ಕನ್ನಡ ಸುದ್ದಿ  /  ಕ್ರೀಡೆ  /  ತೃತೀಯ ಲಿಂಗಿ ಮಹಿಳೆಯಿಂದಾಗಿ ಪದಕ ಕಳ್ಕೊಂಡೆ; ಹೊಸ ವಿವಾದ ಎಬ್ಬಿಸಿದ ಅಥ್ಲೀಟ್ ಸ್ವಪ್ನಾ ಬರ್ಮನ್

ತೃತೀಯ ಲಿಂಗಿ ಮಹಿಳೆಯಿಂದಾಗಿ ಪದಕ ಕಳ್ಕೊಂಡೆ; ಹೊಸ ವಿವಾದ ಎಬ್ಬಿಸಿದ ಅಥ್ಲೀಟ್ ಸ್ವಪ್ನಾ ಬರ್ಮನ್

ಸ್ವಪ್ನಾ ಬರ್ಮನ್ ಮಾಡಿದ ಪೋಸ್ಟ್‌ನಲ್ಲಿ ನಂದಿನಿ ಅಗಸರ ಅಥವಾ ಇತರ ಯಾವುದೇ ಕ್ರೀಡಾಪಟುವಿನ ಬಗ್ಗೆ ಉಲ್ಲೇಖಿಸಿಲ್ಲ. ಆದರೆ ಕಂಚಿನ ಪದಕ ವಿಜೇತೆ ನಂದಿನಿ, ಸ್ವಪ್ನಾ ಹೇಳಿಕೆ ಬಗ್ಗೆ ಆಕ್ರೋಶಗೊಂಡಿದ್ದಾರೆ.

ಮಹಿಳೆಯರ ಹೆಪ್ಟಾಥ್ಲಾನ್ ಲಾಂಗ್ ಜಂಪ್‌ನಲ್ಲಿ ಸ್ವಪ್ನಾ ಬರ್ಮನ್
ಮಹಿಳೆಯರ ಹೆಪ್ಟಾಥ್ಲಾನ್ ಲಾಂಗ್ ಜಂಪ್‌ನಲ್ಲಿ ಸ್ವಪ್ನಾ ಬರ್ಮನ್ (REUTERS)

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ವಿಫಲರಾಗಿರುವ ಭಾರತದ ಅಥ್ಲೀಟ್ ಸ್ವಪ್ನಾ ಬರ್ಮನ್ (Swapna Barman), ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಮಹಿಳೆಯರ ಹೆಪ್ಟಾಥ್ಲಾನ್‌ನಲ್ಲಿ ತೃತೀಯ ಲಿಂಗಿ ಮಹಿಳೆಯಿಂದಾಗಿ ತಾನು ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಏಷ್ಯನ್‌ ಗೇಮ್ಸ್‌ನ ಈ ಹಿಂದಿನ ಆವೃತ್ತಿಯು ಜಕಾರ್ತದಲ್ಲಿ ನಡೆದಿತ್ತು. 2018ರ ಆವೃತ್ತಿಯಲ್ಲಿ ಸ್ವಪ್ನಾ ಬರ್ಮನ್ ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿ ಈ ಬಾರಿಯ ಆವೃತ್ತಿಯಲ್ಲೂ ಬರ್ಮನ್‌ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದರು. ಆದರೆ ಈ ವರ್ಷದ ಕ್ರೀಡಾಕೂಟದಲ್ಲಿ ಅದು ಸಾಧ್ಯವಾಗಲಿಲ್ಲ. ಈವೆಂಟ್‌ನ ಸಂದರ್ಭದಲ್ಲಿ ಗಾಯಕ್ಕೊಳಗಾದ ಅವರು ಹೊರಬಿದ್ದರು. ಬರ್ಮನ್ ಅಂತಿಮವಾಗಿ ಮಹಿಳೆಯರ ಹೆಪ್ಟಾಥ್ಲಾನ್ ಲಾಂಗ್ ಜಂಪ್‌ನಲ್ಲಿ 5708 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದರು. ಕೇವಲ ನಾಲ್ಕು ಅಂಕಗಳಿಂದ ಕಂಚಿನ ಪದಕ ಮಿಸ್‌ ಮಾಡಿಕೊಂಡರು. ಒಟ್ಟಾರೆಯಾಗಿ 5712 ಅಂಕಗಳನ್ನು ಗಳಿಸಿದ ಭಾರತದ ಮತ್ತೊಬ್ಬರು ಅಥ್ಲೀಟ್ ನಂದಿನಿ ಅಗಸರ ಮೂರನೇ ಸ್ಥಾನ ಪಡೆದರು.

ಕ್ರೀಡೆ ಮುಗಿದು ಒಂದು ದಿನದ ಬಳಕ ಬರ್ಮನ್ ಅವರು ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಟ್ರಾನ್ಸ್‌ಜೆಂಡರ್ ಅಥ್ಲೀಟ್‌ನಿಂದಾಗಿ ತಾನು ಪದಕ ಕಳೆದುಕೊಂಡೆ ಎಂದು ಅವರು ಹೇಳಿದ್ದಾರೆ. "ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ನಾನು ನನ್ನ ಏಷ್ಯನ್ ಗೇಮ್ಸ್ ಕಂಚಿನ ಪದಕವನ್ನು ಮಂಗಳಮುಖಿಯಿಂದಾಗಿ ಕಳೆದುಕೊಂಡಿದ್ದೇನೆ. ಇದು ನಮ್ಮ ಅಥ್ಲೆಟಿಕ್ಸ್ ನಿಯಮಗಳಿಗೆ ವಿರುದ್ಧವಾಗಿರುವುದರಿಂದ, ನನ್ನ ಪದಕವನ್ನು ನನಗೆ ಮರಳಿಸಬೇಕೆಂದು ಬಯಸುತ್ತೇನೆ. ದಯವಿಟ್ಟು ನನಗೆ ಸಹಾಯ ಮಾಡಿ, ಹಾಗೆಯೇ ನನಗೆ ಎಲ್ಲರೂ ಬೆಂಬಲ ಕೊಡಿ,” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಅದರ ಬೆನಲ್ಲೇ ಆ ಪೋಸ್ಟ್‌ ಅನ್ನು ಅಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಡಿಲೀಟ್‌ ಮಾಡಲಾದ ಪೋಸ್ಟ್
ಡಿಲೀಟ್‌ ಮಾಡಲಾದ ಪೋಸ್ಟ್

ನಂದಿನಿ ಅಗಸರ ಪ್ರತಿಕ್ರಿಯೆ

ಬರ್ಮನ್ ಅವರು ಮಂಗಳಮುಖಿ ಮಹಿಳೆ ಎಂದು ಹೇಳಿಕೊಂಡಿದ್ದರೂ, ಅವರು ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ, ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಅಥ್ಲೀಟ್‌ ನಂದಿನಿ ಅಗಸರ ಈ ಹೇಳಿಕೆಯಿಂದ ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಬರ್ಮನ್‌ ಪೋಸ್ಟ್‌ ಬೆನ್ನಲ್ಲೇ ನಂದಿನಿ ಅಗಸರ ಪ್ರತಿಕ್ರಿಯೆ ನೀಡಿದ್ದಾರೆ. ಆ ಆರೋಪದ ಬಗ್ಗೆ ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ ಮೆಟ್ಟಿಲು ಹತ್ತುವುದಾಗಿ ಅವರು ಹೇಳಿದ್ದಾರೆ.

ಬರ್ಮನ್ ಮಾಡಿದ ಪೋಸ್ಟ್‌ನಲ್ಲಿ ನಂದಿನಿ ಅಥವಾ ಇತರ ಯಾವುದೇ ಕ್ರೀಡಾಪಟುವಿನ ಬಗ್ಗೆ ಉಲ್ಲೇಖಿಸಿಲ್ಲ. ಆದರೆ ಕಂಚಿನ ಪದಕ ವಿಜೇತೆ ನಂದಿನಿ, ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಆಕ್ರೋಶಗೊಂಡಿದ್ದಾರೆ.

“ನಾನು ಏನೆಂಬುದು ನನಗೆ ಗೊತ್ತಿದೆ. ಅವಳು ಮಾಡಿದೆ ಆರೋಪಕ್ಕೆ ಸಾಕ್ಷಿ ತೋರಿಸಲು ಹೇಳಿ. ನಾನು ನನ್ನ ದೇಶಕ್ಕಾಗಿ ಪದಕ ಗೆದ್ದಿದ್ದೇನೆ. ದೇಶಕ್ಕಾಗಿ ಒಳ್ಳೆಯದನ್ನು ಮಾಡಬೇಕೆಂದು ಬಯಸುತ್ತೇನೆ. ಈಗ ನಾವು ಗೆದ್ದಿದ್ದೇವೆ. ಹೀಗಾಗಿ ಜನರು ಆ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ನಾನು ಈ ಆರೋಪಗಳ ಬಗ್ಗೆ ಖಂಡಿತವಾಗಿ ಎಎಫ್‌ಐ ಮಧ್ಯಪ್ರವೇಶಿಸುವಂತೆ ವಿನಂತಿಸುತ್ತೇನೆ. ಪದಕ ಗೆದ್ದ ಕ್ಷಣವನ್ನು ಸಂಭ್ರಮಿಸಲು ಬಯಸಿದ್ದೆ. ಆದರೆ ನನ್ನ ತಾಯಿಗೆ ಆರೋಗ್ಯವಾಗಿಲ್ಲದ ಕಾರಣ ಭಾರತಕ್ಕೆ ಹಿಂತಿರುಗುತ್ತೇನೆ” ಎಂದು ನಂದಿನಿ ಹೇಳಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.