ಝ್ವೆರೆವ್ ವಿರುದ್ಧ ನೇರ ಸೆಟ್ ಗೆಲುವು; ಸತತ ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಯಾನಿಕ್ ಸಿನರ್
ಕನ್ನಡ ಸುದ್ದಿ  /  ಕ್ರೀಡೆ  /  ಝ್ವೆರೆವ್ ವಿರುದ್ಧ ನೇರ ಸೆಟ್ ಗೆಲುವು; ಸತತ ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಯಾನಿಕ್ ಸಿನರ್

ಝ್ವೆರೆವ್ ವಿರುದ್ಧ ನೇರ ಸೆಟ್ ಗೆಲುವು; ಸತತ ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಯಾನಿಕ್ ಸಿನರ್

ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಯಾನಿಕ್ ಸಿನರ್, ನೇರ ಸೆಟ್‌ಗಳಲ್ಲಿ ಗೆದ್ದಿದ್ದಾರೆ. ಇದರೊಂದಿಗೆ ಸತತ ಎರಡನೇ ಬಾರಿ ಪ್ರತಿಷ್ಠಿತ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಸತತ ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಯಾನಿಕ್ ಸಿನರ್‌
ಸತತ ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಯಾನಿಕ್ ಸಿನರ್‌ (REUTERS)

ಯಾನಿಕ್ ಸಿನರ್‌ (Jannik Sinner) ಸತತ ಎರಡನೇ ಅವಧಿಗೆ ಆಸ್ಟ್ರೇಲಿಯನ್‌ ಓಪನ್‌ (Australian Open 2025) ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ (Alexander Zverev) ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿದ ಇಟಲಿಯ ಯಾನಿಕ್ ಸಿನರ್‌, ಸತತ ಎರಡನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ಸಿನರ್ 6-3, 7-6(4) ಹಾಗೂ 6-3ರ ನೇರ ಸೆಟ್‌ಗಳಿಂದ ಗೆಲುವು ತಮ್ಮದಾಗಿಸಿಕೊಂಡರು.

ಕಳೆದ ವರ್ಷ ಯುಎಸ್ ಓಪನ್ ಗೆಲುವಿನ ನಂತರ ಇದು ಅವರ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಇದೇ ವೇಳೆ ಕಳೆದ ಬಾರಿಯೂ ಆಸ್ಟ್ರೇಲಿಯನ್‌ ಓಪನ್‌ ಕಿರೀಟ ಮುಡಿಗೇರಿಸಿಕೊಂಡಿದ್ದ ಇಟಲಿಯ ಆಟಗಾರ, ಸತತ ಎರಡನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಆ ಮೂಲಕ ಮೂರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಇಟಲಿಯ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ 23ರ ಹರೆಯದ ಆಟಗಾರ ಪಾತ್ರರಾಗಿದ್ದಾರೆ.

ಫೈನಲ್‌ ಪಂದ್ಯದ ಆರಂಭದಿಂದಲೂ ಸಿನರ್‌ ಮೇಲುಗೈ ಸಾಧಿಸಿದರು. ಆರಂಭಿಕ ಸೆಟ್‌ ಅನ್ನು ಸುಲಭವಾಗಿ ಗೆದ್ದರು. ಆದರೆ, ಎರಡನೇ ಸೆಟ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಇಬ್ಬರೂ ಆಟಗಾರರು ಸರ್ವ್ ಹಿಡಿದಿಟ್ಟುಕೊಂಡರು. ಎರಡನೇ ಸೆಟ್‌ ಟೈ ಬ್ರೇಕರ್‌ನತ್ತ ಸಾಗಿತು. ಕೊನೆಗೂ ಸಿನರ್ ಉದ್ವಿಗ್ನ ಟೈ ಬ್ರೇಕರ್‌ನಲ್ಲಿ ಮುನ್ನಡೆ ಸಾಧಿಸಿ ಮತ್ತೆ ಗೇಮ್‌ ಉಳಿಸಿಕೊಂಡರು. ಅಂತಿಮ ಸೆಟ್‌ನಲ್ಲಿ ಮತ್ತೆ ಹಾಲಿ ಚಾಂಪಿಯನ್‌ ಪ್ರಾಬಲ್ಯ ಮುಂದುವರೆಯಿತು. ಹೆಚ್ಚು ಶ್ರಮವಿಲ್ಲದೆ ಪಂದ್ಯವನ್ನು ಮುಕ್ತಾಯಗೊಳಿಸಿದರು.‌

ಅಗ್ರಶ್ರೇಯಾಂಕಿತನ ಗೆಲುವು

ಸಿನರ್ ಕಳೆದ ಜೂನ್‌ ತಿಂಗಳಲ್ಲಿ ನಂ.1 ಸ್ಥಾನಕ್ಕೆ ಏರಿದ್ದರು. ಅಂದಿನಿಂದ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಸಹಜವಾಗಿಯೇ ನಂ.2 ಶ್ರೇಯಾಂಕದ ಝ್ವೆರೆವ್ ಜೊತೆಗಿನ ಫೈನಲ್‌ ರೋಚಕತೆ ಹೆಚ್ಚಿಸಿತ್ತು. ಕೊನೆಗೂ ಅಗ್ರಶ್ರೇಯಾಂಕಿತನ ಗೆಲುವು ಸಾಧ್ಯವಾಯ್ತು. 2019ರ ನಂತರ ನಂ.1 ಮತ್ತು ನಂ.2 ಶ್ರೇಯಾಂಕದ ಪುರುಷರ ನಡುವಿನ ಮೊದಲ ಆಸ್ಟ್ರೇಲಿಯನ್ ಓಪನ್ ಫೈನಲ್ ಇದಾಗಿತ್ತು. 2019ರಲ್ಲಿ ನಂ.1 ಶ್ರೇಯಾಂಕಿತ ನೊವಾಕ್ ಜೊಕೊವಿಕ್ ಅವರು ನಂ.2 ರಾಫೆಲ್ ನಡಾಲ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ್ದರು.

ಸತತ ಎರಡು ವರ್ಷಗಳ ಕಾಲ ಆಸ್ಟ್ರೇಲಿಯನ್‌ ಓಪನ್‌ ಗೆದ್ದ ವಿಶ್ವದ ಎರಡನೇ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಸಿನರ್ ಪಾತ್ರರಾಗಿದ್ದಾರೆ. ಈ ಹಿಂದೆ 1992 ಹಾಗೂ 93ರಲ್ಲಿ ಜಿಮ್ ಕೊರಿಯರ್ ಈ ಸಾಧನೆ ಮಾಡಿದ್ದರು.

ಓಪನ್‌ ಯುಗದಲ್ಲಿ ವಿಶೇಷ ದಾಖಲೆ

ಓಪನ್ ಯುಗದಲ್ಲಿ (ಇದು 1968ರಲ್ಲಿ ಪ್ರಾರಂಭವಾಯಿತು) ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ 3-0 ಅಂತರದಲ್ಲಿ ವೃತ್ತಿಜೀವನವನ್ನು ಆರಂಭಿಸಿದ ಎಂಟನೇ ಆಟಗಾರ ಸಿನರ್. ಇದೇ ವೇಳೆ ಝ್ವೆರೆವ್ 0-3 ಅಂತರದಲ್ಲಿ ಸೋಲು ಕಂಡಿದ್ದಾರೆ. ಈ ಹಿಂದೆ ಅವರು 2020ರ ಯುಎಸ್ ಓಪನ್ ಮತ್ತು 2024ರ ಫ್ರೆಂಚ್ ಓಪನ್‌ ಫೈನಲ್‌ನಲ್ಲಿ ಸೋಲು ಕಂಡಿದ್ದರು.

ಶನಿವಾರ ನಡೆದ ಮಹಿಳೆಯರ ಫೈನಲ್‌ನಲ್ಲಿ ಯುಎಸ್‌ ಆಟಗಾರ್ತಿ ಮ್ಯಾಡಿಸನ್‌ ಕೀಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಸಬಲೆಂಕಾ ಮಣಿಸಿ ಚೊಚ್ಚಲ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.