ಕನ್ನಡ ಸುದ್ದಿ  /  Sports  /  Suryakumar Yadav Hints His Test Debut Ahead Of Border Gavaskar Trophy

Suryakumar Yadav Test debut: ಆಸೀಸ್‌ ವಿರುದ್ಧದ ಮೊದಲ ಟೆಸ್ಟ್‌ಗೆ ಸೂರ್ಯ ಪದಾರ್ಪಣೆ? ಅವರೇ ಕೊಟ್ರು ಸುಳಿವು!

ಫೆಬ್ರವರಿ 9ರಿಂದ ಪ್ರಾರಂಭವಾಗುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಬಹು ನಿರೀಕ್ಷಿತ ಮೊದಲ ಪಂದ್ಯಕ್ಕೆ ಆಯ್ಕೆಯಾಗುವ ಸಾಧ್ಯತೆಯ ಬಗ್ಗೆ ಖುದ್ದು ಸೂರ್ಯ ಅವರೇ ಮಹತ್ವದ ಸುಳಿವು ನೀಡಿದ್ದಾರೆ.

ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್ (PTI)

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲೇ ಹೆಚ್ಚು ಜನಪ್ರಿಯತೆ ಗಳಿಸಿದ ಆಟಗಾರ ಸೂರ್ಯಕುಮಾರ್ ಯಾದವ್. ಈ ವಿಚಾರದಲ್ಲಿ ಅವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಮಟ್ಟವನ್ನು ಅದಾಗಲೇ ತಲುಪಿದ್ದಾರೆ. ಟಿ20ಯಲ್ಲಿ ನಾನೇ ನಂಬರ್‌ ವನ್‌ ಎಂಬುದನ್ನು ಈಗಾಗಲೇ ಸ್ಕೈ ತೋರಿಸಿಕೊಟ್ಟಿದ್ದಾರೆ. ಮೇಲಿಂದ ಮೇಲೆ ಉತ್ತಮ ಪ್ರದರ್ಶನ ನೀಡಿರುವ ಇವರು, ಭಾರತ ಕ್ರಿಕೆಟ್‌ ತಂಡದಲ್ಲಿ ಎಲ್ಲಾ ಸ್ವರೂಪಕ್ಕೂ ಸರಿಹೊಂದುವ ಆಟಗಾರನಾಗುವತ್ತ ವೇಗವಾಗಿ ಸಾಗುತ್ತಿದ್ದಾರೆ.

ಭಾರತ ಟಿ20 ತಂಡದಲ್ಲಿ ಈಗಾಗಲೇ ಸೂರ್ಯ ಅವರ ಸ್ಥಾನ ಕಾಯಂ ಆಗಿದೆ. ಅದೇ ರೀತಿ ಏಕದಿನ ತಂಡದಲ್ಲಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಈ ನಡುವೆ, ಈಗ ಮತ್ತೊಂದು ಸುಳಿವು ಸಿಕ್ಕಿದೆ. ಸ್ಕೈ ಈಗ ನೀಲಿ ಜೆರ್ಸಿಯ ಜೊತೆಗೆ ಬಿಳಿ ಜೆರ್ಸಿ ತೊಡುವ ದಿನ ತುಂಬಾ ಹತ್ತಿರ ಬಂದಿದೆ.

ಕಳೆದ ತಿಂಗಳ ಜನವರಿಯಲ್ಲಿ ಟೆಸ್ಟ್ ತಂಡಕ್ಕೆ ಚೊಚ್ಚಲ ಕರೆ ಪಡೆದ ಸೂರ್ಯ, ನಾಗ್ಪುರದಲ್ಲಿ ಫೆಬ್ರವರಿ 9ರಿಂದ ಪ್ರಾರಂಭವಾಗುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಬಹು ನಿರೀಕ್ಷಿತ ಮೊದಲ ಪಂದ್ಯಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಖುದ್ದು ಸೂರ್ಯ ಅವರೇ ಮಹತ್ವದ ಸುಳಿವು ನೀಡಿದ್ದಾರೆ.

ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಸೂರ್ಯಕುಮಾರ್ ಅವರು 'ಹಲೋ ಫ್ರೆಂಡ್' ಎಂಬ ಶೀರ್ಷಿಕೆಯೊಂದಿಗೆ ಹೊಚ್ಚಹೊಸ ಕೆಂಪು SG ಚೆಂಡಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಒಂದು ಸುಳಿವು ಅವರ ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದೆ. ಇದೇ ಕಾರಣಕ್ಕೆ ಸರಣಿಯ ಆರಂಭಿಕ ಪಂದ್ಯದಲ್ಲಿ ಅವರು ಭಾರತದ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗೆ ಪುಷ್ಠಿ ನೀಡಿದೆ.

ಸೂರ್ಯಕುಮಾರ್‌ ಇನ್‌ಸ್ಟಾಗ್ರಾಮ್ ಪೋಸ್ಟ್‌
ಸೂರ್ಯಕುಮಾರ್‌ ಇನ್‌ಸ್ಟಾಗ್ರಾಮ್ ಪೋಸ್ಟ್‌

ಒಂದು ವೇಳೆ ಇವರನ್ನು ತಂಡದಲ್ಲಿ ಸೇರಿಸಿಕೊಂಡರೆ, ಭಾರತದ ಪರ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ. ಕನ್ನಡಿಗೆ ಕೆ ಎಲ್ ರಾಹುಲ್ 5 ನೇ ಸ್ಥಾನದಲ್ಲಿರುತ್ತಾರೆ. ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದರೆ, ಚೇತೇಶ್ವರ ಪೂಜಾರ 3 ಮತ್ತು ವಿರಾಟ್ ಕೊಹ್ಲಿ 4 ನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ಖಚಿತ. ಮಧ್ಯಮ ಕ್ರಮಾಂಕದಲ್ಲಿ ರಾಹುಲ್, ಸೂರ್ಯ ಮತ್ತು ರವೀಂದ್ರ ಜಡೇಜಾ ಬ್ಯಾಟ್‌ ಬೀಸಿದರೆ, 8ನೇ ಕ್ರಮಾಂಕದಲ್ಲಿ ಆರ್ ಅಶ್ವಿನ್ ಲಭ್ಯವಿರುವುದು ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್‌ಗೆ ಕಾರಣವಾಗುತ್ತದೆ.

ನಾಗ್ಪುರ ಪಿಚ್‌ನ ಪ್ರಕಾರ ಭಾರತವು ಮೂರು ವೇಗಿಗಳನ್ನುಕಣಕ್ಕಿಳಿಸಬಹುದು. ಒಂದು ವೇಳೆ ಇಬ್ಬರು ವೇಗಿಗಳು ಆಯ್ಕೆಯಾದರೆ, ಒಬ್ಬ ಹೆಚ್ಚುವರಿ ಸ್ಪಿನ್ನರ್ ಸ್ಥಾನದಲ್ಲಿ ಅಕ್ಸರ್ ಪಟೇಲ್‌ನಲ್ಲಿ ಆಯ್ಕೆಯಾಗಬಹುದು. ಹಾಗಾದರೆ ಅಕ್ಷರ್‌ ಕೂಡಾ ಬ್ಯಾಟಿಂಗ್‌ಗೆ ಬಲ ತುಂಬಲಿದ್ದಾರೆ.

ಡಿಸೆಂಬರ್‌ನಲ್ಲಿ ನಡೆದ ರಸ್ತೆ ಅಪಘಾತದಿಂದಾಗಿ, ರಿಷಭ್ ಪಂತ್ ಟೆಸ್ಟ್‌ ತಂಡಕ್ಕೆ ಲಭ್ಯರಿಲ್ಲ. ಅವರ ಅನುಪಸ್ಥಿತಿಯಿಂದ ಲಭ್ಯವಾದ ಸ್ಥಾನವನ್ನು ತುಂಬಲು ಸೂರ್ಯಕುಮಾರ್ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವುದು ಅರ್ಥಪೂರ್ಣ ನಿರ್ಧಾರ ಎಂದು ಹೇಳಲಾಗಿದೆ. ಪಂತ್‌ನಂತೆ, ಸೂರ್ಯ ಕೂಡ ಆಕ್ರಮಣಕಾರಿ ಆಟವಾಡಲು ಇಷ್ಟಪಡುತ್ತಾರೆ. ಈಗಾಗಲೇ ಅವರ ಸಾಮರ್ಥ್ಯ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇವರ ಆಟ ಹೇಗಿರುತ್ತದೆ ಎಂಬುದನ್ನು ನೋಡುವ ಸಲುವಾಗಿ ತಂಡಕ್ಕೆ ಹಾಕಿಕೊಳ್ಳಬಹುದು.

ಒಟ್ಟು 79 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಿರುವ ಸೂರ್ಯ, 14 ಶತಕಗಳು ಮತ್ತು 28 ಅರ್ಧಶತಕಗಳೊಂದಿಗೆ 5549 ರನ್‌ಗಳನ್ನು ಗಳಿಸಿದ್ದಾರೆ. ಇವರ ಬ್ಯಾಟಿಂಗ್‌ ಸರಾಸರಿ 44.75. ಇದಲ್ಲದೆ, ಭಾರತದ ಪರ ಟೆಸ್ಟ್ ಆಡುವ ತಮ್ಮ ಮಹತ್ವಾಕಾಂಕ್ಷೆಯನ್ನು ಈಗಾಗಲೇ ಸೂರ್ಯ ಬಹಿರಂಗಪಡಿಸಿದ್ದಾರೆ. ಪ್ರತಿಬಾರಿಯೂ ತಮಗೆ ಅವಕಾಶ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.