ಕನ್ನಡ ಸುದ್ದಿ  /  Sports  /  Team India Became The Team To Win Most T20i Matches In A Calendar Year Broke Pakistan World Record

IND vs AUS 3rd T20I: ಆಸೀಸ್‌ ಮಣಿಸಿ ಪಾಕ್‌ ಹೆಸರಿನಲ್ಲಿದ್ದ ವರ್ಲ್ಡ್‌ ರೆಕಾರ್ಡ್‌ ಕಸಿದುಕೊಂಡ ಟೀಂ ಇಂಡಿಯಾ! ಯಾವುದಾ ದಾಖಲೆ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯವನ್ನು ಭಾರತ ಗೆದ್ದು ಬೀಗಿದೆ. ಆಸೀಸ್‌ ವಿರುದ್ಧದ ಈ ಜಯದೊಂದಿಗೆ ಭಾರತ ಕೇವಲ 9 ತಿಂಗಳಲ್ಲಿ ಪಾಕಿಸ್ತಾನದ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನೂ ಪುಡಿ ಮಾಡಿದೆ.

ಆಸೀಸ್‌ ಮಣಿಸಿ ಪಾಕ್‌ ಹೆಸರಿನಲ್ಲಿದ್ದ ವರ್ಲ್ಡ್‌ ರೆಕಾರ್ಡ್‌ ಕಸಿದುಕೊಂಡ ಟೀಂ ಇಂಡಿಯಾ! ಯಾವುದಾ ದಾಖಲೆ?
ಆಸೀಸ್‌ ಮಣಿಸಿ ಪಾಕ್‌ ಹೆಸರಿನಲ್ಲಿದ್ದ ವರ್ಲ್ಡ್‌ ರೆಕಾರ್ಡ್‌ ಕಸಿದುಕೊಂಡ ಟೀಂ ಇಂಡಿಯಾ! ಯಾವುದಾ ದಾಖಲೆ? (Twitter/ BCCI)

ಹೈದರಾಬಾದ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯವನ್ನು ಭಾರತ ಗೆದ್ದು ಬೀಗಿದೆ. ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ, ಭಾನುವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಭಾರತ 2-1ರಿಂದ ಗೆದ್ದಿದೆ. ಅಷ್ಟೇ ಅಲ್ಲ ಆಸೀಸ್‌ ವಿರುದ್ಧದ ಈ ಜಯದೊಂದಿಗೆ ಭಾರತ ಕೇವಲ 9 ತಿಂಗಳಲ್ಲಿ ಪಾಕಿಸ್ತಾನದ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನೂ ಪುಡಿ ಮಾಡಿದೆ.

ಭಾರತದ ಮುಡಿಗೆ ಹೊಸ ದಾಖಲೆ

ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಭಾರತ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ 21 ನೇ ಜಯ ದಾಖಲಿಸಿ ಇತಿಹಾಸ ನಿರ್ಮಿಸಿದೆ. ಪ್ರಸಕ್ತ ವರ್ಷದಲ್ಲಿ ಟೀಂ ಇಂಡಿಯಾ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2021ರಲ್ಲಿ 20 ಟಿ20 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಕಿಸ್ತಾನ ಈ ವಿಶ್ವದಾಖಲೆ ಮಾಡಿತ್ತು, ಆದರೆ ಈ ವರ್ಷ ಕೇವಲ 9 ತಿಂಗಳಲ್ಲಿ ರೋಹಿತ್ ಶರ್ಮಾ ಪಡೆ 21 ಗೆಲುವು ದಾಖಲಿಸಿದೆ.

ಈ ದಾಖಲೆ ಮುರಿಯುವುದು ಸುಲಭವಲ್ಲ..

ಆಸ್ಟ್ರೇಲಿಯಾದ ನಂತರ ಭಾರತ ಈಗ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಾಗಿದೆ. ಇದಾದ ನಂತರ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಡಲು ತೆರಳಲಿದ್ದು, ಗ್ರೂಪ್ ಹಂತದಲ್ಲಿ ಭಾರತ 5 ಪಂದ್ಯಗಳನ್ನು ಆಡಲಿದೆ. ಮತ್ತೊಂದೆಡೆ, ತಂಡವು ಫೈನಲ್ ತಲುಪಿದರೆ, ನಂತರ ಇನ್ನೂ ಎರಡು ಪಂದ್ಯಗಳನ್ನು ಆಡುವ ಅವಕಾಶವಿರುತ್ತದೆ. ವಿಶ್ವಕಪ್ ಬಳಿಕ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಮತ್ತೆ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಏನಿಲ್ಲ ಅಂದರೂ ಇನ್ನೂ 12 ಪಂದ್ಯಗಳನ್ನಾದರೂ ಆಡಬೇಕಿದೆ. ಈ 12 ಪಂದ್ಯಗಳಲ್ಲಿ ಕೇವಲ 6 ಪಂದ್ಯ ಗೆದ್ದರೆ, ಭಾರತದ ಈ ವಿಶ್ವದಾಖಲೆಯನ್ನು ಬೇರೆ ದೇಶದವರು ಮುರುಯುವುದು ಕಷ್ಟ ಸಾಧ್ಯ.

ಕೊಹ್ಲಿ -ಸೂರ್ಯಕುಮಾರ್ ಅಬ್ಬರದ ಬ್ಯಾಟಿಂಗ್‌

ನಿರ್ಣಾಯಕವಾಗಿದ್ದ ಮೂರನೇ ಟಿ20 ಪಂದ್ಯದಲ್ಲಿ 30 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ 187 ರನ್ ಗುರಿ ದೊಡ್ಡದಾಗಿತ್ತು. ಈ ವೇಳೆ ಬ್ಯಾಟಿಂಗ್‌ಗೆ ಬಂದ ಸೂರ್ಯ, 36 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 69 ರನ್ ಗಳಿಸಿದರು. ಇನ್ನೊಂದೆಡೆ ವಿರಾಟ್ ಕೊಹ್ಲಿ 48 ಎಸೆತಗಳ 63 ರನ್‌ ಸಿಡಿಸಿದರು. ಭಾರತ ಗೆಲುವಿನಲ್ಲಿ ಈ ರನ್‌ ಪ್ರಮುಖ ಪಾತ್ರ ವಹಿಸಿತು. ಇವರಿಬ್ಬರು ಮೂರನೇ ವಿಕೆಟ್‌ಗೆ ಶತಕದ ಜತೆಯಾಟ ನೀಡಿದರು. ಅಂತಿಮವಾಗಿ ಆರು ವಿಕೆಟ್‌ಗಳ ಜಯದ ಮೂಲಕ ಭಾರತ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.