ಕನ್ನಡ ಸುದ್ದಿ  /  Sports  /  Team India To Play 4 Warm Up Games In T20 World Cup 2022

T20 World Cup 2022: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ನಾಲ್ಕು ಅಭ್ಯಾಸ ಪಂದ್ಯ ಆಡಲಿದೆ ಭಾರತ

ಅಕ್ಟೋಬರ್‌ 23 ರಂದು ಸೂಪರ್‌ 12 ಗ್ರೂಪ್‌ ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಡುವುದರೊಂದಿಗೆ, ಭಾರತ ಟಿ20 ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ಆದರೆ ತನ್ನ ಅಭಿಯಾನವನ್ನು ಆರಂಭಿಸುವುದಕ್ಕೂ ಮೊದಲು ನಾಲ್ಕು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಭಾರತ ತಂಡ
ಭಾರತ ತಂಡ (BCCI)

ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಟಿ20 ಸರಣಿಯನ್ನು ಗೆದ್ದ ಟೀಂ ಇಂಡಿಯಾ, ಮಹತ್ವದ ಟಿ20 ವಿಶ್ವಕಪ್ ಕ್ರೀಡಾಕೂಟಕ್ಕಾಗಿ ಆಸ್ಟ್ರೇಲಿಯಾ ವಿಮಾನ ಏರಲು ಸಜ್ಜಾಗಿದೆ. ಇತ್ತ ದೇಶದಲ್ಲಿ ಭಾರತದ ಮತ್ತೊಂದು ತಂಡ ಹರಿಣಗಳ ವಿರುದ್ಧ ಏಕದಿನ ಸರಣಿಯಲ್ಲಿ ಪಾಲ್ಗೊಂಡರೆ, ರೋಹಿತ್ ಬಳಗ ಕಾಂಗರೂ ನಾಡಿಗೆ ಪ್ರಯಾಣಿಸಲಿದೆ.

ರೋಹಿತ್ ಶರ್ಮಾ ಮತ್ತು ಬಳಗ ಅಕ್ಟೋಬರ್ 6ರ ಒಳಗೆ ಆಸ್ಟ್ರೇಲಿಯಾ ಪ್ರಯಾಣಿಸಲಿದೆ. ಭಾರತವು ಅಕ್ಟೋಬರ್‌ 23 ರಂದು ಸೂಪರ್‌ 12 ಗ್ರೂಪ್‌ ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡುವುದರೊಂದಿಗೆ ಟಿ20 ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ಆದರೆ ತನ್ನ ಅಭಿಯಾನವನ್ನು ಆರಂಭಿಸುವುದಕ್ಕೂ ಮೊದಲು ನಾಲ್ಕು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಬ್ಲೂಬಾಯ್ಸ್‌ ತಂಡವು ಪರ್ತ್‌ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ XI ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 10 ಮತ್ತು 13ರಂದು ಈ ಪಂದ್ಯಗಳು ನಡೆಯಲಿವೆ. ಸಂಜೆ 4ರಿಂದ ಈ ಪಂದ್ಯ ಆರಂಭವಾಗಲಿವೆ. ಇದಾದ ಬಳಿಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಎರಡು ಪೂರ್ವ ನಿಗದಿತ ಅಭ್ಯಾಸ ಪಂದ್ಯಗಳನ್ನು ಭಾರತ ಆಡಲಿದೆ. ಈ ಎರಡೂ ತಂಡಗಳು ಗ್ರೂಪ್‌ ಎನಲ್ಲಿದ್ದು, ಭಾರತ ಬಿ ತಂಡದಲ್ಲಿದೆ. ಅಭ್ಯಾಸ ಪಂದ್ಯದಲ್ಲಿ ಎದುರಾಗುವ ತಂಡಗಳು ಪ್ರಮುಖ ಪಂದ್ಯಗಳಲ್ಲಿ ಎದುರಾಗುವುದಿಲ್ಲ.

ಅಕ್ಟೋಬರ್ 17ರಂದು ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯ ನಡೆಯಲಿದೆ. ಇದಾದ ಬಳಿಕ ಅಕ್ಟೋಬರ್ 19ರಂದು ನ್ಯೂಜಿಲೆಂಡ್ ವಿರುದ್ಧ ಮತ್ತೊಂದು ಅಭ್ಯಾಸ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾದ ಪರಿಸ್ಥಿತಿಗಳಿಗೆ ಉತ್ತಮವಾಗಿ ಹೊಂದಿಕೊಳ್ಳಲು ಇನ್ನೂ ಎರಡು ಪಂದ್ಯಗಳ ಅಗತ್ಯವಿದೆ ಎಂದು ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಹೇಳಿದ್ದಾರೆ.

ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತದ ವಿಶ್ವಕಪ್‌ ಅಭಿಯಾನ ಆರಂಭಗೊಳ್ಳಲಿದೆ. ಅಕ್ಟೋಬರ್ 27ರಂದು ರೋಹಿತ್ ಮತ್ತು ಬಳಗ ಸಿಡ್ನಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಅರ್ಹತಾ ಸುತ್ತಿನಿಂದ A ಗುಂಪಿನ ಎರಡನೇ ಸ್ಥಾನಿಯನ್ನು ಎದುರಿಸಲಿದ್ದಾರೆ.

ಭಾರತದ ಮೂರನೇ ಪಂದ್ಯವು ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಟೋಬರ್ 30ರಂದು ಪರ್ತ್‌ನಲ್ಲಿ ನಡೆಯಲಿದೆ. ಆ ಬಳಿಕ ಭಾರತವು ನವೆಂಬರ್ 2ರಂದು ಅಡಿಲೇಡ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಆಡುತ್ತದೆ. ನವೆಂಬರ್ 6ರಂದು ಮೆಲ್ಬೋರ್ನ್‌ನಲ್ಲಿ ಅರ್ಹತಾ ಸುತ್ತಿನ B ಗುಂಪಿನ ಮೊದಲ ಸ್ಥಾನಿಯ ವಿರುದ್ಧ ಆಡುವ ಮೂಲಕ ತನ್ನ ಗುಂಪು ಹಂತವನ್ನು ಮುಗಿಸಲಿದೆ. ಈ ಗುಂಪಿನಿಂದ ಅಗ್ರ ಎರಡು ಸ್ಥಾನದಲ್ಲಿ ಇರುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಉಳಿದ ತಂಡಗಳು ಮನೆಗೆ ನಡೆಯಲಿವೆ.

ಇನ್ನೊಂದೆಡೆ ಇತ್ತ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನನ ಸರಣಿ ನಾಳೆಯಿಂದ ಆರಂಭವಾಗಲಿದೆ. ಏಕದಿನ ಸರಣಿಯ ಮೊದಲ ಪಂದ್ಯವು ಅಕ್ಟೋಬರ್ 6ರಂದು ಲಖನೌನಲ್ಲಿ ನಡೆಯಲಿದೆ. ಸರಣಿಯ ಎರಡನೇ ಪಂದ್ಯವು ಅಕ್ಟೋಬರ್ 9ರಂದು ರಾಂಚಿಯಲ್ಲಿ ನಡೆಯಲಿದೆ. ಬಳಿಕ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ಅಕ್ಟೋಬರ್ 11 ರಂದು ದೆಹಲಿಯಲ್ಲಿ ನಡೆಯಲಿದೆ. ಧವನ್‌ ಸಾರಥ್ಯದಲ್ಲಿ ಭಾರತವು ಹರಿಣಗಳನ್ನು ಎದುರಿಸಲಿದೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಧವನ್‌, ಹರಿಣಗಳ ವಿರುದ್ಧವೂ ಕ್ನೀನ್‌ ಸ್ವೀಪ್‌ ಸಾಧಿಸುವ ವಿಶ್ವಾದಲ್ಲಿದ್ದಾರೆ. ಶ್ರೇಯಸ್ ಅಯ್ಯರ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಹರಿಣಗಳ ವಿರುದ್ಧದ ಸರಣಿಗೆ ಐಪಿಎಲ್‌ ಹಾಗೂ ರಣಜಿ ಹೀರೋ ರಜತ್ ಪಾಟಿದಾರ್ ಮತ್ತು ಮುಖೇಶ್ ಕುಮಾರ್‌ಗೆ ಚೊಚ್ಚಲ ಬುಲಾವ್ ನೀಡಲಾಗಿದೆ.

ವಿಭಾಗ