Kannada News  /  Sports  /  T20i Records That Shubman Gill And India Made In The 3rd Match Vs New Zealand
ಭಾರತದ ಸಂಭ್ರಮ
ಭಾರತದ ಸಂಭ್ರಮ (AFP)

Team India record: ಕಿವೀಸ್‌ ವಿರುದ್ಧದ 3ನೇ ಟಿ20ಯಲ್ಲಿ ಗಿಲ್ ಮತ್ತು ಭಾರತ ನಿರ್ಮಿಸಿದ 10 ದಾಖಲೆಗಳಿವು!

02 February 2023, 14:47 ISTHT Kannada Desk
02 February 2023, 14:47 IST

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20ಯಲ್ಲಿ ತಮ್ಮ ಅದ್ಭುತ ಶತಕಗಳೊಂದಿಗೆ ಗಿಲ್‌ ಮುರಿದ ದಾಖಲೆಗಳ ವಿವರ ಇಲ್ಲಿದೆ.

ಟೀಮ್‌ ಇಂಡಿಯಾದಲ್ಲಿ ಈಗ ಹೆಚ್ಚು ಸದ್ದು ಮಾಡುತ್ತಿರುವ ಹೆಸರೇ ಶುಬ್ಮನ್‌ ಗಿಲ್. ಭಾರತದ ಪರ ಕ್ರಿಕೆಟ್‌ನ ಎಲ್ಲಾ ಫಾರ್ಮ್ಯಾಟ್‌ಗಳಲ್ಲೂ ಅಗ್ರ ಕ್ರಮಾಂಕದಲ್ಲಿ ವಿಶ್ವಾಸಾರ್ಹ ಬ್ಯಾಟರ್ ಆಗಿ ಗಿಲ್‌ ಹೊರಹೊಮ್ಮಿದ್ದಾರೆ. ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ದಾಖಲಿಸಿದ ಗಿಲ್‌, ನಿನ್ನೆ ನಡೆದ ಪಂದ್ಯದಲ್ಲಿ ಕಿವೀಸ್‌ ವಿರುದ್ಧ ಟಿ20ಯಲ್ಲೂ ಶತಕ ದಾಖಲಿಸಿದರು. ಆ ಮೂಲಕ ಆಟದ ಎಲ್ಲಾ ಮೂರು ಸ್ವರೂಪಗಳಲ್ಲೂ ಶತಕ ಸಿಡಿಸಿದ ಆಟಗಾರ ಎನಿಸಿಕೊಂಡರು. ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಅನ್ನು ಶುಬ್ಮನ್‌ ಕಾಯ್ದುಕೊಂಡಿದ್ದಾರೆ. ಇದು ಅವರ 23ನೇ ವಯಸ್ಸಿನಲ್ಲೇ ಬಂದಿರುವುದು ವಿಶೇಷ.

ಟ್ರೆಂಡಿಂಗ್​ ಸುದ್ದಿ

ಅಹಮದಾಬಾದ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಟಿ20 ಪಂದ್ಯದಲ್ಲಿ, ಗಿಲ್ ತಮ್ಮ ಚೊಚ್ಚಲ ಟಿ20 ಶತಕವನ್ನು ದಾಖಲಿಸಿದರು. ಕೇವಲ 63 ಎಸೆತಗಳಲ್ಲಿ ಅಜೇಯ 126 ರನ್ ಗಳಿಸಿ ದಾಖಲೆ ನಿರ್ಮಿಸಿದರು. ಇವರ ಭರ್ಜರಿ ರನ್‌ ಮಳೆಯ ನೆರವಿನಿಂದ ಭಾರತ 4 ವಿಕೆಟ್‌ ನಷ್ಟಕ್ಕೆ 234 ರನ್ ಗಳಿಸಲು ಸಾಧ್ಯವಾಯಿತು. ಇದಕ್ಕೆ ಪ್ರತಿಯಾಗಿ ಪ್ರವಾಸಿ ಕಿವೀಸ್‌, ಕೇವಲ 12.1 ಓವರ್‌ಗಳಲ್ಲಿ 66 ರನ್‌ಗಳಿಗೆ ಆಲೌಟ್‌ ಆಯ್ತು. ಭಾರತಕ್ಕೆ ಸರಣಿ ಒಲಿಯಿತು.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20ಯಲ್ಲಿ ತಮ್ಮ ಅದ್ಭುತ ಶತಕಗಳೊಂದಿಗೆ ಗಿಲ್‌ ಮುರಿದ ದಾಖಲೆಗಳ ಪಟ್ಟಿ ಇಲ್ಲಿದೆ.

  • ಕೇವಲ 23 ವರ್ಷ ಮತ್ತು 146 ದಿನಗಳಲ್ಲಿ, ಗಿಲ್ ಅವರು ಟಿ20 ಶತಕ ಸಿಡಿಸಿದ ಅತ್ಯಂತ ಕಿರಿಯ ಭಾರತೀಯ ಎನಿಸಿಕೊಂಡರು. ಈ ಹಿಂದೆ ಈ ಸಾಧನೆಯನ್ನು 23 ವರ್ಷ ಮತ್ತು 156 ದಿನಗಳಲ್ಲಿ ಸುರೇಶ್ ರೈನಾ ಮಾಡಿದ್ದರು. ಪಾಕಿಸ್ತಾನದ ಅಹ್ಮದ್ ಶಹಜಾದ್ ಅವರು 22 ವರ್ಷ ಮತ್ತು 127 ದಿನಗಳಲ್ಲಿ ತಮ್ಮ ಮೊದಲ ಟಿ20 ಶತಕವನ್ನು ಸಿಡಿಸಿದ್ದು ವಿಶ್ವದಾಖಲೆಯಾಗಿದೆ.

ಟ್ವೆಂಟಿ-20ಯಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಶುಬ್ಮನ್ ಗಿಲ್ ಪಾತ್ರರಾಗಿದ್ದಾರೆ
ಟ್ವೆಂಟಿ-20ಯಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಶುಬ್ಮನ್ ಗಿಲ್ ಪಾತ್ರರಾಗಿದ್ದಾರೆ
  • ಗಿಲ್ ಅವರ ಅಜೇಯ 126 ರನ್‌, ಟಿ20ಯಲ್ಲಿ ಭಾರತೀಯ ಆಟಗಾರನೊಬ್ಬನ ಗರಿಷ್ಠ ಸ್ಕೋರ್ ಆಗಿದೆ. ಕಳೆದ ವರ್ಷ ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ 122 ರನ್ ಗಳಿಸಿದ್ದು ಹಿಂದಿನ ಅತ್ಯುತ್ತಮ ವೈಯಕ್ತಿಕ ಮೊತ್ತವಾಗಿತ್ತು.
  • ಗಿಲ್ ಅವರ ಅಜೇಯ 126 ರನ್‌, ಟಿ20ಯಲ್ಲಿ ನ್ಯೂಜಿಲೆಂಡ್ ವಿರುದ್ಧ ಯಾವುದೇ ದೇಶದ ಬ್ಯಾಟರ್ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 2012ರಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ರಿಚರ್ಡ್ ಲೆವಿ ಅವರು ಕಿವೀಸ್‌ ವಿರುದ್ಧ 117 ರನ್‌ ಗಳಿಸಿದ್ದರು.
  • ಗಿಲ್ ಎಲ್ಲಾ ಸ್ವರೂಪಗಳಲ್ಲಿ ಶತಕಗಳನ್ನು ಪೂರೈಸಿದ ಕಿರಿಯ ಭಾರತೀಯರಾದರು. ರೈನಾ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಂತರ ಈ ಸಾಧನೆ ಮಾಡಿದ ಐದನೇ ಭಾರತೀಯ ಎನಿಸಿಕೊಂಡರು.

ಟಿ20ಯಲ್ಲಿ ಭಾರತೀಯರ ಗರಿಷ್ಠ ಸ್ಕೋರ್
ಟಿ20ಯಲ್ಲಿ ಭಾರತೀಯರ ಗರಿಷ್ಠ ಸ್ಕೋರ್

ಭಾರತ ತನ್ನ ಬೃಹತ್ ಗೆಲುವಿನೊಂದಿಗೆ ಈ ದಾಖಲೆಗಳನ್ನು ನಿರ್ಮಿಸಿದೆ

  • ಭಾರತವು ನ್ಯೂಜಿಲೆಂಡ್ ಅನ್ನು 168 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿ ಸರಣಿ ಗೆದ್ದುಕೊಂಡಿತು. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತದ ಅತಿದೊಡ್ಡ ಅಂತರದ ಗೆಲುವಾಗಿದೆ.
  • ಭಾರತವು ನ್ಯೂಜಿಲೆಂಡ್ ತಂಡವನ್ನು ಕೇವಲ 66 ರನ್‌ಗಳಿಗೆ ಆಲೌಟ್ ಮಾಡಿತು. ಇದು ಎದುರಾಳಿ ತಂಡವನ್ನು ಭಾರತವು ಟಿ20 ಕ್ರಿಕೆಟ್‌ನಲ್ಲಿ ಆಲೌಟ್‌ ಮಾಡಿದ ಅತ್ಯಂತ ಕಡಿಮೆ ಮೊತ್ತವಾಗಿದೆ.
  • ಭಾರತ ಗಳಿಸಿದ 234/4 ರನ್‌, ನ್ಯೂಜಿಲೆಂಡ್ ವಿರುದ್ಧ ಟಿ20ಯಲ್ಲಿ ಟೀಮ್ ಇಂಡಿಯಾದ ಗರಿಷ್ಠ ಮೊತ್ತವಾಗಿದೆ.
  • ಭಾರತವು ಸ್ವದೇಶದ ಟಿ20 ಸರಣಿಯಲ್ಲಿ ತಮ್ಮ ಅಜೇಯ ಓಟವನ್ನು 13ಕ್ಕೆ ವಿಸ್ತರಿಸಿದೆ. ಅದರಲ್ಲಿ ಭಾರತ 11ಅನ್ನು ಗೆದ್ದಿದೆ.
  • ನ್ಯೂಜಿಲೆಂಡ್ ವಿರುದ್ಧ ಭಾರತದ ವೇಗದ ಬೌಲರ್‌ಗಳು ಎಲ್ಲಾ 10 ವಿಕೆಟ್‌ಗಳನ್ನು ಪಡೆದರು. ಇದು ಒಟ್ಟಾರೆಯಾಗಿ ಕೇವಲ 2ನೇ ಸಂದರ್ಭವಾಗಿದೆ. ಭಾರತದ ವೇಗದ ಬೌಲರ್‌ಗಳು ಭಾರತದಲ್ಲೇ ಎಲ್ಲಾ 10 ವಿಕೆಟ್‌ಗಳನ್ನು ಪಡೆದಿರುವುದು ಇದೇ ಮೊದಲು.
  • ಇದೇ ಮೊದಲ ಬಾರಿಗೆ ಟಿ20 ಪಂದ್ಯದಲ್ಲಿ ವೇಗದ ಬೌಲರ್‌ಗಳ ವಿರುದ್ಧ ನ್ಯೂಜಿಲೆಂಡ್ ಎಲ್ಲಾ 10 ವಿಕೆಟ್‌ಗಳನ್ನು ಕಳೆದುಕೊಂಡಿತು.