ಕನ್ನಡ ಸುದ್ದಿ  /  Sports  /  Ten Indian Women Gets Crore Plus Deals In Wpl Auction 2023

WPL auction 2023: ಭಾರತದ ಹತ್ತು ಕ್ರಿಕೆಟಿಗರಿಗೆ ಕೋಟಿಗೂ ಹೆಚ್ಚು ಬೆಲೆ; ಇಲ್ಲಿದೆ ಸಂಭಾವ್ಯ ನಾಯಕಿಯರ ಪಟ್ಟಿ

ಆಸೀಸ್‌ನ ಸ್ಟಾರ್‌ ಆಲ್‌ರೌಂಡರ್ ಪೆರಿ ಅವರನ್ನು ಆರ್‌ಸಿಬಿಯು 1.70 ಕೋಟಿ ರೂಪಾಯಿಗೆ ಖರೀದಿಸಿದರೆ, ನ್ಯೂಜಿಲೆಂಡ್ ನಾಯಕಿ ಡಿವೈನ್ ಅವರನ್ನು ಕೂಡಾ ಮೂಲಬೆಲೆ 50 ಲಕ್ಷಕ್ಕೆ ಅಗ್ಗವಾಗಿ ಪಡೆಯಿತು.

ಆರ್‌ಸಿಬಿ ಫ್ರಾಂಚೈಸಿ
ಆರ್‌ಸಿಬಿ ಫ್ರಾಂಚೈಸಿ

ಮುಂಬೈ: ವಿಮೆನ್ಸ್‌ ಪ್ರೀಮಿಯರ್ ಲೀಗ್ (WPL) ಉದ್ಘಾಟನಾ ಆವೃತ್ತಿಗೆ ನಡೆದ ಹರಾಜಿನಲ್ಲಿ ಸ್ಮೃತಿ ಮಂಧನಾ ದೊಡ್ಡ ಮೊತ್ತವನ್ನು ಗಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಬಲಿಷ್ಠ ಬ್ಯಾಟರ್‌ ಅನ್ನು 3.40 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.

ಭಾರತದ ಒಟ್ಟು 10 ಆಟಗಾರ್ತಿಯರು ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ವಿವಿಧ ತಂಡಗಳಿಗೆ ಬಿಕರಿಯಾಗಿದ್ದಾರೆ. ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು 1.80 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್‌ ಬಿಡ್‌ ಮಾಡಿತು. ಆದರೆ, ಮಂಧನಾ ಅವರ ಬಿಡ್‌ಗಿಂತ ಇದು ಸುಮಾರು ಅರ್ಧದಷ್ಟು ಕಡಿಮೆ. ಇವರಿಗಿಂತ ಹೆಚ್ಚು ಮೊತ್ತಕ್ಕೆ ಇಂಗ್ಲೆಂಡ್‌ನ ನ್ಯಾಟ್ ಸ್ಕಿವರ್ ಮತ್ತು ಆಸ್ಟ್ರೇಲಿಯಾದ ಆಶ್ಲೀಗ್ ಗಾರ್ಡ್ನರ್ 3.20 ಕೋಟಿ ರೂಪಾಯಿಗೆ ಖರೀದಿಯಾಗಿದ್ದಾರೆ.

ಭಾರತ ತಂಡದ ನಾಯಕಿಯಾಗಿ ಉತ್ತಮ ಪ್ರದರ್ಶನ ನೀಡಿದ್ದರೂ, ಹರ್ಮನ್‌ಪ್ರೀತ್ ಕಡಿಮೆ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಹೆಚ್ಚು ಮೊತ್ತಕ್ಕೆ ಹರಾಜಾದ ಅಗ್ರ ಆರು ಭಾರತೀಯ ಕ್ರಿಕೆಟಿಗರ ಪಟ್ಟಿಯಲ್ಲೂ ಕೌರ್‌ ಇಲ್ಲ. ದೇಶದ ಎರಡನೇ ದುಬಾರಿ ಆಟಗಾರ್ತಿಯಾಗಿ ಆಲ್‌ರೌಂಡರ್ ದೀಪ್ತಿ ಶರ್ಮಾ ಹೊರಹೊಮ್ಮಿದರು. ಇವರನ್ನು ಯುಪಿ ವಾರಿಯರ್ಸ್ 2.6 ಕೋಟಿ ರೂಪಾಯಿಗೆ ಖರೀದಿಸಿದರು.

ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಗೆಲುವಿನ ತಾರೆ ಶಫಾಲಿ ವರ್ಮಾ ಮತ್ತು ಜೆಮಿಮಾ ರೋಡ್ರಿಗಸ್ ಕೂಡಾ ಭಾರಿ ಮೊತ್ತಕ್ಕೆ ಹರಾಜಾದರು. ಇವರಿಬ್ಬರನ್ನು ಕ್ರಮವಾಗಿ 2 ಕೋಟಿ ಮತ್ತು 2.20 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು. ಮತ್ತೊಂದೆಡೆ ಆಲ್‌ರೌಂಡರ್‌ಗಳಾದ ಪೂಜಾ ವಸ್ತ್ರಾಕರ್ ಅವರನ್ನು ಎಂಐ 1.90 ಕೋಟಿಗೆ ಪಡೆದರೆ, ರಿಚಾ ಘೋಷ್ ಅವರನ್ನು ಇದೇ ಮೊತ್ತಕ್ಕೆ ಆರ್‌ಸಿಬಿ ಖರೀದಿಸಿತು.

ಪಾಕಿಸ್ತಾನದ ವಿರುದ್ಧ ಶಫಾಲಿ ವರ್ಮಾ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಿದ್ದ ಯಾಸ್ತಿಕಾ ಭಾಟಿಯಾ‌ ಅವರನ್ನು ಮುಂಬೈ ಇಂಡಿಯನ್ಸ್‌ 1.5 ಕೋಟಿ ರೂಪಾಯಿಗೆ ಖರೀದಿಸತು. ಕೋಟಿಗೂ ಹೆಚ್ಚು ಮೊತ್ತ ಪಡೆದ ಇತರ ಇಬ್ಬರು ಭಾರತೀಯರೆಂದರೆ ರೇಣುಕಾ ಠಾಕೂರ್ ಮತ್ತು ದೇವಿಕಾ ವೈದ್ಯ. ವೇಗಿ ರೇಣುಕಾ ಸಿಂಗ್‌ ಅವರನ್ನು ಆರ್‌ಸಿಬಿಯು 1.5 ಕೋಟಿಗೆ ಖರೀದಿಸಿದರೆ, ದೇವಿಕಾ ವೈದ್ಯ 1.4 ಕೋಟಿಗೆ ಯುಪಿ ವಾರಿಯರ್ಜ್ ಪಾಲಾದರು. ಮಹಿಳಾ ಕ್ರಿಕೆಟ್‌ನ ಅತ್ಯುತ್ತಮ ನಾಯಕಿಯಾಗಿರುವ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಅವರನ್ನು 1.10 ಕೋಟಿ ರೂಪಾಯಿಗೆ ಡೆಲ್ಲಿ ತನ್ನತ್ತ ಕರೆದುಕೊಂಡಿತು.

ಆಸ್ಟ್ರೇಲಿಯಾದ ಆಲ್ ರೌಂಡರ್ ಆಶ್ಲೀಗ್ ಗಾರ್ಡ್ನರ್ ಅವರನ್ನು ಗೌತಮ್ ಅದಾನಿ ಒಡೆತನದ ಗುಜರಾತ್ ಜೈಂಟ್ಸ್ 3.20 ಕೋಟಿ ರೂಪಾಯಿಗೆ ಖರೀದಿಸಿತು. ಗಾರ್ಡ್ನರ್ ಮತ್ತು ನ್ಯಾಟ್ ಸಿವರ್ ಇಬ್ಬರು, ಅತಿ ಹೆಚ್ಚು ಸಂಭಾವನೆ ಪಡೆಯುವ ವಿದೇಶಿ ಆಟಗಾರ್ತಿಯರಾಗಿದ್ದಾರೆ.

ಆಸೀಸ್‌ನ ಸ್ಟಾರ್‌ ಆಲ್‌ರೌಂಡರ್ ಪೆರಿ ಅವರನ್ನು ಆರ್‌ಸಿಬಿಯು 1.70 ಕೋಟಿ ರೂಪಾಯಿಗೆ ಖರೀದಿಸಿದರೆ, ನ್ಯೂಜಿಲೆಂಡ್ ನಾಯಕಿ ಡಿವೈನ್ ಅವರನ್ನು ಕೂಡಾ ಮೂಲಬೆಲೆ 50 ಲಕ್ಷಕ್ಕೆ ಅಗ್ಗವಾಗಿ ಪಡೆಯಿತು. ಅತ್ತ ಇಂಗ್ಲೆಂಡ್ ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಅವರನ್ನು 1.80 ಕೋಟಿ ರೂಪಾಯಿಗೆ ಯುಪಿ ವಾರಿಯರ್ಜ್ ಬಿಡ್‌ ಮಾಡಿತು

ಐದು ತಂಡಗಳ ಸಂಭಾವ್ಯ ನಾಯಕಿಯರು

ಸ್ಮೃತಿ ಮಂಧನ (ಆರ್‌ಸಿಬಿ)

ಹರ್ಮನ್‌ಪ್ರೀತ್ (ಎಂಐ)

ಲ್ಯಾನಿಂಗ್ (ಡಿಸಿ)

ಬೆತ್ ಮೂನಿ (ಗುಜರಾತ್ ಜೈಂಟ್ಸ್)

ದೀಪ್ತಿ ಶರ್ಮಾ (ಯುಪಿ ವಾರಿಯರ್ಜ್)