ಆಸ್ಟ್ರೇಲಿಯನ್ ಓಪನ್: ರೋಜರ್ ಫೆಡರರ್ ಸಾರ್ವಕಾಲಿಕ ಗ್ರ್ಯಾಂಡ್ ಸ್ಲಾಮ್ ದಾಖಲೆ ಮುರಿದ ನೊವಾಕ್ ಜೊಕೊವಿಕ್
Novak Djokovic: ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಆಡಿದ ನೊವಾಕ್ ಜೊಕೊವಿಕ್, ಗ್ರ್ಯಾಂಡ್ ಸ್ಲ್ಯಾಮ್‌ನಲ್ಲಿ ಮತ್ತೊಂದು ದಾಖಲೆಯನ್ನು ಮುರಿದಿದ್ದಾರೆ.

ದಾಖಲೆಗಳು ಇರುವುದೇ ಬ್ರೇಕ್ ಮಾಡಲು. ಕ್ರೀಡಾ ಲೋಕದಲ್ಲಿ ಹೊಸ ಹೊಸ ದಾಖಲೆಗಳು ನಿರ್ಮಾಣ ಆಗುತ್ತಿರುತ್ತವೆ. ಪ್ರಸ್ತುತ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ ಆಡುತ್ತಿರುವ ನೊವಾಕ್ ಜೊಕೊವಿಕ್, ಇದೀಗ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಕಳೆದ ವರ್ಷ ತಮ್ಮಿಂದ ಗೆಲ್ಲಲು ಸಾಧ್ಯವಾಗದ ಪ್ರತಿಷ್ಠಿತ ಟ್ರೋಫಿ ಗೆಲ್ಲುವ ಗುರಿ ಹಾಕಿಕೊಂಡಿರುವ ಸರ್ಬಿಯಾದ ಟೆನಿಸ್ ದೊರೆ, ಟೆನಿಸ್ ದಿಗ್ಗಜ ರೋಜರ್ ಫೆಡರರ್ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 430ನೇ ಗ್ರಾಂಡ್ ಸ್ಮ್ಯಾಮ್ ಪಂದ್ಯವಾಡಿದ ಜೊಕೊವಿಕ್, ಗ್ರ್ಯಾಂಡ್ ಸ್ಲಾಮ್ ಟೆನಿಸ್‌ನಲ್ಲಿ ಅತಿ ಹೆಚ್ಚು ಸಿಂಗಲ್ಸ್ ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಇದರೊಂದಿಗೆ ತಮ್ಮ ಪ್ರತಿಸ್ಪರ್ಧಿ ರೋಜರ್ ಫೆಡರರ್ ಅವರನ್ನು ಹಿಂದಿಕ್ಕಿದ್ದಾರೆ.
ಪೋರ್ಚುಗಲ್‌ನ ಜೈಮ್ ಫರಿಯಾ ವಿರುದ್ಧ ನಾಲ್ಕು ಸೆಟ್‌ಗಳ ಗೆಲುವು ಸಾಧಿಸಿದ ನೊವಾಕ್ ಜೊಕೊವಿಕ್, ಈ ವರ್ಷದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. 2005ರಲ್ಲಿ ಗ್ರ್ಯಾಂಡ್ ಸ್ಲಾಮ್ ವೃತ್ತಿಜೀವನವನ್ನು ಆರಂಭಿಸಿದ ಜೊಕೊವಿಕ್, ಸುದೀರ್ಘ 20 ವರ್ಷ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಆಡುತ್ತಿದ್ದಾರೆ. 37 ವರ್ಷದ ಆಟಗಾರ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಸಿಂಗಲ್ಸ್‌ನಲ್ಲಿ 430ನೇ ಗ್ರ್ಯಾಂಡ್ ಸ್ಲಾಮ್ ಪಂದ್ಯವನ್ನು ಆಡಿದ ದಾಖಲೆಯನ್ನು ಸರ್ಬಿಯಾ ಆಟಗಾರ ಮಾಡಿದ್ದಾರೆ.
ತಮ್ಮ 430ನೇ ಪಂದ್ಯದೊಂದಿಗೆ, ಜೊಕೊವಿಕ್ ಗ್ರ್ಯಾಂಡ್ ಸ್ಲಾಮ್ ಟೆನಿಸ್‌ನಲ್ಲಿ ಅತಿ ಹೆಚ್ಚು ಸಿಂಗಲ್ಸ್ ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ, ಅವರ ಶ್ರೇಷ್ಠ ಪ್ರತಿಸ್ಪರ್ಧಿ ರೋಜರ್ ಫೆಡರರ್ ಅವರನ್ನು ಹಿಂದಿಕ್ಕಿದ್ದಾರೆ. ಫೆಡರರ್ 429 ಪಂದ್ಯಗಳಲ್ಲಿ ಆಡಿದ್ದು, ಸೆರೆನಾ ವಿಲಿಯಮ್ಸ್ 423 ಪಂದ್ಯಗಳನ್ನು ಆಡಿದ್ದಾರೆ.
100 ಪಂದ್ಯಗಳನ್ನು ಗೆಲ್ಲುವ ಎರಡನೇ ಆಟಗಾರ
ಕಳೆದ ವರ್ಷ ಗ್ರ್ಯಾಂಡ್ ಸ್ಲಾಮ್ ಪಂದ್ಯಗಳ ಗೆಲುವಿನ ವಿಷಯದಲ್ಲಿ ಈಗಾಗಲೇ ಫೆಡರರ್ ಅವರನ್ನು ಜೊಕೊವಿಕ್ ಹಿಂದಿಕ್ಕಿದ್ದಾರೆ. ಒಂದು ವೇಳೆ ಅವರು ಈ ವರ್ಷದ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ತಲುಪಿದರೆ, ಫೆಡರರ್ ನಂತರ ಆಸ್ಟ್ರೇಲಿಯನ್ ಓಪನ್‌ನಲ್ಲಿ 100 ಪಂದ್ಯಗಳನ್ನು ಗೆದ್ದ ಎರಡನೇ ಆಟಗಾರ ಎಂಬ ದಾಖಲೆ ನಿರ್ಮಿಸಲಿದ್ದಾರೆ. ಜೊಕೊವಿಕ್ ಪಾಲಿಗೆ ಇದು ನೆಚ್ಚಿನ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯಾಗಿದ್ದು, 2008ರಲ್ಲಿ ಅವರು ಮೆಲ್ಬೋರ್ನ್‌ನಲ್ಲಿ ತಮ್ಮ ಮೊದಲ ಪ್ರಶಸ್ತಿ ಗೆದ್ದರು. ಆ ನಂತರ ಈವರೆಗೆ ಒಟ್ಟು 10 ಬಾರಿ ಪ್ರಶಸ್ತಿ ಗೆದ್ದಿದ್ದಾರೆ.
ಪುನರಾವರ್ತನೆ ಆಗುತ್ತಾ ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕ ಪಂದ್ಯ
ಕಳೆದ ಬಾರಿ ಚಾಂಪಿಯನ್ ಆಗುವಲ್ಲಿ ಎಡವಿದ್ದ ನೊವಾಕ್ ಜೊಕೊವಿಕ್, ಈ ಬಾರಿ ಗೆಲ್ಲುವ ಪಣ ತೊಟ್ಟಿದ್ದಾರೆ. ಆದರೆ ಫೈನಲ್ ಹಾದಿ ಅಷ್ಟು ಸುಲಭವಿಲ್ಲ. ಯುವ ಆಟಗಾರ ಕಾರ್ಲಸ್ ಅಲ್ಕರಾಜ್ ವಿರುದ್ಧದ ಸಂಭಾವ್ಯ ಕ್ವಾರ್ಟರ್ ಫೈನಲ್ ಪಂದ್ಯವು ಜೊಕೊವಿಕ್‌ಗೆ ದೊಡ್ಡ ಸವಾಲಾಗಲಿದೆ. 2024ರಲ್ಲಿ ಶ್ರೇಯಾಂಕದಲ್ಲಿ ವಿಶ್ವದ 7ನೇ ಸ್ಥಾನಕ್ಕೆ ಕುಸಿದ ಜೊಕೊವಿಕ್, ಯುವ ಆಟಗಾರರ ಮುಂದೆ ಮಂಕಾಗುತ್ತಿದ್ದಾರೆ.
ಅಲ್ಕರಾಜ್ ವಿರುದ್ಧದ ಸಂಭಾವ್ಯ ಕ್ವಾರ್ಟರ್ ಫೈನಲ್ ಪಂದ್ಯವು 2024ರ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ ಪಂದ್ಯದ ಪುನರಾವರ್ತನೆಯಾಗಲಿದೆ. ಚಿನ್ನದ ಪದಕ ಪಂದ್ಯದಲ್ಲಿ ಜೊಕೊವಿಕ್ ರೋಚಕವಾಗಿ ತಮ್ಮ ಕಿರಿಯ ಎದುರಾಳಿ ವಿರುದ್ಧ ಗೆದ್ದಿದ್ದರು.
