ಕನ್ನಡ ಸುದ್ದಿ  /  Sports  /  Team India Won Against Sri Lanka In The Odi Match Held In Guwahati

India vs Sri Lanka Highlights: ಬ್ಯಾಟರ್ ಗಳ ಅಬ್ಬರ, ಬೌಲರ್ಸ್ ಸಂಘಟಿತ ದಾಳಿ; ಲಂಕಾ ವಿರುದ್ಧ ಏಕದಿನದಲ್ಲೂ ಟೀಂ ಇಂಡಿಯಾ ಗೆಲುವಿನ ಶುಭಾರಂಭ

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಆ ಮೂಲಕ 2023ರ ಆರಂಭದಲ್ಲೇ ಈ ಮಾದರಿಯಲ್ಲೂ ಶುಭಾರಂಭ ಮಾಡಿದೆ. ಆದರೆ ಲಂಕಾ ನಾಯಕ ದಸುನ್ ಶನಕ ಕೊನೆಯ ವರೆಗೆ ಆಡಿ ಗಳಿಸಿದ ಶತಕ ವ್ಯರ್ಥವಾಯಿತು.

ಶ್ರೀಲಂಕಾದ ಬ್ಯಾಟರ್ ಔಟಾದಾಗ ಟೀಂ ಇಂಡಿಯಾ ಆಟಗಾರರು  ಸಂಭ್ರಮಿಸಿದರು, (ಫೋಟೋ-AFP)
ಶ್ರೀಲಂಕಾದ ಬ್ಯಾಟರ್ ಔಟಾದಾಗ ಟೀಂ ಇಂಡಿಯಾ ಆಟಗಾರರು ಸಂಭ್ರಮಿಸಿದರು, (ಫೋಟೋ-AFP)

ಗುವಾಹಟಿ(ಅಸ್ಸಾಂ): ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ಹಾಗೂ ಬೌಲರ್ ಗಳ ಸಂಘಟಿತ ದಾಳಿಯಿಂದಾಗಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 67 ರನ್ ಗಳ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪಡೆ ನಿಗದಿತ 50 ಓವರ್ ಗಳಿಗೆ 7 ವಿಕೆಟ್ ಕಳೆದುಕೊಂಡು 373 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಲಷ್ಟೇ ಶಕ್ತವಾಯಿತು.

374 ರನ್ ಗಳ ದೊಡ್ಡ ಮೊತ್ತ ಗುರಿ ಬೆನ್ನಟ್ಟಿದ ದಸುನ್ ಶನಕ ಪಡೆಗೆ ಆರಂಭದಲ್ಲೇ ಟೀಂ ಇಂಡಿಯಾದ ಬೌಲರ್ ಗಳು ಆಘಾತ ನೀಡಿದರು. 4ನೇ ಓವರ್ ಐದನೇ ಎಸೆತದಲ್ಲೇ ಸಿರಾಜ್ ಲಂಕಾದ ಆರಂಭಿಕ ಅವಿಷ್ಕ ಫೆರ್ನಾಂಡೋ (5) ಔಟ್ ಮಾಡುವಲ್ಲಿ ಯಶಸ್ವಿಯಾದರು.

ಲಂಕಾ ನಾಯಕನ ಶತಕ ವ್ಯರ್ಥ

ಶ್ರೀಲಂಕಾ ಪರ ನಾಯಕ ದಸುನ್ ಶನಕ ಕೊನೆಯ ವರೆಗೆ ಹೋರಾಡಿ ಗಳಿಸಿದ ಶತಕ ವ್ಯರ್ಥವಾಯಿತು. 88 ಎಸೆತಗಳಿಂದ 12 ಬೌಂಡರಿ ಹಾಗೂ 3 ಸಿಕ್ಸರ್ ಸೇರಿ 108 ರನ್ ಗಳಿಸಿ ಔಟಾಗದೆ ಉಳಿದರು. ಪಾತುಮ್ ನಿಸ್ಸಾಂಕ (72) ಮತ್ತು ಧನಂಜಯ ಡಿ ಸಿಲ್ವ (47) ಹೊರತುಪಡಿಸಿ ಉಳಿದ ಯಾವೊಬ್ಬ ಆಟಗಾರನು ಕೂಡ ಶ್ರೀಲಂಕಾವನ್ನು ಗೆಲುವಿನತ್ತ ಕೊಂಡೊಯ್ಯುವ ಪ್ರಯತ್ನ ಮಾಡಲಿಲ್ಲ.

ವಿಕೆಟ್ ಕೀಪರ್ ಕುಸಲ್ ಮೆಂಡಿಸ್ (0), ಚರಿತ್ ಅಸಲಂಕ (23), ವನಿಂದು ಹಸರಂಗ(16), ಚಾಮಿಕ ಕರುಣಾರತ್ನ (14), ದುನಿತ್ ವೆಲ್ಲಲಾಗೆ(0), ಕಸುನ್ ರಜಿತ 9 ರನ್ ಗಳಿಸಿ ಔಟಾಗದೆ ಉಳಿದರು. ಟೀಂ ಇಂಡಿಯಾ ಪರ ಉಮ್ರಾನ್ ಮಲ್ಲಿಕ್ 3, ಮೊಹಮ್ಮದ್ ಸಿರಾಜ್ 2, ಶಮಿ, ಹಾರ್ದಿಕ್ ಪಾಂಡ್ಯ ಹಾಗೂ ಚಾಹಲ್ ತಲಾ 1 ವಿಕೆಟ್ ಕಿತ್ತರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಉತ್ತಮ ಜೊತೆಯಾಟ ಹಾಗೂ ರನ್ ಮಷಿನ್ ವಿರಾಟ್ ಕೊಹ್ಲಿ ಸಿಡಿಸಿದ ಸ್ಫೋಟಕ ಶತಕದ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 373 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.

ರೋಹಿತ್ ಮತ್ತು ಗಿಲ್ 143 ರನ್ ಗಳ ಉತ್ತಮ ಜೊತೆಯಾಟ ನೀಡಿದರು. ರೋಹಿತ್ ಶರ್ಮಾ 9 ಬೌಂಡರಿ ಹಾಗೂ 3 ಸಿಕ್ಸರ್ ಸೇರಿ 83 ರನ್ ಗಳಿಸಿದ್ದಾಗ ದಸುನ್ ಶನಕ ಓವರ್ ನಲ್ಲಿ ಬೌಲ್ಡ್ ಆದರು. ಬಳಿಕ ಬಂದ ವಿರಾಟ್ ತಮ್ಮ ಸೊಗಸಾದ ಆಟದ ಮೂಲಕ ನೆರದಿದ್ದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಕೇವಲ 87 ಎಸೆತಗಳಲ್ಲಿ 113 ರನ್ ಗಳ ಶತಕ ಪೂರೈಸಿದರು. ಇದರಲ್ಲಿ 12 ಬೌಂಡರಿ ಹಾಗೂ 1 ಏಕೈಕ ಸಿಕ್ಸರ್ ಸೇರಿತ್ತು. ಶುಭಮನ್ ಗಿಲ್ 70, ಶ್ರೇಯಸ್ ಅಯ್ಯರ್ 28, ಕೆ.ಎಲ್.ರಾಹುಲ್ 39, ಹಾರ್ದಿಕ್ ಪಾಂಡ್ಯ 14, ಅಕ್ಷರ್ ಪಟೇಲ್ 9 ರನ್, ಮೊಹಮ್ಮದ್ ಶಮಿ ಔಟಾಗದೆ 4 ರನ್ ಗಳಿಸಿದರೆ, ಮೊಹಮ್ಮದ್ ಸಿರಾಜ್ ಔಟಾಗದೆ 7 ರನ್ ಗಳಿಸಿದರು. ಶ್ರೀಲಂಕಾ ಪರ ಕಸುನ್ ರಜಿತ 3 ವಿಕೆಟ್ ಪಡೆದರು.

ಶ್ರೀಲಂಕಾ ವಿರುದ್ಧದ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಟಿ20 ಕ್ರಿಕೆಟ್ ಅನ್ನು ಹಾರ್ದಿಕ್ ಪಡೆ 2-1 ಅಂತರದಿಂದ ಗೆದ್ದುಕೊಂಡಿತ್ತು. ಭಾರತ-ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯ ಜನವರಿ 12 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.