ಮ್ಯಾಡಿಸನ್ ಕೀಸ್ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್; ಸಬಲೆಂಕಾ ಮಣಿಸಿ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಯುಎಸ್ ಆಟಗಾರ್ತಿ
Australian Open: ಆಸ್ಟ್ರೇಲಿಯನ್ ಓಪನ್ 2025 ಟೆನಿಸ್ ಟೂರ್ನಿಯ ವನಿತೆಯರ ಸಿಂಗಲ್ಸ್‌ನಲ್ಲಿ ಯುಎಸ್‌ಎ ದೇಶದ ಮ್ಯಾಡಿಸನ್ ಕೀಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಎರಡು ಬಾರಿಯ ಹಾಲಿ ಚಾಂಪಿಯನ್ ಅರಿನಾ ಸಬಲೆಂಕಾ ಅವರನ್ನು ಸೋಲಿಸಿದ ಅಮೆರಿಕ ಆಟಗಾರ್ತಿ, ತಮ್ಮ ವೃತ್ತಿಬದುಕಿನ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ (Australian Open 2025) ಟೆನಿಸ್ ಟೂರ್ನಿಯ ವನಿತೆಯರ ಸಿಂಗಲ್ಸ್‌ನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ (Madison Keys) ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂಬರ್ ವನ್ ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು ಮಣಿಸಿ, ಪ್ರತಿಷ್ಠಿತಿ ಟ್ರೋಫಿ ಗೆದ್ದಿದ್ದಾರೆ. ರೋಚಕ ಫೈನಲ್ ಪಂದ್ಯದಲ್ಲಿ ದಿಟ್ಟ ಹೋರಾಟ ನಡೆಸಿದ ಯುಎಸ್ ಆಟಗಾರ್ತಿ, ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಮ್ ಗೆದ್ದು ಬೀಗಿದ್ದಾರೆ. 6-3, 2-6, 7-5 ಅಂಕಗಳಿಂದ ಗೆದ್ದು ಆಸ್ಟ್ರೇಲಿಯನ್ ಓಪನ್ ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ.
ಅಮೆರಿಕದ ಮ್ಯಾಡಿಸನ್ ಕೀಸ್, ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂ.1 ಆಟಗಾರ್ತಿಯನ್ನು ಸೋಲಿಸಿರುವುದು ವಿಶೇಷ. ಸಬಲೆಂಕಾ ವಿರುದ್ಧ ನಡೆದ ಮೂರು ಸೆಟ್‌ಗಳ ರೋಚಕ ಹಣಾಹಣಿಯಲ್ಲಿ ಎದೆಗುಂದದೆ ಆಡಿದ ಅಮೆರಿಕ ಟೆನಿಸ್ ತಾರೆ, ಮೊದಲ ಸೆಟ್‌ನಲ್ಲಿ ಸುಲಭವಾಗಿ 6-3 ಅಂತರದಿಂದ ಗೆದ್ದರು. ಕೇವಲ 35 ನಿಮಿಷಗಳಲ್ಲಿ ಮೊದಲ ಸೆಟ್ ಪೂರ್ಣಗೊಂಡಿತು.
ಆ ನಂತರ ಎರಡನೇ ಸುತ್ತನ್ನು 2-6 ಅಂತರದಿಂದ ಸಬಲೆಂಕಾಗೆ ಬಿಟ್ಟುಕೊಟ್ಟರು. ಅಂತಿಮ ಸುತ್ತು ಬಲುರೋಚಕವಾಗಿ ಸಾಗಿತು. ಉಭಯ ಆಟಗಾರ್ತಿಯರು ನಾನಾ ನೀನಾ ಎಂಬಂತೆ ಅಕ್ಷರಶಃ ಜಿದ್ದಿಗೆ ಬಿದ್ದರು. ಸಬಲೆಂಕಾಗಿಂತ ಕೀಸ್ ಅವರ ಮುಖ ಹಾಗೂ ಆಂಗಿಕ ಭಾಷೆಯಲ್ಲಿ ಆತ್ಮವಿಶ್ವಾಸ ಹೆಚ್ಚಿತ್ತು. ಇದು ಅಮೆರಿಕ ಆಟಗಾರ್ತಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಆಟ ಸಾಗುತ್ತಿದ್ದಂತೆಯೇ ನಿರಾಶರಾದಂತೆ ಕಾಣಿಸಿದ ಸಬಲೆಂಕಾ, ಅಂಕ ಗಳಿಸಿದರೂ ಆತ್ಮವಿಶ್ವಾಸದ ಹೊಡೆತಗಳನ್ನು ಆಡಲಿಲ್ಲ.
ಸಬಲೆಂಕಾ ಹ್ಯಾಟ್ರಿಕ್ ಕನಸು ಭಗ್ನ
ಒಂದು ಹಂತದಲ್ಲಿ ಕೊನೆಯ ಸೆಟ್ 5-5 ಅಂಕಗಳ ಅಂತರದಿಂದ ಸಮಬಲಗೊಂಡಿತು. ಆ ಕ್ಷಣದಲ್ಲೂ ಧೈರ್ಯದಿಂದ ಚಾಣಾಕ್ಷ ಹೊಡೆತಗಳನ್ನಾಡಿದ ಕೀಸ್, ಸತತ ಎರಡು ಪಾಯಿಂಟ್ ಕಲೆಹಾಕಿ ಚಾಂಪಿಯನ್ ಪಟ್ಟಕ್ಕೇರಿದರು. ಇದರೊಂದಿಗೆ ವಿಶ್ವದ ನಂ.1 ಆಟಗಾರ್ತಿಯ ಸತತ ಮೂರನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಕನಸಿಗೆ ಅಡ್ಡಿಯಾದರು.
ಅಗ್ರ ಶ್ರೇಯಾಂಕದ ಇಬ್ಬರಿಗೆ ಸೋಲು
ಗುರುವಾರ (ಜ.23) ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂ.2 ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರನ್ನು ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ ಕೀಸ್, ಇದೀಗ ನಂ.1 ಶ್ರೇಯಾಂಕದ ಸಬಲೆಂಕಾ ವಿರುದ್ಧವೂ ಗೆದ್ದು ಬೀಗಿದ್ದಾರೆ. ಆ ಮೂಲಕ, 2005ರಲ್ಲಿ ಸೆರೆನಾ ವಿಲಿಯಮ್ಸ್ ಬಳಿಕ ಮೆಲ್ಬೋರ್ನ್ ಪಾರ್ಕ್‌ನಲ್ಲಿ (ಆಸ್ಟ್ರೇಲಿಯನ್ ಓಪನ್ ನಡೆಯುವ ಮೈದಾನ) ಡಬ್ಲ್ಯುಟಿಎಯ ಅಗ್ರ ಶ್ರೇಯಾಂಕದ ಇಬ್ಬರು ಆಟಗಾರ್ತಿಯರನ್ನು ಸೋಲಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕೀಸ್ ಪಾತ್ರರಾಗಿದ್ದಾರೆ.
2017ರ ಯುಎಸ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದ ಬಳಿಕ, ಕೀಸ್ ಇದು ಎರಡನೇ ಗ್ರಾಂಡ್ ಸ್ಲಾಮ್ ಫೈನಲ್‌ನಲ್ಲಿ ಆಡಿದ್ದರು. ಇದೇ ಮೊದಲ ಗ್ರ್ಯಾಂಡ್ ಸ್ಲಾಮ್ ಗೆದ್ದು, ಟೆನಿಸ್ ಕ್ರೀಡೆಯಲ್ಲಿ ಅಮೆರಿಕದ ಪ್ರಾಬಲ್ಯವನ್ನು ಮತ್ತೆ ಎತ್ತಿ ತೋರಿಸಿದರು.
ನಾಳೆ (ಜನವರಿ 26 ಭಾನುವಾರ) ಪುರುಷರ ಸಿಂಗಲ್ಸ್ ಫೈನಲ್ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಜಾನಿಕ್ ಸಿನ್ನರ್‌ಗೆ ಅಲೆಕ್ಸಾಂಡರ್ ಝ್ವೆರೆವ್ ಸವಾಲು ಹಾಕಲಿದ್ದಾರೆ.
