನೇ ವಿಕೆಟ್‌ಗೆ ಕೊಹ್ಲಿ ಮತ್ತು ಯಾದವ್ 104 ರನ್‌ಗಳ ಅತ್ಯಮೂಲ್ಯ ಜತೆಯಾಟದೊಂದಿಗೆ ಮೌನವಾಗಿದ್ದ ಪ್ರೇಕ್ಷಕರಿಗೆ ತಮ್ಮ ಧ್ವನಿಯನ್ನು ಮರಳಿ ಪಡೆಯಲು ಸಹಾಯ ಮಾಡಿದರು.

ಯಾದವ್ ಆಟ ಮತ್ತೆ ಅಮೋಘವಾಗಿತ್ತು. ಮುತ್ತಿನ ನಗರಿಯ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು. 10 ಓವರ್‌ಗಳ ಬಳಿಕ ಭಾರತ 91 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸುಸ್ತಿತಿಯಲ್ಲಿತ್ತು. 12ನೇ ಓವರ್‌ನಲ್ಲಿ ಕೇವಲ ನಾಲ್ಕು ಸಿಂಗಲ್‌ ಮಾತ್ರ ಬಂತು. ಆದರೆ ಝಂಪಾ ಅವರ ಮುಂದಿನ ಓವರ್‌ನಲ್ಲಿ, ಯಾದವ್ ಎರಡು ಅದ್ಭುತ ಸಿಕ್ಸರ್‌ಗಳೊಂದಿಗೆ ಕಂಬ್ಯಾಕ್‌ ಮಾಡಿದರು. 29 ಎಸೆತಗಳಲ್ಲಿ ಅರ್ಧಶತಕ ತಲುಪಿದರು.

ತಂಡದ ಮೊತ್ತ 134 ಆಗಿದ್ದಾಗ, ಗೆಲುವಿಗೆ 36 ಎಸೆತಗಳಲ್ಲಿ 53 ರನ್‌ಗಳ ಅಗತ್ಯವಿತ್ತು. ಈ ವೇಳೆ ಸೂರ್ಯ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು. ಆ ಬಳಿಕ ಕೊಹ್ಲಿ ಗೆಲುವಿನತ್ತ ಮುನ್ನುಗ್ಗಿದರು. ಆದರೆ ಕೊನೆಯ ಓವರ್‌ನಲ್ಲಿ ಭಾರತಕ್ಕೆ ಗೆಲ್ಲಲು 11 ರನ್‌ಗಳ ಅಗತ್ಯವಿತ್ತು. ಮೊದಲ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ, ಎರಡನೇ ಎಸೆತದಲ್ಲಿ 63 ರನ್‌ ಗಳಿಸಿದ್ದ ಕೊಹ್ಲಿ ಔಟಾದ್ರು. ಈಗ ಒತ್ತಡ ಪಾಂಡ್ಯಾ ಮೇಲೆ ಬಿತ್ತು. ನಂತರ ಬೌಂಡರಿಗಳು ಬರುವುದು ಕಷ್ಟಕರವಾಗಿತ್ತು. ಆದರೆ, ಐದನೇ ಎಸೆತದಲ್ಲಿ ಬೌಂಡರಿ ಗಳಿಸಿದ ಪಾಂಡ್ಯಾ ಭಾರತಕ್ಕೆ ಗೆಲುವಿನ ರನ್‌ ಸಿಡಿಸಿದರು. ಇನ್ನೂ ಒಂದು ಎಸೆತ ಬಾಕಿ ಇರುವಂತೆ ಭಾರತಕ್ಕೆ ಗೆಲುವು ಲಭಿಸಿತು.

ಈ ಮೂಲಕ ಸರಣಿ ಜಯ ದಾಖಲಿಸಿದ ಭಾರತ, ವಿಶ್ವಕಪ್‌ಗೂ ಮುನ್ನ ಗೆಲುವಿನ ಲಯಕ್ಕೆ ಮರಳಿದೆ. ಸೂರ್ಯಕುಮಾರ್‌ ಯಾದವ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯುದ್ದಕ್ಕೂ ಬೌಲಿಂಗ್‌ನಲ್ಲಿ ಮೋಡಿ ಮಾಡಿದ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಸರಣಿಶ್ರೇಷ್ಟ ಪ್ರಶಸ್ತಿ ಪಡೆದರು.